ಸೂರ್ಯೋದಯ
ಕವನ
ನೋಡದೊ ಮೂಡಣ
ದೆಸೆಯಲಿ ಮೂಡಿತು
ಬೆಳ್ಳಿಯ ಚುಕ್ಕಿಯು ನಸುನಗುತ
ದಿನಕರನುದಯದ
ವಾರ್ತೆಯ ಸಾರುತ
ಮುಂದಡಿಯಿಡುವುದು ರಾಜಿಸುತ [೧]
ಬ್ರಧ್ನನ ಬರವನು
ಕಾಣುತ ನಾಚುವ
ಪ್ರಾಗ್ ದಿಗ್ವನಿತೆಯ ಮುಖಕಮಲ
ಲೋಹಿತ ವರ್ಣವ
ತಾಳಲು ಗೇಹದಿ
ನಿದ್ದೆಯ ಬಿಟ್ಟಿತು ಜನಜಾಲ [೨]
ಖಗಗಳ ಚಿಲಿಪಿಲಿ
ದನಿಯದು ಗಿಡಮರ
ಪೊದೆಗಳ ಮಧ್ಯದಿ ಕೇಳಿಸಿತು
ವೇದವಿದರ ಮನೆ
ಯಲಿ ಶಂಖಧ್ವನಿ
ದಿನಕರನುದಯವ ಘೋಷಿಸಿತು [೩]
ಹೊಂಗದಿರನು ಬೀ
ರುತ ನಗುನಗುತಲಿ
ಸೂರ್ಯನು ಮೆಲ್ಲನೆ ಮೂಡಿದನು
ಎಲೆಗಳ ಮೇಲಿನ
ದುಃಖದ ಮಂಜಿನ
ದೂರವ ಮಾಡುತ ಪೊರೆಯುವನು [೪]
ಹೂಗಳು ಅರಳಲು
ದುಂಬಿಯು ಹಾರಲು
ಪ್ರಕೃತಿಯು ಜಡತೆಯ ನೀಗಿಹುದು
ಸೂರ್ಯನ ಬಿಂಬವು
ಕಾರ್ಯಪ್ರಜ್ಞೆಯ
ಲೋಕದ ಜನರಿಗೆ ಸಾರುವುದು [೫]
Comments
ಉ: ಸೂರ್ಯೋದಯ
In reply to ಉ: ಸೂರ್ಯೋದಯ by srimiyar
ಉ: ಸೂರ್ಯೋದಯ
ಉ: ಸೂರ್ಯೋದಯ
ಉ: ಸೂರ್ಯೋದಯ