ಸೆಳವು

ಸೆಳವು

"ಕಣ್ಣುಗಳು ಕಾತರಿಸುತಿಹುದೇಕಿಂದು, ಸಂಜೆ ಸೂರ್ಯನ ಮುದ್ದಿಸಲು ಕಾದಂತೆ ಕಾರ್ಮುಗಿಲು, ತಹ ತಹಿಸುತಿಹುದೆನ್ನ ಕಂಗಳು, ಮನವು ಮೌನಗೀತೆಯ ಹಾಡಿಹುದು, ಪಾರಿವಾಳಗಳ ಜೋಡಿ ಸೊಬಗ ಕಂಡು, ಬೀಸುಗಾಳಿಯಿದು ಬಯಸಿಹುದು ಏನನ್ನು, ನನ್ನನ್ನೇ ಆವರಿಸಿ ಮನಸಿಗೆ ಮಂಪೆರಸಿ ? ಆಗೊಮ್ಮೆ ಈ ಗೊಮ್ಮೆ ಮುನಿಸಾಗುವುದೇಕಿಂತು,  ನನ್ನ ಕಾಡುತ್ತಿರುವ ನೆರಳು ನನ್ನದೋ ಅಥವಾ ನಿನ್ನದೋ ಎಂದು ? ಎದುರು ನೀ ಬಂದಾಗ ತಡಬಡಿಸುವುದುಂಟು ಈ ಗಷ್ಟೆ ಮಾತು ಮುಗಿದಿತ್ತಲ್ಲ ಎಂದು ಮತ್ತೆ ನೆನಪಾಗಿ ನಕ್ಕು ಸುಮ್ಮನಾಗುವೆನು ಅದು ನಿನ್ನ ನೆನಪುಗಳೆಂದು, ಕಾತರಿಸಿ ಕಾದಿಹೆನು ಗೆಳೆಯ ಮೊದಲ ಒಲವಿನೋಲೆಯೊಡನೆ ಸಂಜೆ ಸೂರ್ಯನಿಗಿಂತ ಕೆಂಪಾಗಿ, ಬೀಸುಗಾಳಿಗಿಂತ ತಂಪಾಗಿ,"

 ಮನದ ಮಾತಾಗಬೇಕಿದೆ, ಕಣ್ಣುಗಳ ಕಲೆಯ ಅರಿವಿಲ್ಲ ಗೆಳೆಯ, ಒಲವಾಗಿಹುದೇ ಎಂದು ಆಗೊಮ್ಮೆ ಈಗೊಮ್ಮೆ ಅನಿಸಿಸುವುದು,  ನೆನಪಾಗದೆ,  ನಿನಗೆ ನಾ ಮರೆತರು ಮರೆಯದಾಗಿದೆ ನನಗೆ, ಹೇಗೆ ಮರೆಯಲಿ ಗೆಳೆಯ ನಿನ್ನ ಒಲವಿನ ಪರಿಯ, ಗೆಳೆಯ ಅನ್ನಲೆ ಅಥವಾ ಇನಿಯ ಎನ್ನಲೆ ಈ ಎರಡಕ್ಕೂ ಮೀರಿದವ ನೀನು ಮಾತು ಮೌನಗಳ ಸಂಗಾತಿ ಎನೆಂದು ಕರೆಯಲಿ ನಿನ್ನ ನಾ ? ಅಂತರಂಗದ ಗೆಳೆಯ, ಅರೆ,  ನಾನು ಕವಿಯಾಗಿ ಬಿಟ್ಟೆ ಅದಕ್ಕೆ ಇರಬೇಕು ಪ್ರೀತಿಯಲ್ಲಿ ಬಿದ್ದವರೆಲ್ಲ ಕವಿಯಾಗುತ್ತಾರೆ ಅನ್ನೋದು. ನಾನು ಈಗ ಕವಿ.

 ನಿನ್ನ ಒಲವಿನ ಬಗೆಯೇ ಅಂತಹದು, ಇದು ಒಲವೇನಾ ಅಂದು  ತಿಳಿಯುವಷ್ಟರಲ್ಲಿ ಒಲವಾಗಿ ಬಿಟ್ಟಿದೆ ಅನ್ನೋದು ಗೊತ್ತಾಗುತ್ತಿದೆ. ಸದ್ದಿಲ್ಲದೆ ನನ್ನನ್ನ ಆವರಿಸಿ ಕೊಂಡವ ನೀನು, ನೀನು ತೋರಿಸೋ ಆ ಕಾಳಜಿ, ಅಭಿಮಾನ ನನ್ನೊಳಗೆ ಒಂದು ಪ್ರೇಮದ ಗೂಡನ್ನ ಕಟ್ಟಿದೆ, ಆ ಪ್ರೇಮದ ಗೂಡಿಗೆ ನಿನ್ನ ಆಹ್ವಾನ ಆಗಬೇಕಿದೆ ಕಣೋ ಗೆಳೆಯ,,,,,,,,,  ಬರುತ್ತೀಯಾ ?

 ನಿನ್ನ ಜೊತೆನೇ ಹಾಗೆ, ಹೊಸ ವಿಷಯಗಳ ಅನಾವರಣ, ಎಷ್ಟು ಮಾತಾಡಿದರು ಹೊತ್ತು ಹೋಗಿದ್ದೆ ಗೊತ್ತಾಗುತ್ತಿರಲ್ಲ, ನಿನ್ನೊಟ್ಟಿಗೆ ಎಷ್ಟು ನಡೆದರು ದಾರಿ ಸವೆದದ್ದೇ ತಿಳಿತಿರಲಿಲ್ಲ, ಮಾತಿನ ಮೆರಗೂ ಆ ಫ್ರೌಡತೆ, ಎಷ್ಟು ಹೇಳಿದರು ಮುಗಿಯೋದಿಲ್ಲ ನಿನ್ನ ಬಗ್ಗೆ, ಎಷ್ಟು ಕನಸು ಕಟ್ಟಿದ್ದೀನಿ ಗೊತ್ತಾ ಜೀವನ ಪೂರ್ತಿ ನಿನ್ನೊಟ್ಟಿಗೆ ಹೀಗೆ ಹೆಜ್ಜೆ ಹಾಕ ಬೇಕು, ನಮ್ಮ ಮಾತು ಎಂದು ಮುಗಿಯಲೇ ಬಾರದು, ಹೊಸ ಜೀವನದ ಬಗ್ಗೆ ನಮ್ಮದೇ ಆದ ಬಗೆ ಬಗೆ ಕಲ್ಪನೆಗಳನ್ನಾ ಈ ನದಿ ತೀರದಲ್ಲಿ ಅಡ್ಡಾಡುತ್ತಾ ಕಟ್ಟೋಣಾ ಅಂತ,.

 ಎಲ್ಲಾ ಬರಿ ಕನಸಾಗಿಯೇ ಉಳಿಯಿತಲ್ಲೊ, ನಿನ್ನ ಒಂದೇ ಒಂದು ಮಾತಿಂದ ,,,,,,,,,,,,,,  

" ಪ್ರೀತಿಯಿರದೆ ನೀಡಲು ಅದು ಆದೀತೆ ಕೊಡುಗೆ, ನೀಡಿದರು ಹಿಡಿಸ ಬಹುದೇ ಅದು ರುಚಿಯೇ ಇರದ ಅಡುಗೆ "

 ನನ್ನ ಯಾವ ಕನಸಿರಲಿ, ಒಂದೇ ಒಂದು ಪದವನ್ನು ಮುಂದೆ ಆಡೋಕ್ಕೆ ಮನಸ್ಸೇ ಬರಲಿಲ್ಲ ನನಗೆ, ನೀ ಕರೆದೆ ಹೋದೆ ನಾ ಹಿಂತುರುಗಿ ನೋಡಲಿಲ್ಲ,  ನನ್ನ ಪಕಾರ ಇನ್ನೇನು ಇರಲಿಲ್ಲ ನನಗೆ ನಿನಗೆ ಹೇಳೊಕ್ಕೆ, ಕೇಳೊಕ್ಕೆ ಅಷ್ಟು ಹಗುರಾಗಿ ನಮ್ಮ ಸ್ನೇಹನಾ ನೀನು ತಿಳಿದು ಕೊಂಡಿರುವೆ ಅಂತಾ ಗೊತ್ತಿರಲಿಲ್ಲ ನನಗೆ, ಇಷ್ಟು ವರ್ಷಗಳ ಸ್ನೇಹ ಅಷ್ಟು ಸುಲಭಾನಾ ?   ಚೆಂಗುಲಾಬಿಯ ಜೊತೆ ತಂದ ಮುಳ್ಳಂತಾಯಿತು ಕಣೋ, ಇರಬಹುದು ನೀ ನನಗಿಂತ ಹಿರಿಯ, ಆದರೆ ನನ್ನ ಸ್ನೇಹಿತ ಕಣೋ,,   

