"ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ
ಇದೇನು, ಇಷ್ಟು ವಿಚಿತ್ರವಾದ ತಲೆಬರಹ (ಅಥವಾ ತಲೆಹರಟೆ ಬರಹ) ಅಂತ ಅಂದುಕೊಳ್ಳುತ್ತಿದ್ದೀರಾ? ಹಾಗೇನೂ ಇಲ್ಲ. ಚಿಕ್ಕದಾಗಿ-ಚೊಕ್ಕದಾಗಿ ಹೇಳುತ್ತೀನಿ, ಕೇಳುವಂಥವರಾಗಿ.
ಕಳೆದ ತಿಂಗಳು ನನ್ನ ಸ್ನೇಹಿತನೊಬ್ಬ ಒಂದು "ಅಲ್ಲಗಳೆಯುವಿಕೆ" (ಅದೇ ಸ್ವಾಮಿ disclaimerಉ) ಬರೆಯಲು ಹೋಗಿ ಬಹಳ ಪೀಕಲಾಟಕ್ಕೆ ಸಿಗಿಹಾಕಿಕೊಂಡು, ನಮ್ಮೆಲ್ಲರ ನಗೆಪಾಟಲಿಗೆ ಗುರಿಯಾದ. ಅವನ ಪೇಚಾಟವೇ ನನಗೆ ಒಂದು ಲೇಖನಕ್ಕೆ ಸರಕಾಯಿತು ಅನ್ನೋದು ಬೇರೆ ವಿಷಯ. ಈ ಬಗ್ಗೆ ಬರೆಯೋಣ ಅಂತ ಹೊರಟ ನನಗೆ ಅದರಲ್ಲಿ ಬಳಸೋದಕ್ಕೆ ಒಂದು ಪತ್ರಿಕೆಯ ಹೆಸರು ಬೇಕಾಗಿತ್ತು. ಯಾವುದೇ ಪತ್ರಿಕೆಯನ್ನು ಸುಮ್ಮನೆ "ಉದಾಹರಣೆಗೆ" ಅಂತ ಹೆಸರಿಸಿದರೂ ಜನ "ಅದನ್ನೇ ಯಾಕೆ ಉದಾಹರಿಸಬೇಕು? ಇದನ್ನು ಯಾಕೆ ಸೂಚಿಸಬಾರದು" ಅಂತ ಹೇಳಬಹುದು. ಅದೂ ಸರಿ ಅನ್ನಿ, ಅವರವರ ಭಾವ-ಭಕ್ತಿ! ಅದಕ್ಕೆ ನಾನೇ ಒಂದು ಹೊಸ ಪತ್ರಿಕೆ ಪ್ರಾರಂಭಿಸಿದ್ದೀನಿ. ಮೊನ್ನೆ ತಾನೇ ಪ್ರಾರಂಭವಾಗಿದೆ. ಇದರ ಸಂಪೂರ್ಣ "ಕಾಪಿರೈಟ್"ಗೆ ಅರ್ಜಿ ಕೂಡ ಹಾಕೋಣ ಅಂತ ಯೋಚಿಸುತ್ತಿದ್ದೀನಿ; "ಹೆತ್ತವರಿಗೆ ಹೆಗ್ಗಣ ಮುದ್ದು" ನೋಡಿ. ನನ್ನ ಪತ್ರಿಕೆಯ ಹೆಸರು "ಉದಯ ಪ್ರಭ ಕರ್ನಾಟಕ ಪ್ರಜಾ ಟೈಮ್ಸ್" ಅಂತ! ಅದರ ಸಂಕ್ಷಿಪ್ತ ರೂಪವೇ "ಉಪ್ರಕಪ್ರಟೈ". ಹೇಗಿದೆ ಹೆಸರು? ಆಕಸ್ಮಾತ್, ಈ ಹೆಸರಿನದ್ದೂ ಒಂದು ಪತ್ರಿಕೆ ಕರುನಾಡಿನ ಯಾವುದಾದರೂ ಮೂಲೆಯಲ್ಲಿ ಇದ್ದಲ್ಲಿ, ನಮೋನ್ನಮಃ, ತಪ್ಪಾಯಿತು, ದಯವಿಟ್ಟು ಒಪ್ಪಿಸ್ಕೋಬೇಕು. ಇದಿಷ್ಟೂ ನನ್ನ ಮಾತು; ಇನ್ನು ಮುಂದೆ ನನ್ನ ಸ್ನೇಹಿತನ ಕಥೆ ಕೇಳುವಿರಂತೆ, ಬನ್ನಿ.
