ಪಥ ನಿರೀಕ್ಷೆ

ಪಥ ನಿರೀಕ್ಷೆ

ಕವನ
ಪಥ ನಿರೀಕ್ಷೆ

ಚೆಲುವೆ ನೀನೆನ್ನೊಡನೆ ಬರಬಲ್ಲೆಯಾ
ಮುಳ್ಳುಗಳ ಮೇಲಡಿಯನಿಡಬಲ್ಲೆಯಾ

ಹಾರುವೆನು ಕಮರಿಯಲಿ ಜಿಗಿವೆನೆತ್ತರ ಗಿರಿಯ
ಹೊತ್ತು ಮುಳುಗುವ ಮುನ್ನ ಮತ್ತೆ ಬರುವೆ
ಚಿತ್ತದೊಳಗಂಜಿಕೆಯು ಮೃತ್ಯುಪಾಶದ ಭಯವು
ಮುತ್ತ ಮುಸುಕಿದರೇನು ಬೇಗ ಬರುವೆ
ಬಂದು ಮುತ್ತು ಕೊಡುವೆ

ನಿಲ್ಲು ನೀ ಮನೆಯಲ್ಲಿ ಹೂವಿನಂಗಳಗೊಳಿಸು
ಹೊಸ್ತಿಲಿನ ಶೋಭೆಗಿಡು ರಂಗವಲ್ಲಿ
ಹೊತ್ತಮುತ್ತಿನ ಹೊರೆಯ ದಣಿವಿಂದ ನಾನಿರಲು
ಜಡೆಯ ಬೀಸುವೆ ನೀನು ನಗುವ ಚೆಲ್ಲಿ

ಹೊತ್ತಿನ್ನು ಬಂದಿಲ್ಲ ಬಾರದಿರು ಎನ್ನರಸ
ಮೆತ್ತನೆಯ ಇರುಳನ್ನೇ ಕಾಯುತಿರುವೆ
ಸದ್ದಿರದು ನೀನಾಗ ಬಂದರೆನ್ನಾಲಯಕೆ
ನಗುವೊಂದೇ ನಿನಗಾಗಿ ನೀಡುತಿರುವೆ
ಎಂದು ಬಯಕೆಗಳ ರಭಸವನು ತಣಿಸುತಿರುವೆ



                                                            - ಸದಾನಂದ