ನೆನಪುಗಳಿಗೇನು.... ಬರಕ್ಕೊಂದು ಕಾರಣ ಬೇಕಷ್ಟೇ....

ನೆನಪುಗಳಿಗೇನು.... ಬರಕ್ಕೊಂದು ಕಾರಣ ಬೇಕಷ್ಟೇ....

ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ  ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್‌ನೆಸ್.  ನನಗಂತೂ ಎಸ್‌ಎಸ್‌ಎಲ್‌ಸಿಗೆ ಬಂದ ಮೇಲೆ ಗೊತ್ತಾಗಿದ್ದು ಪರೀಕ್ಷೆ ಅಂದರೆ ಅಷ್ಟು ಮಹತ್ವದ್ದು ಅಂತ, ಅದೂ ಅಮ್ಮನ ರಗಳೆಯಿಂದ. ಆದರೂ ಅದರ ಪರಿಣಾಮ ಏನು ನನ್ನ ಓದಿನ ಮೇಲೇನು ಆಗಿರಲಿಲ್ಲ ಅನ್ನೋದು ಬೇರೆ ವಿಷಯ ಬಿಡಿ. ಪಾಪ ಅಮ್ಮ ಅವಳ ಮಗಳು ಮೊದಲ ಪ್ರಯತ್ನದಲ್ಲೇ ಪಾಸಾಗಲಿ ಅಂತ ಅದೇಷ್ಟು ಹರಕೆ ಹೊತ್ತಿದಲ್ಲೋ? ಸದ್ಯ ಫಲಿಸಿತ್ತು ಕೂಡ.. ಅವಳಿಗೆ ಭಯ ಇದ್ದಿರಬಹುದು ಎಲ್ಲಿ ನಾನು ಫೇಲ್ ಆದರೆ ಅವಳ ಉಳಿದ ಎರಡು ಮಕ್ಕಳು ನನ್ನ ದಾರಿನೇ ಹಿಡಿಬಹುದು ಅಂತ. ಹಿರಿಯಕ್ಕನ್ನ ಚಾಳಿಯ ... ಹಾಗೆ.  
      
ಇಷ್ಟೇಲ್ಲಾ ಯಾಕೆ ನೆನೆಪಾಯಿತು ಅಂದರೆ ನನ್ನ ಮಗಳ ಮೆಂಹದಿ ರಗಳೆಯಿಂದ, ಅವಳಿಗೆ ಪರೀಕ್ಷೆ, ಟೆಸ್ಟ್‌ ಅಂದರೆ ಏನೋ ದೊಡ್ಡ ವಿಷಯ,  ಅದು  ಮುಗಿದ ಮೇಲೆ ಪ್ರತಿ ಬಾರಿಯು ಅವಳ ಯಾವುದಾದರೂ ಡಿಮ್ಯಾಂಡ್‌ನ ನಾವು ತೀರಿಸಬೇಕು ಅನ್ನೋ ವಾಡಿಕೆ.  ಈ ಬಾರಿ  ಅದಕ್ಕೆ ಗುರಿಯಾಗಿದು ನಾನು.  ಪ್ರತಿ ಸಾರಿ ಮೆಹಂದಿ ಹಾಕು ಅಂತ ರಾಗ ತೆಗೆದರೆ, ನನಗೆ ಬರೋಲ್ಲ ಅನ್ನೊ ವಿಷಯನ್ನ ಬಿಟ್ಟುಕೊಡದೆ ಮೆಹಂದಿ ಕೋನ್ ಇಲ್ಲ ಅಂತ ತಪ್ಪಿಸಿಕೊಳ್ಳುತ್ತಿದೆ.  ನಿಜ ಹೇಳಬೇಕೆಂದರೆ ನನಗೆ ಪೆನ್ಸಿಲಲ್ಲೂ ಒಂದು ಹೂವಿನ ಚಿತ್ರ ಬರೆಯಕ್ಕೊ ಬರೊಲ್ಲ.  ಸ್ಕೂಲ್, ಕಾಲೇಜನಲ್ಲಿದಾಗ ಪ್ರತಿ ಸಾರಿ ಪರೀಕ್ಷೆಯಲ್ಲೂ  ಯಾವುದೋ ದೇಶದ ನಕ್ಷೆಗೆ ಇನ್ಯಾವುದೋ ರೂಪ ಕೊಟ್ಟಿರುತ್ತದೆ.  ಆದರೆ ಈ ಬಾರಿ ನನ್ನ ಮಗಳಿಂದ ತಪ್ಪಿಸಿಕೊಳ್ಳಕ್ಕೆ ನನಗೆ ಯಾವುದೇ ಅಪ್ಷನ್ ಇರಲಿಲ್ಲ.  ಅವಳ ಪ್ರೀತಿಯ ಚಿಕ್ಕಿ ಮೆಹಂದಿ ಕೋನ್ ಮೊದಲೇ ತಂದು ಕೊಟ್ಟಿದಳು.  ಆದರ ಮೇಲೆ ನನ್ನ ಮಗಳು ಚಿಕ್ಕಿ ಆದ್ರೆ ಎಷ್ಟು ಚೆನ್ನಾಗೆ ಚಿತ್ರ ಬರಿತ್ತಾಳೆ, ನನ್ನ ಕ್ಲಾಸಲ್ಲಿ ಎಲ್ಲಾರಿಗೂ ಅವರ ಅಮ್ಮ ಮೆಹಂದಿ ಎಷ್ಟು ಚೆನ್ನಾಗಿ ಹಾಕತ್ತಾರೆ ಗೋತ್ತಾ? ನೀನು ಮಾತ್ರ ಯಾವಾಗಲೂ ಹಾಕಲ್ಲ ಅಂತ ಕಂಪೇರ್ ಮಾಡಿದ ತಕ್ಷಣ ನನಗೆ ಆಗಲ್ಲ ಅಂದರೆ ಅವಳಿಗೆ ಬೇಜಾರಾಗುತ್ತೆ ಅನ್ನೊದಕ್ಕಿಂತ, ನಾನು ಅವರಿಗಿಂತ ಏನು ಕಡಿಮೆ ಇಲ್ಲ ಅನ್ನೋ ಇಗೋ ಇಂದ ಆಯಿತು ಅಂತ ಒಪ್ಪಿಕೊಂಡಿದೆ.  ಹೇಗಿದರೂ ಇನ್ನೂ ಒಂದು ವಾರ ಇದಿಯಲ್ಲಾ ಅಂತ.

