ಗುಮ್ಮನೆಲ್ಲಿಹ ತೋರಮ್ಮ!

ಗುಮ್ಮನೆಲ್ಲಿಹ ತೋರಮ್ಮ!

ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ ತಂಡಗಳು ಸೀರಿಯಸ್ ಥಿಯೇಟರ್ ನಲ್ಲಿ ತೊಡಗಿಕೊಂಡಿಲ್ಲವಾದರೂ ಕೆಲವು ತಂಡಗಳು ಮಾತ್ರ ಅರ್ಥಪೂರ್ಣ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ವರ್ಷಕ್ಕೆ ಒಂದಾದರೂ ಉತ್ತಮ ನಾಟಕವನ್ನು ಪ್ರದರ್ಶಿಸುತ್ತಲೇ ಬಂದಿವೆ. ಅಂಥ ತಂಡಗಳಲ್ಲಿ ಬಹುಮುಖ್ಯವಾದದ್ದು ಎಂದರೆ ಮುಂಬಯಿಯ ಕರ್ನಾಟಕ ಸಂಘದ ’ಕಲಾಭಾರತಿ’ ತಂಡ. ಕಳೆದ ಏಳು ದಶಕಗಳಿಂದ ನಿರಂತರವಾಗಿ ಹೊರನಾಡಿನಲ್ಲಿ ಕನ್ನಡ ಸೇವೆ, ಕನ್ನಡಪರ ಚಟುವಟಿಕೆಗಳನ್ನು ಮಾಡುತ್ತ ಬಂದಿರುವ ಈ ಸಂಘವು, ರಂಗಭೂಮಿಗೆ ನೀಡಿದ ಕೊಡುಗೆಯೂ ಮಹತ್ವದ್ದು. ದಿವಂಗತ ಆರ್ ಡಿ ಕಾಮತ್, ಶ್ರೀಪತಿ ಬಲ್ಲಾಳ್, ಕೆ. ಕೆ. ಸುವರ್ಣ, ವೆಂಕಟ್ರಾವ್ ತಲಗೇರಿ, ಕೆ. ಜೆ. ರಾವ್, ಕಿಶೋರಿ ಬಲ್ಲಾಳ್, ವ್ಯಾಸರಾಯ ನಿಂಜೂರು, ಡಾ. ಮಂಜುನಾಥ್ ಮುಂತಾದ ಘಟಾನುಘಟಿ ರಂಗಕರ್ಮಿಗಳು ಹೊರನಾಡಿನಲ್ಲಿದ್ದೇ ಕನ್ನಡ ರಂಗಭೂಮಿಯ ಶ್ರೇಯಸ್ಸಿಗಾಗಿ ಹೋರಾಡಿದವರು.

 

ವೈಯಕ್ತಿಕವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೇನೆ. ಅತ್ಯದ್ಭುತ ಎನ್ನುವಂಥ ಪ್ರೊಡಕ್ಷನ್ ಗಳನ್ನು ನೋಡಿದ್ದೇನೆ, ಅವುಗಳಲ್ಲಿ ಪಾಲ್ಗೊಂಡಿದ್ದೇನೆ. ಕರ್ನಾಟಕ ಸಂಘದ ಕಲಾಭಾರತಿ ತಂಡದ ಸದಸ್ಯನಾಗಿ ’ಆಷಾಢದ ಒಂದು ದಿನ’, ’ರಾವಿ ನದಿ ದಂಡೆಯಲ್ಲಿ’, ’ಅಂಬೆ’, ’ಮೃಗತೃಷ್ಣ’, ’ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?’ ಮುಂತಾದ ವಿಭಿನ್ನ ಅಭಿರುಚಿಯ ನಾಟಕಗಳನ್ನು ನಿರ್ಮಿಸಿದ ಖ್ಯಾತಿ ನಮ್ಮ ತಂಡದ್ದು. ಅದೇ ನಿಟ್ಟಿನಲ್ಲಿ ನಮ್ಮ ತಂಡದ ಹೊಸ ಪ್ರಸ್ತುತಿಯೇ ಶ್ರೀರಂಗರ ’ಗುಮ್ಮನೆಲ್ಲಿಹ ತೋರಮ್ಮ’.

