ಈಜಿಪ್ಟ್ ನ ಕ್ರಾಂತಿ, ಭಾರತಕ್ಕೆ ಬೇಕಾಗಿದೆಯಾ?

ಈಜಿಪ್ಟ್ ನ ಕ್ರಾಂತಿ, ಭಾರತಕ್ಕೆ ಬೇಕಾಗಿದೆಯಾ?


೧೧ ಫೆಬ್ರುವರಿ ೨೦೧೧, ನಾವೆಲ್ಲಾ ಒಂದು ಇತಿಹಾಸಕ್ಕೆ ಸಾಕ್ಷಿಯಾದ್ವಿ. ಹೌದು, ೩೦ ವರ್ಷಗಳ ಈಜಿಪ್ಟ್ ನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ನ ಪದತ್ಯಾಗ. ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕ್ರಾಂತಿ ಅದು. ೩೦ ವರ್ಷದ ಯುವಕ, ಹೋಸ್ನಿಯ ಆಡಳಿತಕ್ಕೆ ಸೆಡ್ಡು ಹೊಡೆದಿದ್ದ. ಆತನ ಆಳ್ವಿಕೆಯನ್ನು ಪ್ರಶ್ನಿಸಿದ್ದ. ಇಂತಹ ಆಡಳಿತ ನಮಗೆ ಬೇಡವೆಂದು ಕಿಡಿ ಹಾರಿಸಿದ್ದ. ಅದೆಂತಹ ಕಿಡಿಯೆಂದರೆ, ಇಡೀ ಈಜಿಪ್ಟ್ ನ ಜನತೆ ಭುಗಿಲೆದ್ದಿತು. ರಕ್ತದ ಕೋಡಿ ಹರಿಸಿದ್ರು ಬಗ್ಗದ-ಜಗ್ಗದ ಜನ ಜಾತ್ರೆಯದು. ಅಲ್ಲಿ ೩೦ ವರುಷದ ಸೇಡಿತ್ತು, ಕಿಚ್ಚಿತ್ತು, ಅದಕ್ಕೂ ಮಿಕ್ಕಿ ಅಲ್ಲೊಂದು ಛಲವಿತ್ತು. ಅಲ್ಲೊಂದು ಪ್ರಾಮಾಣಿಕ ಅಭಿವ್ಯಕ್ತಿ,  ಸ್ವಾರ್ಥವಿಲ್ಲದ ಪ್ರಯತ್ನ, ಯಾವುದಕ್ಕೂ ಹೆದರದ ಹುಚ್ಚು ಎನ್ನಬಹುದಾದಂತಹ ಧೈರ್ಯ, ಒಂದು ದಿಟ್ಟ ಗುರಿಯಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಯ ಕೊಲೆ ಈ ಮಟ್ಟಕ್ಕೆ ತನಗೆ ಎಡತಾಗಬಹುದು ಅಂತ ಹೋಸ್ನಿ ಯೋಚನೆ ಮಾಡಿರಲಿಲ್ಲ ಅನ್ಸುತ್ತೆ. ಹೌದು ಸ್ವಾತಂತ್ರ್ಯ ಅಂದರೆ ಹಾಗೆ. ಅದು ಹೇಳಲಾಗದ ತುಡಿತ, ಮರೆಲಾಗದ ಮಿಡಿತ, ಯಾವ ಕ್ಷಣದಲ್ಲಿ ನಮ್ಮನ್ನು ಆವರಿಸುತ್ತೆ ಅಂತೆ ಗೊತ್ತೇ ಆಗಲ್ಲ. ಹೋಸ್ನಿ,  ಸಾರಿ ಫಾರ್ ಯು !. ಇಂತಹ ಸಾಕಷ್ಟು ಕ್ರಾಂತಿಗಳಿಗೆ ಈ ಭೂಮಿ ಸಾಕ್ಷಿಯಾಗಿದೆ ಮತ್ತು ಸಾಕ್ಷಿಯಾಗಲಿದೆ.

 