ಅಂತೂ ಒಂದು ವಾರ ಕಳೆದೇ ಹೋಯಿತು, ನಿನ್ನೆ ಇಂದ ಒಂದೇ ಸಮ ಅದೇ ರಾಗ ಅದೇ ಹಾಡು, ನನ್ನ ಹಿಂದೆ ಮುಂದೆ ಓಡಾಟ ಅಮ್ಮ ಮೆಹಂದಿ ಹಾಕು, ಅಮ್ಮ ಮೆಹಂದಿ ಹಾಕು. ಗಳಿಗೆಗೊಮ್ಮೆ ಪ್ರಿಜ್ ತೆಗೆದು ಅದರಲ್ಲಿಟ್ಟ ಮೆಹಂದಿ ಕೋನ್‌ ಇದಿಯೋ ಇಲ್ಲವೋ ಅಂತ ಕನ್ಫರಂ ಬೇರೆ ಮಾಡಕೊಳ್ಳಿತ್ತಿದಳು. ನಾನು ನನ್ನ ಬುದ್ಧಿ ಎಲ್ಲಾ ಖರ್ಚು ಮಾಡಿ ಮೊದಲೇ ನಿಗದಿಯಾದ ಅವಳಿಗೆ ಮೆಹಂದಿ ಹಾಕುವ  ಪೋಗ್ರಾಂ ಅನ್ನು ನಾಳೆಗೆ (ಇವತ್ತಿಗೆ)  ಮುಂದೆ ಹಾಕಿದೆ. ಸರಿ ಆ ನಾಳೆನೂ ಬಂತು. ಇವತ್ತು ಬೆಳ್ಳಿಗೆ ಎದ್ದು ಎದ್ದೋಳೆ ಕೋನ್ ಹಿಡ್‌ಕೊಂಡು ನನ್ನ ಮುಂದೆ ಹಾಜಾರು.  ನನ್ನ ಕೆಲಸ ಮುಗಿದ ಮೇಲೆ ಹಾಕೋದು ಅಂತ ತೀರ್ಮಾನ ಆಯಿತು ಜೊತೆಗೆ ಪ್ರಾಮಿಸ್ ಕೂಡ.

