ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ರಾ.ಶಿ. ಅವರ 'ಮೃಗ-ಶಿರ' ಪುಸ್ತಕ
ಪ್ರಾಣಿಗಳನ್ನು ನೋಡುವಾಗ ಅವುಗಳ ನಡವಳಿಕೆಗೂ ಮಾನವನ ನಡವಳಿಕೆಗೂ ತುಂಬಾ ಸಾಮ್ಯ ಇರುವದು ಕಂಡು ಬರುತ್ತದೆ. ಪ್ರಾಣಿಗಳಲ್ಲಿ ದೇಹಕ್ಕೆ ಸಂಬಂಧಿಸಿದುದು ಮಾನವರಲ್ಲಿ ಮನಸ್ಸಿಗೆ ಸಂಬಂಧಿಸಿದೆ. ಆದರೆ ಮೇಲುನೋಟಕ್ಕೆ ಇದು ಸ್ಪಷ್ಟವಾಗಿ ಕಾಣುವುದಿಲ್ಲ. ಸ್ಪಷ್ಟವಾಗಿ ಕಾಣಿಸುವುದೇ ಈ ಹೊತ್ತಗೆಯ ಗುರಿ' ಎಂದು ರಾ.ಶಿ. 'ಅರಿಕೆ'ಯಲ್ಲಿ ಹೇಳುತ್ತಾರೆ. ಮನುಷ್ಯನಿಗೆ ಪ್ರಚಂಡವಾದ ಶಿರವೇನೋ ಇದೆ , ಆದರೆ ಅದು ಕುಳಿತಿರುವುದು ಭದ್ರವಾದ ಪುರಾತನವಾದ ಮೃಗದ ಬುಡದ ಮೇಲೆಯೇ. ಅದಕ್ಕಾಗಿ ಈ ಪುಸ್ತಕಕ್ಕೆ 'ಮೃಗ-ಶಿರ' ಎಂದು ಹೆಸರಿಟ್ಟಿದ್ದಾರೆ. ಈ ವಿಷಯವನ್ನು ತಿಳಿಯಪಡಿಸಲು ನಮ್ಮ ನಿಜ ಜೀವನದ ಸಂಗತಿಗಳನ್ನು ಹೇಳುವ ಕತೆಗಳನ್ನು ಬಳಸಿದ್ದಾರೆ. ಎಲ್ಲ ಕತೆಗಳಲ್ಲಿ ಸಂಬಂಧಪಟ್ಟ ಪ್ರಾಣಿಯ ವಿಷಯವನ್ನು ಸಹಜವಾಗಿ ಹಾಸುಹೊಕ್ಕಾಗಿಸಿದ್ದಾರೆ
ವಿಚಾರಪ್ರಚೋದನೆಯ ಹಿರಿದಾದ ಕೆಲಸಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ. ಆ ಕಾರಣದಿಂದ ಈ ಕೃತಿ ಬೆಲೆಯುಳ್ಳದ್ದು ಎಂದು ನಿರಂಜನರು ಗುರುತಿಸಿದ್ದಾರೆ.
ಕಾಡಿನಲ್ಲಿ ದುಷ್ಟಮೃಗಗಳು ಗಾಯಗೊಂಡು ಉಳಿದುಕೊಂಡರೆ ಸ್ವಾಭಾವಿಕ ಜೀವನವನ್ನು ನಡೆಸಲಾಗದೆ ನರಭಕ್ಷಕವಾಗುತ್ತವೆ. ಅಂತೆಯೇ ಬಾ ಮನುಷ್ಯನ ಮನಸ್ಸಿಗೆ ಪೆಟ್ಟು ಬಿದ್ದರೆ ಅವರೂ ಸ್ವಾಭಾವಿಕ ಜೀವನವನ್ನು ಮಾಡಲಾರದೆ ಇತರರ ಮನಸ್ಸಿನ ಮೇಲೆ ಆಕ್ರಮಣ ಮಾಡಿ ನೋಯಿಸುತ್ತಾನೆ. ಸಮಾಜಕ್ಕೆ ಕಂಟಕನಾಗುತ್ತಾನೆ.
ಕೆಲವು ಪ್ರಾಣಿಗಳು ತಮ್ಮ ಮರಿಗಳನ್ನೇ ತಿನ್ನುತ್ತವೆ. ಅಂತೆಯೇ ಕೆಲವರು ತಮ್ಮ ಮಕ್ಕಳ ಮನಸ್ಸುಗಳನ್ನೇ ತಿಂದು ಅವರಿಗೆ ಸ್ವಂತ ಮನಸ್ಸು , ವ್ಯಕ್ತಿತ್ವ ಇಲ್ಲದ ಹಾಗೆ ಮಾಡುತ್ತಾರೆ.
