ತಂಗಿಗೊಂದು ಪತ್ರ
ಒಡಹುಟ್ಟಿದವಳೇ....
ಈ ಆಕಾಶಗಂಗೆಯ ಮಡಿಲಲ್ಲಿರುವ ತಾರೆಗಳಷ್ಟು ಖುಷಿಗಳನ್ನು ನಿನ್ನ ಮಡಿಲಲ್ಲಿ ತಂದಿಡುವಾಸೆ ನನಗೆ...
ನಾವಿಬ್ಬರೂ ಒಂದೇ ಕರುಳಿನ ಕುಡಿಗಳು. ಒಂದೇ ಅಮ್ಮನ ಆರೈಕೆಯಲ್ಲಿ, ಒಂದೇ ಅಪ್ಪನ ಪ್ರೀತಿಯ ಛಾಯೆಯಲ್ಲಿ, ಒಂದೇ ಅಂಗಳದಲ್ಲಿ ಆಡಿ ಬೆಳೆದವರು. ಆದರೂ ನಾನು ಹೊಟ್ಟೆಕಿಚ್ಚು ಪಡುವಷ್ಟು ಪ್ರೀತಿ ಅಪ್ಪನಿಗೆ ನಿನ್ನ ಮೇಲೆ. ಹಿಂದೆ ಅರಬರು ತಮ್ಮ ಘನತೆಗೆ ಕುಂದು ಬರುವುದೆಂಬ ಭಯದಿಂದ ಹೆಣ್ಣು ಮಕ್ಕಳನ್ನು ಜೀವಂತ ಹೂಳುತ್ತಿದ್ದರೆಂದು ಕೇಳಿದಾಗಲೆಲ್ಲಾ ಆ ಪುಟ್ಟ ಕಂದಮ್ಮಗಳನ್ನು ನೆನೆದು ಕಣ್ಣೀರಿಡುತ್ತಿದ್ದ ನಮ್ಮಪ್ಪನಿಗೆ ನಿನ್ನ ಮೇಲೆ ಅದೆಷ್ಟು ಪ್ರೀತಿ ಇರಬಹುದೆಂದು ಊಹಿಸಿ ನೋಡೊಮ್ಮೆ. ಮಗಳ ಮೇಲಿರುವ ಅಮ್ಮನ ಪ್ರೀತಿ ಅವಳು ಬೆಳೆದಂತೆ ಹೆಚ್ಚಾಗುತ್ತದೆಯಂತೆ. ಬೆಳೆದ ಮಗ ಅಪ್ಪನ ಗೆಳೆಯನಾದರೆ ಮಗಳು ಅಮ್ಮನ ಸಖಿಯಾಗುತ್ತಾಳೆಂದು ಕೇಳಿದ್ದೆ. ಅಮ್ಮ-ಮಗಳು ತಮ್ಮ ದುಃಖಗಳನ್ನು ಒಬ್ಬರಲ್ಲೊಬ್ಬರು ತೋಡಿಕೊಳ್ಳುತ್ತಾರಂತೆ. ದುಃಖಗಳಿಂದ ಜ್ಯೋತಿರ್ವರ್ಷಗಳಷ್ಟು ದೂರವಿಟ್ಟು ಅಪ್ಪ ನಿನಗೆ ಸಾಕಿರುವಾಗ ಏನೆಂದು ಹೇಳಿಕೊಂಡೆ ಅಮ್ಮನಲ್ಲಿ ಹೇಳು?
