ನಾ ಮರೆತು ಹೋದ ಮಾತು !
ಕವನ
ನಾ ಮರೆತು ಹೋದ ಮಾತು
ಮರೆತು ಹೋದ ಮಾತು ನೂರೆಂಟು,
ಕಾಡುತಿಹವು ನೆನಪಿನ ಇಡಿಗಂಟು !
ತಕ್ಸೀರು ಮನದಲಿ ಮತ್ತೆ ಪಿಸುಗುಡುತ್ತಿದೆ
ನಾ ಮರೆತು ಹೋದ ಮಾತು...
ಕೈ ಹಿಡಿದು ಸಾಗುವಾಗ, ನೋವು-ನಲಿವಲಿ
ಜೊತೆಯೆಂದಾಗ, ಈರ್ವರನು ತಣಿಸುವ ಮಾತು,
ನಾ ಮರೆತು ಹೋದ ಮಾತು !!
ಕನಸು ನಿನ್ನಲಿ ಬಂದಿರಲು, ನೆನಪಲಿ ನಾನು
ಕಾಡುತಿರಲು, ಬೆಸೆಯುವ ಪ್ರೀತಿ ಮಾತು,
ನಾ ಮರೆತು ಹೋದ ಮಾತು !!
ಕಣ್ಣೀರು ಕಲೆತಿರಲು, ನನ್ನ ಸನಿಹ ನೀ
ಬಯಸುತಿರಲು, ಸಂತೈಸುವ ಸ್ಪರ್ಶದ ಮಾತು,
ನಾ ಮರೆತು ಹೋದ ಮಾತು !!
ಘಳಿಗೆ-ಘಳಿಗೆಯು ಯುಗಗಳಾಗಿ, ವಿರಹದ
ಬಯಕೆಯಲಿ ನೆಂದಿರಲು, ಕೆರಳಿಸುವ ತುಂಟ ಮಾತು,
ನಾ ಮರೆತು ಹೋದ ಮಾತು !!
ಮನದಲ್ಲಿ ಆಸೆ ಗೂಡುಕಟ್ಟಿ ಕಾಯುತಿರಲು,
ತೀರಿಸುವೆನೆಂದು ಹೇಳುವ ಮಾತು,
ನಾ ಮರೆತು ಹೋದ ಮಾತು !!
ಸಾವಿರ ಇಂತಹ ಮಾತು ಮರೆಯಲು
ನನ ತಪ್ಪು ಏಕೆಂದು ಹೇಳುವೇ ?,
ನಿನ ತುಟಿಯಲ್ಲಿನ ನಗುವಿಗೆ ನಾ ಶರಣಾಗಿ
ಮರೆತ ನೂರೆಂಟು ಮಾತು ಅವಲ್ಲವೇ ?