ವಸುಮತಿ..

ವಸುಮತಿ..


ಹಸಿರ ಹೊದಿಕೆಯನೆಳೆದು ತಳಕಿನಿ೦ದಲಿ ಸೆಳೆದು
ವಸುಮತಿಯು ಶೋಭಿಪಳು ಸೊಗದಿ ಹೊಳೆದು
ಪಸರಿಸುತ ಹೊಸತನವ ಕುಸುರಿಯಲಿ ಹೊಸೆದಿರ್ಪ
ಹಸೆಯ ತೆರ ಎಸಕದಲಿ ಮೈಯ ತಳೆದು

ಮು೦ಜಾವಿನಾ ಹೊತ್ತು ದಾರಿಯೆಲ್ಲೆಡೆಯಲ್ಲಿ
ಮ೦ಜು ಕವಿದಿದೆ ಸುತ್ತ ಮುಸುಕಿನ೦ತೆ
ಇಬ್ಬನಿಯ ಹನಿಹನಿಯು ಹುಲ್ಲರಾಶಿಯ ಮೇಲೆ
ಕಬ್ಬ ಬರೆದಿದೆ ಮುತ್ತ ಸಾಲಿನ೦ತೆ

ಆಕಾಶದೆತ್ತರಕೆ ತನ್ನ ಮೈಯನು ಚಾಚಿ
ಸಾಕಾರಗೊ೦ಡಿಹುದು ವೃಕ್ಷರಾಶಿ
ಸುತ್ತ ಮರಗಿಡದೆಲೆಯ ಎಡೆಯಲ್ಲಿ ಮಾರ್ದವದ
ಚಿಲಿಪಿಲಿಯ ಅಲೆಯಿದುವೆ ಪಕ್ಷಿಕಾಶಿ

ಓ೦ಕಾರವನು ಪೋಲ್ವ ಇನಿದನಿಯ ಹೊಮ್ಮಿಸುತ
ಹಿತವಾಗಿ ಬೀಸುತಿದೆ ತ೦ಪುಗಾಳಿ
ಝೇ೦ಕಾರಗೈಯುತ್ತ ವನಸುಮಗಳರಳುವುದ
ಕಾತರದಿ ಕಾದಿಹುದು ಭೃ೦ಗಕೇಳಿ

ಅನತಿದೂರದಲೆಲ್ಲೊ ಹೊಮ್ಮಿ ಬ೦ತದೊ ತೇಲಿ
ಕೋಗಿಲೆಯ ದನಿ ಉದಯರಾಗದ೦ತೆ
ಇನನ ಹೊ೦ಗಿರಣಗಳು ದೂರ ಸರಿಸುತಲಿಹವು
ಮಾಗಿಯಾ ಚಳಿ ಮೈಯ ಸೋಕದ೦ತೆ

ವರುಷಗಳು ಉರುಳಿದರು ಈ ತರುಗಳುರುಳದೆಯೆ
ಹರುಷದಾಗರವಾಗಿ ಮಳೆಯ ತರಿಸಿ
ಚಿರಯೌವನವನಾ೦ತು ಸೂರ್ಯಚ೦ದ್ರರ ತೆರದಿ
ಮೆರೆಯುತಿರಲೀ ಧರೆಯ ಹಸನುಗೊಳಿಸಿ

 

(ಚಿತ್ರಕೃಪೆ : ಅಂತರ್ಜಾಲ)

Rating
No votes yet

Comments