"ನಿನ್ನೆ ಮೊನ್ನೆಯವರೆಗೆ ಚಿಕ್ಕ ಹುಡುಗಿಯಾಗಿದ್ದಳಲ್ಲ ಇವಳು" ಅನಿಸುತ್ತಿರುವಾಗಲೇ ನಿನ್ನೀ ನಾಜೂಕು ಕೈಗಳಲ್ಲಿ ಅರಳಿರುವ ಮದುವೆಯ ಮದರಂಗಿಯ ಬಣ್ಣ ನೋಡಿ ನಂಬಲಾಗುತ್ತಿಲ್ಲ ನನಗೆ. ನಿನ್ನ ಬಾಲ್ಯದ ನೆನಪುಗಳು ಅಚ್ಚಳಿಯದೆ ಮನಸಲ್ಲಿನ್ನೂ ಉಳಿದಿರುವುದೇ ಕಾರಣವೇನೋ... ಅಪ್ಪ ಕೆಲಸಕ್ಕೆ ಹೊರಟಾಗ ಅವರ ಸೈಕಲಿನಲ್ಲಿ ಕೂರಿಸಿ ಅಂಗಳಕ್ಕೆ ಒಂದು ಸುತ್ತು ಬಂದರೇನೆ ಸುಮ್ಮನಾಗುವ ಆ ನಿನ್ನ ಹಠ. ಮಣ್ಣಿನಲ್ಲಿ ಆಡಿ ಬಂದಾಗಲೆಲ್ಲಾ ಪೆಟ್ಟಿನ ಭಯದಿಂದ ಅಮ್ಮ ಹೊಡೆಯುವ ಮುನ್ನವೇ ಒತ್ತರಿಸಿ ಬರುತ್ತಿದ್ದ ನಿನ್ನ ಕಣ್ಣೀರು... ಬಂದಿದ್ದ ಸಿಟ್ಟೆಲ್ಲಾ ಮಾಯವಾಗಿ ಅವಳು ನಗುವಂತೆ ಮಾಡುತ್ತಿತ್ತು ನಿನ್ನ ಮುಗ್ದ ರೋದನ. ಆಂತೂ ಪಕ್ಕದ ಮನೆ ಪುಟ್ಟಿಯೊಂದಿಗೆ ಬಂದ ಪುಟ್ಟ ಗಂಡು ಗೊಂಬೆಯೊಡನೆ ನಿನ್ನ ಹೆಣ್ಣು ಗೊಂಬೆಗೆ ಮದುವೆ ಮಾಡಿಸಿದ್ದ ನಿನ್ನನ್ನೇ ಕನ್ಯಾದಾನ ಮಾಡುವ ಸಮಯ ಬಂದು ಬಿಟ್ಟಿದೆ!!.
ಆ ದಿನ ಹುಡುಗನ ಕಡೆಯವರು ನಿನ್ನ ನೋಡಲು ಬಂದಾಗ ಮೊದಲ ಬಾರಿ ಅಚ್ಚುಕಟ್ಟಾಗಿ ಸೀರೆಯನ್ನುಟ್ಟು ಸಿಂಗರಿಸಿಕೊಂಡಿದ್ದನ್ನು ನೋಡಿ ಅವರಿಗಿಂತ ಹೆಚ್ಚು ದಂಗಾದವನು ನಾನು. ಅಷ್ಟು ಕುಣಿದು ಕುಪ್ಪಳಿಸುತ್ತಿದ್ದವಳು ಅಂದು ನನ್ನ ಮುಂದೆ ಬರಲೂ ನಾಚಿಕೊಂಡಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಪತ್ರಿಕೆಯ "ಅಡುಗೆ" ಕಾಲಂನಲ್ಲಿ ಬಂದಿದ್ದ ಹೊಸ ಬಗೆಯ ಪಾಕಗಳನ್ನು ತಾನಾಗಿಯೇ ತಯಾರಿಸಿ, ಬಲವಂತದಿಂದ ನಮಗೆಲ್ಲಾ ತಿನ್ನಿಸಿ ನಮ್ಮ ಹೊಟ್ಟೆ ಕೆಡಿಸಿದ್ದ ಹುಡುಗಿ ಇವಳೇನಾ? ಮಹಿಳಾ ಮಾಸಿಕದಲ್ಲಿ ಬಂದಿದ್ದ ಹೊಸ "ಮೆಹೆಂದಿ" ಡಿಸೈನ್ ಅಮ್ಮನ ಕೈಯೆಲ್ಲಿ ಮೂಡಿಸಿ ಅಪ್ಪನಿಗೆ ತನ್ನ ಯೌವನ ನೆನಪಾಗುವಂತೆ ಮಾಡಿದ್ದ ಹುಡುಗಿ ಇವಳೇನಾ? ಆಶುಭಾಷಣ ಸ್ಪರ್ಧೆಯ ತಯಾರಿಯ ಭರದಲ್ಲಿ ನಮ್ಮ ನಿದ್ದೆ ಕೆಡಿಸಿದ ಹುಡುಗಿ ಇವಳೇನಾ? ಮನಸಲ್ಲಿ ಏಳುತ್ತಿದ್ದ ಪ್ರೆಶ್ನೆಗಳು ಒಂದೆರಡಲ್ಲ.
ಆ ಮದರಂಗಿಯ ಕಣ್ಣು ಕುಕ್ಕಿಸುವ ಕೆಂಬಣ್ಣ, ಗರಿ ಗರಿ ಅಮ್ಮನ ಸೀರೆ, ಗಂಭೀರ ಮುಖದೊಳಗಿಂದ ಇಣುಕುತ್ತಿರುವ ಮುಗ್ದತೆ, ಹೊಟ್ಟೆ ಕೆಡಿಸದ ರುಚಿ ರುಚಿಯಾದ ಅಡುಗೆ, "ನಾನೆನಿಸಿದಷ್ಟೇ ಇದೆ" ಎನ್ನುವಷ್ಟು ವಿದ್ಯಾಭ್ಯಾಸ, ಉತ್ತಮ ನಡತೆಯ ಅಮ್ಮನನ್ನೇ ಅನುಕರಿಸಿದ "ಸುಭಾಷಿಣಿ" ಮಗಳು... ಯಾವ ಪುಣ್ಯಾತ್ಮ ನಿನ್ನ ಒಪ್ಪದಿರುವನು ಹೇಳು? ನಿನಗೆ ತಕ್ಕ ಗಂಡಲ್ಲವೆಂದು ನಮಗೇ ಒಂದಿಬ್ಬರನ್ನು ರಿಜೆಕ್ಟ್ ಮಾಡಬೇಕಾಯಿತು. ಮಗಳು, ತಂಗಿ, ತನ್ನ ಹೆಣ್ಣು ಗೊಂಬೆಯ "ಅಮ್ಮ" ಆಗಿದ್ದ ನಿನಗೆ ಜೀವನದಲ್ಲಿ ಹೊಸ ಪಾತ್ರಗಳು ಸಿಗುವ ಸಮಯ ಬಂದು ಬಿಟ್ಟಿದೆ. ತನ್ನ ಬಾಳಿನ ಇನಿಯನನ್ನು ಪಡೆಯುವ, ಹೊಸ ಬಾಂಧವ್ಯಗಳಲ್ಲಿ ಬೆಸೆಯುವ ಕಾಲಘಟ್ಟದಲ್ಲಿ ಒಂದು ಹೆಣ್ಣಿನಲ್ಲಾಗುವ ಮಾನಸಿಕ, ಭೌತಿಕ, ಭಾವನಾತ್ಮಕ ಬದಲಾವಣೆಗಳು ನಿನ್ನಲ್ಲೂ ಆಗಿರುವುದನ್ನು ಕಂಡು ನನಗಾದ ಅಚ್ಚರಿಯೊಳಗೆಲ್ಲೋ ಸಂತಸದ ಛಾಯೆಯೂ ಇತ್ತು.
ಆದರೂ ಕೆಲವು ಮಾತುಗಳು ಹೇಳಲಿಕ್ಕಿವೆ ನಿನ್ನಲ್ಲಿ...
ಈ ಮನೆಯ ರಾಜಕುಮಾರಿಯಾಗಿದ್ದೆ ನೀನು. ಮನಬಿಚ್ಚಿ ನಗುತ್ತಿದ್ದೆ, ಮನಸಿಗೆ ಬಂದಂದನ್ನೆಲ್ಲಾ ಥಟ್ಟನೆ ಹೇಳಿಬಿಡುತ್ತಿದ್ದೆ. ಅನಿಸಿದ್ದನ್ನೆಲ್ಲಾ ಮಾಡುತ್ತಿದ್ದೆ. ಯಾರೂ ಒಂದು ಮಾತೂ ಅಡುತ್ತಿರಲಿಲ್ಲ ಇಲ್ಲಿ. ಆದರೆ ನಮ್ಮ ಕುಟುಂಬದ ಮೌಲ್ಯಾದರ್ಷಗಳನ್ನು ಹೊತ್ತು ಹೊರಟವಳು ಅಪರಿಚಿತಳಾಗಿಯೇ ಹೊಸಮನೆಗೆ ಸೇರುವೆ. ಸ್ವಚ್ಛಂದವಾಗಿ ನೀಲಿಬಾನಲ್ಲಿ ಹಾರುತ್ತಿರವ ಹಕ್ಕಿಯಂತಿದ್ದ ನಿನಗೆ ಎಲ್ಲೋ ಪಂಜರದಲ್ಲಿ ಕೂಡಿಟ್ಟ ಅನುಭವವಾಗಬಹುದು. "ಹೀಗೆ ನನಗ್ಯಾಕೆ ಹಿಂಸೆ" ಎಂದು ನಿನ್ನ ಮನದೊಳಗೊಂದು ಕ್ಷುಬ್ದ ಪರಿಸ್ಥಿತಿಯೂ ಉಂಟಾಗಬಹುದು. ಆದರೆ ಇದು ಸಹಜವಾಗಿ ಬರುವ ಬರೇ ಕ್ಷಣಿಕ ತುಮುಲಗಳು.
