ನನ್ನ ಕನಸು
ಕನಸಿನಲ್ಲಿ ಬಂದು ಹೋದ ವಿಷಯದ ಅರ್ಥವನ್ನು ಹೇಳುವ ತಂತ್ರಾಂಶ ಒಂದನ್ನು ನನ್ನ ಮಿತ್ರ ಪರೀಕ್ಷಿಸಿ ನೋಡಲು ಕೊಟ್ಟಿದ್ದನು. "Dream interpretator " ಎಂದದರ ಹೆಸರು. ನನ್ನ ಕನಸು ಹೀಗಿತ್ತು. ಅದೊಂದು ದೊಡ್ಡ ಆಲದ ಮರ. ಅದರ ಕೆಳಗೊಬ್ಬ ಸನ್ಯಾಸಿ ಭಂಗಿ ಸೇದುತ್ತ ಕುಳಿತಿದ್ದನು. ಮೈ ತುಂಬಾ ಭಸ್ಮದ ರಾಶಿ. ಅದರ ನಡುವೆ ಹೊಳೆಯುವ ಕಂಗಳು. ಎದುರಿಗೆ ನೂರಾರು ಭಕ್ತ ಜನ. ಅವರಲ್ಲೊಬ್ಬ ರಾಜಕಾರಣಿ. ವಿಶೇಷ ಅನುಗ್ರಹಕ್ಕಾಗಿ ಹಣ್ಣು, ಹಂಪಲು, ಹಾರಗಳೊಂದಿಗೆ ತನ್ನ ಅನುಯಾಯಿಗಳೊಂದಿಗೆ ಬಂದಿದ್ದನು. ಆ ಸಾಧು ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದುದು ವಿಶೇಷವಾಗಿತ್ತು. ಆ ಸಾಲಿನ ಕೊನೆಯಲ್ಲಿ ನಾನು ನನ್ನ ಪರಿವಾರದೊಂದಿಗೆ ಇದ್ದೆನು.
ಈ ಕನಸಿನ ಅರ್ಥ ತಿಳಿಯಲು ನನ್ನ ಗೆಳೆಯನ ತಂತ್ರಾಂಶ ಬಳಸಲು ನಿಶ್ಚಯಿಸಿದೆನು. ಅದರ ಉತ್ತರ ಹೀಗಿತ್ತು. ಆಲದ ಮರ ಎಂದರೆ ವಿಶಾಲವಾದ ಅವಕಾಶ (ಮನೆ). ಭಂಗಿ ಸೇದುವ ಸನ್ಯಾಸಿ ಎಂದರೆ ರಾಕ್ಷಸ, ಭಸ್ಮದ ರಾಶಿ ಎಂದರೆ ಮನೆಯ ಹೊತ್ತಿ ಉರಿಯುವಿಕೆ, ನೂರಾರು ಜನ ಉರಿಯುತ್ತಿರುವ ಬೆಂಕಿ ಆರಿಸಲು ಬಂದಿದ್ದರೆ ರಾಜಕಾರಣಿ ಸಾಂತ್ವನ ಹೇಳಲು ಬಂದಿದ್ದಂತೆ! ನಾನು ನನ್ನ ಪರಿವಾರದೊಂದಿಗೆ ಈ ಅವಘಡದಿಂದ ಪಾರಾಗಿದ್ದೆನಂತೆ!
ನನಗನ್ನಿಸಿದ್ದು ಈ ತಂತ್ರಾಂಶ ರಚನೆಯಾಗಿದ್ದು ನಮ್ಮ ಸಂಸ್ಕೃತಿ ಗೊತ್ತಿಲ್ಲದ, ಸನ್ಯಾಸತ್ವದ ಗಂಧ ಗಾಳಿಯೇ ಗೊತ್ತಿಲ್ಲದವರಿಂದ ಎಂದು. ಪರಮ ಸಾತ್ವಿಕವಾದ ವಿಚಾರ ಒಂದನ್ನು ಕ್ರೂರವಾಗಿ ಬಿಂಬಿಸಿದ ರೀತಿ ಅಚ್ಚರಿಯೊಂದಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ತಾತ್ಸಾರವನ್ನು ಉಂಟುಮಾಡಿತು.