ಮೂರು ಮತ್ತೊಂದು ಚುಟುಕು ಕಥೆಗಳು

ಮೂರು ಮತ್ತೊಂದು ಚುಟುಕು ಕಥೆಗಳು

 

ಮೂರು ಮತ್ತೊಂದು ಚುಟುಕು ಕಥೆಗಳು:

 

ತಪ್ಪು:

ಮುಂದಾನೊಂದು ಕಾಲದಲ್ಲಿ, ತಪ್ಪು ಮಾಡಿದ್ದವರೆಲ್ಲ ಸತ್ತಿರಲು, ಯಾವ ತಪ್ಪೂ ಮಾಡದ ಒಬ್ಬ ಮಾತ್ರ ಉಳಿದುಕೊಂಡ ... ಜೋರಾಗಿ ಸೀನಿದವನಿಗೆ ’ಚಿರಂಜೀವಿ ಶತಾಯುಷಿ’ ಅನ್ನುವವರೇ ಗತಿ ಇರಲಿಲ್ಲ. ಹೊಟ್ಟೆಚುರುಗುಟ್ಟ ತೊಡಗಿ, ಮನೆಯಿಂದ ಹೊರಗೆ ಹೋದವನು, ಬೀದಿ ಬದಿಯ ಬೇಕರಿಯಲ್ಲಿ ತನಗಿಷ್ಟವಾದುದನ್ನು ತೆಗೆದುಕೊಂಡ. ನಿಜ, ಆದರೆ ಇವನಿಂದ ಹಣ ತೆಗೆದುಕೊಳ್ಳಲು ಯಾರೂ ಇರಲಿಲ್ಲ, ಹಾಗಾಗಿ ಹಾಗೆಯೇ ನೆಡೆದ ... ಹಣ ಕೊಡದೆ ತಪ್ಪು ಮಾಡಿದ್ದ,  ವಿಧಿಯಿಲ್ಲದೇ... ಮರು ಕ್ಷಣದಲ್ಲೇ ಸತ್ತ.

 

---

ನಿರ್ಧಾರ:

ಆತ, ದಿನ ನಿತ್ಯದಂತೆ, ಇಂದೂ ಮನೆಯ ಒಳಗೆ ಕಾಲಿಟ್ಟೊಡನೆ ಮನಕೆ ಹಿಂಸೆ ಆವರಿಸಿತು. ನಿಸ್ಸಹಾಯಕತೆ, ಕಳವಳ, ಅನುಮಾನ, ದು:ಖ, ಜಗಳ ಹೀಗೆ. ಒಬ್ಬರು ವಿಚ್ಚೇದನದ ಮಾತನಾಡುತ್ತಿದ್ದರೆ, ಮತ್ತೊಬ್ಬರು ಯಾರನ್ನೋ ಮುಗಿಸಿ ಬಿಡುವ ಮಾತನ್ನಾಡುತ್ತಿದ್ದಾರೆ !! ಮನಸ್ಸಿಗೆ ತುಂಬಾ ಹಿಂಸೆಯಾಯಿತು. ಇದಕ್ಕೆಲ್ಲ ಒಂದೇ ಪರಿಹಾರವೆಂದು ನಿರ್ಧರಿಸಿದ ಅವನು, ಮನೆಯಿಂದ ಹಾಗೇ ಹೊರಬಂದು, ತಾನು ನಿರ್ಧಾರ ಮಾಡಿದ ಕೆಲಸ ಮಾಡಿ ಮುಗಿಸಿದ. ಮುಂದಿನ ಎರಡು ದಿನಗಳಲ್ಲಿ ಎಲ್ಲೆಡೆ ಶಾಂತಿ ನೆಲೆಸಿತು. ಕೇಬಲ್’ನವನಿಗೆ ಕರೆ ಮಾಡಿ, ಮೆಂಬರ್-ಶಿಪ್ ಕ್ಯಾನ್ಸಲ್ ಮಾಡಿದ ಮೇಲೆ ಧಾರಾವಾಹಿಗಳನ್ನು ನೋಡುವುದು ತಪ್ಪಿ, ಮನಕೆ ನೆಮ್ಮದಿ ದೊರೆಯಿತು.

 

-------

ಪ್ರಚಾರ:

ಮಾರುಕಟ್ಟೆಗೆ ಹೊಸದಾಗಿ ಮಾಸಪತ್ರಿಕೆ ಬಿಡುಗಡೆಯಾಯಿತು. ಕೆಲವರ ಖಾಸಗೀ ಜೀವನದ ಚಿತ್ರ ಸಹಿತ ಲೇಖನಗಳನ್ನು ಹೊಂದಿದ್ದ ಪತ್ರಿಕೆಯನ್ನು ಕೊಳ್ಳಲು ಅವನಿಗೆ ಸಂಕೋಚ ಅಡ್ಡ ಬಂದಿತು. ಯಾರಾದರೂ ಪರಿಚಿತರು ನೋಡಿದಲ್ಲಿ ಏನಂದುಕೊಂಡಾರು ಎಂಬ ಅಪರಾಧಿ ಪ್ರಜ್ಞ್ನೆ ಕಾಡಿತು. ಯಾರಿಗೂ ಅರಿಯದಂತೆ ಅಂತರ್ಜಾಲದಲ್ಲಿ ಪುಸ್ತಕ ಖರೀದಿಸಿದ. ಅಂತರ್ಜಾಲದಲ್ಲಿ ನವ ಮಾಸಪತ್ರಿಕೆಯ ಸಾವಿರದನೆಯ ಕಾಪಿಯನ್ನು ಪಡೆದ ಅವನಿಗೆ ಬಹುಮಾನ ಬಂದಿತ್ತು. ಕೇಳದೆಯೇ ಎಲ್ಲೆಡೆ ಬೇಡದ ಪ್ರಚಾರ ಸಿಕ್ಕಿತ್ತು !!

 

--------

ಹಸ್ತಾಂತರ:

ಮಗಳನು ಕಳಿಸಿಕೊಡಬೇಕಾದಾಗ ಹೆಣ್ಣಿನ ಅಪ್ಪ-ಅಮ್ಮ ಸಿಕ್ಕಾಪಟ್ಟೆ ಕಣ್ಣೀರು ಹಾಕುತ್ತಿದ್ದರು. "ಮಾವ, ಅಳದಿರಿ. ನಾನು ಚೆನ್ನಾಗಿ ನೋಡ್ಕೋತೀನಿ. ಯಾಕಿಷ್ಟು ದು:ಖ". ಮಾವ ನುಡಿದರು "ನಿನ್ನ ಮುಂದಿನ ಸ್ಥಿತಿ ಯೋಚಿಸಿ ನನಗೆ ದು:ಖ".... ಹತಾಶನಾದ ಹುಡುಗ "ಅತ್ತೇ, ನೀವೇಕೆ ಅಳುತ್ತಿದ್ದೀರಿ".... ಅತ್ತೆ "ಇದು ಕಣ್ಣೀರಲ್ಲಪ್ಪ ... ಆನಂದಭಾಷ್ಪ" ಎಂದರು. ತಮ್ಮ ಕೆಲಸವಾಯಿತೆಂದು ನಂತರ ಅವರಿಬ್ಬರೂ ಕಣ್ಣೀರು ನಿಲ್ಲಿಸಿದರು .... ನಂತರ .... ಹುಡುಗ ಶುರು ಹಚ್ಚಿಕೊಂಡ ...!

 

Comments