ಆಪತ್ಬಾಂಧವ

ಆಪತ್ಬಾಂಧವ

ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸಿ ಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ. ನಾನು ಹೋದ ಎರಡು ದಿನಕ್ಕೆ ಅತ್ತೆಯವರು ಚೇತರಿಸಿಕೊಂಡರು. ಚಿಕ್ಕ ಮಕ್ಕಳನ್ನು ಬಿಟ್ಟುಬಂದದ್ದರಿಂದ ಊರಿಗೆ ಹಿಂತಿರುಗಲು ಮನಸ್ಸು ಚಡಪಡಿಸುತ್ತಿತ್ತು. ಮತ್ತೆ ನಾಲ್ಕು ದಿನಗಳ ನಂತರ ಊರಿಗೆ ಹೊರಟುಬಿಟ್ಟೆ. ನನ್ನ ಮೈದುನ ಸಾಗರದ ತನಕ ಬಂದು ಮಂಗಳೂರು ಬಸ್ಸಿನಲ್ಲಿ ಕೂಡಿಸಿ ಹೋದ. ಸಾಗರದಿಂದ ಸುಮಾರು ೪೦ ಮೈಲಿ ದೂರ ಬಂದಿರಬಹುದಷ್ಟೇ. ಅಷ್ಟರಲ್ಲಿ, ಉಡುಪಿ ಕಡೆಯಿಂದ ಬರುತ್ತಿದ್ದ ಬಸ್ಸಿನವರು ನಮ್ಮ ಬಸ್ಸುಗಳನ್ನು ತಡೆದು ನಿಲ್ಲಿಸಿ "ಮುಂದೆ ಹೋಗಬೇಡಿ. ಎಲ್ಲಾ ಕಡೆಯೂ ಕಲ್ಲು ತೂರಾಟ, ಬೆಂಕಿ ಹಚ್ಚುವುದು ನಡೆದಿದೆಯಾದ್ದರಿಂದ ಕರ್ಫ್ಯೂ ವಿದಿಸಿದ್ದಾರೆ. ಮುಂದೆ ಹೋಗಬೇಡಿ" ಎಂದು ಎಚ್ಚರಿಸಿದ್ದರಿಂದ ನಮ್ಮ ಬಸ್ ಅಲ್ಲಿಯೇ ನಿಂತುಬಿಟ್ಟಿತು. ಕೆಲವರು ಗಲಾಟೆ ಮಾಡಿ ಹಿಂತಿರುಗಿದರೆ ಇನ್ನೂ ಕೆಲವರು ಲಾರಿಗಳಲ್ಲಿ ಹೊರಟು ಹೋದರು. ಕೊನೆಗೆ ನಾನು ಮತ್ತು ಒಬ್ಬ ಮುದುಕಿ ಮಾತ್ರ ಉಳಿದುಕೊಂಡೆವು.


 


ನಾವು ಇಳಿದಿದ್ದ ಜಾಗ ಕಾಡಿನ ದಾರಿ. ನಿರ್ಜನ ಪ್ರದೇಶ. ಅಷ್ಟರಲ್ಲಿ ಕತ್ತಲಾವರಿಸಲಾರಂಭಿಸಿತು. ಇನ್ನು ನಮ್ಮಿಬ್ಬರ ಕಥೆ ಮುಗಿದಂತೆಯೇ ಎಂದುಕೊಂಡೆ. ಆ ಹೊತ್ತಿಗೆ ಒಂದು ವಾಹನದ ದೀಪಗಳು ಕಾಣಲಾರಂಭಿಸಿದುವು. ನಾನು ಧೈರ್ಯ ತೆಗೆದುಕೊಂಡು, ಎರಡೂ ಕೈಗಳನ್ನು ಮೇಲೆತ್ತಿ ವಾಹನದ ಎದುರಿಗೆ ನಿಂತೆ. ವಾಹನದ ಚಾಲಕ ವಾಹನ ನಿಲ್ಲಿಸಿ,


ಕೆಳಗಿಳಿದು ಬಂದು ಏನು ಸಮಾಚಾರ ಎಂದು ಕೇಳಿದ. ನಾನು ನಮ್ಮ ಪರಿಸ್ಥಿತಿಯನ್ನು ವಿವರಿಸಿ ಹೇಳಿದೆ. ಅದನ್ನು ಕೇಳಿದ ಮೇಲೆ, "ಸಾರಿ ಮೇಡಮ್, ನಾನು ಈಗ ಸೀದಾ ಸುರತ್ಕಲ್ಲಿಗೆ ಹೋಗುತ್ತಿಲ್ಲ. ಹಳ್ಳಿಹಳ್ಳಿಗೂ ಹೋಗಿ, ಬೀಡಿ ಕಟ್ಟುಗಳನ್ನು ಕೊಟ್ಟು ರಾತ್ರಿ ಹನ್ನೆರಡು ಹನ್ನೆರಡೂವರೆ ಹೊತ್ತಿಗೆ ನಮ್ಮ ಅಕ್ಕನ ಮನೆಗೆ ಹೋಗುತ್ತೇನೆ. ಪುನಃ ಬೆಳಿಗ್ಗೆ ಎದ್ದು ಅಲ್ಲಿಂದ ಹೊರಡುತ್ತೇನೆ" ಎಂದ. ಏನೇ ಆಗಲಿ, ನೀವು ಎಲ್ಲಿಗೆ ಹೋದರೂ ನಿಮ್ಮ ಜೊತೆ ಬರುತ್ತೇನೆ. ದಯಮಾಡಿ, ನನ್ನನ್ನು ಇಲ್ಲಿಯೇ ಬಿಟ್ಟು ಹೋಗಬೇಡಿ" ಎಂದು ಕೈಮುಗಿದು ಕೇಳಿಕೊಂಡೆ.ಸರಿ ಹಾಗಿದ್ರೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಿ" ಎಂದ.


"ನೋಡಿ, ನಾನೂ ಹೊರಟುಹೋದರೆ, ಈ ಅಜ್ಜಿ ಒಬ್ಬರೇ ಆಗುತ್ತಾರೆ. ಅವರೂ ನಮ್ಮೊಂದಿಗೆ ಬರಬಹುದಾದರೆ ನಾವು ಗಾಡಿ ಹತ್ತುತ್ತೀವಿ" ಎಂದೆ.


ಅವನು ಅದಕ್ಕೆ ಒಪ್ಪಿಕೊಂಡು ನಮ್ಮಿಬ್ಬರನ್ನೂ ಹತ್ತಿಸಿಕೊಂಡ. ನನಗೆ ಗಾಡಿಯಲ್ಲಿ ಕುಳಿತ ನಂತರ ಹೆದರಿಕೆ ಶುರುವಾಯಿತು. ನನಗಿನ್ನೂ ಆಗ ೩೦ ವರ್ಷ. ಮೈತುಂಬಾ ಒಡವೆಗಳು ಬೇರೆ. ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಏನಪ್ಪಾ ಗತಿ, ದೇವರೇ ನೀನೇ ಕಾಪಾಡಬೇಕು ಎಂದು ದೇವರನ್ನು ನೆನೆದು ಧೈರ್ಯ ತಂದುಕೊಂಡೆ. ಮಧ್ಯರಾತ್ರಿ ಹೊತ್ತಿಗೆ, ಅವನ ಅಕ್ಕನ ಮನೆಯನ್ನು ತಲುಪಿದೆವು. ಅಲ್ಲಿ ಎರಡು ಮೂರು ಮನೆಗಳು ಮಾತ್ರ ಇದ್ದದ್ದು. ಆ ಚಿಕ್ಕ ಮನೆಯಲ್ಲಿ ಮಕ್ಕಳು ಮರಿ ತುಂಬಾ ಜನರಿದ್ದರು. ನಮ್ಮನ್ನು ಆದರದಿಂದ ಬರಮಾಡಿಕೊಂಡು, ತಿಂಡಿ, ಎಳನೀರು ಕೊಟ್ಟು, ಮಲಗಲು ಚಾಪೆ ಹಾಸಿ ಕೊಟ್ಟರು. ನಾವು ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದರು. ಸುರತ್ಕಲ್ಲಿನ ಕೆ.ಆರ್..ಸಿ ಕ್ಯಾಂಪಸ್ ಗೆ ಹೋಗಬೇಕು, ಅಲ್ಲಿ ನನ್ನವರು ಲೆಕ್ಚರರ್ ಆಗಿದ್ದಾರೆಂದು ನಾನು ಹೇಳಿದಾಗ,


", ಹೌದಾ, ಅಲ್ಲಿ ಉಪೇಂದ್ರ ಶೆಟ್ಟಿ ಅಂತ ಇದ್ದಾರೆ. ಅವರು ಗೊತ್ತುಂಟಾ ?" ಎಂದು ಕೇಳಿದರು.


"ಅವರೂ, ಅವರ ಮನೆಯವರೂ ನಮ್ಮ ಸ್ನೇಹಿತರು, ಅವರ ಇಬ್ಬರು ಮಕ್ಕಳು ನಮ್ಮ ಮಕ್ಕಳ ಶಾಲೆಯಲ್ಲಿಯೇ ಕಲಿಯುತ್ತಿದ್ದಾರೆ ಎಂದು ಹೇಳಿದಾಗ,


", ಹಾಗಾದ್ರೆ, ನೀವು ನಮ್ಮ ಜನವೇ, ಏನೂ ಸಂಕೋಚ ಮಾಡಿಕೊಳ್ಳಬೇಡಿ" ಎಂದು ಉಪಚಾರ ಮಾಡಿದರು.


 


ಬೆಳಿಗ್ಗೆ ಐದೂವರೆ ಗಂಟೆಗೆ ಎದ್ದು, ಮುಖ ತೊಳೆದು, ಕಾಫಿ ಕುಡಿದು, ಅಲ್ಲಿಂದ ಹೊರೆಟೆವು. ಅವರಿಗೆ ಧನ್ಯವಾದ ಹೇಳಿ ಕೈಮುಗಿದು ಬರುವಾಗ ನನ್ನ ಕೆಟ್ಟ ಆಲೋಚನೆಗಳಿಗೂ ಮತ್ತು ಅವರ ದೊಡ್ಡತನಕ್ಕೂ ತಾಳೆಹಾಕಿ, ನನ್ನ ಬಗ್ಗೆ ನನಗೇ ಅಸಹ್ಯವೆನಿಸಿತು. ಅವರು ನಮ್ಮ ಮನೆಯ ಹತ್ತಿರ ವಾಹನವನ್ನು ನಿಲ್ಲಿಸಿದಾಗ, ಅವರಿಗೆ ಕೊಡಲೆಂದು ಹಣಕ್ಕಾಗಿ


ಪರ್ಸಿಗೆ ಕೈಹಾಕಿದಾಗ, "ಹೀಗೆ ಮಾಡಿ ಮತ್ತೊಮ್ಮೆ ನಿನ್ನ ಸಣ್ಣತನ ತೋರಬೇಡ" ಎಂದು ನನ್ನ ಮನವೆಚ್ಚರಿಸಿತು. ಅವರನ್ನು ಬೀಳ್ಕೊಡುವಾಗ, ಅವರಿಗೆ ಕೈಮುಗಿದು, ಧನ್ಯವಾದ ಹೇಳಲು ಬಾಯಿ ತೆರೆದರೆ, ಬಾಯಿಂದ ಮಾತುಗಳೇ ಹೊರಡದೆ, ಕಣ್ಗಳಿಂದ ಕಣ್ಣೀರು ಧಾರಾಕಾರವಾಗಿ ಇಳಿಯಿತು.


**********


 


"


 


"


 


"


"


"


"