ಗಂಡನಾದವನು ಹೆಂಡತಿ ಮಕ್ಕಳ ಮೇಲೆ ದರ್ಪ ಮಾಡಿಕೊಂಡು ಇದ್ದರೆ ಅವನ ಕೈ ಸಾಗದಾಗ ಅವರು ಅವನನ್ನು ಉದಾಸೀನ ಮಾಡುತ್ತಾರೆ. ಈ ಕತೆಗೆ ಜೇಡನ ಬದುಕಿನ ಉದಾಹರಣೆ.
ಪ್ರಾಣಿಗಳು ಶತ್ರುವಿನ ದೇಹದ ಮೇಲೆ ದಾಳಿ ಮಾಡಿದರೆ, ಮನುಷ್ಯ ಇತರರ ಮನಸ್ಸಿನಲ್ಲಿ ವಿಷ ತುಂಬುತ್ತಾನೆ , ಮನಸ್ಸನ್ನು ನೋಯಿಸುತ್ತಾನೆ , ಕೇರೆ ಹಾವು ತನ್ನನ್ನು ನುಂಗುವ ನಾಗರ ಹಾವಿನಲ್ಲಿ ತನ್ನ ಮೈಯಿಂದ ಸೂಸಿದ ವಿಷವನ್ನು ಸೇರಿಸುವ ಹಾಗೆ.
ಹುಲಿಯನ್ನು ಸೀಳು ನಾಯಿಗಳ ದಂಡು ಅಟ್ಟಿಸಿಕೊಂಡು ಹೋಗಿ ತಮ್ಮಲ್ಲಿ ಕೆಲವು ಸೀಳುನಾಯಿಗಳು ಸತ್ತರೂ ಬಿಡದೆ ಹುಲಿಯನ್ನು ಕೊಂದು ಹರಿದು ಹಾಕುತ್ತವೆ. ಅಂತೆಯೇ ಬಲಶಾಲಿ ಶೋಷಕರನ್ನು ಅಸಹಾಯಕ ಶೋಷಿತರು ಒಟ್ಟಾಗಿ ಎದುರಿಸುವುದು ನಾಶ ಮಾಡುವುದನ್ನು ಸಮಾಜದಲ್ಲಿ ನೋಡುತ್ತೇವೆ.
ಈಗನ ಕಾಲದಲ್ಲಿ ಮಾನವನ ಬಾಳಿನಲ್ಲಿ ಸುಖ ಬೇಕೆಂದರೆ ಮೇಧಾವಿಯಾದರೂ ಸುಖವಿಲ್ಲ, ಕಾರ್ಮಿಕನಾದರೂ ಇಲ್ಲ. ರಾಣಿ ಜೇನಾಗಬೇಕು, ಅಧಿಕಾರ ಸಂಪಾದಿಸಬೇಕು, ಅಥವಾ ಹೇಗಾದರೂ ಹಣ ಸಂಪಾದಿಸಬೇಕು. ಆಗ ಎಲ್ಲರೂ ನಿನ್ನ ಕೈಗೊಂಬೆಯಾಗುತ್ತಾರೆ ಅಂತ ಒಂದು ಪಾತ್ರ ಜೇನುಗಳ ಬಾಳಿನ ಪರಿಯನ್ನು ತಿಳಿಸುತ್ತ ಹೇಳುತ್ತದೆ.
ನಾಯಕತ್ವವನ್ನು ಕಳೆದುಕೊಂಡ ಸಲಗವು ಬೇಜವಾಬ್ದಾರಿಯದಾಗುತ್ತದೆ. ಹುಚ್ಚೆದ್ದು ವನವನ್ನು ಹಾಳು ಮಾಡುತ್ತದೆ, ಇತರ ಪ್ರಾಣಿಗಳನ್ನು ಮನುಷ್ಯರನ್ನು ಪೀಡಿಸುತ್ತದೆ. ಅಂತೆಯೇ ರಾಜಕಾರಣಿಗಳು ಅಧಿಕಾರ ಕಳೆದುಕೊಂಡಾಗ ಹುಚ್ಚಾಗಿ ಜನಕ್ಕೆ ವ್ಯವಸ್ಥೆಗೆ ಪೀಡೆಯಾಗುತ್ತಾರೆ, ಸಮಾಜಘಾತುಕರ ನಾಯಕರಾಗುತ್ತಾರೆ.
