ಮಕ್ಕಳ ಮನೆ

ಮಕ್ಕಳ ಮನೆ

ಕವನ

ಕಿಟ್ಟು ಪುಟ್ಟು ಸೇರಿಕೊಂಡು

ಮನೆಯ ಕಟ್ಟ ಹೊರಟರು

ಗುಡ್ಡ ಬದಿಯ ಕೆಂಪು ಮಣ್ಣು

ಅಂಗಳಕ್ಕೆ ತಂದರು             [೧]

ಕಿಟ್ಟು ಮಣ್ಣು ಕಲಸಿ ಮೆತ್ತಿ

ಗೋಡೆಯನ್ನು ಕಟ್ಟಿದ

ಪುಟ್ಟು  ಹುಲ್ಲು ಸೊಪ್ಪು ಕಣೆಯ

ಹೆಣೆದು ಮಾಡು ಮಾಡಿದ      [೨]

ತಂಗಿ ನೋಡಿ ಹರುಷದಿಂದ

ಕೇಕೆ ಹಾಕಿ ಕುಣಿದಳು

ಬೊಂಬೆ ಇಟ್ಟು ಚಂದ ನೋಡ

ಬೇಕು ಎಂದುಕೊಂಡಳು        [೩]

ಬೊಂಬೆ ಇಡಲು ಆಗಲಿಲ್ಲ

ಸಣ್ಣದಿತ್ತು ಬಾಗಿಲು

ತಂಗಿಯನ್ನು ಸಂತವಿಸಲು

ಪುಟ್ಟು ಮಾಡನೆತ್ತಲು        [೪]

ಬೊಂಬೆಯನ್ನು ಇರಿಸುವಾಗ

ಗೋಡೆ ಬದಿಗೆ ತಗಲಿತು

ಒಂದೇ ಕ್ಷಣದಿ ಮನೆಯು ಕುಸಿದು

ಕಲೆಯು ಭಗ್ನವಾಯಿತು       [೫]

ದುಃಖಗೊಂಡ ಮಕ್ಕಳನ್ನು

ತಾಯಿ ಕರೆದು ನುಡಿದಳು

ಯೋಚಿಸದೆಯೇ ಕೆಲಸ ಮಾಡೆ

ಗೋಳು ತಪ್ಪದೆಂದಳು      [೬]

Comments