ಭಗತ್ ಸಿಂಗ್ - ಒಂದು ನಮನ

ಭಗತ್ ಸಿಂಗ್ - ಒಂದು ನಮನ

ಭಗತ್ ಸಿಂಗ್ ಈ ಹೆಸರೇ ಒಂದು ರೋಮಾಂಚನ, ಯುವಜನತೆಗೆ ಚೇತನ ತುಂಬುವ ಶಕ್ತಿ ಅಡಗಿದೆ ಈ ಹೆಸರಲ್ಲಿ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಧೀರ, ಧೀಮಂತ ಕ್ರಾಂತಿಕಾರಿ ವ್ಯಕ್ತಿ ಭಗತ್ ಸಿಂಗ್.  ಭಗತ್ ಸಿಂಗ್ ಹುಟ್ಟಿದ್ದು ಸೆಪ್ಟೆಂಬರ್ ೨೭ ೧೯೦೭ ರಂದು ಪಂಜಾಬಿನ ಲಯಲ್ಪುರ್ ಜಿಲ್ಲೆಯ ಬಂಗ ಎಂಬ ಹಳ್ಳಿಯಲ್ಲಿ. ಸರ್ದಾರ್ ಕಿಶನ್ ಸಿಂಗ್ ಹಾಗೂ ವಿದ್ಯಾವತಿಯ ಮೂರನೇ ಮಗನಾಗಿ ಹುಟ್ಟಿದ ಈ ಬಾಲಕ ಮುಂದೆ ದೇಶ ಮೆಚ್ಚುವ ಮಗನಾಗುವವನೆಂದು
ಎಣಿಸಿರಲಿಲ್ಲವೇನೋ. ಭಗತ್ ಸಿಂಗ್ ಕುಟುಂಬ ಸ್ವಾತಂತ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಹುಷಃ ಇದೆ ಭಗತ್ನಲ್ಲಿ ದೇಶದ ಬಗ್ಗೆ ಪ್ರೇಮ ಮೂಡಲು ಕಾರಣವಾಯಿತು ಎಂದರೆ ತಪ್ಪಾಗಲಾರದು.

೧೯೧೬ ರರಲ್ಲಿ D A V ಶಾಲೆ, ಲಾಹೋರ್ ನಲ್ಲಿ ಕಲಿಯುತ್ತಿದ್ದಾಗಲೇ ಖ್ಯಾತ ಹೋರಾಟಗಾರರಾದ ಲಾಲಾ ಲಜಪತ್ ರಾಯ್ ಇವರ ಪರಿಚಯವಾಗಿತ್ತು ಭಗತ್ ಗೆ. ೧೯೧೯ ರಲ್ಲಿ ನಡೆದ ಜಲಿಯನ್ವಾಲಾಭಾಗ್ ಘಟನೆಯಿಂದ ಬಹಳ ನೊಂದ ಭಗತ್ ಬ್ರಿಟಿಷರನ್ನು ಹೊರದಬ್ಬಿ ಸ್ವಾತಂತ್ರ್ಯ ಭಾರತದ ಕನಸು ಕಾಣಲು ಶುರು ಮಾಡಿದರು. ೧೯೨೧ ರಲ್ಲಿ ಗಾಂಧಿಜಿ ಅವರು ಬ್ರಿಟಿಷರ ವಿರುದ್ಧ Non - Cooperation Movement ಕರೆಕೊಟ್ಟಾಗ ಶಾಲೆಯನ್ನು ತ್ಯಜಿಸಿ ಬಂದು ಆ ತಂಡವನ್ನು ಸೇರಿದರು ಭಗತ್. ಅದೇ ಗಾಂಧಿಜಿ ೧೯೨೨ ರಲ್ಲಿ ತಾವು ಬ್ರಿಟಿಷರ ವಿರುದ್ಧ ಮಾಡಿದ್ದ ಆಂದೋಲನವನ್ನು ವಾಪಸ್ ತೆಗೆದುಕೊಂಡಾಗ ಬಹಳ ನೊಂದ ಭಗತ್ ಗೆ ಅಹಿಂಸೆಯ ಮೇಲಿದ್ದ ನಂಬಿಕೆ ಹೊರಟು ಹೋಗಿ ಕ್ರಾಂತಿಯ ಮಾರ್ಗವೇ ಸರಿ ಎಂದು ನಿರ್ಧರಿಸಿದರು. ಮತ್ತೆ ಶಾಲೆ ಸೇರಲು ಕ್ರಾಂತಿಕಾರಿ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದ್ದ ಲಾಹೋರಿನ ನ್ಯಾಷನಲ್ ಕಾಲೇಜ್ ಸೇರಿದರು. ಇಲ್ಲಿ ಅವರಿಗೆ ಕ್ರಾಂತಿಕಾರಿಗಳಾದ ಸುಖದೇವ್, ಭಗವತಿ ಚರಣ್ ಮುಂತಾದವರ ಭೇಟಿ ಆಯಿತು.

ಕ್ರಾಂತಿಯ ಬಗ್ಗೆ ಮೊದಲು ಭಗತ್ ಗೆ ಪಾಠ ಮಾಡಿದ್ದು ಗಣೇಶ್ ಶಂಕರ್ ವಿದ್ಯಾರ್ಥಿ. ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾ ಎಂಬ ಸಂಘವನ್ನು ಸ್ಥಾಪಿಸಿ ಪಂಜಾಬಿನಾದ್ಯಂತ ತಮ್ಮ ಸಂದೇಶಗಳನ್ನು ಸಾರಿದರು. ೧೯೨೮ ರಲ್ಲಿ ದೆಹಲಿಯಲ್ಲಿ ನಡೆದ ಕ್ರಾಂತಿಕಾರಿಗಳ ಸಭೆಯಲ್ಲಿ ಮತ್ತೊಬ್ಬ ಧೀಮಂತ ಕ್ರಾಂತಿಕಾರಿ "ಚಂದ್ರಶೇಖರ್ ಆಜಾದ್" ರನ್ನು ಭೇಟಿ ಮಾಡಿದರು ಭಗತ್. ನಂತರ ಇಬ್ಬರೂ ಸೇರಿ "ಹಿಂದೂಸ್ಥಾನ್ ಸಮಾಜವಾದಿ ಪ್ರಜಾತಂತ್ರ ಸಂಘ" ಎಂಬ ಸಂಘವನ್ನು ಸ್ಥಾಪಿಸಿದರು. ಅದರ ಮೂಲ ಉದ್ದೇಶ ಸಶಸ್ತ್ರ ಕ್ರಾಂತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವುದು.

೧೯೨೮ ಫೆಬ್ರವರಿ ಯಲ್ಲಿ ಇಂಗ್ಲೆಂಡ್ ಇಂದ ಭಾರತಕ್ಕೆ "ಸೈಮನ್ ಕಮಿಷನ್" ಎಂಬ ತಂಡ ಬಂದಿತು. ಇದರ ಉದ್ದೇಶ ಭಾರತೀಯರಿಗೆ ಎಷ್ಟು ಸ್ವಾತಂತ್ಯ್ರ ಹಾಗೂ ಜವಾಬ್ದಾರಿಗಳನ್ನು ಕೊಡಬೇಕು ಎಂದು ನಿರ್ಧರಿಸಲು. ವಿಪರ್ಯಾಸವೆಂದರೆ ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯನನ್ನು ನೇಮಿಸದಿರುವುದು ಭಾರತೀಯರ ಕೋಪಕ್ಕೆ ಕಾರಣವಾಯಿತು. ಇದರ ವಿರುದ್ಧ ನಡೆಸಿದ ಹೋರಾಟದಲ್ಲಿ ಪೊಲೀಸರು ನಡೆಸಿದ ಲಾಟಿ ಚಾರ್ಜ್ ನಲ್ಲಿ ಲಾಲ ಲಜಪತ್ ರಾಯ್ ಅವರು ತೀವ್ರವಾಗಿ ಗಾಯಗೊಂಡು ನಿಧನರಾದರು. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಭಗತ್ ಮತ್ತವನ ತಂಡ ಪೋಲಿಸ್ ಅಧಿಕಾರಿ ಸ್ಕಾಟ್ ಅನ್ನು ಕೊಳ್ಳುವ ಬದಲಾಗಿ ಅವನ ಸಹಾಯಕ ಸಾಂಡರ್ಸ್ ನನ್ನು ಕೊಂದರು. ಆ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಭಗತ್ ಲಾಹೋರ್ ಬಿಡಬೇಕಾಯಿತು.

೧೯೨೯ ಏಪ್ರಿಲ್ ೮ ರಂದು ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಅಸ್ಸೆಂಬ್ಲಿ ಯಲ್ಲಿ ಬಾಂಬ್ ಸಿಡಿಸಿ ಕರಪತ್ರಗಳನ್ನು ಎಸೆದರು. ಅಲ್ಲಿ ಅವರಿಬ್ಬರನ್ನು ಬಂಧಿಸಿದ ಪೊಲೀಸರು ಅವರನ್ನು ಬಂಧೀಖಾನೆಯಲ್ಲಿ ಇರಿಸಿದರು. ಅಲ್ಲಿ ಕ್ರಾಂತಿಕಾರಿಗಳ ದಂಡೆ ನೆರದಿತ್ತು. ಬ್ರಿಟಿಷ್ ಅಧಿಕಾರಿಗಳು ಎಷ್ಟೇ ಹಿಂಸಿಸಿದರು "ವಂದೇಮಾತರಂ" ಎಂಬ ಘೋಷಣೆಗಳು ನಿಲ್ಲುತ್ತಲೇ ಇರಲಿಲ್ಲ. ಸತತವಾಗಿ ಉಪವಾಸ ಸತ್ಯಾಗ್ರಹಗಳು ನಡೆದೇ ಇದ್ದವು. ಅಕ್ಟೋಬರ್ ೭ ೧೯೩೦ ರಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಈ ಮೂವರಿಗೂ ಮರಣದಂಡನೆ ವಿಧಿಸಲಾಯಿತು. ಖ್ಯಾತ ರಾಜಕೀಯ ವ್ಯಕ್ತಿಗಳು ಅಂದು ಮನಸು ಮಾಡಿದ್ದರೆ ಭಗತ್, ಸುಖದೇವ್ ಹಾಗೂ ರಾಜಗುರು ಇವರ ಮರಣ ದಂಡನೆ ತಪ್ಪಿಸಬಹುದಿತ್ತೇನೋ....ಆದರೆ ಅದು ಆಗಲಿಲ್ಲ. ಕಡೆಯದಾಗಿ ೨೩ ಮಾರ್ಚ್ ೧೯೩೧ ರಂದು ಬೆಳ್ಳಂ ಬೆಳಿಗ್ಗೆ ಮೋಸವಾಗಿ ಈ ಮೂವರನ್ನು ಗಲ್ಲಿಗೇರಿಸಲಾಯಿತು. ಭಾರತದ ಸ್ವಾತಂತ್ರ್ಯ ಸಮರಕ್ಕೆ ತನ್ನ ಪ್ರಾಣವನ್ನೇ ಬಲಿಕೊಟ್ಟ ಭಗತ್ ಸಿಂಗ್,ರಾಜಗುರು ಹಾಗೂ ಸುಖದೇವ್ ಅವರು ಮರಳಿ ಬರಬಹುದೆಂದು ಜೈಲಿನ ಆಚೆ ಕಾತರದಿಂದ ಕಾಯುತ್ತಿದ್ದ ಅವರ ಕುಟುಂಬದವರಿಗೆ ಅವರ ಅಭಿಮಾನಿಗಳಿಗೆ ಕಡೆಯ ಪಕ್ಷ ಅವರ ದೇಹಗಳು ಸಿಗಲಿಲ್ಲ.

 

ಇಂದಿಗೆ ಭಗತ್ ಸಿಂಗ್ ಸತ್ತು ೮೦ ವರ್ಷಗಳು ಸಂದಿವೆ. ಈ ಸಮಯದಲ್ಲಿ ಅವರನ್ನು ನೆನೆಯುತ್ತ ಅವರಿಗೊಂದು ನಮನ ಸಲ್ಲಿಸೋಣ. ಜೈ ಭಗತ್, ಜೈ ಸುಖದೇವ್, ಜೈ ರಾಜಗುರು ..ಜೈ ಹಿಂದ್, ವಂದೇ ಮಾತರಂ.

ಮಾಹಿತಿ : ಸಂಗ್ರಹ


ಚಿತ್ರ ಕೃಪೆ : ಅಂತರ್ಜಾಲ 

Rating
No votes yet

Comments