ಈಗ ಲಿಬ್ಯಾದ ಸರತಿ
೭೦ ರ ದಶಕದ ಭಯಾನಕ ವೆಸ್ಟ್ ಇಂಡೀಸ್ ಬೌಲರುಗಳ ಮಾರಕ ಬೌಲಿಂಗ್ ಗೆ ತರಗೆಲೆಗಳಂತೆ ಉದುರುತ್ತಿದ್ದ ಅತಿರಥ ಮಹಾರಥ ದಾಂಡಿಗರಂತೆ ಜನಕ್ರಾಂತಿಯ ಬಿರುಗಾಳಿಗೆ ತತ್ತರಿಸುತ್ತಿದ್ದಾರೆ ಮಧ್ಯಪ್ರಾಚ್ಯದ ನಿರಂಕುಶಾಧಿಕಾರಿಗಳು. ಕ್ರಾಂತಿ ಆರಂಭವಾದ ಪುಟ್ಟ ಅರಬ್ ರಾಷ್ಟ್ರ ಟುನೀಸಿಯಾದ ಅಧ್ಯಕ್ಷ ೨೧ ವರ್ಷಗಳ ಅಧಿಕಾರದ ನಂತರ ತನ್ನ ವಿಕೆಟ್ ಒಪ್ಪಿಸಿದರೆ ಅಲ್ಲೇ ಹತ್ತಿರದ ಈಜಿಪ್ಟ್ ನ ಅಧ್ಯಕ್ಷ ೨೯ ವರ್ಷಗಳ ದೀರ್ಘ ಬ್ಯಾಟಿಂಗ್ ನಂತರ ತನ್ನ ಇನ್ನಿಂಗ್ಸ್ ಬಲವಂತವಾಗಿ ಡಿಕ್ಲೇರ್ ಮಾಡಿಸಿಕೊಂಡ. ಈಗ ಲಿಬ್ಯಾದ ಸರತಿ. ಕ್ಯೂಬಾದ ಕ್ಯಾಸ್ಟ್ರೋ ನಂತರದ ಬಹುಶಃ ವಿಶ್ವದ ದೀರ್ಘಾವಧಿಯ ಅಧ್ಯಕ್ಷನಿರಬೇಕು ಮುಅಮ್ಮರ್ ಗದ್ದಾಫಿ. ಟುನೀಸಿಯಾ, ಈಜಿಪ್ಟ್ ನ ಕ್ರಾಂತಿಗಳನ್ನು ಕಂಡ ಲಿಬ್ಯನ್ನರಿಗೆ ತಮ್ಮ ದೇಶದ ಆಗುಹೋಗುಗಳ ಬಗ್ಗೆ ಹೇಸಿಗೆ ಹುಟ್ಟಲು ಶುರುವಾಯಿತು. ಎಷ್ಟಿದ್ದರೂ ಲಿಬ್ಯಾದ ಸ್ವಾತಂತ್ರ್ಯ ಹೋರಾಟಗಾರ, ಮರಳುಗಾಡಿನ ಸಿಂಹ “ಒಮರ್ ಮುಖ್ತಾರ್” ನ ನಾಡಿನ ಜನರಲ್ಲವೇ? ಆ ಕೆಚ್ಚು ಶರೀರದ ಯಾವುದೋ ಮೂಲೆಯಲ್ಲಾದರೂ ಅಡಗಿ ಕೂತಿರಲೇಬೇಕು. ಜನ ಬೀದಿಗೆ ಇಳಿದರು. ಸಾವು ನೋವುಗಳಾದವು. ಸಾವಿರಾರು ಜನ ಸತ್ತರು ಎನ್ನುವ ಪುಕಾರೂ ಹಬ್ಬಿತು.
ಈ ಆಧುನಿಕ “ಇ” ಯುಗದ ಕ್ರಾಂತಿಗಳ ವಿಶೇಷ ಏನೆಂದರೆ ವೆಬ್ ತಾಣಗಳ ಸಾರಾಸಗಟು ಬಳಕೆ. ದೀರ್ಘಾವಧಿ ತಮ್ಮ ಕುರ್ಚಿಗಳಲ್ಲಿ ಕೂತು ಕುಂಭಕರ್ಣ ನ ನಿದ್ದೆಗೆ ಪರವಶರಾದವರ ಪತನಕ್ಕೆ ನಾಂದಿ ಹಾಡಿದ್ದು ಟ್ವಿಟ್ಟರ್, ಫೇಸ್ ಬುಕ್. ಇವು ತಮ್ಮ ಹೆಸರುಗಳನ್ನು ಚರಿತ್ರೆಯ ಪುಟಗಳಿಗೆ ಅಮೋಘವಾಗಿ ಸೇರಿಸಿ ಕೊಂಡವು. ಬರೀ ಕ್ರಾಂತಿ ಗೊಳಗಾದ ದೇಶಗಳ ಜನ ಮಾತ್ರವಲ್ಲ ವಿಶ್ವ ಸಮುದಾಯವೇ ಈ ಜನರ ತುಡಿತಕ್ಕೆ ಸಹಾನುಭೂತಿ ತೋರಿಸಿ ತಮ್ಮ ಟ್ವೀಟು ಗಳನ್ನು ದೇಣಿಗೆಯಾಗಿ ನೀಡಿದರು. ಮುಬಾರಕ್ ದೇಶಕ್ಕೆ ಮಾತ್ರ ಕೆಟ್ಟವನು, ಆದರೆ ಗದ್ದಾಫಿ ಮನುಕುಲಕ್ಕೆ ಕೆಟ್ಟವನು ಎಂದು ಒಬ್ಬ ವ್ಯಕ್ತಿ ಟ್ವೀಟಿಸಿದ. ಮುಬಾರಕ್ ತುಂಬಾ ಜನರನ್ನೇನೂ ಕೊಲ್ಲಲಿಲ್ಲ ಆದರೆ ಗದ್ದಾಫಿಗೆ ಮಾತ್ರ ಕೊಲ್ಲುವ ಕೆಲಸ ಸ್ವಲ್ಪ ಸಲೀಸಾಗೇ ಕಂಡಿತು. ಇದ್ದಕ್ಕಿದ್ದ ಹಾಗೆ ಲಿಬ್ಯಾದ ಮಹಿಳೆಯ ಬ್ಲಾಗೊಂದನ್ನು ಓದಿದ ನೆನಪು ಬಂತು. ಬ್ಲಾಗ್ ನ ಹೆಸರು ಸರಿಯಾಗಿ ನೆನಪಿರಲಿಲ್ಲ ಎಂದಿನಂತೆ ಗೂಗ್ಲ್ ಸಹಾಯಕ್ಕೆ ಬಂತು. “ಖದೀಜಾ ತೆರಿ” ಯ ಬ್ಲಾಗ್ ತೆರೆದು ಕೊಂಡಿತು, ಆಕೆ ಸುರಕ್ಷಿತ ಎಂದು ಓದಿ ಮನಸ್ಸು ನಿರಾಳವಾಯಿತು. “ ನಾನಿರುವ ಸ್ಥಳದಿಂದ ನಮಗೇನೂ ತಿಳಿಯುತ್ತಿಲ್ಲ, ನಿಮ್ಮಂತೆಯೇ ನಾನೂ ಕೂಡಾ ನೆಟ್ ಅವಲಂಬಿಸಿದ್ದೇನೆ ಸುದ್ದಿಗಾಗಿ” ಎಂದು ಬರೆದಿದ್ದಳು.
I made a small terrarium. And then I thought how similar Libya is to a terrarium... everything happening inside with no intervention from outside... the whole world is looking in.
ಒಂದು ವೃತ್ತಾಕಾರದ ಗಾಜಿನ ಬುರುಡೆ (terrarium) ಯಲ್ಲಿ ಒಂದಿಷ್ಟು ಮಣ್ಣು, ಎಲೆಗಳನ್ನು ಹಾಕಿ, ಅದರ ಚಿತ್ರ ತನ್ನ ಬ್ಲಾಗ್ ನಲ್ಲಿ ಹಾಕಿ ಮೇಲಿನ ಮಾತುಗಳನ್ನು ಬರೆದಿದ್ದಳು ಖದೀಜಾ. ಆಕೆಯ ಅರ್ಥಗರ್ಭಿತ ಮಾತುಗಳು ತುಂಬಾ ಇಷ್ಟವಾದವು. ತಮಗೂ ಆಗಿರಬಹುದು ಅಲ್ಲವೇ? ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ನಾವು ನೆಲೆಸಿರ ಬಹುದು ಆದರೆ ಮಾನವ ಭಾವನೆಗಳು ಎಷ್ಟೊಂದು identical ನೋಡಿ. ಲಿಬ್ಯಾ ದೇಶವನ್ನು ನಾನು ಕಂಡಿಲ್ಲ, ಆ ಮಹಿಳೆಯನ್ನು ನಾನು ನೋಡಿಲ್ಲ, ಆದರೂ ಜೇಡ ತನ್ನ ಬಲೆಯನ್ನು ಹೆಣೆದ ಎಲ್ಲರ ಸುತ್ತ ಯಾವುದೇ ಬೇಧ ಭಾವವಿಲ್ಲದೆ. ನಿಜ ಹೇಳಬೇಕೆಂದರೆ ಈ ಸರೀ ರಾತ್ರಿಯಲ್ಲಿ (ಮೂರೂವರೆ ಘಂಟೆ) ಬ್ಲಾಗ್ ಪುಟ ಬರೆಯುವ ಯೋಚನೆ ಇರಲಿಲ್ಲ. ಲಿಬ್ಯಾದ ಬಗ್ಗೆ ಒಂದು ವಾಕ್ಯದ ಅಥವಾ ೧೪೦ ಅಕ್ಷರಗಳ 'ವಟವಟ' ಗುಟ್ಟೋಣ ಎಂದು ಕೂತಾಗ ಹೊರ ಹೊಮ್ಮಿತು ಈ ಲೇಖನ.
ಲಿಬ್ಯಾದ ಜನರ ಬಗ್ಗೆ, ಅಲ್ಲಿನ ಜನಜೀವನದ ಬಗ್ಗೆ ಅರಿಯಬೇಕಿದ್ದರೆ ಖದೀಜ ತೆರಿ ಯ ಬ್ಲಾಗ್ ಸಂದರ್ಶಿಸಿ. http://khadijateri.blogspot.com/
Comments
ಉ: ಈಗ ಲಿಬ್ಯಾದ ಸರತಿ
ಉ: ಈಗ ಲಿಬ್ಯಾದ ಸರತಿ
ಉ: ಈಗ ಲಿಬ್ಯಾದ ಸರತಿ