ಕೇಳು... ಒಂದು ಉತ್ತಮ ಸಮಾಜದ ನಿರ್ಮಾಣವಾಗುವುದು ಹೆಣ್ಣಿನಿಂದ. ಅವಳು ಪತಿಯೊಂದಿಗಿದ್ದು, ಅಲ್ಲೊಂದು ಕುಟುಂಬದ ರಚನೆಯಾಗುತ್ತದೆ. ತನ್ನ ಮಕ್ಕಳಲ್ಲಿ ಅವಳು ಉತ್ತಮ ಮೌಲ್ಯಗಳನ್ನು ಬೀರಿ ಬೆಳೆಸಿದರೇನೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಈ ಕುಟುಂಬವೇ ಸಮಾಜವೆಂಬ ಕಟ್ಟಡದ ಇಟ್ಟಿಗೆಗಳಲ್ಲವೇ... ಹೆಣ್ಣಾದ ನೀನೇ ಇದರ ಆಧಾರಸ್ತಂಭ. ಅಲ್ಲಿ ನೀನು ಸದ್ಗುಣಗದಿಂದ ಪತಿ, ಅತ್ತೆ, ಮಾವ, ನಾದಿನಿ, ಭಾವಮೈದುನರ ಮನ ಗೆಲ್ಲಬೇಕು. ಆ ಕುಟುಂಬದಲ್ಲಿ ನಿನ್ನ ಮಹತ್ವದ ಅರಿವು ಮೂಡಿಸಬೇಕು. ಕೆಲ ಸಮಯದಲ್ಲೇ ಆ ಕುಟುಂಬದ "ಜೀವನಾಡಿ" ನೀನಾಗಿರುವುದನ್ನು ಕಾಣುವಿ. ನೀನಿಲ್ಲದೇ ಆ ಕುಟುಂಬ ನಡೆಯಲಸಾಧ್ಯವೆಂಬ ಹೆಗ್ಗಳಿಕೆಗೆ ಮತ್ತೆ ಪಾತ್ರಳಾಗುತ್ತೀಯ. ನಿನಗೆ ಅತಿ ಪ್ರೀತಿಯಿಂದ ಸಾಕಿ ಸಲುಹಿದ ಹೆತ್ತವರಿಗೆ ಅದೇ ದೊಡ್ಡ ಬಹುಮಾನ. ಈ ಬಡಪಾಯಿ ಅಣ್ಣನಿಗೂ ಇದಕ್ಕಿಂತ ದೊಡ್ದ ಪಾರಿತೋಷಕ ಬೇಕಿಲ್ಲ.
"ಸಹನೆ" ಹೆಣ್ಣಿಗೆ ದೊರೆತ ಅತಿ ಮುಖ್ಯ ಗುಣ ಎಂದು ಬಲ್ಲವರು ಹೇಳುತ್ತಾರೆ. ಅದನ್ನು ಕಳಕೊಳ್ಳಬೇಡ. ಯಾರು ಏನಾದರೂ ಹೇಳಿದರೆ ಸಾವರಿಸಿಕೋ, ಸಹನೆಯಿಂದಿರು. ಆದರೆ "ಸಹನೆ" ನಿನ್ನ ದೌರ್ಬಲ್ಯವಾಗದಿರಲಿ. ದೂಷಣೆ, ಶೋಷಣೆಗೊಳಗಾಗಿ ನಿನ್ನ ಅಸ್ಥಿತ್ವ ಕಳೆದು ಹೋಗದಿರಲಿ. ಮನದ ತುಡಿತಗಳನ್ನು ನಮ್ಮಮ್ಮನಲ್ಲಿ ಹೇಳಿಕೊಳ್ಳು. ಇಂತಹದೇ ಕಾಲಘಟ್ಟದಲ್ಲಿ ತಾತ್ಸಾರ ಭಾವ, ಭಯಾನಕವಾದ ಸಮಾಜದ ಕಟ್ಟಳೆಗಳನ್ನು ಸಹಿಸಿಕೊಂಡ ನಿನ್ನ "ಸಖಿ" ಅಮ್ಮ ನಿನಗೆ ಖಂಡಿತಾ ಉತ್ತಮ ಸಲಹೆ ನೀಡಬಲ್ಲಳು. ತವರಿನ ಪ್ರತಿ ಮನೆಮಂದಿ, ಮನೆಯಂಗಳ, ಮನೆಯ ಪ್ರತಿ ಕಣವೂ ನಿನ್ನ ಚಿಂತೆಯಲ್ಲಿರುವಾಗ ನಿನ್ನ ದುಃಖಗಳನ್ನು ನೋಡಿ ಸುಮ್ಮನಿರಲು ಅವುಗಳಿಗೆ ಹೇಗೆ ಸಾಧ್ಯ ಹೇಳು?.
"ನಾಳೆ ಏನಾಗಲಿದೆ, ಯಾರು ಇರುವವರು ಯಾರು ಹೋಗುವವರೆಂದು ಯಾರೂ ತಿಳಿದಿಲ್ಲ. ಆದರೂ ಸಹಜ ವಿಧಿನಿಯಮದಂತೆ ತಂದೆ ತಾಯಿ ಜೀವನದ ಒಂದು ಕಾಲಘಟ್ಟದವರೆಗೆ ನಮ್ಮೊಂದಿಗಿದ್ದು ಅಗಲುತ್ತಾರೆ. ನಮ್ಮ ಬಾಳಸಂಗಾತಿಗಳೂ ಬದುಕಿನ ಒಂದು ಕಾಲಘಟ್ಟದ ನಂತರ ನಮಗೆ ಸಿಗುತ್ತಾರೆ. ಆದರೆ ಒಡಹುಟ್ಟಿದವರು ಹಾಗಲ್ಲ. ಅವರು ನಮ್ಮ ಜೊತೆ ಜೀವನವಿಡೀ ಇರುತ್ತಾರೆ. ಅವರ ಪ್ರೀತಿ, ಅನುಬಂಧ ನಮಗೆ ಯಾವಾಗಲೂ ಒಂದು ಹೊಸ ಹುರುಪು , ಚೈತನ್ಯ ತುಂಬುತ್ತಿರುತ್ತವೆ. ನೀನು ನನ್ನ ಬಾಳಿನ ಹುರುಪಾಗಿದ್ದೀಯಾ. ನಿನ್ನ ನಗುವೊಂದಿದ್ದರೆ ಯಾವ ದುಃಖಸಾಗರದಲ್ಲೂ ನಾ ಈಜಿ ದಡ ಸೇರಬಲ್ಲೆ.
ಮುಂದೆ ಹೊಸ ಬದುಕು, ಪತಿಯ ಪ್ರೀತಿ, ಹಿರಿಯರ ಸೇವೆ, ಮಕ್ಕಳ ಆರೈಕೆಯಲ್ಲಿ ಮಗ್ನಳಾಗಿರುವಾಗ ನಿನ್ನ ಖುಷಿಗಾಗಿಯೇ ಜೀವ ಮುಡಿಪಿಟ್ಟಿರುವ ಈ ಅಣ್ಣನನ್ನು ಮರೆಯದಿರು ತಂಗಿ.
ಇತೀ,
ನಿನ್ನ ಜನ್ಮತಃ ಬಂಧು.
Rating
Comments
ಉ: ತಂಗಿಗೊಂದು ಪತ್ರ
ಉ: ತಂಗಿಗೊಂದು ಪತ್ರ
ಉ: ತಂಗಿಗೊಂದು ಪತ್ರ
ಉ: ತಂಗಿಗೊಂದು ಪತ್ರ
ಉ: ತಂಗಿಗೊಂದು ಪತ್ರ