ಮೀಸೆಯ ಪುರಾಣ
ಮೊನ್ನೆ ಸಾಯಂಕಾಲ ಹಾಗೆ ಸುಮ್ಮನೆ ಕುಳಿತಿದ್ದಾಗ , "ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಅಂತ ಬಾನುಲಿಯಲಿ ಬರುತಿದ್ದ ಹಾಡನು ಕೇಳಿ,ಮೀಸೆ ಯ ಬಗ್ಗೆ ಕುತೂಹಲ ಹೆಚ್ಚಾಗಿ ಕೆಲವು ವೆಬ್ ಪೇಜ್ ಗಳನು ಅಂತರಜಾಲದಲಿ ಶೋಧಿಸುತ್ತಿದಾಗ , ಸಿಕ್ಕ ಮಾಹಿತಿ ನೋಡಿ, ದಂಗಾಗಿ ಹೋಗಿ 'ಮೀಸೆ ' ಯ ಕುರಿತು ಒಂದು ಲೇಖನ ಯಾಕೆ ಬರಿಯಬಾರದೆಂದು ಯೋಚಿಸಿದಾಗ, ಮನಸಿಗೆ ಮೊದಲು ಹೊಳೆದದ್ದು "ಅ೦ಬಲಿ ಕುಡಿಯುವವನಿಗೆ ಮೀಸೆ ಹಿಡಿಯುವವ ಒಬ್ಬ !" ಅನ್ನೋ ಗಾದೆ ಮಾತು !
ಸರಿ ಸುರು ಮಾಡುವ ಮೀಸೆ ಯ ಪುರಾಣ !
ಮನುಷ್ಯನ ಮೇಲ್ತುಟಿಯ ಮೇಲೆ ಬೆಳೆಯುವ ಮುಖಗೂದಲಿಗೆ ಮೀಸೆ ಅಂತ ಕರಿತಾರೆ .. ಕೇವಲ ಮೇಲ್ತುಟಿಯ ಮೇಲೆ ಮಾತ್ರ ಬೆಳೆಯುವ ಕೂದಲಿಗೆ ಮಾತ್ರ ಮೀಸೆ ಅನ್ನೋದು ; ಕೆನ್ನೆ , ಗಲ್ಲ ಮತ್ತು ಇನ್ನುಳಿದ ಮುಖದ ಮೇಲೆಲೆಲ್ಲ ಬೆಳೆಯುವ ಕೂದಲಿಗೆ 'ಗಡ್ಡ ' ಅಂತ ಕರಿತಾರೆ ...
ಕಲ್ಲಿನ ಕತ್ತಿಯಿಂದ ಮುಖ ಚೌರ ಮಾಡಿಕೊಳ್ಳುತಿದ್ದರೆಂದು ಹೇಳಲಾಗುವ, ಪುರಾತನ ಇರಾನಿ ಕುದುರೆ ಸವಾರರು ( Scythians ) ಸುಮಾರು ಕ್ರಿಸ್ತ ಪೂರ್ವ ೩೦೦ ವರ್ಷಗಳ ಹಿಂದೆ 'ಮುಖ ಚೌರ ' ಮಾಡಿ ಕೊಂಡು 'ಮೀಸೆ ' ಮಾತ್ರ ಬಿಟ್ಟುಕೊಂಡಿದ್ದ ಒಂದು ಕಲಾಕೃತಿ ಯನ್ನ ನೋಡಿದರೆ ಮೀಸೆ ಯ ಇತಿಹಾಸವನ್ನ ೨೩೦೦ ವರ್ಷಗಳ ಹಿಂದಕ್ಕೆ ತಕೊಂಡು ಹೋಗಬಹುದು !
ಆಧುನಿಕ ಯುಗದಲ್ಲಿ, ಯುದ್ದದಲ್ಲಿ ಭಾಗಿಯಾಗುತಿದ್ದ ಸೈನಿಕರು ತಮ್ಮತಮ್ಮ ಸ್ತಾನ ಹಾಗು ಶ್ರೇಣಿಯ ಆಧಾರದ ಮೇಲೆ ಮೀಸೆ ಬಿಡುತಿದ್ದರು ... ಆಗ ತಾನೇ ಕೆಲಸಕ್ಕೆ ಸೇರಿದ ಯುವ ಸೈನಿಕರು 'ಚಿಗರುಮೀಸೆ 'ಯನು , ಮೇಲ್ಪಂಕ್ತಿಯ ಮಧ್ಯ ವಯಸ್ಕರು 'ದಪ್ಪ ಮೀಸೆ ' ಬಿಡಬಹುದಿತ್ತು .
ನಾನು ಕೂಡ ಚಿಕ್ಕವನಿದ್ದಾಗ , 'ಅಪ್ಪ ' ಶೇವಿಂಗ್ ಮಾಡ್ಕೋವಾಗ ಅಪ್ಪನ ದಪ್ಪ ಮೀಸೆಯ ನೋಡಿ , ನನ್ನ ಹಾಳುಗಲ್ಲದ ಮೇಲೆ ಸುಮ್ಮನೆ ಕೈಯಾಡಿಸಿಕೊಳ್ಳುತ್ತ , ನನಗೂ ಮೀಸೆ ಬಂದಿದೆ ಅನ್ನೋ ತರ , ಹೆಬ್ಬೆರಳು ಮತ್ತು ತೋರು ಬೆರಳು ಒಂದುಗೂಡಿಸಿ ಬಲ ದುಟಿಯ ಮೇಲೆ ತೋರುಬೆರಳನ್ನು ಹೆಬ್ಬರಳಿಗೆ ಉಜ್ಜುತ್ತ ಕನ್ನಡಿಯ ಮುಂದೆ ನಿಂತು ನಗುತ್ತಿದ್ದೆ !
ಮೊತ್ತ ಮೊದಲ ಸಲ ನನ್ನ ಮುಖದ ಮೇಲೆ ಚಿಗುರು ಮೀಸೆ ಬೆಳೆದಾಗ ಮನಸಿಗೆ ಖುಷಿಯಾಗಿ ನಾನೂ 'ದೊಡ್ಡವ'ನಾದೆನೆಂದು ತಿಳಿದು ಒಳೊಳಗೆ ಒಂಥರಾ ಏನೋ ರೋಮಾಂಚನವಾಗಿ ಎದೆ ಹಿಗ್ಗಿಸಿ ನಮ್ಮೂರ 'ಓಣಿ'ಯಲಿ ಓಡಾಡಿ ಮನೆಗೆ ಬಂದು ಮತ್ತದೇ ಕನ್ನಡಿಯ ಮುಂದೆ ಹೆಬ್ಬೆರಳು ಮತ್ತು ತೋರು ಬೆರಳು ಒಂದುಗೂಡಿಸಿ ಬಲ ದುಟಿಯ ಮೇಲೆ ತೋರುಬೆರಳನ್ನು ಹೆಬ್ಬರಳಿಗೆ ಉಜ್ಜುತ್ತ ಕನ್ನಡಿಯ ಮುಂದೆ ನಿಂತಾಗ ಈ ಸಾರಿ ಕೈಗೆ ಮೀಸೆ ಸಿಕ್ಕುತಿದ್ದವು !!
ನಾನು ಮೊದಲ ಸಲ ಶೇವಿಂಗ್ ಮಾಡಿ ಕೊಂಡ ನೆನಪು ಇನ್ನು ಹಸಿಯಾಗಿಯೇ ಇದೆ ... ಸರಿ ....ಶೇವಿಂಗ್ ಕ್ರೀಂ , ಶೇವಿಂಗ್ ಬ್ರೇಶ್ ,ಬ್ಲೇಡು, ಒಂದು ಬಾಟಲ ಡೇಟಾಲ, ಒಂದು ಜಗ್ಗಿನಲ್ಲಿ ಸ್ವಲ್ಪ ನೀರು ಹಾಕೊಂಡು ಕನ್ನಡಿಯ ಮುಂದೆ ನಿಂತೆ .. ಶೇವಿಂಗ ಕ್ರೀಂ ನ ಶೇವಿಂಗ್ ಬ್ರೇಶ್ ಗೆ ಹಚ್ಚಿ , ನೀರಲ್ಲಿ ಅದ್ದಿ , ಮುಖಕ್ಕೆ ಬಳಿದುಕೊಂಡೆ .. ಏನೋ ಹೊಸದು ಸಾಧಿಸುವ ಛಲ ತೊಟ್ಟವನಂತೆ , ಬ್ಲೇಡು ಹಾಕಿದ್ದ ಶೇವರ್ ನ ಹಿಡಿದು ಒಂದು ಬಾರಿ ಬಲಗೆನ್ನೆಯ ಮೇಲಿಂದ ಒಂದು ಸಲ ಕೆಳಕ್ಕೆ ಎಳೆದೆ ...
ಸುರುವಾತು ನೋಡಿ .. 'ಭಗಭಗ ' ನೆ ಉರಿಉರಿ .. !!
ಮುಂದಿನ ಕಥೆ ನ ಕೇಳಲೇ ಬೇಡಿ ... ಒಟ್ಟು ಹದಿನಾಲ್ಕು ಕಡೆ ಗಾಯ ಮಾಡಿಕೊಂಡು , ಡೇಟಾಲನ ಹಚ್ಚಿ ಕೊಂಡಾಗ 'ಈ ಗಡ್ಡ ಮೀಸೆ ' ದೇವರು, ಪುರುಷ ಜಾತಿಗೆ ಮಾತ್ರ ದಯಪಾಲಿಸಿದ ಶಾಪ ಅಂತ ಅನಿಸಿತು !!
ಅದಾದ ಸುಮಾರು ವರ್ಷಗಳ ಕಾಲ ನಾನೂ ಶೇವಿಂಗ್ ನ ಮನೇಲಿ ಮಾಡಿಕೊಳ್ಳಲೇ ಇಲ್ಲ ... ವಾರಕೊಮ್ಮೆ 'ಸಲೂನ್ ' ಗೆ ಹೋಗಿ ಈ ಚೌರ ಕಾರ್ಯಕ್ರಮ ವನ್ನ ಮುಗಿಸಿಕೊಂಡು ಬರುತಿದ್ದೆ .
ಒಂದ ಸಲ ನನ್ನ ತಂಗಿಗೆ 'ಚಂದು, ಮೀಸೆ ತಕ್ಕೊಬೇಕು ಅಂತ ಮಾಡಿನಿ ' ಅಂದೆ . ಅವಳು ಅದಕ್ಕ 'ಬೇಡ ಅಣ್ಣ , ನಿನ್ನ ಮುಖಕ್ಕ ಮೀಸೆ ಇದ್ದರೇನೆ ಚಂದ .. ಇಲ್ಲ ಅಂದ್ರ ಭಾಳ ಅಸಯ್ಯ ಕಾಣತಾದ' ಅಂತ ಬಯ್ದಳು . ಆದರೂ ನೋಡಿಯೇ ಬಿಡೋಣ ಒಂದ್ ಕೈ ಅಂತ ಡಿಸೈಡ್ ಮಾಡಿ ... ಮೀಸೇನ ತಕೊಂಡು ಬಿಟ್ಟೆ !! ಅವತ್ತು ನಿಜವಾಗಿಯೂ ತುಂಬಾ ಅಸಯ್ಯ ಕಾಣತ ಇದ್ದೆ ...
'ಲೇಯ್ ಯಂಕ್ಕಪ್ಪ , ಗಂಡು ಜೋಗಪ್ಪ ಕಂಡ ಹಾಗೆ ಕಾಣತಿಯಲ್ಲೋ ..!! ಯಾರು ಹೇಳಿದರು ನಿನಗೆ ... ಮೀಸೆ ತಕ್ಕೋ ಅಂತ ... ದರಿದ್ರ !'
ಅಂತ ಅಮ್ಮ ಕೂಡ ಬಯ್ದ ಮೇಲೆ ಹಲವು ವರ್ಷಗಳ ಕಾಲ ನನ್ನ ಮೀಸೆ ಯ ತಂಟೆಗೆ ಹೋಗಲಿಲ್ಲ ನಾನು .
ಇತ್ತೀಚಿಗೆ ಮತ್ತೆ ಮೀಸೆ ತಕೊಂಡೆ ... ಆದ್ರೆ ಇವಾಗ ನನ್ನ ಗಳೆಯರು 'ಮಸ್ತ ಕಾಣಕತ್ತಿಯಲೇ ಮಗನ ' ಅಂತ ಹುರುದುಂಬಿಸಿದರು.
ಈ ಸಲ ಕನ್ನಡಿ ಮೋಸ ಮಾಡಲಿಲ್ಲ ನನಗೆ .. ಚನ್ನಾಗಿಯೇ ಕಾಣ್ತಾ ಇದ್ದೆ . ಅಮ್ಮ ಮತ್ತೆ ಬಯ್ದರು .. ಆದ್ರೆ 'ನೋಡಮ್ಮ ಮೊದಲ ಸಲ ನೋಡಿದಾಗ ಹಂಗೆ ಕಾಣ್ತದೆ ... ಸ್ವಲ್ಪ ದಿನ ಹೋದ ಮೇಲೆ ಎಲ್ಲ ಸರಿ ಕಾಣತಾದ ಬಿಡು ' ಅಂತ ಹೇಳಿದ ಮೇಲೆ ಅಮ್ಮನು 'ಏನ್ರ ಮಾಡ್ಕೋ ... ' ಅಂತ ಹುಸಿಗೋಪದಿಂದ ಸಮ್ಮತಿ ನೀಡಿದರು .
ಈಗ ಸುಮಾರು ದಿನದಿಂದ ಮೀಸೆ ಇಲ್ಲದೆ ಕಾಲ ಹಾಕುತಿದ್ದೇನೆ ... ಚನ್ನಾಗಿಯೂ ಕಾಣತಿದಿನಿ ಅಂತ ಎಲ್ಲರು ಹೇಳ್ತಾ ಇದ್ದಾರೆ ...
"ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಹಾಡು ಕೇಳಿದ ಮೇಲೆ ಯಾಕೋ ಮತ್ತೆ ಮೀಸೆ ಬಿಡ್ಬೇಕೆನಿಸಿ... ಬಿಟ್ಟೆ .... ಕನ್ನಡಿಯ ಮುಂದೆ ಹೆಬ್ಬೆರಳು ಮತ್ತು ತೋರು ಬೆರಳು ಒಂದುಗೂಡಿಸಿ ಬಲ ದುಟಿಯ ಮೇಲೆ ತೋರುಬೆರಳನ್ನು ಹೆಬ್ಬರಳಿಗೆ ಉಜ್ಜುತ್ತ ಕನ್ನಡಿಯ ಮುಂದೆ ನಿಂತಾಗ ಕೈಗೆ ಸಿಕ್ಕ ಮೀಸೆ ನೋಡಿ 'ನಾನು ಚಿಕ್ಕವನಿದ್ದಾಗ ' ಆ ರೀತಿ ಮಾಡಿದ ನೆನಪಾಗಿ ನಗು ಬಂತು !!!
ಇತಿ: ಮೀಸೆ ಪುರಾಣಂ ಸಂಪೂರ್ಣಮ್ !!