ನಾಸ್ತಿಕನ ಬಾಯಲ್ಲಿ ದೇವರು

ನಾಸ್ತಿಕನ ಬಾಯಲ್ಲಿ ದೇವರು

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ ಬಿರುಸಾಗಿ ನಡೆದ ಅಂತಾರಾಷ್ಟ್ರೀಯ ವಿದ್ಯಮಾನದಲ್ಲಿ ಅಮೇರಿಕಾ ಬರ್ಲಿನ್ ಗೋಡೆಗೂ ಒಂದು ಗತಿ ಕಾಣಿಸಿ ಸೋವಿಎಟ್ ಮೂರಾಬಟ್ಟೆ ಆಗಿಸುವಲ್ಲಿ ಯಶಸ್ಸನ್ನು ಕಂಡಿತು. ಈ ಯಶಸ್ಸಿಗೆ ಅಮೆರಿಕೆಯ ಕಪಟತನಕ್ಕಿಂತ ಒಂಚೂರು ಗೋರ್ಬಚೋಫ್ ಮತ್ತೊಂಚೂರು ಸಾಕ್ಷಾತ್ ಪರಮಾತ್ಮನೇ ಕಾರಣೀಕರ್ತರಾದರು. ದೇವರು ಯಾಕೆ ಬಂದ ಇಲ್ಲಿ ಎನ್ನುತ್ತೀರೋ? ಅಲ್ಲ, ಈ ವಿಶ್ವವನ್ನು, ಅಗಾಧ ಆಗಸವನ್ನು, ಗ್ರಹ, ಧೂಮಕೇತಾದಿಗಳನ್ನು, ನಂತರ ಇವುಗಳೆಲ್ಲವಕ್ಕೆ viceroy ಆಗಿ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ ತಪ್ಪಿಗೆ ದೇವಸ್ಮರಣೆಯೇ ಬೇಡ ಎಂದು ರಷ್ಯಾ ಕೂತರೆ ಅವನಾದರೂ ಏಕೆ ಸುಮ್ಮನಿರಬೇಕು? ಗೋರ್ಬಚೋಫ್ ನನ್ನು ದಾಳವಾಗಿ ಉಪಯೋಗಿಸಿ ವಿಶ್ವದ ಮಹಾ ಶಕ್ತಿ ರಶ್ಯಾವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟ ದೇವರು ಈಗಲಾದರೂ ನನ್ನ ಜಪ ಮಾಡುತ್ತಾ ಬಿದ್ದಿರಿ ಎಂದು.

ಆಫ್ಘಾನಿಸ್ತಾನದ ಯುದ್ಧದಲ್ಲಿ ತಲ್ಲೀನವಾದ ಅಮೆರಿಕೆಗೆ ಚಾರಿತ್ರಿಕ ಮತ್ತು ರಾಜತಾಂತ್ರಿಕ ತಿರುಗೇಟಾಗಿ ಪರಿಣಮಿಸಿದೆ ಆಫ್ಘನ್ ಯುದ್ಧ ಎಂದು ಗೋರ್ಬಚೋಫ್ ವಾದ. ಆಫ್ಘಾನಿಸ್ತಾನದಲ್ಲಿ ರಷ್ಯಾ ಬೆಂಬಲಿತ ಸರಕಾರವನ್ನು ಉರುಳಿಸಲು ಮುಜಾಹಿದೀನ್ಗಳನ್ನು ಹರಿಬಿಟ್ಟ ಅಮೆರಿಕೆಗೆ ಈಗ ಅದೇ ಮುಜಾಹಿದೀನ್ ಗಳೇ ಸವಾಲಾಗಿ ಪರಿಣಮಿಸಿರುವುದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ.” ನನ್ನ ಪ್ರಕಾರ ದೇವರು ತಪ್ಪು ಮಾಡುವವರನ್ನು ಶಿಕ್ಷಿಸಲು ತನ್ನದೇ ಆದ mechanism ಅನ್ನು ಬಳಸುತ್ತಾನೆ ಎಂದು ಗೋರ್ಬಚೋಫ್ ನುಡಿಯುತ್ತಾರೆ. ಕಮ್ಯುನಿಸ್ಟರೆಂದರೆ ನಮ್ಮ ಪ್ರಕಾರ ನಿರೀಶ್ವರವಾದಿಗಳು, ಗೋರ್ಬಚೋಫ್ ಒಬ್ಬ ಕಮ್ಯುನಿಸ್ಟ್. ಇವರ ಬಾಯಲ್ಲಿ ದೇವರ ಪ್ರಸ್ತಾಪವೇ? ಅಥವಾ ನಿರೀಶ್ವರವಾದಿಯಾಗಿದ್ದ ಗೋರ್ಬಚೋಫ್ ರ ಕೊರಳಿಗೆ ಅವರ ಮಿತ್ರ ಅಮೆರಿಕೆಯ ರೊನಾಲ್ಡ್ ರೇಗನ್ ಶಿಲುಬೆ ಕಟ್ಟಿ ಬಿಟ್ಟರೆ? ಏನೇ ಆದರೂ ಆಫ್ಘಾನಿಸ್ತಾನ ಮಾತ್ರ ಅಮೆರಿಕೆ ಮಟ್ಟಿಗೆ ನೀನೆ ಸಾಕಿದಾ ಗಿಳಿ, ನಿನ್ನಾ ಮುದ್ದಿನ ಗಿಳೀ, ಹದ್ದಾಗಿ ಕುಕ್ಕಿತಲ್ಲೋ..... ಆಗಿದ್ದಂತೂ ಗುನುಗಿಸಲೆಬೇಕಾದ  ಬೇಕಾದ ಸತ್ಯವೇ.    

 

Rating
No votes yet

Comments