 ಬಿಸಿಲಿನ  ಜೊತೆ ಜೊತೆಗೆ   ಇವಳ ರಗಳೆ ಕೂಡ  ಜಾಸ್ತಿಯಾಗುತ್ತ ಹೋಯಿತು. ಅಂತೂ ಮಧ್ಯಾಹ್ನಕ್ಕೆ ಎಲ್ಲಾ ಕೆಲಸ ಮುಗಿತು.  ಬೇತಾಳದ ಹಾಗೆ  ಕೋನ್‌ ಜೊತೆ ಹಾಜಾರು. ಅವಳಿಗೆ ಬಯ್ಯೋಕೊಂಡು, ಮನೆ ಮುಂದಿನ ಪೋರ್ಟಿಕೊದಲ್ಲಿ ಕುರುಸ್ಕೊಂಡು  ಅಂತಿಮವಾಗಿ ನನ್ನ  (ವಿ)ಚಿತ್ರ ಕಲೆಯನ್ನ ಶುರುಮಾಡದೆ.  ಹೊರಗೆ ಆಕಾಶದಲ್ಲಿ ಸಡನ್ನಾಗಿ ಸೂರ್ಯ ಮತ್ತು  ಮೋಡದ ಕಣ್ಣಾಮುಚ್ಚಾಲೆ ಆರಂಭ, ಎರಡೇ ನಿಮಿಷದಲ್ಲಿ ಹನಿ ಹನಿ ಮಳೆ. ಬೇಸಿಗೆಯ ಮೊದಲ ಮಳೆ.. ಮಣ್ಣಿನ ಸ್ಮೇಲ್, ಮದರಂಗಿಯ ಘಮ, ಇವುಗಳ ಜೊತೆಗೆ ಧೂಳಿನ ಮೇಲೆ ಒಂದೊಂದು ಹನಿ ಬಿದ್ದ ಹಾಗೂ  ನನ್ನ ನೆನಪು ಹಿಂದೆ ಹಿಂದೆ ಓಡಲು ತೊಡಗಿತು. ಮಳೆ ಮತ್ತು ನನ್ನ ನೆನಪು ಪಂದ್ಯಕ್ಕೆ ಇಳಿಯಿತು.

ಏಪ್ರಿಲ್-ಮೇ ತಿಂಗಳ ಬೇಸಿಗೆ ರಜ, ಇಡೀ ದಿನ ಬಿಸಿಲಿನಲ್ಲಿ ಕುಣಿತ ಮಧ್ಯಾಹ್ನದ ಮೇಲೆ ಬರುವ ಬೇಸಿಗೆಯ ಮಳೆಯಲ್ಲಿ ಒದ್ದೆ. ಅಬ್ಬಾ ಎಂತಹ ಸುಂದರವಾಗಿದ್ದವು ಆ ದಿನಗಳು. ಎಲ್ಲಾ ಮುಗಿದ ಮೇಲೆ ನಿರಿಯುಳಿಯುವ ಬಟ್ಟೆ, ಕೆಸರು ಕಾಲಲ್ಲಿ ಮನೆ ಒಳಗೆ ಹೋಗಿ,  ಕೆಂಪು ಕಾವಿಯ ನೆಲದ ಮೇಲೆ ಮೂಡಿಸುತ್ತಿದ್ದ ಮಣ್ಣಿನ ಹೆಜ್ಜೆಗಳು ಹಾಗೂ ಅಮ್ಮನ ಬೈಗುಳಗಳು... ಇವತ್ತು ಮಧ್ಯಾಹ್ನ ಮಳೆ ಬಂದು ಒದ್ದೆಯಾದ ಅಂಗಳದಷ್ಟೇ ಹಸಿಯಾಗಿದೆ ಮನಸ್ಸಲ್ಲಿ.

ನೆನಪುಗಳ ಮಾತು ಮಧುರ, ಆದರೆ ಅದಕ್ಕೆ ಆಡಚಣೆಯು ಅಷ್ಟೇ ಅಂತ ನನ್ನ ಭಾವನೆ.  ಮಳೆಯೊಂದಿಗೆ ಬಾಲ್ಯಕ್ಕೆ ತೇಲಿಹೋಗಿದ್ದ ನನಗೆ, ಮಗಳು ಇದು ಏನಮ್ಮ ..ಚೆನ್ನಾಗಿ ಬರೆಯಮ್ಮ ಅಂತ ಮತ್ತೆ ಎಚ್ಚರಿಸಿದ್ದಳು. ನನಗೆ ರೇಗಿ.. ಸುಮ್ಮನೆ ಕುತ್ಕೋ ಅಂತ ಗದರಿ, ಅವಳ ಕೈ ಎಳೆದು ಕೊಂಡು ನನ್ನ ಆರ್ಟ್ ಮುಂದುವರೆಸಿದೆ.  ಈ ಬಾರಿ ಮಳೆಯಿಂದ ಮೆಹಂದಿಯ ಕಡೆಗೆ ತಿರುಗಿತು ನನ್ ನೆನಪು. ಮೆಹಂದಿಯ ವಾಸನೆಯ ಜೊತೆಗೆ ನೆನಪಿನ ಸುರಳಿ ಬಿಚ್ಚ ತೊಡಗಿದೆ. ಸುವಾಸನೆಗೂ ನೆನಪಿಗೂ ತುಂಬಾ ನಂಟು ಅನ್ಸುತ್ತೆ. ಯಾವುದೋ ಪರಿಮಳ ಇನ್ಯಾವುದನ್ನೋ ನೆನಪಿಸುತ್ತೆ.