ನಾಗರಹಾವು ಕಾಡುಗಳಲ್ಲಿ ಮುಳ್ಳುಗಳ ಪೊದೆಗಳಲ್ಲಿ ಹರಿದಾಡುವಾಗ ಮುಳ್ಳುಗಳಿಂದಾಗಿ ಅವುಗಳ ಕಣ್ಣಲ್ಲಿನ ಮಂಜಿನಂಥ ಪೊರೆಯು ಹರಿದು ಹೋಗಿ ಕಣ್ಣು ಚೆನ್ನಾಗಿ ಕಾಣುತ್ತದೆ. ಅಂತೆಯೇ ಮನುಷ್ಯನ ಬಾಳಿನಲ್ಲಿ ಅಹಂಭಾವದ ಪೊರೆಯಿಂದಾಗಿ ಒಳಗಣ್ಣು ಸರಿಯಾಗಿ ಕಾಣುವುದಿಲ್ಲ. ತಾನು ತನ್ನದು ಎಂಬ ಭಾವನೆಯನ್ನು ಬಾಳಿನಲ್ಲಿ ಒದಗುವ ದುಃಖ , ಸಂಕಟಗಳು ಹರಿದು ಹಾಕಿದರೆ
ಆಗ ತಾನು ಇತರರಿಗೆ , ಪ್ರಪಂಚಕ್ಕೆ ಸಹಾಯ ಮಾಡಬೇಕು ಎಂಬ ತಿಳಿವು ಉಂಟಾಗಿ ಹಾಗೆ ಮಾಡುವುದರಲ್ಲಿ ಆನಂದ ಪಡೆಯುತ್ತಾನೆ.
ಕೆಲವರು ಊಸರವಳ್ಳಿ ಯಂತೆ ಪರಿಸರ ಪರಿಸ್ಥಿತಿಗೆ ತಕ್ಕಂತೆ ಬಣ್ಣ ಬದಲಿಸುತ್ತ ಇರುತ್ತಾರೆ ಅಲ್ಲವೇ?
ಹೀಗೆ ಬಾಳಿನ ಸೂತ್ರಗಳನ್ನು ಕತೆಗಳ ಮೂಲಕ ತಿಳಿಸಿದ್ದಾರೆ ಲೇಖಕರು. ೧೫೦ ಪುಟ ಕತೆಗಳಾದರೆ ಐವತ್ತು ಪುಟಗಳ ಒಂದು ಪ್ರಸ್ತಾವನೆ ಪುಸ್ತಕದ ಕೊನೆಯಲ್ಲಿದೆ. ಮನುಷ್ಯ ಮತ್ತು ಪ್ರಾಣಿಗಳ ಬದುಕಿನ ರೀತಿಗಳ ವ್ಯತ್ಯಾಸಗಳು, ಅವಕ್ಕೆ ಕಾರಣಗಳು, ಮತ್ತು ಇನ್ನಷ್ಟು ಒಳನೋಟಗಳು ಇಲ್ಲಿವೆ. ಬಾಳಿನಲ್ಲಿ ಮಾನವನು ಇಂದು ಅನುಭವಿಸುತ್ತಿರುವ ಸಂಕಟಗಳಿಗೆ ಕ್ರಿಮಿಕೀಟ, ಖಗಮೃಗಗಳ ನಡವಳಿಕೆಯನ್ನು ಮರೆಯದೇ ಇರುವುದೇ ಕಾರಣ . ಇದನ್ನು ಅರಿತುಕೊಂಡರೆ ಪಾಲಿಗೆ ಬಂದ ಕಷ್ಟಸಂಕಟಗಳನ್ನು ಸುಮಾರು ಪಾಲು ನಿವಾರಿಸಿಕೊಳ್ಳಬಹುದು. ಅಥವಾ ಬರದಂತೆ ನೋಡಿಕೊಳ್ಳ ಬಹುದು ಎನ್ನುತ್ತಾರೆ ಲೇಖಕರಾದ ರಾ.ಶಿ.
ಈ ಪುಸ್ತಕವನ್ನು ನಾನು ಮುಂಬೈಯ ಮೈಸೂರು ಸಂಘದ ವಾಚನಾಲಯದಲ್ಲಿ ಓದಿದೆ.
Comments
ಉ: ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ...
ಉ: ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ...
ಉ: ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ...
In reply to ಉ: ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ... by shreekant.mishrikoti
ಉ: ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ...