ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಕವನ

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು !

ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು
ಕಾವೇರಿ ಮಡುವಿನಲಿ, ಮಿಂದೆದ್ದು ಹಾಡು
ಬೇಲೂರ ಶಿಲೆಯಲ್ಲಿನ ಕಲೆಯಾಗಿ ಹಾಡು
ಹಂಪೆಯ ಭವ್ಯತೆಗೆ ನೆಲೆಯಾಗಿ ಹಾಡು

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು !

ಪಂಪ-ರನ್ನ-ಜನ್ನರ ಸಾಹಿತ್ಯದ ಸೊಗಡವನು,
ಕುವೆಂಪು-ಬೇಂದ್ರೆ ಯರ ಕಾವ್ಯದ ಸೊಬಗನು,
ಓಬವ್ವ-ಚೆನ್ನಮ್ಮರ ಸಾಹಸದ ಸಂಭ್ರಮವನು,
ರಾಯಣ್ಣನಂತಹ ತ್ಯಾಗ-ಬಲಿದಾನವನು

ಗರ್ವದಿಂದ ಹಾಡು !!

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು !

ಜೋಗದ ಧಾರೆಗೆ ಶಿರಬಾಗಿ ಹಾಡು
ಗೊಮ್ಮಟನ ಶಾಂತಕ್ಕೆ ಶರಣಾಗಿ ಹಾಡು
ಶಾರದೆಯ ಅನುಗ್ರಹಕೆ ಮಗುವಾಗಿ ಹಾಡು
ಅನ್ನಪೂರ್ಣೆಯ ಪ್ರಸಾದಕ್ಕೆ ಹಸಿವಾಗಿ ಹಾಡು

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು !

ಶ್ರೀಗಂಧದ ಕಂಪಿನಲಿ, ಮಲ್ಲಿಗೆಯ ಅಂದದಲಿ
ಅರಳಿ ನಿಂತ ಕನ್ನಡಾಂಬೆಗೆ
ನಮಿಸಿ ನೀ ಹಾಡು !

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು