ಮತ್ತೆ ಬರಬಾರದೇ?
ಕವನ
ಊರಾಚೆಯ ಕೆರೆಯ ತೀರದಲಿ
ನಾವು ಕುಳಿತು, ಪಾದಗಳ ನೀರೊಳಗೆ
ಇಳಿಬಿಟ್ಟು, ನಿನ್ನ ಪಾದಕೆ ಮೀನೊಂದು
ಕಚ್ಚಿ, ನೀ ಕಿರುಚಿದಾಗ, ನಾ ಮನ ತುಂಬಿ
ನಕ್ಕ ಆ ಅಮೃತಘಳಿಗೆ...
................ಮತ್ತೆ ಬರಬಾರದೇ?
ನನ್ನ ಮನಗೆಡಿಸಿದ ನಿನ್ನ ಕಣ್ಣೊಳಗೆ
ಕಸವೊಂದು ಹೊಕ್ಕು, ತುಂಬಿ ಬರಲು
ನಿನ್ನ ಕಣ್ಣಾಲಿಗಳು, ಸರಿಪಡಿಸುವ ನೆಪದಲಿ
ನಿನ್ನ ರೆಪ್ಪೆಯ ಚುಂಬಿಸಿದ
ಆ ಮಧುರ ಕ್ಷಣ...
................ಮತ್ತೆ ಬರಬಾರದೇ?
ಜಗದ ಪರಿವೆಯ ಬಿಟ್ಟು, ಈ ಸಂತೆಯ ಚಿಂತೆಯ
ಚಿತೆ ಮಾಡಿ, ತಿಳಿ-ಆಗಸವ ನೋಡುತ
ಮಂದಸ್ಮಿತನಾಗಿ, ನಿನ್ನ ಮಡಿಲಲ್ಲಿ ಮಗುವಂತೆ
ಮಲಗಿ ಸಂಭ್ರಮಿಸಿದ ಆ
ಅವಿಸ್ಮರಣೀಯ ಸಮಯ...
................ಮತ್ತೆ ಬರಬಾರದೇ?