ಶನಿ ಗ್ರಹ ನೋಡಿ

ಶನಿ ಗ್ರಹ ನೋಡಿ


ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಶನಿ ಗ್ರಹವನ್ನು ನೋಡುವವರಿಗೆ ಸುಗ್ಗಿ ಕಾಲ. ಏಪ್ರಿಲ್ 3 2011 ರಂದು ಭೂಮಿ ಶನಿಯನ್ನು ಹಿಂದಿಕ್ಕಿ ಸಾಗುವುದರಿಂದ ಅಂದು ಶನಿ ಭೂಮಿಗೆ ಅತ್ಯಂತ ಹತ್ತಿರದಲ್ಲಿರುತ್ತದೆ. ಅಂದು ಶನಿ ಭೂಮಿಗೆ 1,288,620,485 ಕಿ.ಮೀ ದೂರದಲ್ಲಿರುತ್ತಾನೆ. ಇದು ಈ ವರ್ಷದ ಅತ್ಯಂತ ಹತ್ತಿರದ ದೂರ. ನಂತರ ಇವೆರಡರ ನಡುವಿನ ದೂರ ಹೆಚ್ಚುತ್ತಾ ಸಾಗುವುದರಿಂದ ಶನಿಯ ಪ್ರಕಾಶ ಕುಂದುತ್ತಾ ಸಾಗುತ್ತದೆ.

ಮುಂದಿನ ವರ್ಷ 2012 ರಲ್ಲಿ ಏಪ್ರಿಲ್ 15 ರಂದು ಮತ್ತೆ ಹತ್ತಿರವಾಗುತ್ತಾನೆ.

 

ಈ ವರ್ಷದ ಮಾರ್ಚ್ ಕೊನೆಯ ವಾರ ಮತ್ತು ಏಪ್ರಿಲ್ ಮೊದಲ ವಾರದಂದು ಶನಿಯ ಸೊಗಸಾದ ನೋಟವನ್ನು ಸವಿಯಬಹುದು. ನೀವು ಚಿತ್ರದಲ್ಲಿ ನೋಡುತ್ತಿರುವುದು ಬೆಂಗಳೂರಿನ ಆಕಾಶದಲ್ಲಿ ಶನಿ ಗ್ರಹ ಮತ್ತು ಅದರ ಅಕ್ಕಪಕ್ಕ ಕಾಣುವ 2 ಪ್ರಖರ ನಕ್ಷತ್ರಗಳು. ಇತ್ತೀಚಿನ ದಿನಗಳಲ್ಲಿ ಸುಮಾರು 7:30 ಕ್ಕೆ ಇದು ಪೂರ್ವದಲ್ಲಿ ಹುಟ್ಟಿ ಸುಮಾರು ಬೆಳಗಿನ ಜಾವ 5:30 ಕ್ಕೆ ಮುಳುಗುತ್ತದೆ. ಶನಿ ಗ್ರಹದಿಂದ ಕೆಳಗೆ ಸ್ವಲ್ಪ ಬಲಭಾಗದಲ್ಲಿ ಸ್ಪೈಕ ಎಂಬ ನಕ್ಷತ್ರವನ್ನು ನೋಡಬಹುದು. ಈ ನಕ್ಷತ್ರದಿಂದ ಎಡಕ್ಕೆ ಸುಮಾರು ದೂರ ನೇರವಾಗಿ ದೃಷ್ಟಿ ಹಾಯಿಸಿದರೆ ಸ್ವಾತಿ(Arcturus) ನಕ್ಷತ್ರವನ್ನು ನೋಡಬಹುದು.

 

ಇದು ರಾತ್ರಿ ಹತ್ತು ಗಂಟೆಗೆ ಪೂರ್ವ ದಿಕ್ಕಿನಲ್ಲಿ ಕಾಣಿಸಿದ ಶನಿಯ ನಕ್ಷೆ

Saturn's image

 

ಬೆಳಗಿನ ಜಾವ ಶನಿ ಮುಳುಗುವುದಕ್ಕಿಂತ ಮುನ್ನ ಆಕಾಶದ ನಕ್ಷೆ ಈ ರೀತಿ ಇರುತ್ತದೆ.

Saturn setting

ಮುಳುಗುವಾಗ ಶನಿ ಮೊದಲು ಮುಳುಗಿ ನಂತರ ಸ್ಪಿಕ, ನಂತರ ಸ್ವಾತಿ ನಕ್ಷತ್ರ ಮುಳುಗುವುದನ್ನು ಗಮನಿಸಿ.

  

ನಿಮ್ಮ ಬಳಿ ಆಕಾಶ ನೋಡುವ ದೂರದರ್ಶಕವೇನಾದರೂ ಇದ್ದರೆ ಶನಿಯ ಬಳೆಗಳನ್ನು ನೋಡಬಹುದು. ಅದು ನಿಮಗೆ ಈ ರೀತಿ ಕಾಣುತ್ತದೆ. ಶನಿಯ ಬಳೆಗಳನ್ನು ಒಂದು ಸಾಮಾನ್ಯ ದೂರದರ್ಶಕದಿಂದ ನೋಡಲು ಸಾಧ್ಯ.

saturn rings

 

ಸೂಚನೆ: ನಕ್ಷೆಗಳನ್ನು ಸ್ಟೆಲ್ಲೇರಿಯಂ ಎನ್ನುವ ತಂತ್ರಾಂಶದಿಂದ ಪಡೆಯಲಾಗಿದೆ. ಇದು ಉಚಿತ ತಂತ್ರಾಂಶವಾಗಿದ್ದು ಚಿತ್ರಗಳನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ನಕ್ಷೆ ಬೆಂಗಳೂರಿನ ಅಕ್ಷಾಂಶ ರೇಖಾಂಶಗಳಿಗೆ ಹೊಂದಿಸಿ ತೆಗೆಯಲಾಗಿದೆ.