ನಾವೇನು ತಿನ್ನಬಹುದು ?

ನಾವೇನು ತಿನ್ನಬಹುದು ?

Comments

ಬರಹ

"ನನ್ನ ತಲೆಯೊಂದನ್ನು ಬಿಟ್ಟು ಏನನ್ನಾದರೂ ತಿನ್ನಬಹುದು". ತನ್ನ ಕಾಯಿಲೆಗೆ ಪಾಲಿಸಬೇಕಾದ ಪಥ್ಯದ ವಿವರಗಳನ್ನು ಪರಿಪರಿಯಾಗಿ ಕೇಳಿ ಪೀಡಿಸುತ್ತಿದ್ದ ರೋಗಿಯೊಬ್ಬರಿಗೆ ತಾಳ್ಮೆ ಕಳೆದುಕೊಂಡ ವೈದ್ಯರೊಬ್ಬರು ಈ ರೀತಿ ಉತ್ತರವಿತ್ತಿದ್ದನ್ನು ನೀವು ಕೇಳಿರಬಹುದು. ನಾವು ( ರೋಗಿಗಳಲ್ಲದೇ ಆರೋಗ್ಯವಂತರೂ ಸೇರಿದಂತೆ)ಏನು ತಿನ್ನಬಹುದು ಎಂದು ವಸ್ತುನಿಷ್ಠವಾಗಿ ಯೋಚಿಸಿದಾಗೆ ದೊರೆಯುವ ಉತ್ತರೆವೇನಿರಬಹುದು ?. ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ, ಇನ್ನೊಂದು ಪ್ರಶ್ನೆಯನ್ನು ಹಾಕಿಕೊಳ್ಳೋಣ.

"ನಾವು ತಿನ್ನುವುದೇತಕೆ ?"

ಇದೆಂತಹ ಮೂರ್ಖ ಪ್ರಶ್ನೆ ಎಂದು ನೀವು ಭಾವಿಸಿದರೆ ಏನೂ ಆಶ್ಚರ್ಯವಿಲ್ಲ. ಅದರಲ್ಲಿಯೂ ವೃತ್ತಿನಿರತ ವೈದ್ಯನಾಗಿ, ವೈದ್ಯಕೀಯ ವಿದ್ಯಾರ್ಥಿ ಜೀವನದಲ್ಲಿ, ಮಾನವ ಶರೀರ ಕ್ರಿಯಾ ಶಾಸ್ತ್ರದ ಬಗ್ಗೆ ಮತ್ತು ಆರೋಗ್ಯವಿಜ್ಞಾನದ ಬಗ್ಗೆ ಸ್ವಲ್ಪ ತಿಳುವಳಿಕೆ ಪಡೆದಿರುವ ನಾನು ಈ ಪ್ರಶ್ನೆ ಕೇಳುವುದು ಮೂರ್ಖತನದ ಪರಮಾವಧಿ ಎನಿಸಬಹುದು. ಆದರೆ ಚಿಂತನೆಗೆ ಸಾಕಷ್ಟು ಮೇವು ಒದಗಿಸುವ ಸಾಮರ್ಥ್ಯ ಈ ಪ್ರಶ್ನೆಯಲ್ಲಿದೆ ಎಂದು ಮಾತ್ರ ಸದ್ಯಕ್ಕೆ ಹೇಳಬಲ್ಲೆ. ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಮತ್ತು ಗೋಮಾಂಸ ಭಕ್ಷಣೆಯ ಬಗ್ಗೆ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಗೋಮಾಂಸ ಭಕ್ಷಣೆ ಒಪ್ಪತಕ್ಕದ್ದೇ ಅಲ್ಲವೇ ಎನ್ನುವ ಬಗ್ಗೆ ಹೆಚ್ಚು ಲಕ್ಷ್ಯ ಕೊಡಲಾಗಿದೆ. ಈ ಸಂದರ್ಭದಲ್ಲಿ ನನ್ನ ಅನಿಸಿಕೆಗಳನ್ನು ಪರಿಶೀಲಿಸಿದಾಗ ಈ ಮೂಲಭೂತ ಪ್ರಶ್ನೆ ಎದುರಾಯಿತು.

ಮಾನವ ಶರೀರ ಸಸ್ಯಾಹಾರಕ್ಕೆ ಇಲ್ಲವೇ ಮಾಂಸಾಹಾರಕ್ಕೆ ತಕ್ಕಂತೆ ನಿರ್ಮಿತವಾಗಿದೆ ಎಂದು ಜೀವಶಾಸ್ತ್ರವೇನಾದರೂ ಖಚಿತವಾಗಿ ತಿಳಿಸಿದ್ದರೆ ಈ ಸಮಸ್ಯೆಯೇ ಉತ್ಪನ್ನವಾಗುತ್ತಿರಲಿಲ್ಲ. ಒಂದು ವೇಳೆ ಮಾನವ ಶರೀರ ಸಸ್ಯಾಹಾರಕ್ಕೆಂದೇ ರಚಿಸಲ್ಪಟ್ಟಿದೆ ಎಂದುದಾದಲ್ಲಿ, ಮಾಂಸಾಹಾರ ಸೇವನೆ ಅನುಚಿತವಾದದ್ದು ಎಂಬ ನಿರ್ಧಾರಕ್ಕೆ ಬಂದು ಗೋಮಾಂಸವೊಂದೇ ಅಲ್ಲದೇ ಯಾವುದೇ ಪ್ರಾಣಿಯ ಮಾಂಸ ಭಕ್ಷಣೆಯನ್ನೂ ಕಾನೂನು ರೀತ್ಯಾ ತಡೆಯಬಹುದಿತ್ತು. ಹಾಗಿಲ್ಲದೇ, ಮಾನವ ಶರೀರ ಮಾಂಸಾಹಾರ ಸೇವನೆಗೆ ತಕ್ಕುದಾಗಿಯೇ ರಚಿತವಾಗಿದೆ ಎಂದು ಕಂಡುಬಂದಿದ್ದರೂ ಯಾವ ದ್ವಂದ್ವವೂ ಇರುತ್ತಿರಲಿಲ್ಲ. ಮಾಂಸಾಹಾರವನ್ನು ಸೇವಿಸುವುದು ಅಥವಾ ಬಿಡುವುದನ್ನು ವೈಯುಕ್ತಿಕ ನಿರ್ಧಾರಕ್ಕೆ ಬಿಡಬಹುದಿತ್ತು.

ದುರದೃಷ್ಟವಶಾತ್ ಈ ಕುರಿತಂತೆ ಜೀವಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ. ಕಪಿಗಳಿಂದ ವಿಕಾಸವಾಗಿ ಮಾನವ ಕುಲ ಹೊರಹೊಮ್ಮಿರುವುದರಿಂದ ಮಾನವನೂ ಕೂಡ ಮೂಲತಃ ಸಸ್ಯಾಹಾರಿಯೇ ಎಂದೂ, ಮಾನವನ ದಂತ ರಚನೆ ಸಸ್ಯಾಹಾರಿಗಳಿಗೆ ಸೂಕ್ತವಾಗಿರುವುದರಿಂದ ಅದೂ ಕೂಡಾ ಇದೇ ಅಭಿಪ್ರಾಯವನ್ನು ಸಮರ್ಥಿಸುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮಾನವನ ಜೀರ್ಣಾಂಗ ವ್ಯವಸ್ಥೆ ಕೇವಲ ಸಸ್ಯಾಹಾರಕ್ಕೆ ಮಾತ್ರ ನಿರ್ಮಿತವಾಗಿದ್ದಲ್ಲಿ, ಮಾನವನಿಗೆ ಮಾಂಸವನ್ನು ಜೀರ್ಣಿಸುಕೊಳ್ಳುವುದು ಕಷ್ಟಕರವಾಗುತ್ತಿತ್ತಲ್ಲದೇ, ಆಹಾರದ ಅತಿ ಹೆಚ್ಚು ಭಾಗ ಮಾಂಸಾಹಾರವಾಗಿಯೇ ಇರುವ ಎಸ್ಕಿಮೋಗಳಂತಹವರು ಜೀವಿಸುವುದೇ ಸಾಧ್ಯವಾಗುತ್ತಿರಲಿಲ್ಲ ಎಂದು ವಾದಿಸಿದ್ದಾರೆ.

 