ನನ್ನ ಸ್ನೇಹಿತ ಒಬ್ಬ ಉದಯೋನ್ಮುಖ ಬರಹಗಾರ. ಅವನ ಹೆಸರು, ಊರು, ಕೇರಿ ಈ ಮೂರರ ತಂಟೆಯೂ ನಮಗೆ ಬೇಡ. ಆತ ನಮ್ಮ "ಉಪ್ರಕಪ್ರಟೈ" ಪತ್ರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕೆಲವೊಂದು ವಿಚಾರಗಳ ಬಗ್ಗೆ "ವಸ್ತುನಿಷ್ಠ"ವಾಗಿ ಟೀಕಿಸಿ ಬರೆಯಬೇಕು ಅಂತ ಅಂದುಕೊಳ್ಳುತ್ತಾನೆ. ಆದರೆ "ಉಪ್ರಕಪ್ರಟೈ" ಸಿಕ್ಕಾಪಟ್ಟೆ ಜನಪ್ರಿಯ ಪತ್ರಿಕೆ. ಅದರ ಬೆಂಬಲಿಗ ಅಭಿಮಾನಿಗಳ ಪಟ್ಟಿಯಲ್ಲಿ ಕನಿಷ್ಠ ಹತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ. ಹಾಗೆಯೇ ಅದನ್ನು ಟೀಕಿಸುವವರ ಪಟ್ಟಿಯಲ್ಲಿ ಕೂಡ ಒಂಭತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ ಅನ್ನೋದೂ ನಿಜ!
ಅವನಿಗೆ (ನನ್ನ ಸ್ನೇಹಿತ ಬರಹಗಾರನಿಗೆ) ಪೀಕಲಾಟ. ಟೀಕಿಸಿದ್ದಕ್ಕೆ ಪತ್ರಿಕೆಯ "ಪರ"ವಾಗಿರುವ ಹತ್ತು ಜನ ಸಾಹಿತಿಗಳು ಆ ಟೀಕೆಗಳನ್ನು ವೈಯಕ್ತಿಕವಾಗಿ ಪರಿಗಣಿಸಿ, ಮುಂದೊಂದು ದಿನ ತನ್ನನ್ನು ಸಾಹಿತ್ಯ ಪ್ರಪಂಚದ ಹೊಸ್ತಿಲಿನಲ್ಲೇ ನಿಲ್ಲಿಸಿ, ನಾಲ್ಕು ಬಾರಿಸಿ ಕಳಿಸಿದಲ್ಲಿ ಏನು ಕಥೆ? ಅಥವಾ "ಉಪ್ರಕಪ್ರಟೈ"ನ ಸಹಸ್ರಾರು "ಅಭಿಮಾನಿ ದೇವರುಗಳಲ್ಲಿ" ಯಾರಾದರೂ ಒಬ್ಬಿಬ್ಬರು ಮನೆಬಾಗಿಲ ತನಕ ಬಂದು, "ಕಾನೂನು ಕೈಗೆ ತಗೊಂಡ್ರೆ" ಏನು ಗತಿ ಅಂತ? ಆದರೆ ಬರೆಯದೆ ಇದ್ದಲ್ಲಿ "ನೀನು ನನಗೆ ದ್ರೋಹ ಮಾಡುತ್ತಿದ್ದೀಯಾ" ಅಂತ ಅವನ ಆತ್ಮಸಾಕ್ಷಿ (ಅಯ್ಯಪ್ಪ, ಎಷ್ಟು ದೊಡ್ದ ಪದ!) ದಿನಕ್ಕೆ ಹತ್ತು ಬಾರಿ, ಹಾಳಾದ್ದು ಕಾಫಿ-ಟೀ ಕುಡಿಯೋ ಟೈಮಲ್ಲೋ, ಅಥವಾ ಇನ್ಯಾವುದಾದರೂ ಲೇಖನ ಬರೆಯುವಾಗಲೋ, ಪಕ್ಕದಲ್ಲೇ ಕೂತು ಕೇಳುತ್ತೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಬಂದು ಕೇಳೋದಕ್ಕೆ ಅದಕ್ಕೇನು ಕಷ್ಟಾನೋ ಗೊತ್ತಿಲ್ಲಪ್ಪ.
"ಅಯ್ಯೋ, ಇದ್ಯಾವುದರ ರಗಳೆಯೂ ಬೇಡ" ಅಂತ ಆತ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಅದೇನಪ್ಪಾ ಅಂದ್ರೆ "ಎಲ್ಲರಿಗೂ ಒಪ್ಪಿಗೆಯಾಗುವಂಥ" ಒಂದು "ಅಲ್ಲಗಳೆಯುವಿಕೆ"ಯನ್ನು ಬರೆದು, ಅದರ ನಂತರ ತನ್ನ ವಸ್ತುನಿಷ್ಠ ಲೇಖನವನ್ನು ಪ್ರಾರಂಭಿಸೋದು ಅಂತ. ಹಾಗೆ ಯೋಚಿಸಿದ್ದೇ ತಡ ಆತನ ಮನಸ್ಸು ನಿರಾಳವಾಗುತ್ತದೆ. "ನಾಳೆ ಬೆಳಗ್ಗೆ ಎದ್ದು ಅಲ್ಲಗಳೆಯುವಿಕೆಯನ್ನು ಬರೆಯೋಣ" ಅಂತ ಯೋಚಿಸಿ, ಮುಸುಕು ಹಾಕಿ ಮಲಗುತ್ತಾನೆ. ರಾತ್ರಿ ಕನಸಿನಲ್ಲಿ ನರಸಿಂಹಸ್ವಾಮಿಯವರು ಬರಬೇಕೆ? ಯಾವ ನರಸಿಂಹಸ್ವಾಮಿ ಅಂದ್ರಾ? ಅದೇ "ಮೈಸೂರು ಮಲ್ಲಿಗೆ"ಯ ಕೆ.ಎಸ್.ನರಸಿಂಹಸ್ವಾಮಿ ಕಣ್ರೀ. ಕೆ.ಎಸ್.ನ ಅವರನ್ನು ನೋಡಿ ನಮ್ಮ ಬರಹಗಾರ ತಬ್ಬಿಬ್ಬೋ ತಬ್ಬಿಬ್ಬು. ಗೌರವ, ಗಡಿಬಿಡಿಗಳಿಂದ ಎದ್ದು ಕೂರುತ್ತಾನೆ. ಆಗ ಕೆ.ಎಸ್.ನ ಹೇಳುತ್ತಾರೆ. "ನಿನ್ನ ಆಲೋಚನೆ ನನಗೆ ಗೊತ್ತಾಯಿತು. ಒಂದು ಕಿವಿಮಾತು ಹೇಳಿ ಹೋಗೋಣ ಅಂತ ಬಂದೆ. ಅಲ್ಲಾ ಕಣಯ್ಯಾ, ಜಗತ್ತಿನಲ್ಲಿ ಎಲ್ಲರನ್ನೂ ಮೆಚ್ಚಿಸೋಕೆ ಆ ದೇವರಿಗೇ ಸಾಧ್ಯವಾಗಿಲ್ಲ. ಆ ದೇವರನ್ನೇ 'ಉಂಟು-ಇಲ್ಲ, ಸಾಕಾರಿ-ನಿರಾಕಾರಿ, ನಾಲ್ಕು ಕೈ-ಎರಡೇ ಕೈ' ಹೀಗೆಲ್ಲ ಜಗಳವಾಡುತ್ತಾರೆ. ಇನ್ನು ನೀನು ಯಾವ ಗಿಡದ ತೊಪ್ಪಲು? ಅದಕ್ಕೇ ತಾನೇ ನಾನು ಬರೆದದ್ದು 'ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ' ಅಂತ".
ಕನಸಿನ ವಿವರ (ಅಂದ್ರೆ ನನ್ನ ಸ್ನೇಹಿತ ಮತ್ತು ಕೆ.ಎಸ್.ನ ಅವರ ನಡುವಣ ಸಂಭಾಷಣೆ) ಬರೆದು ನಿಮ್ಮನ್ನು ಬೋರ್ ಹೊಡೆಸುವುದಿಲ್ಲ. ಸುತ್ತಿ ಬಳಸದೇ ನೇರವಾಗಿ ಹೇಳುವುದಾದಲ್ಲಿ, ನಮ್ಮ ಬರಹಗಾರ ತನ್ನ ತಾರುಣ್ಯದ ಆವೇಶದಿಂದಲೋ, ಆದರ್ಶದ ಹುಚ್ಚಿನಿಂದಲೋ, ಒಟ್ಟಿನಲ್ಲಿ ಕೆ.ಎಸ್.ನ ಅವರ ಮಾತನ್ನು ಒಪ್ಪದೇ, ನಯವಾಗಿಯೇ ತಿರಸ್ಕರಿಸಿ, ಅವರಿಗೆ ನಮಸ್ಕರಿಸಿ, "ಮಲ್ಲಿಗೆಯ ಕವಿಗೆ" ಅಚ್ಚ ಇಂಗ್ಲೀಷಿನಲ್ಲಿ "ಗುಡ್‌ನೈಟ್" ಹೇಳಿ, ಅವರನ್ನು ಕಳಿಸಿ ಬಂದು, ಪುನಃ ಮುಸುಕು ಹೊದ್ದು ಮಲಗುತ್ತಾನೆ.
(ನನ್ನ ಬರಹಗಾರ ಸ್ನೇಹಿತ ಏನು "ಅಲ್ಲಗಳೆಯುವಿಕೆ" ಬರೆದ, ಏನು "ವಸ್ತುನಿಷ್ಠ" ಲೇಖನ ಬರೆದ ಅಂತ ತಿಳಿದುಕೊಳ್ಳುವ ಕುತೂಹಲವೇ? ಕ್ಷಮಿಸಿ, ಅದನ್ನು ಹೇಳೋದಕ್ಕೆ ನನಗೆ ಇನ್ನೊಂದು ವಾರ ಸಮಯ ಬೇಕು. "ಎಲ್ಲಾ ಓಕೆ, ಸಮಯ ಯಾಕೆ" ಅಂದ್ರಾ? ನನ್ನ ಸ್ನೇಹಿತನಿಗೆ ಅದೇನಾಯ್ತೋ ಕಾಣೆ, ನಿನ್ನೆಯಿಂದ ಊರಲ್ಲೇ ಇಲ್ಲ. ಕಚೇರಿಗೂ ರಜೆ ಹಾಕಿದ್ದಾನಂತೆ. ಮುಂದಿನ ವಾರ ಬಂದ ತಕ್ಷಣ ಕೇಳಿ ಹೇಳುತ್ತೀನಿ. ಅಲ್ಲಿಯವರೆಗೆ: "ಇನ್ನೂ ಇದೆ/ಮುಂದುವರೆಯುವುದು...")