 ನಿಜ, ನೀನು ಹೇಳುತ್ತಿದ್ದ ಹಾಗೆ ನನಗೆ ಫ್ರೌಡತೆ ಕಡಿಮೆನೇ ಯಾಕೆಂದರೆ, ನನ್ನ ಪ್ರಕಾರ ನೀನೆ ನನ್ನ ಬದುಕು,  ನನ್ನ ಉಸಿರು, ನನ್ನ ಕನಸು , ನನ್ನ ಸೊಗಸು, ನನ್ನ ಜೀವ, ನನ್ನ ಭಾವ, ನನ್ನ ನೋವು, ನನ್ನ ನಲಿವು, ಎಲ್ಲಾ ಎಲ್ಲಾ ನೀನೆ ಆದರೆ ನಿನಗ್ಯಾಕೆ ಹಾಗನಿಸಲಿಲ್ಲ ಎಷ್ಟು ಸುಲಭನಾಗಿ ಹೇಳಿಬಿಟ್ಟೆ ಅಲ್ಲವಾ ನನ್ನ ಹಲವಾರು ಸ್ನೇಹಿತರಲ್ಲಿ ನೀನು ಒಬ್ಬಳು ಅಂತಾ, ನಾ ಹೇಗೆ ಅದನ್ನ ಅರಗಿಸಿ ಕೊಳ್ಳಲಿ? ಹೇಳು ?

 ತಪ್ಪು ನನ್ನದೇ ನಿಮ್ಮ ಕಾಳಜಿನ ನಾ ಪ್ರೀತಿ ಅಂದು ಕೊಂಡಿದ್ದು, ನೋಡಿ ಆಗಲೆ ನೀ ಅನ್ನೋ ಸಲಿಗೆ ಹೋಗಿ ನೀವು ಆಗೋಯ್ತು , ನಾ ನಿಮಗೆ ಹೇಳಬೇಕೆಂದಿದ್ದ ಸಾವಿರಾರು ನುಡಿ ಮುತ್ತುಗಳಲ್ಲಿ ಆಯ್ದ ನೂರನ್ನು ಪತ್ರ ಬರೆದು ನಿಮಗೆ ತಿಳಿಸೋಣ ಅಂದು ಕೊಂಡೆ ತಂದಿದ್ದ ನನ್ನ ಮೊದಲ ಒಲವಿನಾ ಓಲೆ, ಅದು ಸೇರೋದು ಕಸದ ಬುಟ್ಟಿನಾ ಅಂತ ಗೊತ್ತಾದ ಮೇಲೆ, ಹೇಗೆ ಕೊಡಲಿ ಅದನ್ನಾ ?

 ನಿಮಗಾಗಿ ಬರೆದಿದ್ದ ನೂರು ಪತ್ರಗಳಲ್ಲಿ ಒಂದನ್ನ ತಂದಿದ್ದೆ, ನನ್ನ ಜೀವನದಲ್ಲಿ ನೀವು ಒಬ್ಬರೇ ಆದರೆ ನಿಮ್ಮ ಜೀವನದಲ್ಲಿ ನನ್ನೊಂತೋರು ನೂರಾರು, ತಿಳಿದೋ ತಿಳಿದೇನೋ ಒಲವಾಗಿ ಬಿಟ್ಟಿದೆ ಮರೆಯೋದು ಕಷ್ಟ ಅದನ್ನ ತಪ್ಪು ಅಂತ ಮಾತ್ರ ಹೇಳೊಲ್ಲ, ಪ್ಲೀಸ್, ಇದು ನನ್ನ ಮೊದಲ ಪೀತಿ ಜೀವನದ ಕಡೆ ಉಸಿರಿನವರೆಗೂ ಉಳಿಸಿ ಕೊಳ್ಳುತ್ತೀನಿ. ಸಾಧ್ಯವಾದರೆ ಎಂದು ನಿಮ್ಮನ್ನ ನನ್ನ ಕಣ್ಣಮುಂದೆ ತರಬೇಡ ಅಂತ ಆ ದೇವರನ್ನ ಕೇಳುತ್ತೇನೆ, ಇಲ್ಲ ಅಂದರೇ ನಾ ಮತ್ತೆ ಸೋತು ಹೋಗುತ್ತೇನೆ, ಮತ್ತೆ ಆ ಒಲವಲ್ಲದ ಒಲವಿನಿ ಹುಚ್ಚು ಭ್ರಮೆಯಲ್ಲಿ ಬೀಳುತ್ತೀನಿ, ಬದುಕು ಇನ್ನೂ ಇದೆ ನೀವಿಲ್ಲದೆ ಕೂಡ, ಅಲ್ವಾ 

 ಮತ್ತೆ ಹೊಸ ಬದುಕನ್ನು ಕಟ್ಟುತ್ತೇನೆ ನಿಮ್ಮ ಹೊರತಾಗಿ ನನ್ನ ಮೊದಲ ಪೇಮದ ಸಲುವಾಗಿ, ಮನದ ಮೂಲೆಯಲ್ಲೆಲ್ಲೋ ಒಂದು ಪ್ರಶ್ನೆ ಹಾಗೆ ಉಳಿದಿದೆ, "ಒಲವೆಂದರೇ ಇಷ್ಟೇನಾ, ಒಮ್ಮೆ ಅದೇ ಬದುಕಾಗುತ್ತೆ, ಮತ್ತೊಮ್ಮೆ ಅದೇ ಕೊನೆಯಾಗುತ್ತೆ, ಮಗದೊಮ್ಮೆ ಹೊಸ ಬದುಕಿಗೆ ಅದೇ ನಾಂದಿಯಾಗುತ್ತೆ". ಕೊನೆಯಿಲ್ಲದ್ದೇ ನಾ ಪ್ರೀತಿ, ಪ್ರೀತಿಯ ವ್ಯಕ್ತಿ ದೂರಾದರು ಪ್ರೀತಿ ನಮ್ಮ ಕೈ ಬಿಡಲ್ಲ ನೆನಪಲ್ಲಾದರೂ ಸಹ ಸದಾ ಜೀವಂತ.

 

  ಬಹುಶ: ನಿನಗೆ ನನ್ನ ಅಗತ್ಯತೆ ಇಲ್ಲ ಅಂದುಕೊಳ್ಳುತ್ತೇನೆ.

 

   ತುಟಿಗಳಿಗೇನು ಸದಾ ನಗುತ್ತಿರುತ್ತವೆ, ನೋವುನುಂಗುವುದು ಮನದ ಕಲೆತಾನೆ. ಬತ್ತಿಹೋಗಿದೆ ಗೆಳೆಯ ಕಣ್ಣೇರು ಸಾಲ ಬೇಕಿದೆ ಕಂಬನಿ ಮನದ ಭಾರ ಇಳಿಯಬೇಕಿದೆ. ಕವಿಯಾಗಿದ್ದೇನಲ್ಲ ಪ್ರೀತಿಯಲಿ ಇನ್ನೊಂದು ಹೊಸ ವಿಷಯ ತಿಳಿಯಿತು ಕನಸಾದರು ಸರಿ, ಕಂಬನಿಯಾದರು ಸರಿ, ಸ್ವಂತದ್ದಾದರೂ ಸರಿ ಸಾಲವಾದರೂ ಸರಿ. ಕವಿಗೆ ವಿಷಯಬೇಕು ಬರೆಯೋಕ್ಕೆ ಒಲವಾದರೂ ಸರಿ, ವಿರಹವಾದರೂ ಸರಿ.  

 

"

ನಿನ್ನ ಪ್ರೀತಿಯ ಹುಚ್ಚು ಸೆಳವಿನಲಿ ಸಿಕ್ಕಿ ಏನಾದೆನೋ ಇನಿಯ ಏನಾದೆನೋ ? ಏನಾದೆನೋ ?
  ತೀರದಾಸೆಯ ಬೆಂಕಿ ಉರಿಯಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೋ "