ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?

ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?

ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?
 
ಅಲಾಕ್ಟೆಲ್ ಲ್ಯೂಸೆಂಟ್ ಕಂಪೆನಿಯು ಲೈಟ್ ರೇಡಿಯೋ ಎನ್ನುವ ರೂಬಿಕ್ ಕ್ಯೂಬಿನಷ್ಟು ದೊಡ್ಡ ಸಾಧನವನ್ನು ಸಿದ್ದ ಪಡಿಸಿದ್ದು,ಅದು ಮೊಬೈಲ್ ಟವರಿನ ಕೆಲಸವನ್ನು ಸಂಪೂರ್ಣವಾಗಿ ಮಾಡಬಲ್ಲುದು ಎಂದು ಕಂಪೆನಿಯ ಹೇಳಿಕೆ.ಮೊಬೈಲ್ ಸೇವೆಯ ಸಂಕೇತಗಳನ್ನು ಎಲ್ಲೆಡೆ ಲಭ್ಯವಾಗಿಸಲು,ಎತ್ತರದ ಗೋಪುರಗಳನ್ನು ನಿರ್ಮಿಸಿ,ಅವನ್ನು ನಿರ್ವಹಿಸುವುದು ಅನಿವಾರ್ಯ.ಇದು ಪ್ರತಿಯೊಂದು ಮೊಬೈಲ್ ಕಂಪೆನಿಗೆ ಖರ್ಚಿನ ಬಾಬತ್ತು.ಇವೆಲ್ಲವನ್ನು ಮಾಡಿದ ನಂತರವೂ,ಚಂದಾದಾರರ ಸಂಖ್ಯೆ ಏರಿದಂತೆ ಸೇವೆಯ ಗುಣಮಟ್ಟ ಉಳಿಸಿಕೊಳ್ಳುವುದು ಕಂಪೆನಿಗಳಿಗೆ ಸವಾಲೇ ಸರಿ.ಈಗ ಸುಲಭವಾಗಿ ಸ್ಥಾಪಿಸಲು ಅನುವು ಮಾಡುವ ಮಿನಿ ಗೋಪುರ ಲೈಟ್ ರೇಡಿಯೋವನ್ನು ಲ್ಯೂಸೆಂಟ್ ಕಂಪೆನಿ ಅಭಿವೃದ್ಧಿ ಪಡಿಸಿದೆ.ಇವನ್ನು ಬಸ್‌ಸ್ಟ್ಯಾಂಡ್ ಮೇಲೆ,ಕಟ್ಟಡಗಳೊಳಗೆ ಎಲ್ಲೆಂದರಲ್ಲಿ ಸ್ಥಾಪಿಸುವುದು ಸುಲಭ.ಜತೆಗೆ ಅವುಗಳ ಮಿನಿ ಆಂಟೆನಾಗಳ ದಿಕ್ಕನ್ನು ಬೇಕಾದಂತೆ ಬದಲಿಸಬಹುದು.ಹೀಗೆ ಮಾಡುವ ಮೂಲಕ ಸಂಕೇತಗಳು ಬೇಕಾದಲ್ಲಿ ಲಭ್ಯವಾಗಿಸುವುದು ಸುಲಭವಾಗುತ್ತದೆ.ಗೋಪುರಗಳ ಜತೆ ಇವನ್ನು ಬಳಸಿ,ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ.
---------------------------------
ಗೂಗಲ್ ಮ್ಯಾಗಜೀನ್
 
ಗೂಗಲ್ ಸದ್ದಿಲ್ಲದೆ ಮಾಧ್ಯಮ ಜಗತ್ತಿಗೆ ಕಾಲಿರಿಸಿದೆ.ಆನ್‌ಲೈನ್ ಮ್ಯಾಗಜೀನ್ ಥಿಂಕ್ ಕ್ವಾರ್ಟರ್ಲೀಯನ್ನದು ಪ್ರಕಟಿಸಲಾರಂಭಿಸಿದೆ.http://thinkquarterly.co.uk ಐಪಿ ವಿಳಾಸದಲ್ಲಿದು ಲಭ್ಯವಿದೆ.ದತ್ತಾಂಶ ಮತ್ತದು ಹೇಗೆ ಮುಖ್ಯ ಎನ್ನುವುದನ್ನು ಪತ್ರಿಕೆಯಲ್ಲಿ ಚರ್ಚಿಸಲಾಗಿದೆ.ಸದ್ಯಕ್ಕಂತೂ ಪತ್ರಿಕೆಯು ಉಚಿತವಾಗಿ ಲಭ್ಯ.ಗೂಗಲ್ ತನ್ನ ಬಳಗದವರಿಗಾಗಿ ಇದನ್ನು ಪ್ರಕಟಿಸಿರುವುದಾಗಿ ಹೇಳಿಕೊಂಡಿದೆ.ಸಂದರ್ಶನ,ಲೇಖನಗಳು,ಚಿತ್ರಗಳು ಮ್ಯಾಗಜೀನ್ ಮುಖ್ಯ ತಿರುಳು.ಗೂಗಲ್ ಇದನ್ನು ಪತ್ರಿಕೆ ಎಂದು ಕರೆಯದೆ "ಪುಸ್ತಕ" ಎಂದು ಕರೆದುಕೊಂಡಿರುವುದು ವಿಶೇಷ.ಲಂಡನ್‌ನಿಂದ ಪ್ರಕಾಶಿತ ಥಿಂಕ್ ಕ್ವಾರ್ಟರ್ಲಿಯನ್ನು,ಚರ್ಚ್ ಆಫ್ ಲಂಡನ್ ಎನ್ನುವ ಏಜನ್ಸಿ ಸಿದ್ಧ ಪಡಿಸಿದೆ.ಅರುವತ್ತೆಂಟು ಪುಟಗಳ ಮೊದಲ ಸಂಚಿಕೆ ಓದುಗರ ಗಮನ ಸೆಳೆಯುವುದು ಖಚಿತ.
----------------------------
ಸ್ಮಾರ್ಟ್ ಫೋನಲ್ಲೂ ತ್ರೀಡಿ
 
ತ್ರೀಜಿ ಸೇವೆಗಳನ್ನೊಳಗೊಂಡ ಸ್ಮಾರ್ಟ್‌ಫೋನುಗಳ ನಂತರವಿದೀಗ ತ್ರೀಡಿ ಚಿತ್ರ ವೀಕ್ಷಣೆಗೆ ಅವಕಾಶ ನೀಡುವ ಸ್ಮಾರ್ಟ್‌ಫೋನುಗಳ ಸರದಿ.ಎಚ್‌ಟಿಸಿ,ಎಲ್‌ಜಿ ಮುಂತಾದ ಸ್ಮಾರ್ಟ್‌ಫೋನ್ ತಯಾರಕರು ಇಂತಹ ಫೋನುಗಳ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ.ಇದರ ವೀಕ್ಷಣೆಗೆ ಕನ್ನಡಕ ಧರಿಸುವ ಅಗತ್ಯವಿಲ್ಲ ಎನ್ನುವುದು ಮತ್ತೊಂದು ವಿಶೇಷ.ತ್ರೀಡಿ ಚಿತ್ರಗ್ರಹಣ ನಡೆಸಲು ಎರಡು ಕ್ಯಾಮರಾಗಳನ್ನು ನೀಡಲೂ ಈ ಕಂಪೆನಿಗಳು ಯೋಚಿಸಿವೆ.ಹಾಲಿವುಡ್ ನಿರ್ಮಾಪಕರ ಚಿತ್ರಗಳನ್ನು ನಂಬಿ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯುವ ಬದಲು,ಕ್ಯಾಮರಾ ನೀಡಿ,ಜನರೇ ತ್ರೀಡಿ ಸರಕನ್ನು ಸಿದ್ಧ ಪಡಿಸುವಂತೆ ಅವರನ್ನು ಪ್ರೋತ್ಸಾಹಿಸುವುದು ಉತ್ತಮ ಎಂಬುದು ಕಂಪೆನಿಗಳ ಲೆಕ್ಕಾಚಾರ.ತ್ರೀಡಿ ಫೋನುಗಳು ಬಂದರಷ್ಟೇ ಸಾಲದು,ಅದರಲ್ಲಿ ವೀಕ್ಷಿಸಲು ಬೇಕಾದ ಸರಕೂ ಜನರಿಗೆ ಸಿಗಬೇಕು.ಜತೆಗೆ ಸ್ಮಾರ್ಟ್‌ಫೋನುಗಳಿಗಾಗಿ ತ್ರೀಡಿ ಆಟಗಳನ್ನು ಸಿದ್ಧ ಪಡಿಸುವತ್ತ ಕಂಪೆನಿಗಳ ಚಿತ್ತವೀಗ ಹರಿದಿದೆ.
-------------------------------
ಬಯಸದ ಸಂದೇಶ ರವಾನೆ ಜಾಲ ಬಲೆಗೆ
 
ದಿನಾಲೂ ಮೂವತ್ತು ದಶಲಕ್ಷದಷ್ಟು ಬಯಸದ ಸಂದೇಶಗಳನ್ನು ಕಳುಹಿಸಿ,ಬಳಕೆದಾರರಿಗೆ ಕಿರಿಕಿರಿ ಮಾಡುತ್ತಿದ್ದ ಕಂಪ್ಯೂಟರ್ ಜಾಲವನ್ನು ಬೇಧಿಸಲಾಗಿದೆ,ರಸ್ಟೋಕ್ ಎಂಬ ಹೆಸರಿನ ಜಾಲವು,ಅಂತರ್ಜಾಲದ ಮಿಲಿಯಗಟ್ಟಲೆ ಕಂಪ್ಯೂಟರುಗಳನ್ನು ವಶೀಕರಿಸಿಕೊಂಡು ಅವುಗಳ ಮೂಲಕ ಮಿಂಚಂಚೆಯಲ್ಲಿ ಸಂದೇಶ ರವಾನೆ ಮಾಡುತ್ತಿತ್ತು.ಫಯರ್ ಐ,ಮೈಕ್ರೋಸಾಫ್ಟ್,ಪೈಜರ್ ಮುಂತಾದ ಕಂಪೆನಿಗಳ ಮುತುವರ್ಜಿಯ ಕಾರಣ ರಸ್ಟೋಕ್ ಜಾಲ ಬಹಿರಂಗವಾಯಿತು.ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಾದ ಏಳು ನಗರಗಳ ಡೇಟಾಸೆಂಟರುಗಳ,ನೂರರಷ್ಟು ಸರ್ವರುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಾಯಿತು.ಈ ಜಾಲದ ಹಿಂದಿನ ವ್ಯಕ್ತಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.ಆದರೆ ರಸ್ಟೋಕನ್ನು ಕೈಬೆರಳೆಣಿಕೆಯ ವ್ಯಕ್ತಿಗಳ ಗುಂಪು ನಡೆಸುತ್ತಿತ್ತು ಎನ್ನುವುದು ತಜ್ಞರ ಅಭಿಮತ.ಈ ಬಯಸದ ಸಂದೇಶ ರವಾನೆ ಜಾಲವನ್ನು,ಸ್ವಯಂಚಾಲಿತವಾಗಿಸಿದ ಕಂಪ್ಯೂಟರ್ ತಂತ್ರಾಂಶವನ್ನು ಪರಿಶೀಲಿಸಿದಾಗ ಈ ವಿಷಯವು ಸ್ಪಷ್ಟವಾಗುತ್ತದೆ.ವ್ಯಕ್ತಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಅದು ಸಫಲವಾಗುತ್ತದೋ,ಕಾದು ನೋಡಬೇಕು.
--------------------------------
ಐಪಿ ವಿಳಾಸಗಳಿಗೆ ಏಳೂವರೆ ದಶಲಕ್ಷ ಡಾಲರು
ನೋರ್ಟೆಲ್ ಕಂಪೆನಿಯ ವಶದಲ್ಲಿರುವ ಅಂತರ್ಜಾಲ ವಿಳಾಸಗಳಿಗೆ ಮೈಕ್ರೋಸಾಫ್ಟ್ ಕಂಪೆನಿಯು ಏಳೂವರೆ ದಶಲಕ್ಷ ಡಾಲರು ಮೊತ್ತವನ್ನು ಪಾವತಿಸಲು ಮುಂದೆ ಬಂದಿದೆ.ಈ ವಿಳಾಸಗಳು ಐಪಿವರ್ಶನ್-ನಾಲ್ಕರ ಪ್ರಕಾರ ಇವೆ.ಐಪಿವರ್ಶನ್-ನಾಲ್ಕರಲ್ಲಿ ಮೂವತ್ತೆರಡು ಅಂಕಿಗಳನ್ನು ಬಳಸಲಾಗುತ್ತಿದೆ.ಈಗ ಅಂತರ್ಜಾಲ ತಾಣಗಳಿಗೆ ಬೇಡಿಕೆ ಏರುಗತಿಯಲ್ಲಿದ್ದು,ಬಹುತೇಕ ವಿಳಾಸಗಳು ಖಾಲಿಯಾಗಿ ಬಿಟ್ಟಿದೆ.ಇನ್ನು ಐಪಿವರ್ಶನ್-ಆರು ಪ್ರೊಟೋಕಾಲನ್ನು ಅಂತರ್ಜಾಲದಲ್ಲಿ ಬಳಕೆಗೆ ತಂದರಷ್ಟೆ ಹೆಚ್ಚಿನ ವಿಳಾಸಗಳಿಗೆ ಬೇಡಿಕೆಯನ್ನು ಈಡೇರಿಸಬಹುದು.ಪರಿಸ್ಥಿತಿ ಹೀಗಿರುವಾಗ,ಬಳಕೆಯಲ್ಲಿಲ್ಲದ ಐಪಿ ವಿಳಾಸಗಳ ಮಾರಾಟಕ್ಕೆ ನೊರ್ಟೆಲ್ ಕಂಪೆನಿಯು ಮುಂದಾದಾಗ ಬೇಡಿಕೆ ಬಂದದ್ದು ಸಹಜ.ಆದರೂ ಏಳೂವರೆ ದಶಲಕ್ಷ ಡಾಲರುಗಳಿಗೆ ಅವನ್ನು ಕೊಂಡಾರು ಎಂದು ಯಾರೂ ಭಾವಿಸಿರಲಿಲ್ಲ.ಈ ಮೊತ್ತಕ್ಕೆ ಮೈಕ್ರೊಸಾಫ್ಟ್ ಸುಮಾರು ನಾಲ್ಕುನೂರ ಎಪ್ಪತ್ತು ಸಾವಿರ ವಿಳಾಸಗಳನ್ನು ಗಳಿಸಲಿದೆ.ಈ ವಿಳಾಸಗಳನ್ನು ಮಾರುವ ಉದ್ದೇಶ ಕಂಪೆನಿಗಿರಲೂ ಸಾಕು.
--------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಕಂಪ್ಯೂಟರಿನ ಹಾರ್ಡ್ ಡಿಸ್ಕ್ ಕೈಕೊಟ್ಟಾಗ,ಕಂಪ್ಯೂಟರ್ ಬಳಸುವುದು ಹೇಗೆ?(ಸುಳಿವು ಈ ಅಂಕಣ ಬರಹದ ಹಳೆಯ ಭಾಗಗಳಲ್ಲಿ ಲಭ್ಯ.http://ashok567.blogspot.com ನೋಡಿ).
*ಮತ ಯಾಚನೆಗೆ ಲ್ಯಾಪ್‌ಟಾಪ್ ಆಮಿಷ ಒಡ್ಡುತ್ತಿರುವ ರಾಜಕೀಯ ಪಕ್ಷಗಳನ್ನು ಹೆಸರಿಸಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS24 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಆಂಡ್ರಾಯಿಡ್ ಫೋನ್‌ಗಳಲ್ಲಿ ಕನ್ನಡ ಅಂತರ್ಜಾಲ ತಾಣಗಳನ್ನು ಜಾಲಾಡಲು ಬಳಸಬಹುದಾದ ಬ್ರೌಸರ್ ಒಪೆರಾ ಮಿನಿ.
*ನೋವೆಲ್ ಕಂಪೆನಿಯ ಲೀನಕ್ಸ್ ವಿತರಣೆ ಸೂಸೆ(ಸಿ) ಲೀನಕ್ಸ್. ಬಹುಮಾನ ಗೆದ್ದವರು ಪ್ರಕಾಶ್ ಭಂಡಾರಿ,ಪಾವೂರು,ಮಂಜೇಶ್ವರ. ಅಭಿನಂದನೆಗಳು.
-----------------------------------------------------
ಟ್ವಿಟರ್ ಚಿಲಿಪಿಲಿ
*ಭೂದಿವಸದಂದು ಲೈಟ್ ಸ್ವಿಚ್ ಬೇಕಾದರೆ ಆರಿಸುವೆ,ಫ್ಯಾನ್ ಚಾಲೂ ಇಡುವುದು ಮಾತ್ರ ಖಾತರಿ.
*ಟೊಮೆಟೋ ಹಣ್ಣು ಎಂಬುದು ಅರಿವು,ಅದನ್ನು ಫ್ರುಟ್ ಸಲಾಡ್ ಹಾಕಬಾರದು ಎಂಬುದು ವಿವೇಕ.
*ಒಬ್ಬನಿಗೆ ಭಯೋತ್ಪಾದಕನಾದವ,ಇನ್ನೋರ್ವನಿಗೆ ಸ್ವಾತಂತ್ಯ ಸಂಗ್ರಾಮಿ..
*ಸೋತ್ ಆಫ್ರಿಕಾ..!

*ಅಶೋಕ್‌ಕುಮಾರ್ ಎ

Comments