ಅಪ್ಪನ ಮನದಲ್ಲೊಮ್ಮೆ ಇಣುಕಿ...
ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ.
ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್ಪನಿಗೆ ನಿದ್ದೆ ಬಂದಿದೆ. ಮಗಳು ನಿದ್ದೆಯಿರದ ರಾತ್ರಿಗಳಲ್ಲಿ ಬದುಕಿನ ಕನಸುಗಳಿಗೆ ಬಣ್ಣ ಮೆತ್ತುತ್ತಾಳೆ...
'ಅಪ್ಪ' ಮೊದಲಿನಂತಿಲ್ಲ. ಅವ ಡ್ಯಾಡಿಯಾಗಿದ್ದಾನೆ. ಮಗಳಿಗೆ ಉಪದೇಶ ಕೊಡುವ ಹಕ್ಕು ಅವನಿಗಿಲ್ಲ. ತನ್ನ ಬದುಕಿನ ಹಳೆಯ ಪುಟಗಳನ್ನು ತಿರುವಿ ನೋಡಿದರೆ ಎಲ್ಲವೂ ಎಷ್ಟು ಬೇಗ ಕಳೆದು ಹೋಯಿತಲ್ಲಾ ಎಂದು ಅನಿಸುತ್ತದೆ. ಡೆಲಿವರಿ ರೂಮ್್ನ ಮುಂದಿರುವ ಬೆಂಚಲ್ಲಿ ಕಾದು ಕುಳಿತ ಆ ಸಂಜೆ. ಆಸ್ಪತ್ರೆಯಲ್ಲಿನ ಫಿನಾಯಿಲ್ ವಾಸನೆಗೆ ಜಿಡ್ಡು ಕಟ್ಟಿದ ಮೂಗು...ರಾತ್ರಿ ಒಂದೂವರೆ ಗಂಟೆಯ ಹೊತ್ತಿಗೆ ನಿದ್ದೆ ತೂಕಡಿಸುತ್ತಿದ್ದಂತೆ ಮಗುವಿನ ಅಳು.. .ನಾನು ಅಪ್ಪನಾಗಿ ಬಿಟ್ಟೆ! ಆಸ್ಪತ್ರೆಯ ಕೆಟ್ಟ ವಾಸನೆಗೆ ಒಣಗಿದ ಮೂಗಿಗೆ ಬೇಬಿ ಪೌಡರ್್ನ ಘಮಘಮ. ಮುದ್ದಾದ ಹೆಣ್ಮಗು ನನ್ನಾಕೆಯ ಬಳಿ ಮಲಗಿದ್ದಳು. ಮುದ್ದು ಮುದ್ದಾಗಿದ್ದ ಅವಳ ಪುಟ್ಟ ಕೆನ್ನೆಗೆ ಚುಂಬಿಸುತ್ತಾ ಅಮ್ಮೀ ಅಂತಾ ಕರೆದಿದ್ದೆ. ಅವಳ ಬಾಲ್ಯದೊಂದಿಗೆ ನನ್ನ ಯೌವನ ಕರಗಿತು. ರಾತ್ರಿಯೆಲ್ಲಾ ಕಥೆ ಹೇಳುವಂತೆ ಕಾಡಿಸಿ ನನ್ನೆದೆಯಲ್ಲಿ ಬೆಚ್ಚನೆ ಮಲಗಿ ನಿದ್ದೆ ಮಾಡಿದ್ದು, ಮಡಿಲಲ್ಲಿ ಕುಳಿತು ಉಚ್ಚೆ ಹೊಯ್ದಾಗ ನನಗಾದ ಬೆಚ್ಚನೆಯ ಅನುಭವ...ಮಾತಿಗೆ ನಿಲುಕದ್ದು. ನಾನು ಏನು ಹೇಳಿದರೂ ಹೂಂ ಅನ್ನುವ ನನ್ನ ಹುಡುಗಿ ಬೆಳೆಯುತ್ತಾ ಬಂದಂತೆ ಆಕೆಯ ಆಸೆಗಳ ಪಟ್ಟಿಯೂ ಬೆಳೆಯುತ್ತಾ ಹೋಯಿತು. ಎಲ್ಲದಕ್ಕೂ ನಾನು ಹೂಂ ಅಂದೆ. ಅವಳು ಹಾರುವ ಚಿಟ್ಟೆಯಾದಳು. ಅವಳನ್ನು ಹಿಡಿಯ ಹೊರಟರೆ ನನಗೆ ದಕ್ಕಿದ್ದು ಅದರ ಪುಟ್ಟ ರೆಕ್ಕೆಯ ಬಣ್ಣ ಮಾತ್ರ...
