ಈ ಹಾಡಿನ ಬಗ್ಗೆ ಬರೆಯಲೇ ಬೇಕಾಗಿದೆ !!!!!ಬಳಲಿದ ದೇಹಕ್ಕೆ ಔಷಧಿಯಂತೆ ಬಂದಿತ್ತು ಈ ಹಾಡು!!!
ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್ರೆ ಬೆಡ್ಡಿನ ಮೇಲೆ ನನ್ನ ದೇಹ ಚಾಚಿಕೊಂಡೆ.ಎಲ್ಲರಿಗೂ ಆತಂಕ.ಹಲವು ಪ್ರಶ್ನೆಗಳು ಉತ್ತರಿಸಲು ಶಕ್ತಿಯಿಲ್ಲದೆ ನಿತ್ರಾಣವಾದ ದೇಹ , ಶುಶ್ರೂಷೆಗೆ ಓಡಾಡುತ್ತಿರುವ ವೈಧ್ಯರುಗಳು,ನರ್ಸುಗಳು, ಸಿಸ್ಟರ್ಗಳು, ನನ್ನ ದೇಹ ಬಗೆದುಹಾಕಲು ಸಿದ್ದವಾದಂತೆ ಕಾಣುತ್ತಿದ್ದ ಬಗೆ ಬಗೆಯ ಯಂತ್ರಗಳು .ಒಟ್ಟಿನಲ್ಲಿ ಅಸಹಾಯಕನಾಗಿ ವೈಧ್ಯರುಗಳು ಸೂಚನೆನೀಡಿದಂತೆ ಆಡುತ್ತಿದ್ದ ಬೊಂಬೆಯಂತಾಗಿದ್ದೆ.ಧಣಿದು ಅನಾರೋಗ್ಯದಿಂದ ಬಳಲಿದ ದೇಹ ವಿರಾಮ ಬಯಸಿ ಈ ಸ್ಥಿತಿ ಒದಗಿಸಿತ್ತು. ಮೊದಲ ದಿನ ನನ್ನಅನಾರೋಗ್ಯದ ಕಾರಣ ತಿಳಿಯಲು ನೂರೆಂಟು ತರಹದ ಪರೀಕ್ಷೆಗಳ ಸರಮಾಲೆ.ಬಗೆ ಬಗೆಯ ಯಂತ್ರಗಳ ಮುಂದೆ ಬೆತ್ತಲಾದ ಮನಸ್ಸಿನೊಡನೆ ,ಅರೆಬೆತ್ತಲ ದೇಹದೊಡನೆ ನಿಂತು ಅವುಗಳ ಹದ್ದಿನ ಕಣ್ಣಿನ ಧಾಳಿಗೆ ತುತ್ತಾದೆ. ದೇಹವನ್ನು ತಡಕಾಡಿದ ಯಂತ್ರಗಳು ನನ್ನ ಅನಾರೋಗ್ಯದ ಬಗ್ಗೆ ದೇಹ ಸ್ಥಿತಿಯ ವಿಚಾರವನ್ನು ಚಿತ್ರೀಕರಿಸಿ, ಫೋಟೋ ಹಾಗು ಕಾಗದದಲ್ಲಿ ಮುದ್ರಿಸಿ ಉಗಿಯುತ್ತಿದ್ದವು, ವೈಧ್ಯ ಕಾಣದ್ದನ್ನು ಯಂತ್ರಗಳು ಕಂಡು ನನ್ನ ದೇಹದಲ್ಲಿ ಅಡಗಿದ್ದ ರೋಗಗಳ ಮೇಲೆ ಆರೋಪ ಪಟ್ಟಿ ಸಾಕ್ಷಿ ಸಮೇತ ದಾಖಲೆ ಒದಗಿಸಿದ್ದವು. ತಕ್ಷಣ ಶುರುವಾಯಿತು ಯುದ್ದ . ಅನಾರೋಗ್ಯದ ವಿರುದ್ಧ ಸಮರ ಸಾರಿದವು ಮಾತ್ರೆಗಳು, ಹಾಗೂ ಚುಚ್ಚುಮದ್ದುಗಳು . ಮೊದಲ ರಾತ್ರಿ ಆಸ್ಪತ್ರೆ ವಾರ್ಡಿನಲ್ಲಿ ಮಾತ್ರೆಗಳು ನೀಡಿದ ಕಿಕ್ ನೊಂದಿಗೆ ಕಣ್ತುಂಬ ನಿದ್ರೆ ಬಂತು,[ ಮಾತ್ರೆಗಳಲ್ಲಿ ಸ್ಟಿರೀಯಾಯಿಡ್ಸ್ ಇರುವುದಾಗಿ ಕೇಳಿದ್ದ ನೆನಪು] ಮುಂಜಾವಿನಲ್ಲಿ ಎಚ್ಚರಗೊಂಡೆ ಪಕ್ಕದ ಬೆಡ್ಡಿನಲ್ಲಿದ್ದ ಒಬ್ಬರು ವಿಷ್ಣು ಸಹಸ್ರನಾಮ ಕೇಳಿ ಪುನೀತರಾಗುತ್ತಿದರು. ಮಾರನೆಯ ದಿನ ಅದೇ ರಾಗ ಅದೇ ಹಾಡು ನನಗೋ ಹೊರಗಡೆ ಸಂಪರ್ಕವಿಲ್ಲದೆ ಮನಸ್ಸು ರಾಡಿಯಾಗಿ, ವಾರ್ಡಿನಲ್ಲಿಯ ಪ್ರಪಂಚ ಬೇಸರ ಹುಟ್ಟಿಸಿ ಜೀವನದ ಬಗ್ಗೆ ಹೇಸಿಗೆಯಾಗಿ ಕೆಟ್ಟ ಆಲೋಚನೆಗಳು ಮನದಲ್ಲಿ ಅವತರಿಸಿ ಹುಚ್ಚು ಹಿಡಿಸಿ ಹುಚ್ಛನಾಗುವಂತಾಗಿದ್ದೆ ಮತ್ತೆ ರಾತ್ರಿ ಕಳೆಯಲು ಸಿದ್ಧನಾಗುತ್ತಿದ್ದೆ. ರಾತ್ರಿಯ ನೀರವತೆಯಲ್ಲಿ ಬೀಸಿದ ಗಾಳಿಯಲ್ಲಿ ಎಲ್ಲಿಂದಲೋ ತೂರಿಬಂತು ಈ ಹಾಡು " ಯಾರಿಗಿಲ್ಲ ನೋವು ,ಯಾರಿಗಿಲ್ಲ ಸಾವು......ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು........!!!! ರಾಡಿಯಾಗಿದ್ದ ಮನಸ್ಸಿಗೆ ತೇಲಿಬಂದ ಹಾಡಿನ ಈ ಪದಗಳು ಮಸಿನ ಗೂಡಿನೊಳಗೆ ತೂರಿಕೊಂದವು.ಮತ್ತೊಮ್ಮೆ ಮನ ಹಾತೊರೆದು ಕಿವಿಯಿಟ್ಟು ಕೇಳಿದಾಗ "ಬಾಳ ಕದನದಲ್ಲಿ ಭರವಸೆಗಳು ಬೇಕು !!!ನಾಳೆ ನನ್ನದೆನ್ನುವಾ ನಂಬಿಕೆಗಳು ಬೇಕು !!! ............ ಜೀವರಾಶಿಯಲ್ಲಿ ಮಾನವರಿಗೆ ಆಧ್ಯತೆ !! ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ " ..............ಹಾಡು ಕೇಳುತ್ತ ಮನಸು ಹಗುರವಾಗಿ ಭರವಸೆಯ ಬೆಳಕು ಚೆಲ್ಲಿದಂತಾಗಿ ಮೈಮರೆತು ಹಾಗೆ ನಿದ್ರಾಪರವಶನಾದೆ. ಮತ್ತೊಮ್ಮೆ ಎಚ್ಚರವಾದಾಗ ಸಿಸ್ಟರ್ ಒಬ್ಬರು ಏನ್ ಸಾರ್ ಇಷ್ಟೊಂದು ನಿದ್ದೆ ಮಾಡಿ ಗೆಲುವಾಗಿದ್ದೀರಾ ಅಂದ್ರು. ಅವರು ನೀಡಿದ ಮಾತ್ರೆ ಹಾಗೂ ಚುಚ್ಚುಮದ್ದು ಸ್ವೀಕರಿಸಿ ನನ್ನ ಮೊಬೈಲ್ ನಲ್ಲಿದ್ದ ಹಾಡುಗಳಲ್ಲಿ ಈ ಹಾಡನ್ನು ಹುಡುಕಿದಾಗ ಮನಕೆ ಮತ್ತೊಮ್ಮೆ ಕೇಳುವ ಬಯಕೆ ಯಾಗಿ ಈ ಹಾಡನ್ನು ಕೇಳಲು ಶುರುಮಾಡಿದೆ. ಪಕ್ಕದ ಬೆಡ್ಡಿನಲ್ಲಿದ್ದವರು ಸರ್ ಸ್ವಲ್ಪ ಸೌಂಡ್ ಕೊಡಿ ನಾನು ಕೇಳ್ತೀನಿ ಯಾಕೋ ಈ ಹಾಡು ಮನಸಿಗೆ ಸಮಾಧಾನ ಕೊಡ್ತಿದೆ ಅಂದ್ರು. ಇಬ್ಬರೂ ಹಾಡನ್ನು ಕೇಳಿದ್ವಿ. ನಂತರ ಈ ಹಾಡನ್ನು ಆಸ್ಪತ್ರೆ ಬಿಡುವವರೆಗೂ ಕನಿಷ್ಠ ಐವತ್ತು ಭಾರಿ ಕೇಳಿದ್ದೆ. ನೊಂದ ಮನಕ್ಕೆ ಸುಲಭ ಮಾತುಗಳಲ್ಲಿ ಸಾಂತ್ವನ ನೀಡಿ ಸತೈಸಿದ ಈ ಹಾಡನ್ನು ಬರೆದ ಕೈಗಳಿಗೆ ಮನಸ್ಸು ನಮನ ಸಲ್ಲಿಸಿತ್ತು. ಹಾಡಿನ ಮೂಲಕ ನನ್ನ ಮನಸ್ಸು ಶಾಂತವಾಗಿ ಅನಾರೋಗ್ಯ ಶಮನಾಗಿ ಅರ್ಧ ಔಷಧಿಗಳಿಂದ ಹಾಗೂ ಇನ್ನರ್ಧ ಈ ಹಾಡಿನಿಂದ ಆರೋಗ್ಯ ಮತ್ತೆ ಪಡೆದು ಮನೆಗೆ ಬಂದೆ. ಅಂದಹಾಗೆ ಒಂದು ಕನ್ನಡ ಚಿತ್ರದ ಹಾಡು ನನ್ನ ಮನಸ್ಸಿನ ನೋವನ್ನು ಶಮನ ಗೊಳಿಸಿತ್ತು. ಆ ಹಾಡು ಯಾವುದು ಗೊತ್ತೇ 1993 ರಲ್ಲಿ ಬಿಡುಗಡೆಯಾದ "ಆಕಸ್ಮಿಕ" ಚಿತ್ರದ್ದು, ಹಂಸಲೇಖ ಸಾಹಿತ್ಯ ಬರೆದು ,ಸಂಗೀತ ನೀಡಿ ಡಾ// ರಾಜಕುಮಾರ್ ಹಾಡಿದ "ಬಾಳುವಂತ ಹೂವೆ "ಬಾಡುವಾಸೆ ಏಕೆ ?? " ಸಾಹಿತ್ಯ ರಚಿಸಿದ ಕೈಗಳಿಗೆ ಹಾಗು ಹಾಡಿದ ಗಾಯಕನಿಗೆ ನನ್ನ ಮನಹ್ಪೋರ್ವಕ ನಮನಗಳು.