ಹಲಸಿನ ಹಣ್ಣುಗಳು ಮತ್ತು ಮಾವಿನ ಕಾಯಿಗಳು

ಹಲಸಿನ ಹಣ್ಣುಗಳು ಮತ್ತು ಮಾವಿನ ಕಾಯಿಗಳು

ಆಗ ನನಗೆ ಸುಮಾರು ೫ ವರ್ಷವಿದ್ದಿರಬಹುದು. ಅಮ್ಮ ಮಾವಿನಕಾಯಿ ಹೆಚ್ಚುತ್ತಿದ್ದಳು. ಆದರಲ್ಲಿದ್ದ ಬಿಳಿ ಬೀಜವನ್ನು ನೋಡಿ ನಾನು ನನ್ನ ಪ್ರಶ್ನಾವಳಿಯನ್ನು ಆರಂಭಿಸಿದೆ. ಕಾಯಿ ಬೆಳೆದು ಹಣ್ಣಾದರೆ, ಆ ಬೀಜ ಬೆಳೆದು ವೋಟೆಯಾಗುತ್ತದೆ ಎಂದು ತಿಳಿದ ನಂತರ, " ಇದನ್ನೇ ನೆಟ್ರೆ ಏನಾಗತ್ತೆ?" ಎಂದು ಕೇಳಿದೆ. ಅಮ್ಮ ನಕ್ಕು ಸುಮ್ಮನಾದಳು. ನನಗೆ ಮಾವಿನ  ಗಿಡ ನೆಡುವ ಉತ್ಸಾಹ; ಆದರೆ, ಕೈಯ್ಯಲ್ಲಿರುವುದು, ಕಾಯಿಯ ಎಳೆಯ ಬೀಜ. ಉತ್ಸಾಹ ತಂದ ಆತುರದಿಂದ ಅದನ್ನೇ ಮಣ್ಣಿನಲ್ಲಿ ಹೂತಿಟ್ಟೆ. ಎರಡು ಘಂಟೆಗಳ ನಂತರ, ನಾನು ಬೀಜ ನೆಟ್ಟ ಜಾಗದಲ್ಲಿ ಎರಡೆಲೆಯ ಪುಟ್ಟ ಕಳೆಗಿಡವೊಂದನ್ನು ಚುಚ್ಚಿ, ಅಮ್ಮನಿಗೆ ತೋರಿಸಿ ನಕ್ಕಿದ್ದೆ :D :D. ನನ್ನ ನೆನಪಿನಲ್ಲಿ ಉಳಿದಿರುವ ಅತಿ ಹಳೆಯ ಘಟನೆಳಲ್ಲಿ ಇದೂ ಒಂದು.
 
. ನಾನು ಮೊದಲನೆಯ ಮಾವಿನ ವೋಟೆಯನ್ನು ಮಣ್ಣಿನಲ್ಲಿ ಹೋತಿಟ್ಟಾಗ, ಕೆಲವು ದಿನಗಲ ನಂತರ, ಮಣ್ಣನ್ನು ಅಗೆದು, ವೋಟೆಯನ್ನು ಹೊರತೆಗೆದು ನೋಡಿದ್ದೆ. ಆಗ, ಅದು, ಕೆಂಪನೆಯ ಚಿಕ್ಕ ಮೊಳಕೆಯೊಡೆದಿತ್ತು. ನನಗೆ ಏಳೆಂಟು ವರ್ಷವಾಗುವಷ್ಟರಲ್ಲಿ, ನಾಲ್ಕು ವೋಟೆಗಳನ್ನು ನೆಟ್ಟು, ಮಾವಿನ ಸಸಿಗಳನ್ನು ಬೆಳೆಸಿದ್ದೆ.  ಅವುಗಳು ಬೆಳೆದು ಹಣ್ಣು ಕೊಡಲು ೧೦-೧೫ ವರ್ಷಗಳೇ ಆಗುತ್ತದೆ ಎಂದು ತಿಳಿದ ಮೇಲೂ, ಸಿಕ್ಕ ಸಿಕ್ಕ ವೋಟೆಗಳನ್ನೆಲ್ಲಾ ನೆಡಲಾರಂಭಿಸಿದೆ.(ಒಂದು ಕಾಲದಲ್ಲಿ, ಅದು ಇದು ಎಲ್ಲಾ ಸೇರಿಸಿ, ೪೦ ಮಾವಿನ ಸಸಿಗಳನ್ನು ಬೆಳೆಸಿದ್ದೆ! ). ಗಿಡ ಬೆಳೆಸುವುದೇ ಒಂದು ಕುತೂಹಲವಾಗಿ, ಮಾವಿನ ವೋಟೆಗಳೇ ಏಕೆ, ಸಿಕ್ಕ ಸಿಕ್ಕ ಬೀಜಗಳನ್ನೆಲ್ಲಾ ಮಣ್ಣಿನಲ್ಲಿ ಹೂತಿಡಲಾರಂಭಿಸಿದೆ. ಹಾಗೆ ನೆಟ್ಟ ಹಲಸಿನ ಗಿಡಗಳಲ್ಲಿ, ಇಂದು ಎರಡು ಮರಗಳಗಿ ಉಳಿದಿವೆ. ಮಾವಿನ ಗಿಡಗಳಲ್ಲಿ, ಮೂರು ಉಳಿದಿವೆ.
 
ಸ್ವಲ್ಪ ದೊಡ್ದವನಾದಮೇಲೆ(೫ನೆಯೆ ತರಗತಿ ಇದ್ದಿರಬಹುದು), ಒಂದು ದಿನ, ಅಮ್ಮ ಸೀಮೆ ಬದನೆಕಾಯಿ ಹೆಚ್ಚುತ್ತಿದ್ದಳು. ಒಂದರಲ್ಲಿ, ತಿಟಿಗಳ ನಡುವೆ ಸ್ವಲ್ಪ ಹೊರಚಾಚಿರುವ ನಾಲಿಗೆಯಂತೆ, ಸೀಮೆ ಬದನೆಕಾಯಿಯ ಬುಡದಿಂದ ಬೀಜ ಹೊರಬಂದಿತ್ತು. ಇಡೀ ಕಾಯಿಯನ್ನು ಮಣ್ಣಿನಲ್ಲಿ ಹೂತಿಟ್ಟೆ. ಬಳ್ಳಿ ಬೆಳೆದು, ಮನೆಯ ತಾರಸಿನವರೆಗೆ ಬಂದ ಮೇಲೆ, ಕಾಯಿಗಳನ್ನು ನೀಡಲಾರಂಭಿಸಿತು. ನಾನು ನೆಟ್ಟ ಗಿಡಗಳಲ್ಲಿ, ಅಂದಿನವರೆಗೆ, ಫಲ ನೀಡಿದ ಏಕೈಕ ಬಳ್ಳಿ ಅದು.  
 
ನಾನು P.U.C ಓದುತ್ತಿದ್ದಾಗ, ಹಲಸಿನ ಮರದಲ್ಲಿ ಚಿಕ್ಕ ಚಿಕ್ಕ ಕಾಯಿಗಳು ಕಾಣಿಸಿದವು. ಆದರೆ, ಅವೆಲ್ಲಾ, ದೊಡ್ಡದಾಗುವ ಮೊದಲೇ ಒಣಗಿ ಉದುರಿ ಹೋದವು. ಮೊದಲನೆಯ ಹಣ್ಣಾಗಿದ್ದು, ನಾನು P.U.C ಮುಗಿಸಿ, ಕಾನ್ಪುರಕ್ಕೆ ಬಂದಮೇಲೆಯೇ. ಈಗ ಎರಡು ವರ್ಷಗಳಿಂದ ವರ್ಷಕ್ಕೆ ೧೦-೧೨ ಹಣ್ಣುಗಳಾಗುತ್ತಿದೆ. ಆದರೆ, ನನ್ನ ದುರದೃಷ್ಟ, ಮೂರು ವರ್ಷಗಳಿಂದ ನಾನು ಮನೆಯಲ್ಲಿಲ್ಲ. ಹೋಳಿ ಹಬ್ಬಕ್ಕೆಂದು ಈಗ ಒಂದು ವಾರಕ್ಕೆ ಮನೆಗೆ ಬಂದಾಗ, ಒಂದು ದೊಡ್ಡ ಹಣ್ಣಾಗಿ, ನಾನೇ ಕೊಯ್ದು ತಿನ್ನುವಂತಾಯಿತು(ಅದಕ್ಕಿಂತಲೂ ಹೆಚ್ಚಾಗಿ, ನನ್ನನ್ನು ಏ ಲೇಖನ ಬರೆಯುವಂತೆ ಪ್ರೇರೇಪಿಸಿತು!). ಈಗ, ಮಾವಿನ ಗಿಡಗಳೂ ತಕ್ಕ ಮಟ್ಟಿಗೆ ಬೆಳೆದು, ಚಿಕ್ಕ ಚಿಕ್ಕ ಕಾಯಿಗಳಾಗಿವೆ. ಕೆಲವು ದೊಡ್ಡ ಕಾಯಿಗಳೂ ಆಗಿವೆ. ಅವುಗಳು ಹಣ್ಣಾಗಲು ದಾರಿಹೋಕರು ಬಿಡುವುದಿಲ್ಲ ಎಂದು, ಕಾಯಿಗಳನ್ನೇ ಕಿತ್ತಿಟ್ಟೆ.  
 
ಈಗ ನಾನು ಮನೆಯಲ್ಲಿರುವುದೇ ಅಪರೂಪ; ಹಾಗಾಗಿ, ಮಣ್ಣಿನ ಬಳಿ ಹೋಗುವುದೂ ಅಪರೂಪ. ಈಗ, ನನ್ನ ಹಲಸು ಮತ್ತು ಮಾವಿನ ಪ್ರೇಮ ಕೇವಲ ತಿನ್ನಲು ಮಾತ್ರಾ! :D