ಕೊಡೈಕೆನಾಲ್ ಪ್ರವಾಸ
ಮದುವೆ ಆದ ನಂತರ ಎಲ್ಲಾದರೂ ಪ್ರವಾಸ ಹೋಗೋಣ ಎಂದುಕೊಂಡು ಬಹಳಷ್ಟು ಜಾಗಗಳ ಮಾಹಿತಿ ಹುಡುಕಿ ಎಲ್ಲಿ ಹೋಗಬೇಕೆಂಬ ಗೊಂದಲದಲ್ಲಿದ್ದಾಗ ನನ್ನ ಸಹೋದ್ಯೋಗಿ ಒಬ್ಬ ಕೊಡೈಕೆನಾಲ್ ಬಗ್ಗೆ ತನಗೆ ತಿಳಿದ ಮಾಹಿತಿ ಹಾಗೂ ಚಿತ್ರಗಳನ್ನು ತೋರಿಸಿದಾಗ ನನಗೂ ಬಹಳ ಇಷ್ಟವಾಗಿ ಅಲ್ಲಿಗೆ ಹೋಗೋಣವೆಂದು ನಿರ್ಧರಿಸಿ ಬೆಂಗಳೂರಿನಿಂದ ೪೮೫ ಕಿ.ಮೀ ಇರುವ ಕೊಡೈ ಗೆ ರಾಜಹಂಸ ದಲ್ಲಿ ಆಸನವನ್ನು ಕಾದಿರಿಸಿದೆ. ಹಾಗೆ ಇಲ್ಲಿಂದಲೇ ಅಲ್ಲಿ ಉಳಿದುಕೊಳ್ಳಲು ರೂಮನ್ನು ಕಾದಿರಿಸಿದೆ, ಅಲ್ಲಿ ಓಡಾಡಲು ನನ್ನ ಸಹೋದ್ಯೋಗಿಗೆ ಗೊತ್ತಿದ್ದ ಒಬ್ಬ ವ್ಯಕ್ತಿ (ಆತನ ಹೆಸರು 'ಆರೋಗ್ಯಂ") ನಿಗದಿಪಡಿಸಿಕೊಂಡು ಹೊರಟೆವು. ನನ್ನ ಸಹೋದ್ಯೋಗಿ ಕೊಟ್ಟ ಮಾಹಿತಿ ಹಾಗೆ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಕೊಡೈ ಬಹಳ ತಂಪಾದ ಪ್ರದೇಶ ಎಂದು. ಇಲ್ಲಿ ರಾತ್ರಿ ೯.೧೫ ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟ ರಾಜಹಂಸ ಕೊಡೈ ರೋಡ್ (ಜಾಗದ ಹೆಸರು) ತಲಪುವ ಹೊತ್ತಿಗೆ ಸುಮಾರು ೬.೪೫. ಅಲ್ಲಿಂದ ಕೊಡೈ ೫೩ ಕಿ.ಮೀ. ಅಷ್ಟು ದೂರ ಘಟ್ಟ ಪ್ರದೇಶ. ಆ ಘಟ್ಟ ಪ್ರದೇಶ ಕ್ರಮಿಸಿ ಕೊಡೈ ತಲಪುವ ಹೊತ್ತಿಗೆ ೮.೩೦ ಆಗಿತ್ತು. ಅಲ್ಲಿ ಇಳಿದ ಕೂಡಲೇ ಆರೋಗ್ಯಂ ಅವರಿಗೆ ಕರೆ ಮಾಡಿದ ಐದೇ ನಿಮಿಷದಲ್ಲಿ ಬಸ್ ನಿಲ್ದಾಣಕ್ಕೆ ಬಂದು ನಮ್ಮನ್ನು ನಮ್ಮ ರೂಂ ಬಳಿ ಕರೆದೊಯ್ದು ನೀವು ವಿಶ್ರಾಂತಿ ತೆಗೆದುಕೊಳ್ಳಿ ೧ ಗಂಟೆ ಸಮಯಕ್ಕೆ ಬರುತ್ತೇವೆ ಎಂದರು. ಆ ಸಮಯಕ್ಕೆ ಅಲ್ಲಿ ಬಿಸಿಲು ಶುರುವಾಗಿತ್ತು ನಮಗೆ ಇದೇನಪ್ಪ ತಂಪಾದ ಪ್ರದೇಶ ಎಂದುಕೊಂಡರೆ ಬಿಸಿಲು ಇದೆ ಎಂದು ಭಯ ಪಟ್ಟುಕೊಂಡೆವು. ಆದರೆ ಕ್ಷಣ ಮಾತ್ರದಲ್ಲಿ ನಮ್ಮ ಭಯ ಹುಸಿಯಾಯಿತು. ಅಲ್ಲಿ ಸೂರ್ಯ ಇದ್ದದ್ದು ಹೆಸರಿಗೆ ಮಾತ್ರ ಎನ್ನುವ ಹಾಗಿತ್ತು. ತಣ್ಣನೆ ಹವೆ ಮುಖಕ್ಕೆ ಬೀಸುತ್ತಿತ್ತು. ರೂಮಿಗೆ ತಲುಪಿ ಮುಖ ತೊಳೆದುಕೊಳ್ಳಲು ನಲ್ಲಿ ತಿರುಗಿಸಿ ಕೈ ಇಟ್ಟರೆ ತಂಗಳು ಪೆಟ್ಟಿಗೆಯಲ್ಲಿ (Refrigerator ) ನಲ್ಲಿ ಇಟ್ಟ ನೀರಿನ ಹಾಗೆ ತಣ್ಣಗೆ ಇತ್ತು. ಸ್ವಲ್ಪ ಹೊತ್ತು ವಿಶ್ರಮಿಸಿ ಸಿದ್ಧರಾದೆವು. ಸರಿಯಾಗಿ ಒಂದು ಗಂಟೆಗೆ ಆರೋಗ್ಯಂ ಬಂದು ಕರೆ ನೀಡಿದರು. ಮೊದಲು ಒಂದು ಹೋಟೆಲ್ ಗೆ ಹೋಗಿ ಊಟ ಮಾಡಿದೆವು (ಕೊಡೈ ನಲ್ಲಿ ತಿಂದ ಅತಿ ಕೆಟ್ಟ ಊಟ, ಅತೀ ಕೆಟ್ಟ ಬಿಲ್ಲು.) ಕೊಡೈ ನಲ್ಲಿ ಯಾವುದೇ ಹೋಟೆಲ್ ಗೆ ಹೋದರು ಬಿಸಿ ನೀರು ಕೊಡುತ್ತಿದ್ದರು ಕುಡಿಯಲು. ಯಾಕೆಂದರೆ ಅಲ್ಲಿನ ಹವೆ ಅಷ್ಟು ತಂಪಾಗಿರುತ್ತಿತ್ತು. ಊಟ ಮುಗಿಸಿ ಮೊದಲು ನೋಡಲು ಹೊರಟ ಸ್ಥಳ
೧. ಕುರಿಂಜಿ ಆಂಡವರ್ ದೇವಸ್ಥಾನ - ಇಲ್ಲಿ ಅಮ್ಮನವರು, ಶ್ರೀನಿವಾಸ ದೇವರು ಹಾಗೆ ಗಣೇಶ ದೇವರ ವಿಗ್ರಹಗಳಿವೆ. ಹಳೆಯ ದೇವಸ್ಥಾನ. ಆದರೆ ಕುರಿಂಜಿ ಎಂದರೆ ಅರ್ಥವಾಗದೆ ಆರೋಗ್ಯಂ ಅವರನ್ನು ಕೇಳಿದ್ದಕ್ಕೆ ಅದೊಂದು ಹೂವಿನ ಹೆಸರು ಅದು ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ ಅರಳುವುದು. ಆ ಹೂವಿನ ಗಿಡ ದೇವಸ್ಥಾನದ ಒಳಗಡೆ ಪ್ರಾಂಗಣದಲ್ಲಿದೆ ಅದಕ್ಕೆ ಈ ಹೆಸರು ಎಂದು ತಿಳಿಸಿದರು. ಆಚೆ ಬಂದು ದೇವಸ್ಥಾನದ ಪಕ್ಕದಲ್ಲೇ ಒಂದು