ಅವಳ ಬಣ್ಣದ ಲೋಕದಲ್ಲಿ ನಾನು ಬರೀ ಕುಂಚ ಅದ್ದಿ ತೆಗೆಯುವ ನೀರು. ವಿವಿಧ ಬಣ್ಣಗಳು ನನ್ನೊಡಲನ್ನು ಸೇರಿದ ನಾನು ರಂಗೀಲ. ಕಾಮನ ಬಿಲ್ಲು ಯಾಕೆ ಬಾಗುತ್ತೆ ಅಂತಾ ಪ್ರಶ್ನೆ ಕೇಳುತ್ತಿದ್ದವಳು ಕಾಮನ ಬಿಲ್ಲನ್ನು ಹಿಡಿಯ ಹೊರಟಿದ್ದಳು. ಅಪ್ಪಾ...ನಾನೂ ನಿನ್ನೊಂದಿಗೆ ಬರುತ್ತೇನೆ ಎಂದು ರಚ್ಚೆ ಹಿಡಿಯುತ್ತಿದ್ದ ಬಾಲೆ, ನಾನೇ ಹೋಗಿ ಬರ್ತೀನಿ ಅಂತಾಳೆ. ನನ್ನ ಕಿರುಬೆರಳು ಹಿಡಿಯುತ್ತಿದ್ದ ಅವಳ ಕೈಗಳ ಮದರಂಗಿ ಕೆಂಪಾಗಿದೆ. ಬೈತಲೆ ತೆಗೆದು ಬಾಚಿ ಎರಡು ಜಡೆ ಹಾಕಿ ಕಣ್ಣಿಗೆ ಕಾಡಿಗೆ ತೀಡುತ್ತಿದ್ದ ಅವಳ ಮುದ್ದು ಕಂಗಳಲ್ಲಿ ನೀರು ಜಿನುಗುತ್ತಿದ್ದೆ. ಡ್ಯಾಡಿ...ಎಂದು ನನ್ನ ಎದೆಗೊರಗಿ ಅಳುವಾಗ, ನನ್ನ ಅಳುವನ್ನು ನುಂಗಿದ್ದೇನೆ. ಅವಳ ಕೈಯನ್ನು ಗಟ್ಟಿಯಾಗಿ ಹಿಡಿದು ಕೊಂಡು ಅವ ಹೆಜ್ಜೆ ಹಾಕುವಾಗ ಅವಳ ಗೆಜ್ಜೆಯ ನಾದಕ್ಕೆ ನನ್ನೆದೆಯು ಕಂಪಿಸುತ್ತದೆ. ಸಪ್ತಪದಿ ತುಳಿದು ಆಕೆ ಹೊರಟು ನಿಂತಿದ್ದಾಳೆ. ಮುಂದಿನ ಆಷಾಡ ಬರುವ ವರೆಗೆ ನನ್ನ ಜೀವ ಬಿಗಿಹಿಡಿದಿದ್ದೇನೆ.
Comments
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
In reply to ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ... by Jayanth Ramachar
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
In reply to ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ... by prati
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
In reply to ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ... by manju787
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
In reply to ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ... by karababu
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...
ಉ: ಅಪ್ಪನ ಮನದಲ್ಲೊಮ್ಮೆ ಇಣುಕಿ...