 

ನಾಡಿದ್ದು ೨೮ ನೇ ತಾರೀಕು, ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಆರೂವರೆಗೆ ಈ ನಾಟಕದ ಪ್ರದರ್ಶನವಿದೆ. ನಿಮ್ಮೆಲ್ಲರನ್ನೂ ಆಹ್ವಾನಿಸಲೆಂದೇ ಈ ಲೇಖನ.

 

ನಾಟಕದ ಬಗ್ಗೆ:

ಶ್ರೀರಂಗರು ರಚಿಸಿದ 34 ದೊಡ್ಡ ಹಾಗೂ ಐವತ್ತಕ್ಕೂ ಹೆಚ್ಚಿನ ಏಕಾಂಕ ನಾಟಕಗಳಲ್ಲಿ ಬಹುಶಃ ಅತ್ಯಂತ ಕಡಿಮೆ ಪ್ರದರ್ಶನವನ್ನು ಕಂಡ ನಾಟಕವಿದು. ಆಮೂರರು ಬರೆದ ಶ್ರೀರಂಗರ ಸಮಗ್ರ ನಾಟಕಗಳ ವಿಮರ್ಶಾಕೃತಿಯಲ್ಲೂ ಈ ನಾಟಕದ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಸಿಗುವುದಿಲ್ಲ. ನಾಟಕದ ಭಾಷೆಯೂ ಸರಳ ಹಾಗೂ ನಿರೂಪಣೆಯೂ ಸರಳವಾಗಿದೆ. ಆದರೆ ಬುದ್ಧಿವಂತಿಕೆಯ ಗುದ್ದಾಟ ಅನೂಹ್ಯವಾಗಿದೆ.

 

ನಾಟಕಕಾರನೊಬ್ಬ ಸ್ವತಃ ಸೂತ್ರಧಾರನಾಗಿ ಒಂದು ನಾಟಕವನ್ನು ಜನರ ಎದುರು ಹಮ್ಮಿಕೊಂಡಿರುತ್ತಾನೆ. ಇನ್ನೇನು ಜನರು ಬರುವ ಸಮಯ, ಆದರೆ ’ರಾವಣ’ ಹಾಗೂ ’ಕಾರ್ತವೀರ್ಯನ’ ಪಾತ್ರಧಾರಿಗಳು ಮಾತ್ರ ಇನ್ನೂ ಸಿದ್ಧರಾಗಿರುವುದಿಲ್ಲ. ಜನರು ಒಟ್ಟಾಗುವ ಸಮಯ ಬಂದರೂ ಕೂಡ ಅವರಿಬ್ಬರೂ ತಮ್ಮತಮ್ಮಲ್ಲಿಯೇ ಜಗಳವಾಡುತ್ತಿದ್ದಾರೆ. ಪುರಾಣದಲ್ಲಿ ಸಾವಿರ ತೋಳುಗಳ ಕಾರ್ತವೀರ್ಯನು, ಹತ್ತು ತಲೆಗಳ ರಾವಣನನ್ನು ಅವಮಾನಿಸಿದ ಒಂದು ಘಟನೆಯು ಬರುತ್ತದೆ. ಇಲ್ಲಿ ಸ್ಟೇಜಿನ ಮೇಲೆಯೂ ಆ ಪಾತ್ರಗಳನ್ನು ನಿಭಾಯಿಸುತ್ತಿರುವ ನಟರು ಜಗಳವಾಡುತ್ತಿದ್ದಾರೆ. ಆದರೆ ಅವರ ಜಗಳಕ್ಕೆ ಕಾರಣವೇ ಬೇರೆ. ಈ ನಟರು ಬುದ್ಧಿವಂತರಲ್ಲ. ಆಯಾ ಪಾತ್ರಗಳನ್ನು ನಿಭಾಯಿಸುವುದು ಅವರ ಪ್ರತಿಷ್ಠೆಯ ವಿಷಯವಾಗಿದೆ.

 

ಹೀಗೆ ಪ್ರಾರಂಭವಾಗುವ ನಾಟಕವು ಇಂದಿನ ಜಗತ್ತಿನಲ್ಲಿ ’ತಲೆಗಿಂತ’ ’ಸಾವಿರ ತೋಳುಗಳು’ ಹೆಚ್ಚು ಬಲಶಾಲಿಯಾಗಿರುತ್ತವೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತ ಸಾಗುತ್ತದೆ. ಪ್ರಜೆಗಳನ್ನು ಆಳಲು ಏನು ಬೇಕು? ಜನಜಂಗುಳಿಯ ಗುಮ್ಮ ಹೇಗೆ ಹತ್ತು ತಲೆಯನ್ನು ಹೊಡೆದುರುಳಿಸುತ್ತದೆ ಎಂಬುದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಶ್ರೀರಂಗರು ನಿರೂಪಿಸುತ್ತ ಹೋಗುತ್ತಾರೆ. ಇತ್ತೀಚಿನ ಇಜಿಪ್ಟ್ ಕ್ರಾಂತಿಯನ್ನು ನೋಡಿದಾಗ, ಶ್ರೀರಂಗರ ಎಷ್ಟೋ ದಶಕಗಳ ಹಿಂದಿನ ಪರಿಕಲ್ಪನೆ ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ.

 

ನಾಟಕದ ಬಹುತೇಕ ಭಾಷೆ ಹಾಸ್ಯ ಹಾಗೂ ವ್ಯಂಗ್ಯದಿಂದ ಕೂಡಿದ್ದು, ಪ್ರೇಕ್ಷಕರಿಗೂ ಆಪ್ತವೆನಿಸುತ್ತದೆ. ಏನನ್ನೂ ಅರಿಯದ ಮುಗ್ಧ ಹಾಗೂ ಹುಂಬ, ಸಾಮಾನ್ಯ ಜನರ ಪ್ರತೀಕವಾಗಿ ಒಬ್ಬ ಹಾಡುಗಾರನೂ ಇದರಲ್ಲಿದ್ದಾನೆ.

 

ರಂಗದ ಮುಂದೆ:

ಸೂತ್ರಧಾರ: ಮೋಹನ್ ಮಾರ್ನಾಡ್

ಹಾಡುಗಾರ: ಅವಿನಾಶ್ ಕಾಮತ್

ಕಾರ್ತವೀರ್ಯ: ಸುರೇಂದ್ರ ಕುಮಾರ್

ರಾವಣ: ರಾಜೀವ ನಾಯಕ್

ಸ್ತ್ರೀ ೧: ವೀಣಾ ಸರಪಾಡಿ

ಸ್ತ್ರೀ ೨: ಕುಸುಮ್ ಬಲ್ಲಾಳ್

ಸಂಗಡಿಗ: ಪ್ರವೀಣ್ ಸುವರ್ಣ

ಸಂಗಡಿಗ ೨: ಮನೋಜ್ ರಾವ್

ಪೋಲೀಸ್: ಪ್ರವೀಣ್

 

ರಂಗದ ಹಿಂದೆ:

ನಿರ್ದೇಶನ: ಭರತ್ ಕುಮಾರ್ ಪೊಲಿಪು

ಬೆಳಕು: ಜಗದೀಶ್ ಕೆಂಚನಕೆರೆ

ಸಂಗೀತ: ಪದ್ಮನಾಭ ಸಸಿಹಿತ್ಲು, ಅವಿನಾಶ್ ಕಾಮತ್ ಹಾಗೂ ಪ್ರವೀಣ್ ಸುವರ್ಣ

ಪ್ರಸಾದನ: ಚಂದ್ರಕಾಂತ್ ಕಾಟ್ಕರ್

ನಿರ್ವಹಣೆ: ಓಂದಾಸ್ ಕಣ್ಣಂಗಾರ್

 

ಬರುವ ಸೋಮವಾರದ ಸಂಜೆ ದಯವಿಟ್ಟು ನಮ್ಮೊಂದಿಗೆ ಕಳೆಯಿರಿ ಎಂದು ಕೋರುತ್ತೇನೆ. ದೂರದ ಮುಂಬಯಿಯಿಂದ ಬರುವ ನಿಮ್ಮ ಕನ್ನಡಿಗ ಬಂಧುಗಳನ್ನು ಭೇಟಿಯಾಗುವ ತವಕ ನಿಮಗೂ ಇದ್ದೀತು. ಅಲ್ಲವೇ? ಹಾಗಿದ್ದರೆ, ನಾಟಕವನ್ನು ನೋಡಲು ಬರುತ್ತೀರಿ ತಾನೆ?

 

 

 

 

Comments