ವ್ಯೂ ಪಾಯಿಂಟ್ ಇದೆ. ಅಲ್ಲಿಂದ ಕೊಡೈ ನ ದೃಶ್ಯ ಮತ್ತೊಂದು ಕಡೆ ಬೆಟ್ಟಗಳ ಸಾಲಿನ ದೃಶ್ಯ ಕಾಣುತ್ತದೆ. ಅದು ಮುಗಿಸಿಕೊಂಡು ವಾಪಸ್ ಬರಬೇಕಾದರೆ ಒಂದು ಉದ್ಯಾನವನದ ಬಳಿ ಕಾರನ್ನು ನಿಲ್ಲಿಸಿ ಆ ಉದ್ಯಾನವನದ ಬಗ್ಗೆ ತಿಳಿಸಿದರು ಆರೋಗ್ಯಂ. ಹೂ ಬಿಡುವ ಸಂದರ್ಭದಲ್ಲಿ ಈ ಉದ್ಯಾನದಲ್ಲಿ ಬರೀ ಹೂಗಳಿಂದ ತುಂಬಿರುತ್ತದೆ. ಈಗ ಆ ಸಮಯವಲ್ಲದ್ದರಿಂದ ಇದು ಅಷ್ಟು ಸುಂದರವಾಗಿ ಕಾಣುತ್ತಿಲ್ಲವೆಂದು ಹೇಳಿದರು.
೨. ಕೋಕರ್ಸ್ ವಾಕ್ - ಇದೊಂದು ಸುಮಾರು ಅರ್ಧ ಕಿ.ಮೀ ನಷ್ಟು ಪಾದಚಾರಿ ಮಾರ್ಗ. ಬೆಟ್ಟದ ತಪ್ಪಲಿನಲ್ಲಿ ನಡೆದುಕೊಂಡು ಅಕ್ಕಪಕ್ಕದ ಬೆಟ್ಟಗಳ ವಿಹಂಗಮ ನೋಟ ನೋಡಿಕೊಂಡು ನಡೆಯುವುದು ಒಂದು ರೀತಿ ಅದ್ಭುತ ಅನುಭವ. ಶುರುವಿನಲ್ಲಿ ಒಂದು ಕೆತ್ತನೆ ಇದೆ. ಅದರ ಪ್ರಕಾರ ಕೊಡೈ ಪ್ರದೇಶ ಕಂಡು ಹಿಡಿದದ್ದು ೧೮೪೫ ರಲ್ಲಿ. ಕೋಕರ್ಸ್ ವಾಕ್ ಇಲ್ಲಿಂದ ದೂರದಲ್ಲಿ ಒಂದು ಹಳ್ಳಿ ಕಾಣುತ್ತದೆ ಅದರ ಹೆಸರು ವೆಳ್ಳಗವಿ ಎಂದು. "ಲಾ" ಎಂಬ ಆಂಗ್ಲ ವ್ಯಕ್ತಿಯೊಬ್ಬ ಅನ್ವೇಷಣೆ ಮಾಡಿಕೊಂಡು ೧೮೪೫ ರಲ್ಲಿ ಮೊದಲು "ಬಟ್ಲಗುಂಡು " ಎಂಬ ಪ್ರದೇಶಕ್ಕೆ ಬಂದು ಅಲ್ಲಿಂದ ಈ ವೆಳ್ಳಗವಿ ಎಂಬ ಹಳ್ಳಿಗೆ ಬಂದು ಹಾಗೆ ಮುಂದೆ ಬೆಟ್ಟ ಹತ್ತಿ ಬಂದಾಗ ಕಂಡದ್ದು ಈ ಕೊಡೈ ಪ್ರದೇಶ. ಆಗ ಬಟ್ಲ ಗುಂಡು ಪ್ರದೇಶದಿಂದ ಕೊಡೈ ಗೆ ಒಂದು ದಾರಿ ಮಾಡಿದ. ಆದರೆ ಈ ವರೆಗೂ ವೆಳ್ಳಗವಿ ಹಳ್ಳಿಗೆ ರಸ್ತೆ ಮಾರ್ಗವಿಲ್ಲ. ಈಗಲೂ ಕಾಡಿನ ಮಾರ್ಗವಾಗೆ ನಡೆದು ಹೋಗಬೇಕು ಅಲ್ಲಿ ಸುಮಾರು ೬೦-೭೦ ಕುಟುಂಬಗಳು ವಾಸವಾಗಿವೆ ಎಂದು ಹೇಳುತ್ತಾರೆ.
೩. ಕೊಡೈ ಲೇಕ್ - ಇದು ಕೊಡೈ ನ ಮಧ್ಯಭಾಗದಲ್ಲಿದೆ. ಸುಂದರವಾದ ಪ್ರದೇಶ ದೋಣಿ ವಿಹಾರಕ್ಕೆ ಅವಕಾಶವಿದೆ. ನಾವೇ ಸ್ವತಹ ದೋಣಿ ನಡೆಸಬಹುದು ಅಥವಾ ಅವರ ವ್ಯಕ್ತಿಯೂ ಬರುವನು. ಆದರೆ ನಾವೇ ನಡೆಸಲು ನಿರ್ಧರಿಸಿದೆವು. ಅದು ಪೆಡಲ್ ದೋಣಿ. ಸ್ವಲ್ಪ ದೂರ ತುಳಿಯುವಷ್ಟರಲ್ಲೇ ಸಾಕು ಸಾಕಾಯಿತು. ಹಾಗೂ ಹೀಗೂ ಅರ್ಧಘಂಟೆ ಕಷ್ಟಪಟ್ಟು ತುಳಿದು ವಾಪಸಾದೆವು. ಕೊಡೈ ಲೇಕ್ ನ ಪಕ್ಕದಲ್ಲೇ ಕುದುರೆ ಸವಾರಿ ಇತ್ತು, ಅದರ ಪಕ್ಕದಲ್ಲೇ ಬಹಳಷ್ಟು ಸೈಕಲ್ ನಿಲ್ಲಿಸಿದ್ದರು. ನಂತರ ತಿಳಿಯಿತು ನೀವು ಗಂಟೆಗೆ ಇಷ್ಟೆಂದು ಪಾವತಿಸಿ ಸೈಕಲ್ ಸವಾರಿ ಕೂಡ ಮಾಡಬಹುದೆಂದು.
೪. ಬ್ರಯಾಂಟ್ ಪಾರ್ಕ್ - ಕೊಡೈ ಲೇಕ್ ನ ಪಕ್ಕದಲ್ಲೇ ಇರುವ ಈ ಉದ್ಯಾನವನ ಅಷ್ಟೇನೂ ಹೇಳಿಕೊಳ್ಳುವ ಮಟ್ಟಿಗೆ ಇರದಿದ್ದರೂ ಪರವಾಗಿಲ್ಲ. ಸುಮ್ಮನೆ ಕುಳಿತು ಮಾತನಾಡಿ ಬರಬಹುದಾದ ಜಾಗ.
ಅಲ್ಲಿಂದ ನೇರ ರೂಮಿಗೆ ವಾಪಸ್ ಬಂದೆವು. ಮೊದಲ ದಿನದ Sight seeing ಮೆಲುಕು ಹಾಕಿಕೊಳ್ಳುತ್ತಾ ನಿದ್ರಾದೇವಿಗೆ ಶರಣಾದೆವು. ನಾವು ನೋಡಿದಷ್ಟೂ ಜಾಗಗಳ ಸುತ್ತ ಮುತ್ತ ಅಂಗಡಿಗಳಲ್ಲಿ ಬಹಳಷ್ಟು ಅಂಗಡಿಗಳು ಚಾಕಲೇಟ್ ಅಂಗಡಿಗಳು. ಕೊಡೈ ನಲ್ಲಿ ಎಲ್ಲೇ ಹೋದರು ನಿಮಗೆ ಈ ಚಾಕಲೇಟ್ ಅಂಗಡಿಗಳು ಕಾಣಿಸುವವು. ಅವು ಮನೆಯಲ್ಲಿ ಮಾಡಿದ ಚಾಕಲೇಟ್ ಗಳು. ಆಮೇಲೆ ಇನ್ನೊಂದು ವಿಷಯವೆಂದರೆ ಯಾವುದೇ ಅಂಗಡಿಯಲ್ಲಿ ಏನೇ ಕೊಂಡುಕೊಂಡರೂ ಪ್ಲಾಸ್ಟಿಕ್ ಕವರ್ ಕೊಡುವುದಿಲ್ಲ. ಬದಲಿಗೆ ಪೇಪರ್ ಕವರ್ ಕೊಡುತ್ತಾರೆ. ಅದೊಂದು ಒಳ್ಳೆಯ ಸಂಗತಿ.
ಎರಡನೆಯ ದಿನ...
೧ . Upper Lake view - ಈ ಪ್ರದೇಶದಿಂದ ಕೊಡೈ ಲೇಕ್ ನ ದೃಶ್ಯ ಮನಮೋಹಕವಾಗಿ ಕಾಣಿಸುತ್ತದೆ.
೨. Pine Forest - ಈ ಜಾಗ ಅದ್ಭುತವಾಗಿದೆ. ಎತ್ತರೆತ್ತರ ಮರಗಳು ಸೂರ್ಯನ ಕಿರಣಗಳು ಒಳಗಡೆ ಬರಲು ಕಷ್ಟ ಪಡುವಂತಿದ್ದವು. ಅಷ್ಟೇ ಅಲ್ಲದೆ ಇದು ಸಿನಿ ಪ್ರಿಯರ ಅಚ್ಚುಮೆಚ್ಚಿನ ತಾಣವಂತೆ. ಬಹಳಷ್ಟು ಸಿನಿಮಾಗಳು ಇಲ್ಲಿ ಶೂಟಿಂಗ್ ಮಾಡಿವೆಯಂತೆ. ಈಗಲೂ ನಡೆಯುತ್ತಿರುತ್ತವಂತೆ. ನಮ್ಮ ಆರೋಗ್ಯಂ ಕೊಟ್ಟ ಮಾಹಿತಿ ಇದು. ಹಾಗೆ ಇಲ್ಲಿ ವಾನರ ಸೈನ್ಯ ಕೂಡ ಉಂಟು. ಆದರೆ ಇಲ್ಲಿನ ವಾನರಗಳು ಅಷ್ಟೊಂದು ಉಪದ್ರವ ಕೊಡಲಿಲ್ಲ.
೩. Guna Caves - ಇಲ್ಲಿಗೆ ಹೋಗಲು ಮುಖ್ಯರಸ್ತೆಯಿಂದ ಸುಮಾರು ಅರ್ಧ ಕಿ.ಮೀ ನಡೆಯಬೇಕು.ಇದಕ್ಕೆ ಈ ಹೆಸರು ಬರಲು ಕಾರಣ ಹಿಂದೆ ಕಮಲ್ ಹಾಸನ್ ನಟಿಸಿದ್ದ"ಗುಣ" ಎಂಬ ಚಿತ್ರ ಇಲ್ಲಿಯೇ ಶೂಟಿಂಗ್ ನಡೆದಿದ್ದಂತೆ. ಬೆಟ್ಟ ಗುಡ್ಡಗಳ ಮರಗಳ ಮಧ್ಯೆ ನಡೆದು ಆ ಜಾಗಕ್ಕೆ ತಲುಪಿದೆವು. ಅಲ್ಲಿ ಮೇಲಿನಿಂದ ನೋಡಿದರೆ ಬೆಟ್ಟ ಗುಡ್ಡಗಳ ದೃಶ್ಯ ಅದ್ಭುತವಾಗಿತ್ತು. ಆದರೆ ಅಸಲಿ ಗುಹೆಗೆ ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಎಲ್ಲೆಡೆ ಕಬ್ಬಿಣದ ಗೇಟ್ ಗಳಿಂದ ಮುಚ್ಚಿಬಿಟ್ಟಿದ್ದರು. ಅತೀ ಸಣ್ಣದಾದ ಆ ಗುಹೆಯಲ್ಲಿ ಹೇಗೆ ಹೋಗಿದ್ದರೋ ಅರ್ಥವಾಗಲಿಲ್ಲ.
೪. Pillar Rocks - ಇಲ್ಲಿ ಬಂಡೆಗಳು ಪಿಲ್ಲರ್ ಮಾದರಿಯಲ್ಲಿ ಇರುವುದರಿಂದ ಇದಕ್ಕೆ ಆ ಹೆಸರು ಬಂದಿರುವುದು ಎಂದು ಹೇಳುತ್ತಾರೆ. ಆದರೆ ನನಗೆ ಯಾಕೋ ಹಾಗನಿಸಲಿಲ್ಲ. ಆದರೆ ಜಾಗ ಸುಂದರವಾಗಿತ್ತು. ನನ್ನ ಹೆಂಡತಿ ಜೋಳ ತಿನ್ನುತ್ತ ಆ ಬೆಟ್ಟದ ಸೌಂದರ್ಯವನ್ನು ಸವಿಯುತ್ತಿದ್ದಾಗ ಕೆಳಗಿನಿಂದ ಬಂದ ವಾನರನೊಬ್ಬ ಅವಳ ಕೈಯಿಂದ ಜೋಳವನ್ನು ಕಿತ್ತುಕೊಂಡು ಹೊರತು ಹೋದ. ಅವಳು ಕಿರುಚಿದ ಜೋರಿಗೆ ಎಲ್ಲರೂ ನಮ್ಮೆದೆ ಗಾಭರಿಯಿಂದ ನೋಡಿ ನಂತರ ವಿಷಯ ತಿಳಿದು ನಕ್ಕರು.
೫ Green Valley view / Suicide Point - ಎರಡನೇ ಹೆಸರು ಸೂಚಿಸುವಂತೆ ಅತ್ಮಹತ್ಯಾಕಾಂಕ್ಷಿಗಳಿಗೆ ಇದು ಹೇಳಿ ಮಾಡಿಸಿದ್ದ ಜಾಗವಂತೆ. ಮೊದಲು ಸುಮಾರು ಜನ ನೊಂದ ಪ್ರೇಮಿಗಳು, ಜೀವನದಲ್ಲಿ ಬೇಸತ್ತ ಮಂದಿ ಇಲ್ಲಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರಂತೆ. ಇದು ಅತೀ ಎತ್ತರದ ಪ್ರದೇಶ ಇಲ್ಲಿಂದ ಬಿದ್ದರೆ ಬಹುಷಃ ಮೂಳೆ ಕೂಡ ದೊರೆಯುವುದು ಕಷ್ಟವೇ. ಆದ್ದರಿಂದ ಇದನ್ನು ಆರಿಸಿಕೊಳ್ಳುತ್ತಿದ್ದರಂತೆ ಜನ. ಆದ್ದರಿಂದ ಈಗ ಈ ಪ್ರದೇಶಕ್ಕೆ ಕಬ್ಬಿಣದ ತಡೆಗೋಡೆಯನ್ನು ನಿರ್ಮಿಸಿ ಇದಕ್ಕೆ Green valley view ಎಂದು ಹೆಸರು ಬದಲಿಸಿದ್ದಾರೆ. ಅಲ್ಲಿಂದ ಬೆಟ್ಟಗಳ ದೃಶ್ಯ ನಿಜಕ್ಕೂ ಸುಂದರ.
೬ Dolphin 's Nose - ಇಡೀ ಕೊಡೈ ನಲ್ಲಿ ಜಾಸ್ತಿ ನಡೆಯಬೇಕಾದ ಪ್ರದೇಶ ಇದೆ. ನಮ್ಮ ಆರೋಗ್ಯಂ ಮುಂಚೆನೇ ಹೇಳಿದ್ದರು. ಇಲ್ಲಿ ಬೆಟ್ಟ ಇಳಿದು ಹತ್ತಬೇಕಾಗುವುದು ಎಂದು ನಾವು ಪರವಾಗಿಲ್ಲ ಎಂದು ಶುರುಮಾಡಿದೆವು. ಆದರೆ ಆಮೇಲೆ ಅದರ ಕಷ್ಟ ಗೊತ್ತಾಯಿತು. ಬೆಟ್ಟದ ಮಧ್ಯೆ ದಾರಿ ಮಾಡಿದ್ದಾರೆ. ಸುಮಾರು ಮೂರು ಕಿ.ಮೀ ನಷ್ಟು ದೂರ ನಡೆಯಬೇಕು. ಬೆಟ್ಟ ಕಡೆದು ಮೆಟ್ಟಿಲು ಮಾಡಿದ್ದರೆ. ಸ್ವಲ್ಪ ದೂರ ಮರಗಳ ಬೇರಿನ ನಡುವೆ ಇಳಿಯಬೇಕು. ಹಾಗೂ ಹೀಗೂ ಮಾಡಿ ಆ ಸ್ಥಳಕ್ಕೆ ಬಂದಾಗ ಇಳಿದು ಬಂದ ಆಯಾಸವೆಲ್ಲ ಮರೆತು ಹೋಗುವ ಅನುಭವವಾಯಿತು. ಒಂದು ಕಲ್ಲು ಬಂಡೆ ಡಾಲ್ಫಿನ ಮೂತಿಯ ಹಾಗಿದೆ ಆದ್ದರಿಂದ ಆ ಹೆಸರು ಬಂದಿದೆ. ಆ ಬಂಡೆ ಬೆಟ್ಟದ ತುತ್ತ ತುದಿಯಲ್ಲಿದೆ. ಅಲ್ಲಿ ಹೋಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ನಾನು ನನ್ನ ಹೆಂಡತಿಯನ್ನು ಆ ಬಂಡೆಯ ತುದಿಗೆ ಕರೆದೊಯ್ಯಲು ಎಷ್ಟೇ ಪ್ರಯತ್ನಿಸಿದರೂ ಆಕೆ ಧೈರ್ಯ ಮಾಡಲಿಲ್ಲ. ಹಾಗೂ ಹೀಗೂ ಆ ಬಂಡೆಯ ಮೇಲೆ ಬಂದು ನಿಂತು ಒಂದು ಫೋಟೋ ತೆಗೆದುಕೊಳ್ಳಲು ಯಶಸ್ವಿಯಾದೆ. ಅಲ್ಲಿಂದ ಮತ್ತೆ ಮೂರು ಕಿ.ಮೀ ಮೇಲೇರಿ ಬರುವಷ್ಟರಲ್ಲಿ ಸಾಕು ಸಾಕಾಯಿತು. ಅಲ್ಲಿಂದ ನೇರ woodys ಹೋಟೆಲ್ ಗೆ ಬಂದು ಭೋಜನ ಕಾರ್ಯಕ್ರಮ ಮುಗಿಸಿ ರೂಮಿಗೆ ಬಂದು ವಿರಮಿಸಿದೆವು.
ಮೂರನೇ ದಿನ..
೧. Silver Cascade Falls - ಇದೊಂದು ಜಲಪಾತ ಇದು ಕೊಡೈ ಗೆ ಹೋಗುವ ದಾರಿಯಲ್ಲೇ ಸಿಗುತ್ತದೆ. ನೀರು ಹೆಚ್ಚಾಗಿ ಇದ್ದಾಗ ಇದರ ದೃಶ್ಯ ಅದ್ಭುತವಾಗಿರುತ್ತದೆ. ಆದರೆ ನೀರು ಕಮ್ಮಿ ಇದ್ದ ಕಾರಣ ಅಷ್ಟೇನೂ ಸುಂದರವಾಗಿರಲಿಲ್ಲ. ಆದರೂ ಮೋಸ ಇಲ್ಲ.
೨. Kodai Museum - ಈ ಸಂಗ್ರಹಾಲಯದಲ್ಲಿ ಕೊಡೈ ನಲ್ಲಿ ಇದ್ದ ಬುಡಕಟ್ಟು ಜನಾಂಗದವರು ಉಪಯೋಗಿಸುತ್ತಿದ್ದ ಹಳೆಯ ಪಳೆಯುಳಿಕೆಗಳು, ಪ್ರಾಣಿ ಪಕ್ಷಿಗಳ ಆಸ್ತಿ ಪಂಜರಗಳು, ಸಾವಿರ ವಿಧದ ಚಿಟ್ಟೆಗಳು, ವಿಧ ವಿಧವಾದ ಹಾವುಗಳ ಪರಿಚಯವಾಯಿತು. ಹಾಗೆಯೇ ಪ್ರಾಣಿಗಳ ಜೀವನ ಚಕ್ರ, ಮಗುವಿನ ೧ನೆ ತಿಂಗಳಿನಿಂದ ೯ನೆ ತಿಂಗಳವರೆಗಿನ ಬೆಳವಣಿಗೆಯ ಭ್ರೂಣ ಹೇಗಿರುತ್ತದೆ ಎಂದು ಎಲ್ಲ ನೋಡಿ ಖುಷಿಯಾಯಿತು.
೩. Vattakanal Falls - ಇಲ್ಲೂ ಅಷ್ಟೇ ನೀರು ಹೆಚ್ಚಾಗಿ ಇಲ್ಲದ ಕಾರಣ ಅಷ್ಟಾಗಿ ಮಜಾ ಬರಲಿಲ್ಲ. ಆದರೂ ಪರವಾಗಿಲ್ಲ. ಇಲ್ಲಿ ಒಂದೇ ಝರಿ ಮೂರು ಕಡೆ ಸಣ್ಣ ಸಣ್ಣ ಜಲಪಾತವಾಗಿ ಬೀಳುತ್ತದೆ.
ಅಲ್ಲಿಂದ ನೇರ ರೂಮಿಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ವಿರಮಿಸಿ ಸಂಜೆ ೬ ಗಂಟೆಗೆ ಮತ್ತದೇ ರಾಜಹಂಸ ಹತ್ತಿ ಬೆಂಗಳೂರಿಗೆ ವಾಪಸ್ ಬಂದೆವು. ನಮ್ಮ ಪ್ರಯಾಣ ಯಶಸ್ವಿ ಆಗಲು ಸಹಕರಿಸಿದ ಆರೋಗ್ಯಂ ಅವರಿಗೆ ಅನಂತ ಧನ್ಯವಾದಗಳು. ನಿಜಕ್ಕೂ ತುಂಬಾ ಒಳ್ಳೆಯ ಮನುಷ್ಯ. ಆತನ ವ್ಯಕ್ತಿತ್ವದಿಂದ ನನ್ನ ಪತ್ನಿಯೂ ಸಂತಸಗೊಂಡಿದ್ದಳು. ಹಾಗೆ ನಮಗೆ ಕೊಡೈ ಗೆ ಹೋಗಲು ಸೂಚಿಸಿದ ನನ್ನ ಸಹೋದ್ಯೋಗಿಗೂ ಧನ್ಯವಾದಗಳು. ಕೊಡೈ ನಿಜಕ್ಕೂ ಒಂದು ಸುಂದರ ಪ್ರದೇಶ.
Comments
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by santhosh_87
ಉ: ಕೊಡೈಕೆನಾಲ್ ಪ್ರವಾಸ
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by gopinatha
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by partha1059
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by partha1059
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by gopinatha
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by gopinatha
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by Jayanth Ramachar
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by gopinatha
ಉ: ಕೊಡೈಕೆನಾಲ್ ಪ್ರವಾಸ
ಉ: ಕೊಡೈಕೆನಾಲ್ ಪ್ರವಾಸ
In reply to ಉ: ಕೊಡೈಕೆನಾಲ್ ಪ್ರವಾಸ by gopaljsr
ಉ: ಕೊಡೈಕೆನಾಲ್ ಪ್ರವಾಸ