ಪತಂಜಲಿಯ ಯೋಗ ಭಾಗ ೭

ಪತಂಜಲಿಯ ಯೋಗ ಭಾಗ ೭

ಬರಹ
ಪತಂಜಲಿಯ ಯೋಗ ಭಾಗ ೭ ಏಳನೆಯ ಲೇಖನ ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ. ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವೇ ಯಮ.ಯೋ.ಸೂ.ಪಾದ೨. ಸೂತ್ರ.೩೦ ಇವು ಯಾವಾಗಲೂ ಪಾಲಿಸಲೇ ಬೇಕಾದಂತಹ ವ್ರತಗಳು.ಯೋ.ಸೂ.ಪಾದ೨. ಸೂತ್ರ.೩೧ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಇವು ನಿಯಮಗಳು.ಯೋ.ಸೂ.ಪಾದ೨. ಸೂತ್ರ.೩೨ ಯಮ-ನಿಯಮಗಳನ್ನು ಪಾಲಿಸುವಾಗ ತದ್ವಿರುಧ್ಧ ಭಾವನೆಗಳು ಬಂದಾಗ ಅದರ ವಿರುಧ್ಧ ಮತವನ್ನು ಆಲೋಚಿಸಬೇಕು. ಕೆಟ್ಟ ಯೋಚನೆಗಳು, ಹಿಂಸೆ, ಕರುಣಾಹೀನತೆಯೇ (ತಾನು ಮಾಡಿದ್ದು/ಮಾಡಿಸಿದ್ದು ಅಥವಾ ಒಪ್ಪಿಗೆ ಕೊಟ್ಟದ್ದು) ಆಗಲಿ, ಆಸೆ,ಮೋಹ,ಕೋಪವೇ ಆಗಲಿ ಇವುಗಳ ಫಲ ಎಣೆಇಲ್ಲದ ದುಃಖ, ಅಜ್ಞಾನ ಎಂಬುದೇ ವಿರುಧ್ಧ ಮತ. ಈ ಕೆಳಕಂಡ ವಾಕ್ಯಗಳು ಯಮ-ನಿಯಮದ ಕೊನೆಯ ಸ್ಥಿತಿಗೆ ಅನ್ವಯವಾಗುತ್ತದೆ. ಇವು ತಾನಾಗಿಯೇ ಬರುವಂತಹ ಸ್ಥಿತಿಗಳು. ಅಹಿಂಸೆಯನ್ನು ನೆಲೆಗೊಳಿಸಿದವರ ಮುಂದೆ ವೈರ ನಿಲ್ಲುವುದಿಲ್ಲ. ಸತ್ಯವನ್ನು ನೆಲೆಗೊಳಿಸಿದವರು ಹೇಳಿದ್ದು ನಿಜವಾಗುತ್ತದೆ. ಪರರ ವಸ್ತುಗಳ ಮೋಹ ಬಿಟ್ಟವರಲ್ಲಿ ಸಂಪತ್ತು ಬರುತ್ತದೆ(ಆಸ್ತೇಯ). ಬ್ರಹ್ಮಚರ್ಯದಿಂದ ವೀರ್ಯದ ಲಾಭ. ಬೇರೆಯವರಿಂದ ಏನನ್ನೂ ಸ್ವೀಕರಿಸದಿದ್ದರೆ ಜನ್ಮಗಳ ಜ್ಞಾನ ಉಂಟಾಗುತ್ತದೆ(ಅಪರಿಗ್ರಹ). ಶೌಚದಿಂದ ಏಕಾಂತದ ಇಚ್ಚೆಯಾಗುತ್ತದೆ. (ದೇಹವನ್ನು ಶುಚಿಯಾಗಿಡಲು ಮಾಡುವ ಕೆಲಸಗಳು) ಸಂತೋಷದಿಂದ ಆನಂದದ ಗ್ರಹಿಕೆಯಾಗುತ್ತದೆ. ತಪಸ್ಸಿನಿಂದ ಅಶುದ್ಧಿ ಕ್ಷೀಣಿಸಿದಂತೆ ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವವುಂಟಾಗುತ್ತದೆ. ಸ್ವಾಧ್ಯಾಯದಿಂದ ನಾವು ಮನದಲ್ಲಿ ಅರಸುತ್ತಿದ್ದುದು ಸಿಗುತ್ತದೆ. ಈಶ್ವರನ ಬಗ್ಗೆ ಚಿಂತನೆಯಿಂದ ಸಮಾಧಿ ಸಿದ್ದಿಸುತ್ತದೆ. ದೇಹವು(ತೊಂದರೆ ಇಲ್ಲದೆ) ಸ್ಥಿರವಾಗಿರುವುದೇ ಆಸನ.ಯೋ.ಸೂ.ಪಾದ೨. ಸೂತ್ರ.೪೬ ಶ್ವಾಸ,ಪ್ರಶ್ವಾಸಗಳ ನಿಯಂತ್ರಣವೇ ಪ್ರಾಣಾಯಾಮ.ಯೋ.ಸೂ.ಪಾದ೨. ಸೂತ್ರ.೪೯ ಮನಸ್ಸಿನ ಬಗ್ಗೆಯೇ ಮಾಡುವ ಸ್ವ-ಅಧ್ಯಯನದಿಂದ ಇಂದ್ರಿಯಗಳು ಮನಸ್ಸನ್ನು ಹಿಂಬಾಲಿಸುತ್ತವೆ.ಇದೇ ಪ್ರತ್ಯಾಹಾರ.ಯೋ.ಸೂ.ಪಾದ೨. ಸೂತ್ರ.೫೩ ಇದರಿಂದ ಇಂದ್ರಿಯಗಳು ಹತೋಟಿಗೆ ಬರುತ್ತದೆ. ಅಷ್ಟಾಂಗ ಯೋಗದ ಐದು ಅಂಗಗಳ ಬಗ್ಗೆ ಪ್ರಾಥಮಿಕ ಪರಿಚಯ ಮಾಡಿಕೊಡುವುದರ ಜೊತೆಗೆ ದ್ವಿತೀಯ ಸಾಧನಪಾದದ ಮುಖ್ಯಸೂತ್ರಗಳನ್ನು ಹೇಳಿದ್ದಾಯಿತು. ಉಳಿದ ಮೊರು ಅಂಗಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯಬಹುದು. ಮುಂದುವರೆಯುವುದು... ೯/೯/೦೫