ಮದರಂಗಿ... ಎಷ್ಟು ಸಂಭ್ರಮ!! ಬೇಸಿಗೆ ರಜ ಬಂದರೆ ಸಾಕು ಎಲ್ಲಾ ಅಜ್ಜನ ಮನೆಯಲ್ಲಿ ಒಟ್ಟಾಗುತ್ತಿದ್ದೀವಿ. ಜೊತೆಗೆ  ಎಲ್ಲರ ಅಪ್ಪ-ಅಮ್ಮದಿಂದರೂ ಸಹ. ಅವಾಗ ಈಗಿನಷ್ಟೂ ಕೆಲಸ ಇರಲಿಲ್ಲವೋ ಏನು ಕಥೆನೋ? ಮದರಂಗಿ ಹಚ್ಚಿಕೊಳ್ಳುವುದು ಅಂದರೆ ಒಂದು ದಿನವೀಡಿಯ ಕಾರ್ಯಕ್ರಮ ನಮಗೆ. ಹಿತ್ತಲಕಡೆ ಇದ್ದ ಮದರಂಗಿ ಗಿಡದ ಎಲೆಗಳನ್ನಷ್ಟೂ ಬರಬಿ ಬಾಚಿ ಬರಿದು ಮಾಡಿ ಬಿಡುತ್ತಿದ್ದೇವು. ಎಲೆ ಕ್ಯೂಯಲು ಒಬ್ಬರ ಕೈಯಲ್ಲಿ ಒಂದೊಂದು ಪಾತ್ರೆ. ಕಡಿಮೆ ಅಂದರೂ ಒಂಬತ್ತು-ಹತ್ತು ಮಕ್ಕಳು. ಅಡಿಗೆ ಮನೆಯು (ಪಾತ್ರೆ) ಖಾಲಿ, ಗಿಡವೂ ಖಾಲಿ.  ನಂತರ ಅದನ್ನು ಅರೆಯುವ ಕೆಲಸ. ಹಳೆ ಅಡಿಗೆ ಮನೆಯಲ್ಲಿದ್ದ (ವಿಶೇಷಗಳಿಗಾಗಿ ಸೀಮಿತವಾಗಿದ್ದ) ತಿರುವೆಕಲ್ಲಿನ ಮುಂದೆ ನಮ್ಮ ಜಾಂಡ. ಮದರಂಗಿ ಕೆಂಪಾಗಲು ಏನು ಏನು ಹಾಕ ಬೇಕು ಅಂತ ಒಬ್ಬರು ಒಬ್ಬರ ಹತ್ತಿರನ್ನೂ ವಿಚಾರಣೆ ಮಾಡಿ, ಎಲೆ, ಸುಣ್ಣ, ಹುಣಿಸೆ ಹಣ್ಣು, ಲಿಂಬೆ ಹಣ್ಣು ಹೀಗೆ ಮಣ್ಣು-ಮಸಿ ಎಲ್ಲಾ ಹಾಕಿ ನುಣ್ಣಗೆ ಅರೆದು ಒಂದು ಪಾತ್ರೆಯಲ್ಲಿ ಹಾಕಿ ಅದರ ಮುಂದೆ ಕುಳಿತು ಬಿಡುತ್ತಿದ್ದೀವಿ. ರಾತ್ರಿ ಊಟ ಮಾಡಿ ಹಾಸಿಗೆ ಎಲ್ಲಾ ಹಾಸಿದ ನಂತರ  ದೊಡ್ಡವರಿಗೆ ನಮಗೆ ಮದರಂಗಿ ಹಚ್ಚುವ ಕೆಲಸ. ಅಲ್ಲಿವರೆಗೆ ನಾವು ಅಲ್ಲಿ ಇಲ್ಲಿ ಹುಡುಕಿ ಕಷ್ಟ ಪಟ್ಟು ಎರಡೆರಡು ಪ್ಲಾಸ್ಟಿಕ್ ಕವರ್‌ಗಳನ್ನು ಒಟ್ಟು ಹಾಕಬೇಕಾದರೆ ಸಾಕಾಗುತ್ತಿತ್ತು.  ಈಗಿನಷ್ಟೂ ಧಾರಾಳವಾಗಿ ಕವರ್‌ಗಳು ಆಗ ಮನೆಯಲ್ಲಿ ಎಲ್ಲಿ ಸಿಗುತ್ತಿದ್ದವು?!  