ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ ಕಾಲಕ್ಕೂ  ರಸಾನುಭವವೇ.  ಕಲಿಪುರುಷ  ದ್ವಾಪರನಿಗೆ ವಚನವಿತ್ತಂತೆ,  ಕಲಿಮಾನವರು ಕುಬ್ಜರಾದರೂ,  ಎಲ್ಲರನ್ನೂ ಮೀರಿಸಿದ ಗಟ್ಟಿಗರೇ ಸೈ. ಶ್ಮಶಾನ ರುದ್ರದೇವನು ದ್ವಾಪರನಿಗೆ ತೋರುವ ಕಾಲಜ್ಞಾನದ ತುಣುಕು,  ರಸರೋಮಾಂಚನಗೊಳಿಸುವ ಸೆಳಕೇ ಸೈ. ಜಗದೀಶ  ಕೃಷ್ಣ ನ ನಾಟಕದಲ್ಲಿ ಎಲ್ಲರೂ ಅಭಿನಯಿಸಿ ನೇಪಥ್ಯಕ್ಕೆ ಸರಿಯುವ ಪಾತ್ರಧಾರಿಗಳೇ.  ದುರ್ಯೋಧನನು ಕೌರವ  ಕೃಷ್ಣ . ಧರ್ಮಜ   ಪಾಂಡವ  ಕೃಷ್ಣ . ಸೊಗಸಾದ ಪರಿಕಲ್ಪನೆಯ ಈ ನಾಟಕ,  ಕದನದ ಕೇಡನ್ನು ಮೊಗೆಮೊಗೆದು ತೋರುವ,  ಅಂತೆಯೇ  ಅಧ್ಯಾತ್ಮದ ಅಂತಃದರ್ಶನವನ್ನೂ ನೀಡುವ ಅತಿ ಸುಂದರ ನಾಟಕವನ್ನೋದುವ ಘಳಿಗೆಗಳಲ್ಲಿ   ನನ್ನ ಅಂತಃಕರಣ ಕಲಕಿ ಕಣ್ಣೀರಾಗಿ ಹರಿದದ್ದು ಸತ್ಯ.
ಇಂತಹ ದರ್ಶನಗಳು  ಕಾಲದೇಶಗಳನ್ನು ಮೀರಿ ಚಿಂತನಾಶೀಲ ಮನುಜರೆಲ್ಲರಿಗೂ ಯಾವುದೋ ಒಂದು ಕಾಲಘಟ್ಟದಲ್ಲಿ, ಅರಿಕೆಗೆ ಬರುತ್ತಲೇ ಇರುತ್ತವೆ.  ಆದರೆ ಅವನ್ನು ವ್ಯಕ್ತಪಡಿಸುವ  ಭೌತಿಕ ವಿಧಾನಗಳಲ್ಲಿ ಭಿನ್ನತೆ ಇರಬಹುದು.

ಇಂತಹ ಯೋಚನೆ ನನ್ನ ಮನಸ್ಸಿಗೆ ಬಂದಿದ್ದು   ನಾನು ಒಂದೇ ದಿನ ನೋಡಿದ ಎರಡು ವಿಭಿನ್ನ ನೆಲೆಯ ಆದರೆ  ಎಂತಹುದೂ ಸಾಮ್ಯತೆಯಿಂದ  ಹತ್ತಿರವಾದ ಚಿತ್ರಗಳು. ಅವೇ      ಮೆಲ್ ಗಿಬ್ಸನ್ ನ ಅಪೋಕ್ಯಾಲಿಪ್ಟೋ  ಮತ್ತು  ನಮ್ಮವರೇ ಜಿ.ವಿ. ಅಯ್ಯರ್ ಅವರ ಆದಿಶಂಕರಾಚಾರ್ಯ.

ಅಪೋಕ್ಯಾಲಿಪ್ಟೋ ಮೆಲ್ ಗಿಬ್ಸನ್ ನಿರ್ದೇಶನದ ೧೩ನೇ ಶತಮಾನದ  'ಮಾಯಾ' ನಾಗರೀಕತೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ನಡೆಯುವ ಘಟನೆಗಳ ಅಧಾರಿತ ಚಿತ್ರ. ಜೀವವುಳಿಸಿಕೊಳ್ಳಲು   ಬೇಟೆಗಾರರಿಂದ ತಪ್ಪಿಸಿಕೊಂಡು ಓಡುವ ನೀರುಕುದುರೆಯೊಂದರಿಂದ ಶುರುವಾಗುವ ಈ ಚಿತ್ರ,  ನೀರುಕುದುರೆಯ ಬೇಟೆಗಾರರೇ ಕ್ರೂರ ಮಾಯಾ ಜನಾಂಗದ ಜನರಿಂದ ಬೇಟೆಯಾಡಲ್ಪಡುವ,  ಮತ್ತು ಅವರಲ್ಲೊಬ್ಬ ಈ ನರಬಲಿಗಾರರಿಂದ ತಪ್ಪಿಸಿಕೊಳ್ಳುವಲ್ಲಿ ಮುಕ್ತಾಯವಾಗುತ್ತದೆ.

ಕಣ್ಣಮುಂದೆಯೇ ಹತ್ಯೆಗೊಳಗಾಗುವ  ತಂದೆ, ಆ ತಂದೆಯ ಹಿಂದೆಯೇ ಹೇಳಿದ್ದ  ಹಿತವಚನ  " ಧೈರ್ಯಗೆಟ್ಟರೆ  ಸೋತಂತೆ,  ಎಂದಿಗೂ  ಧೈರ್ಯಗೆಡಬೇಡ"  ಎನ್ನುವ ಮಾತು,  ನಾಯಕನಿಗೆ ಅತೀವ ಆತ್ಮವಿಶ್ವಾಸ ನೀಡುತ್ತದೆ.   ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ತನ್ನ ಗರ್ಭಿಣಿ ಹೆಂಡತಿ ಮತ್ತು ಮಗುವನ್ನು ಬಾವಿಯೊಂದರಲ್ಲಿ ಅವಿತಿಟ್ಟು,  ಆಕ್ರಮಣಕಾರರೊಂದಿಗೆ ಹೋರಾಡುವ ನಾಯಕ ಅವರಿಂದ ಬಂಧನಕ್ಕೊಳಗಾಗುತ್ತಾನೆ. ನರಬಲಿಗಾಗಿ ಎಳೆದೊಯ್ಯುವ  ನಿಮಿಷದಲ್ಲಿ    ಸೂರ್ಯಗ್ರಹಣವಾಗಿ ನಾಯಕನ ಜೀವವುಳಿಯುತ್ತದೆ.  ಆದರೆ   ಗೆದ್ದವರ ಬೇಟೆಯ ಆಟಕ್ಕೆ   ಗುರಿಯಾಗುವ  ಸೋತವರು, ಅವರಿಂದ ಹೇಗೋ ತಪ್ಪಿಸಿಕೊಂಡು ಓಡುವ ನಾಯಕ.  ಅವನ ಓಟಕ್ಕೆ ಶಕ್ತಿ ಬಂದಿರುವುದು ಭಯದಿಂದಲೋ,  ಅಥವಾ ಭಯವನ್ನು ಗೆದ್ದು, ಧೈರ್ಯಗೆಡಬಾರದೆಂಬ ತಂದೆಯ ಹಿತವಚನದಿಂದಲೋ..?  ಒಟ್ಟಿನಲ್ಲಿ ಓಡುತ್ತಾ, ಓಡುತ್ತಾ,  ಬೆನ್ನಟ್ಟಿ ಬರುವ ಕೇಡನ್ನು ತಪ್ಪಿಸಿಕೊಳ್ಳುವ ಅದಮ್ಯ ವಿಶ್ವಾಸಿ ನಾಯಕ, ತನ್ನ ತಾಯ್ನೆಲದಲ್ಲಿ ಹೆಜ್ಜೆಯೂರಿದ ಕ್ಷಣದಲ್ಲಿ   ಕೇಡಿನ ಜೊತೆ ಹೋರಾಡುವ ಮನೋಬಲ ತೋರುತ್ತಾನೆ.  ಪ್ರಕೃತಿ ಯೂ ಅವನ ಪರ ವಹಿಸಿ  ಬೆನ್ನಟ್ಟಿದ ಪಟುಭಟರೊಬ್ಬಬ್ಬರಾಗಿ  ಸಾವನ್ನಪ್ಪುತ್ತಾರೆ.   ಉಳಿದ ಕೆಲವರು ಹಿಡಿದ ಹಠ ಬಿಡದೆ ಬೆನ್ನಟ್ಟಿರಲು  ಸಮುದ್ರ ತಟ ತಲುಪುತ್ತಾರೆ.  ಅಲ್ಲಿ ಯೂರೋಪಿನ  ಭೂ ಶೋಧದ ಪಡೆಯ ಲಂಗರು ಕಾಣಿಸುತ್ತದೆ.  ಚಿಕ್ಕದ್ದನ್ನು ದೊಡ್ಡದು  ಅದನ್ನು ಅದಕ್ಕಿಂತಲೂ ದೊಡ್ಡದು ನುಂಗುವ  ಪ್ರಕೃತಿ   ಸಹಜ ಕ್ರಿಯೆಯ ಸಂಕೇತವಾಗಿ ಇದು ಕಾಣುತ್ತದೆ.

ಈ ಘಳಿಗೆಯಲ್ಲಿ ನಾಯಕ ಅಲ್ಲಿಂದ ತಪ್ಪಿಸಿಕೊಂಡು,  ಮಳೆಯಿಂದ ತುಂಬುತ್ತಿರುವ ಬಾವಿಯಲ್ಲಿ ಅಡಗಿಸಿದ್ದ ಹೆಂಡತೀ ಮಕ್ಕಳ ರಕ್ಷಣೆಗೆ ಬರುತ್ತಾನೆ. ಎದೆ ಮಟ್ಟ ತುಂಬಿದ ನೀರಿನಲ್ಲಿಯೇ  ಹೊಸ ಜೀವ ಜನನವಾಗುತ್ತದೆ.  ಅವರನ್ನು ಕರೆದುಕೊಂಡು ದೂರದ ಕಾಡಿಗೆ ಹೊಸಜೀವನದ ಅನ್ವೇಷಣೆಯಲ್ಲಿ ನಾಯಕ ಸಾಗುತಾನೆ.

ವಿಲ್  ಡ್ಯೂರಾಂಟರ " ಯಾವುದೇ ನಾಗರೀಕತೆ ಪರಕೀಯರಿಂದ ದಮನಗೊಳ್ಳುವುದಕ್ಕೆ ಮೊದಲು, ಒಳಗಿನಿಂದಲೇ  ಕೊಳೆಯುತ್ತಾ ಬಂದಿರುತ್ತದೆ"  ಎಂಬ ಘೋಷವಾಕ್ಯದೊಂದಿಗೆ ಶುರುವಾಗುವ ಈ ಚಿತ್ರ, ತಾತನೊಬ್ಬ ಹೇಳುವ ನೀತಿಕತೆಯಿಂದ,  ಬಾಲಕಿಯ  ಕಾಲಜ್ಞಾನದ ನುಡಿಗಳಿಂದಲೂ, ದಾರ್ಶನಿಕ ರೂಪ ಪಡೆದುಕೊಳ್ಳುತ್ತದೆ.

ತಾಂತ್ರಿಕವಾಗಿಯೂ  ಮೈ ನವಿರೇಳಿಸುವ ದೃಶ್ಯ  ಗಳನ್ನು  ನೀರುಕುದುರೆಯ ಬೇಟೆಯಲ್ಲಿ, ಜಲಪಾತದ ಮೇಲಿನಿಂದ ಜಿಗಿಯುವಲ್ಲಿ  ಅಥವಾ ನರಬಲಿಯ  ದೃಶ್ಯ  ದಲ್ಲಿ  ಕಾಣಬಹುದು.

ಈ ಗುಂಗಿನಿಂದ ನಾನು ಬಿಡಿಸಿಕೊಳ್ಳುವ ಮೊದಲೇ  ನಮ್ಮ ಜಿ.ವಿ. ಅಯ್ಯರ್ಅವರ ಆದಿಶಂಕರಾಚಾರ್ಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.

ಆಕ್ಷನ್ ಚಿತ್ರ ಮಾಡುವ ಮೆಲ್ ಗಿಬ್ಸನ್  ರಿಗೆ ಅಧ್ಯಾತ್ಮಿಕ ಹೊಳಹುಗಳು ಸಿಕ್ಕಂತೆ,   ತೀವ್ರ ಆಧ್ಯಾತ್ಮಿಕ ತುಡಿತದ ಆದಿಶಂಕರಾಚಾರ್ಯದ ಕೆಲವು ಕ್ಷಣಗಳು ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದರೂ ಅಚ್ಚರಿಯಿಲ್ಲ. ಬಾಲ್ಯದಲ್ಲೇ ತಂದೆಯ ಸಾವನ್ನು ಕಂಡ ಶಂಕರನಿಗೆ  ಮೃತ್ಯು  ಮತ್ತು ವಿವೇಕಗಳು ಜೊತೆಯಾಗುತ್ತವೆ. ಶಂಕರನ ಕಡೆ ಘಳಿಗೆಯವರೆಗೂ  ಜೊತೆಗಿರುವ  ಇವರಲ್ಲಿ, ಶಂಕರರು  ಕಾಯಿಲೆ ಬಿದ್ದಾಗ ಮೃತ್ಯು ವೇ ಶುಶ್ರೂಷೆಗೆ ನಿಲ್ಲುವುದು ಶಂಕರನಿಗೇ ನಗು ತರಿಸುತ್ತದೆ.  ದೂರ ಸರಿ ಎನಿಸಿಕೊಂಡ ಚಂಡಾಲನಿಂದ  ದೂರ ಸರಿಯಬೇಕಾದದ್ದು ಶರೀರವೋ , ಆತ್ಮವೋ  ಎನ್ನುವ ಪ್ರಶ್ನೆ  ಎದುರಾಗುತ್ತದೆ.  ಶಂಕರನಿಗೆ ಇದರಿಂದ,  ಆತ್ಮದ  ಶಾಶ್ವತತೆಯ ಅನುಭವದ ಜೊತೆಗೆ ಅದೇ ಬ್ರಹ್ಮವಾಗುವಂತಹುದು ಎನ್ನುವ ಅರಿವಾಗುತ್ತದೆ. ಮಂಡನ ಮಿಶ್ರರೊಂದಿಗಿನ ಸಂವಾದ, ಛಾಂದೋಗ್ಯಪನಿಷತ್ತಿನ ಪರೀಕ್ಷೆಗಳಲ್ಲಿ   ಅಧ್ಯಾತ್ಮಿಕ ಸೂಕ್ಷ್ಮಗಳೂ,  ಆಚರಣೆಗಿಂತಲೂ ಅವಿನಾಭಾವವೇ ಮುಖ್ಯವೆಂಬ ದಾರಿಯೂ ಕಾಣುತ್ತದೆ.

ಈ ಎರಡೂ ಚಿತ್ರಗಳನ್ನು ನಾನು ಒಟ್ಟಾರೆಯಾಗಿ  ತೂಗಿ ನೋಡಲು ಕಾರಣಗಳಿವೆ.
######


ಮೇಲಿನವರೆಗೂ  ಬರೆದು  ನಿಂತ  ಲೇಖನವನ್ನು ಸುಮಾರು ಎರಡು ವರ್ಷಗಳ ನಂತರ ಮುಂದುವರೆಸಲು ಕುಳಿತಾಗ ನಾನು ಬರೆಯಬೇಕಿದ್ದುದೇನೆಂಬುದೇ ಮರೆತಿದೆ.  ಆದರೆ   ಈ ವಿಚಾರಕ್ಕೆ ನೆನಪಿನಲ್ಲಿರುವಂತೆ ಕೆಳಗಿನ ಮಾತುಗಳನ್ನು ಹೇಳಬಲ್ಲೆ.
ಎರಡೂ ಚಿತ್ರಗಳೂ   ಜನರಾಡದ ಭಾಷೆಯಲ್ಲಿ ಚಿತ್ರಿತವಾಗಿವೆ,  ಒಂದರಲ್ಲಿ  ಅದ್ಧೂರಿತನವಿದ್ದರೆ, ಮತ್ತೊಂದು ಸರಳತೆಯಿದೆ.  ಎರಡರಲ್ಲೂ  ಜೀವ ಹುಟ್ಟುವ  ಚಿತ್ರಣವಿದೆ. ಬೆನ್ನಟ್ಟುವ   ಮೃತ್ಯು ವಿದೆ.    ಮತ್ತು    ಎರಡೂ ಚಿತ್ರಗಳು ಕತೆಯಾಗಿ ನಮ್ಮೊಡನೆ ಸಂವಾದ ಮಾಡುತ್ತವೆ. 
 

Rating
No votes yet

Comments