೧೮೫೭, ಸಿಪಾಯಿ ದಂಗೆ, ಭಾರತದಲ್ಲಿ ಆಂಗ್ಲರ ಸರ್ವಾಧಿಕಾರಕ್ಕೆ ಅಂತ್ಯ ಹಾಡಲು ಭುಗಿಲೆದ್ದ ಕ್ರಾಂತಿ. ೧೯೪೭, ಭಾರತಮಾತೆಯ ಮಡಿಲು ನಮ್ಮದು ಅನ್ನುವ ಸ್ವಾತಂತ್ರ. ಎಂತಹ ಕಿಚ್ಚು ಅದು. ಸಾರೆ ಜಹಾಃ ಸೆ ಅಚ್ಚಾ, ಹಿಂದೂಸ್ತಾನ್ ಹಮಾರಾ ಅಂತ ದೇಶಕ್ಕೆ ದೇಶನೇ ಟೊಂಕಕಟ್ಟಿ ನಿಂತ ಘಳಿಗೆಯದು. ಸತ್ತವರು ಲಕ್ಷಾಂತರ ಮಂದಿ, ಅಂಗವಿಕಲಗೊಂಡವರು ಕೋಟ್ಯಾಂತರ ಮಂದಿ, ನಮ್ಮ ಇಂದಿನ ಸುಖ ಜೀವನಕ್ಕೆ ಪ್ರಾಣ ತೆತ್ತವರು ಮತ್ತು ತ್ಯಾಗ ಮಾಡಿದವರು ಅವರೆಲ್ಲಾ. ಸಾಕಷ್ಟು ತ್ಯಾಗ-ಬಲಿದಾನದಿಂದ ಬಂದಂತಹ ಸ್ವಾತಂತ್ರ್ಯವಿದು. ಆದರೆ, ಇಂದು ಈ ಸ್ವಾತಂತ್ರ್ಯದ ಭವ್ಯ(ಭೂತ)ರೂಪ ಕಂಡಲ್ಲಿ, ಆ ತ್ಯಾಗಿಗಳು ಕಣ್ಣೀರಿಡುವುದು ಗ್ಯಾರಂಟಿ. ಪ್ರತಿಯೊಂದರಲ್ಲಿ ಹಗರಣಗಳ ಸರಮಾಲೆ, ಲಕ್ಷ-ಲಕ್ಷ ರೂಪಾಯಿಗಳ ವಂಚನೆ, ಕೋಟ್ಯಾಂತರ ರೂಪಾಯಿಗಳ ತೆರಿಗೆ ಕದಿಯುವಿಕೆ , ಸಾವಿರಾರು ಕೋಟಿ ಕಪ್ಪು ಹಣ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣ, ಮತಿಗೆಟ್ಟ ರಾಜಕಾರಣಿ, ಸ್ವಾರ್ಥ ರಾಜಕಾರಣ, ಕುರ್ಚಿ ಕಸರತ್ತು, ಹಣದಬ್ಬರ (ಹಣದುಬ್ಬರ ಅಲ್ಲ), ಶ್ರೀ ಸಾಮಾನ್ಯನಿಗೆ ಎಟುಕದ ಬೆಲೆಗಳು, ಕೊರತೆಯಲ್ಲಿರುವ ಬಜೆಟ್ ಗಳು, ಏರುತ್ತಿರುವ ತರಕಾರಿ , ಹಾಲು ಮತ್ತು ಪೆಟ್ರೋಲ್ ಬೆಲೆಗಳು, ಇಳಿಯುತ್ತಿರುವ ಐಷಾರಾಮಿ ವಸ್ತುಗಳ ಬೆಲೆಗಳು, ಕೊರಗುತ್ತಿರುವ ರೈತ, ಗೊಣಗುತ್ತಿರುವ ಸಾಮಾನ್ಯ ಪ್ರಜೆ, ಕೇಕೆ ಹಾಕಿ ನಗುತ್ತಿರುವ ಸರ್ಕಾರಿ ಅಧಿಕಾರಿಗಳು, ಮೆರೆಯುತ್ತಿರುವ ಧನದಾಹಿಗಳು, ಕಿರುಚಾಡುತ್ತಿದ್ದರೂ ಏನೂ ಮಾಡಲಾಗದ ಸೋ ಕಾಲ್ಡ್ ವಿರೋಧ ಪಕ್ಷದವರು, ಆಸ್ತಿ ಕ್ರೋಢೀಕರಿಸುವಲ್ಲಿ ತಲ್ಲಿನರಾದ ದೊರೆಗಳು, ಬೇಡವಾದದ್ದನ್ನು ಬ್ರೇಕಿಂಗ್ ನ್ಯೂಸ್ ಅಂತ ಇಡೀ ದಿನ ಅರಚುತ್ತಿರುವ ಮಾಧ್ಯಮದವರು, ಬೆಲೆ ಸಮರದಲ್ಲಿ ಮುಳುಗಿರುವ ಪತ್ರಿಕೆಗಳು, ಕೇಳಿಸಿದ್ದ ಹಾಡುಗಳನ್ನು ಮತ್ತೆ ಮತ್ತೆ ಕೇಳಿಸುವ ರೇಡಿಯೋಗಳು, ರಾಷ್ರ್ಟ ಧ್ವಜವನ್ನು ತುಳಿದು ವಂದೇ ಮಾತರಂ ಹಾಡುವ ದಂತ ವೈದ್ಯಕೀಯ ವಿದ್ಯಾರ್ಥಿಗಳು, ಮುಖದಲ್ಲಿ ರಾಷ್ರ್ಟ ಧ್ವಜವನ್ನು ಬಳಿದುಕೊಂಡು ಆಟಗಾರರನ್ನು ಹುರಿದುಂಬಿಸುವ ಕ್ರೀಡಾಭಿಮಾನಿಗಳು, ಅವರ ಅಭಿಮಾನಕ್ಕೆ ಎಳ್ಳಷ್ಟೂ ಬೆಲೆ ಕೊಡದ ಆಟಗಾರರು, ಸಾವಿರಾರು ಜನರ ಮಾರಣಹೋಮವೆಸಗಿದ ಭಯೋತ್ಪಾದಕರ ಶಿಕ್ಷೆಯ ತೀರ್ಪುನ್ನು ಕಾಯ್ದಿರಿಸುವ ನ್ಯಾಯಾಲಯಗಳು ! etc….

 

ನಮ್ಮಲ್ಲಿ ಎಲ್ಲೋ ಸಾಮಾಜಿಕ ಕಾಳಜಿ ಮರೆಯಾಗುತ್ತಿದೆ. ನಾನೂ ಕೂಡ ಇದನ್ನು ಬರೆದು ಮರೆಯಬಹುದು. ನನಗನ್ನಿಸುತ್ತೆ ಭಾರತಕ್ಕೆ ಬೇಕಿದೆ , ಒಂದು ಕ್ರಾಂತಿ, ಈಜಿಪ್ಟ್ ನ ಕ್ರಾಂತಿಯಂತಹುದು.......  

 


 

Rating
No votes yet