ದೊಡ್ದಮ್ಮ, ಹಿರಿಯಮ್ಮ, ಚಿಕ್ಕಿ, ಅಮ್ಮ, ಅಕ್ಕ (ಅತ್ತೆಯಂದಿರು) ಇವರೆಲ್ಲಾ  ಅಡಿಗೆಮನೆ ಕೆಲಸ ಮುಗಿಸಿ  ಬಾವಿಕಟ್ಟೆಗೆ ಬರೋ ಹೊತ್ತಿಗೆ ನಮಗೆ ಅರ್ಧ ಕಣ್ಣು ಮುಚ್ಚಿರುತ್ತಿತ್ತು. ಆದ್ರೂ ಕಷ್ಟಪಟ್ಟು  ಎಲ್ಲಾ ಕಾಯುತ್ತಿರುತ್ತಿದ್ದೇವು. ಒಬ್ಬೊಬ್ಬರಿಗೆ ಒಂದು ಕೆಲಸ, ಒಬ್ಬರು ಅಲ್ಲೇ ಇದ್ದ ಬಚ್ಚಲು ಒಲೆಯ ಕೆಂಡದಿಂದ ಬಾಳೆ ಕಾಯಿಸಿ ಕೊಟ್ಟರೆ, ಇನ್ನೊಬ್ಬರು ಅದನ್ನು ಮದರಂಗಿ ಹರಡದ ಹಾಗೆ ಮೇಲಿಟ್ಟು ಬಾಳೆ ದಾರದಿಂದ ಕಟ್ಟಿ ಅದರ ಮೇಲೆ ಇಡಿ ಹಸ್ತಕ್ಕೆ ಕವರ್ ತೊಡಿಸುತ್ತಿದರು. ಇನ್ನೂ ಮದರಂಗಿ ಡಿಸೈನ್ ಎಲ್ಲರಿಗೂ ಕಾಮನ್. ಕೈ ಉಗುರುಗಳಿಗೆ ಟೋಪಿ, ಹಸ್ತಕ್ಕೆ ಮಧ್ಯ ಒಂದು ಚುಕ್ಕಿ, ಅದರ ಸುತ್ತ ಐದೋ ಆರೋ ಚುಕ್ಕಿಗಳು. ವಯಸ್ಸಿಗೆ ಅನುಗುಣವಾಗಿ ಚುಕ್ಕಿಗಳ ಸೈಜ್ ಮತ್ತು ಸಂಖ್ಯೆಯಲ್ಲಿ ವ್ಯತ್ಯಾಸ ಅಷ್ಟೇ. ಕೊನೆಗೆ  ಉಳಿದ ಮದರಂಗಿಯನ್ನು  ಆಮ್ಮಂದಿರು ಮೆತ್ತಿ ಕೊಳ್ಳುತ್ತಿದರು.  ಆಗೆಲ್ಲಾ ಮದರಂಗಿ ಹಚ್ಚಿ ಕೊಳ್ಳುವುದು ಎಂದರೆ ಸಂಜೆಯಿಂದ ರಾತ್ರಿವರೆಗೆ ಸಂಭ್ರಮ. ಮನೆಯಂದಿಯೆಲ್ಲಾ ಅದರರಲ್ಲಿ ಭಾಗಿ.

ಇವತ್ತು ಬೆಳ್ಳಿಗೆ ಇನ್ನೂ ಫೇಸ್ ಬುಕ್‌ಲ್ಲಿ ಯಾರದ್ದೋ ಕಾಮೆಂಟ್ ಓದಿದ ನೆನಪು " ನೆನಪುಗಳಿಗೇನು.... ಬರಕ್ಕೊಂದು ಕಾರಣ ಬೇಕಷ್ಟೆ" ಅಂತ. ಎಷ್ಟು ನಿಜ . ಮಗಳ ಎಕ್ಸಾಮ್, ಮೆಹಂದಿ ರಗಳೆ, ಮಳೆ ಹೀಗೆ......

 

 

(ನಿನ್ನೆ ಮಧ್ಯಾಹ್ನದ ಮೇಲೆ ಬಂದ ಮೊದಲ ಬೇಸಿಗೆ ಮಳೆಯ ನೆನಪಿನಲ್ಲಿ)
 

Rating
No votes yet