ಕೇವಲ ಭಾರತೀಯ ಸಂದರ್ಭದಲ್ಲಿ ಮಾತ್ರ ಈ ಸಮಸ್ಯೆಯನ್ನು ಪರಿಗಣಿಸಿದಲ್ಲಿ , ಮಾಂಸಾಹಾರ ಭಕ್ಷಣೆಯ ಬಗ್ಗೆ ಆಕ್ಷೇಪವೇನೂ ಕಂಡು ಬರುವುದಿಲ್ಲ. ವೇದಕಾಲದಿಂದಲೂ , ಮಾಂಸಾಹಾರ ಸೇವನೆ ನಮ್ಮಲ್ಲಿ ಪ್ರಚಲಿತವಾಗಿದೆ. ಆದರೆ, ಗೋಮಾಂಸ ಭಕ್ಷಣೆಯ ಬಗ್ಗೆ ಅಷ್ಟೇ ಕರಾರುವಾಕ್ಕಾಗಿ ಹೇಳಲಿಕ್ಕಾಗುವುದಿಲ್ಲ. ಇಲ್ಲಿಯೂ ಕೂಡಾ ಪಂಡಿತರಲ್ಲಿ ಭಿನ್ನಾಭಿಪ್ರಾಯವಿದೆ. ವೇದಕಾಲದಲ್ಲಿ ಗೋವನ್ನು ಅತ್ಯಂತ ಪವಿತ್ರವಾಗಿ ಕಾಣಲಾಗುತ್ತಿತ್ತು ಮತ್ತು ಅದರ ಹತ್ಯೆಯನ್ನು ಘೋರಪಾಪವೆಂದು ಬಗೆಯಲಾಗುತ್ತಿತ್ತು ಎಂದು ಕೆಲವು ಪಂಡಿತರು ಹೇಳಿದರೆ, ಇನ್ನೂ ಕೆಲವರು ಗೋಮಾಂಸ ಭಕ್ಷಣೆ ಆಗಲೂ ಇತ್ತು ಮತ್ತು ಪವಿತ್ರಕಾರ್ಯಗಳಲ್ಲಿಯೂ ಇದರ ಬಳಕೆಯಾಗುತ್ತಿತ್ತು ಎಂದು ಹೇಳಿದ್ದಾರೆ. ಹೀಗಾಗಿ, ಇಲ್ಲಿಯೂ ನಮಗೆ ಯಾವ ಪರಿಹಾರವೂ ಕಂಡುಬರುವುದಿಲ್ಲ.

 

ಹಾಗಾದರೆ ಇನ್ನಾವ ಬಗೆಯಲ್ಲಿ ಇದರೆ ಬಗ್ಗೆ ಚಿಂತಿಸಬಹುದು ?

 

ಈ ಸಮಸ್ಯೆಯನ್ನು ಇನ್ನೂ ಎರಡು ದೃಷ್ಟಿಕೋನಗಳಿಂದ ಪರಿಶೀಲಿಸಬಹುದು. ಮೊದಲನೆಯದಾಗಿ, ಇಡೀ ಜೀವಸಂಕುಲವನ್ನು ನಾವು ಸಸ್ಯ ಜೀವಿಗಳು ಮತ್ತು ಪ್ರಾಣಿಜೀವಿಗಳು ಎಂದು ವಿಂಗಡಿಸುತ್ತೇವಲ್ಲವೇ ? ಸಸ್ಯ ಜೀವಿಗಳಲ್ಲಿ, ಒಂದು ಸಸ್ಯ ಇನ್ನೊಂದು ಸಸ್ಯವನ್ನು ಭಕ್ಷಿಸುವಂತಹ ಉದಾಹರಣೆಗಳು ಕಂಡುಬರುವುದಿಲ್ಲ. ಕೆಲವು ಸಸ್ಯಗಳು ಬೇರೆ ಸಸ್ಯಗಳ ಮೇಲೆ ಪರಾವಲಂಬಿಗಳಾಗಿ ಜೀವಿಸುವುದು, ಇಲ್ಲವೇ ನಿರ್ಜೀವವಾಗಿ ಕೊಳೆಯುತ್ತಿರುವ ಇತರ ಸಸ್ಯಗಳನ್ನು ಗೊಬ್ಬರವಾಗಿ ಪಡೆದು ಬೆಳೆಯುವುದನ್ನು ಕಾಣಬಹುದು. ಕೆಲವು ಬಹು ಅಪರೂಪದ ಸಸ್ಯಗಳು ಚಿಕ್ಕಚಿಕ್ಕ ಕೀಟಗಳನ್ನು ಭಕ್ಷಿಸುವಂತಹ ಉದಾಹರಣೆಗಳೂ ಇವೆ. ಪ್ರಾಣಿಜೀವಿಗಳಲ್ಲಿ ಒಂದು ಪ್ರಾಣಿ ಇನ್ನೊಂದು ಪ್ರಾಣಿಜೀವಿಯನ್ನು ತನ್ನ ಸಹಜ ಆಹಾರವಾಗಿ ಭಕ್ಷಿಸುವುದು ಬಹಳೇ ಸಾಮಾನ್ಯವಾದ ಸಂಗತಿಯಾಗಿದೆ. ಈ ಒಂದು ಪ್ರಕೃತಿಸಹಜ ದೃಷ್ಟಿಯಿಂದ ನೋಡಿದಾಗ ಯಾವ ಜೀವಿ ಏನನ್ನು ಭಕ್ಷಿಸಿ ಜೀವಿಸಬೇಕು ಎಂಬ ಖಚಿತವಾದ ಪ್ರಾಕೃತಿಕ ನಿಯಮವೂ ಕಂಡುಬರುವುದಿಲ್ಲ.

 

ಅತೀ ವಸ್ತುನಿಷ್ಠವಾಗಿ, ನಿರ್ಭಾವುಕವಾಗಿ ನಮ್ಮ ಆಲೋಚನೆಗಳನ್ನು ಹರಿಯಬಿಟ್ಟಲ್ಲಿ ಕಾಣುವುದೇನು ?

ಪ್ರತಿಯೊಂದು ಜೀವಿಯೂ ಬಿಲಿಯಗಟ್ಟಲೆ ಜೀವಕೋಶಗಳಿಂದ ರಚಿಸಲ್ಪಟ್ಟಿರುವುದು ತಿಳಿದದ್ದೇ ಆಗಿದೆ. ಪ್ರತಿಯೊಂದು ಜೀವಕೋಶವೂ ಅನೇಕ ಸೂಕ್ಷ್ಮ ಉಪಾಂಗಗಳಿಂದ ರಚಿತವಾಗಿದೆ. ಈ ಸೂಕ್ಷ್ಮ ಉಪಾಂಗಗಳು ಪ್ರೋಟೀನ್, ಲಿಪಿಡ್ ಮತ್ತು ಕಾರ್ಬೋಹೈಡ್ರೇಟಗಳಂತಹ ಅತ್ಯಂತ ಸಂಕೀರ್ಣ ರಸಾಯನಿಕ ವಸ್ತುಗಳಿಮ್ದ ರಚಿಸಲ್ಪಟ್ಟಿವೆ ಮತ್ತು

ಈ ಸಂಕೀರ್ಣ ರಸಾಯನಿಕ ವಸ್ತುಗಳು ವಿವಿಧ ಮೂಲ ಧಾತುಗಳಿಂದ ಮತ್ತು ಪ್ರತಿ ಮೂಲ ಧಾತುವು ಎಲೆಕ್ಟ್ರಾನ್, ನ್ಯೂಟ್ರಾನ್ ಮತ್ತು ಪ್ರೋಟಾನ್ ನಂತಹ ಅನೇಕ ಸೂಕ್ಷ್ಮಾಣುಗಳಿಂದ ನಿರ್ಮಿತವಾಗಿವೆ. ಅರ್ಥಾತ್ ಪ್ರತಿಯೊಂದು ಜೀವಿಯೂ ಈ ಸೂಕ್ಷಾಣುಗಳು ಒಂದು ವಿಶಿಷ್ಥ ರೀತಿಯಲ್ಲಿ ಸಂಯೋಗಹೊಂದಿರುವಂತಹ ಸೂಕ್ಷ್ಮಾಣುಗಳ ಸಮೂಹವಾಗಿವೆ. ಅಂತೆಯೇ, ನಾವು ಆಹಾರವೆಂದು ಪರಿಗಣಿಸುವ ಪ್ರತಿಯೊಂದು ವಸ್ತುವೂ ಈ ಸೂಕ್ಷ್ಮಾಣುಗಳ ಸಮೂಹವಾಗಿವೆ. ಈ ಲಹರಿಯಲ್ಲಿ ಯೋಚಿಸುವಾಗ, ಯಾವುದೇ ಪ್ರಾಣಿಯ ಆಹಾರ ಸೇವನೆ, ಒಂದು ಸೂಕ್ಷ್ಮಾಣು ಸಮೂಹ ಇನ್ನೊಂದು ಸೂಕ್ಷ್ಮಾಣು ಸಮೂಹವನ್ನು ಅಂತರ್ಗತ ಮಾಡಿಕೊಳ್ಳುವ ಕ್ರಿಯೆಯಂತೆ ಕಾಣುತ್ತದೆ. ವೈಜ್ಞಾನಿಕ ದೃಷ್ಟಿಯಲ್ಲಿ ಈ ಸಮೂಹಗಳು ನಿರ್ಜೀವ ಕಣಗಳ ಆಗರಗಳಾಗಿವೆ. ಇಂತಹ ಒಂದು ನಿರ್ಜೀವ ಸೂಕ್ಷ್ಮಾಣುಗಳ ಸಮೂಹವು ಇನ್ನೊಂದು ಸಮೂಹವನ್ನು ಭಕ್ಷಿಸುವುದೇತಕೆ ? ಒಂದು ವೇಳೆ ಇಂತಹ ಸಮೂಹವೊಂದು ಕಾಲಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಇತರ ಸಮೂಹಗಳನ್ನು ಭಕ್ಷಣೆ ಮಾಡದೇ ಇದ್ದಲ್ಲಿ ಏನಾಗುತ್ತದೆ ? ಮೊದಲನೆಯದಾಗಿ, ಜೀವಿಯಲ್ಲಿ "ಹಸಿವು" ಉಂಟಾಗುತ್ತದೆ. "ಹಸಿವು" ಎಂದು ನಾವು ಕರೆಯುವ ಈ ಅನುಭವ, ಈ ನಿರ್ಜೀವ ಕಣಗಳ ಸಮೂಹದಲ್ಲಿ ಯಾವ ಹಂತದಲ್ಲಿ ಕಾಣಿಸಿಕೊಂಡಿತು ? ನಮ್ಮ ದೇಹಕ್ಕೆ ಯಾವುದೇ ಬಗೆಯ ಧಕ್ಕೆಯುಂಟಾದಾಗ, ನಮಗಾಗುವ "ವೇದನೆ" ಮತ್ತು ಇನ್ನೊಂದು ಜೀವಿಯ ಸಂಕಷ್ಟದಲ್ಲಿರುವಾಗ ನಮ್ಮಲ್ಲುಂಟಾಗುವ "ಸಂವೇದನೆ" ಈ ನಿರ್ಜೀವ ಕಣಸಮೂಹದಲ್ಲಿ ಹೇಗೆ ಉತ್ಪತ್ತಿಯಾಯಿತು ? "ಹಸಿವು", "ವೇದನೆ" ಮತ್ತು "ಸಂವೇದನೆ" ಗಳಲ್ಲದೆ, ಒಂದು ಜೀವಿಯ ಮನೋವ್ಯಾಪಾರದಲ್ಲಿ ಉಂಟಾಗಬಹುದಾದಂತಹ ಇನ್ನೂ ಅನೇಕ ಬಗೆಯ ಮಾನಸಿಕ ಕ್ರಿಯೆಗಳು ಜೀವವಿಕಾಸದ ಯಾವ ಹಂತಗಳಲ್ಲಿ ಈ ಕಣಸಮೂಹಗಳಲ್ಲಿ, ಹೇಗೆ ಮತ್ತು ಏಕೆ ಅಂತರ್ಗತವಾದುವು ? ಸಾವು ಎನ್ನುವುದಾದರೂ ಏನು ? ಒಂದು ನಿರ್ದಿಷ್ಟ ಕಣಸಮೂಹ ವಿಭಜನೆಗೊಂಡು, ಪ್ರಕೃತಿಯ "ನಿರ್ಜೀವಿ" ಕಣಸಮೂಹಗಳಲ್ಲಿ ಸೇರಿಕೊಳ್ಳುವುದಲ್ಲವೇ ?

 

ಈ ದಿಸೆಯಲ್ಲಿ ಆಲೋಚಿಸಿದಾಗ, ನಾವು ಯಾವ ಬಗೆಯ ಆಹಾರ ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸುವ ಮೊದಲು ನಾವು ಆಹಾರ ಸೇವಿಸುವುದೇಕೆ ಎಂಬ ಮೂಲಭೂತ ಪ್ರಶ್ನೆಯನ್ನು ಉತ್ತರಿಸಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಮಾಂಸಾಹಾರ ಉಚಿತವೇ, ಸಸ್ಯಾಹಾರ ಉಚಿತವೇ, ಎಂಬ ಪ್ರಶ್ನೆಯಾಗಲೀ, ಗೋಹತ್ಯೆ ಸಾಧುವೇ ಮತ್ತು ಗೋಮಾಂಸ ಭಕ್ಷಣೆ ಮಾಡಬಹುದೇ ಎಂಬ ಪ್ರಶ್ನೆಗಳು ಬಹು ಗೌಣವಾಗುತ್ತವೆ.

 

ಹಾಗೆಂದೇ, ನಾನು ನನ್ನನ್ನೇ ಕೇಳಿಕೊಳ್ಳುತ್ತಿರುವ ಮತ್ತು ನಿಮ್ಮನ್ನು ಕೇಳುತ್ತಿರುವ ಪ್ರಶ್ನೆ, "ನಾವು ತಿನ್ನುವುದೇತಕೆ ?"

************************* 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet