'ಎಂಡೋ' ನಿಷೇಧಿಸಿ- ಶರದ್ ಪವಾರ್ ಗೊಂದು ಬಹಿರಂಗ ಪತ್ರ

'ಎಂಡೋ' ನಿಷೇಧಿಸಿ- ಶರದ್ ಪವಾರ್ ಗೊಂದು ಬಹಿರಂಗ ಪತ್ರ

ಶರದ್ ಪವಾರ್ ಜೀ,


 ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?
 


ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? 'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು 'ಕಲ್ಲು ಹೃದಯ' ಅಂತಾ ಅಂದುಕೊಳ್ಳುತ್ತೀನಿ.
 


ಪ್ರಸ್ತುತ ಪ್ರದೇಶದಲ್ಲಿನ ಅಮ್ಮಂದಿರ ಬವಣೆ ನಿಮಗೆ ಗೊತ್ತೇನು? ಇಲ್ಲಿನ ಮಕ್ಕಳಿಗೆ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಇದ್ದ ಬದ್ದ ಸರ್ವರೋಗಗಳೂ ಇವೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೂಲಿನಾಲಿ ಮಾಡಿ ಜೀವಿಸುವ ಅಪ್ಪ ಅಮ್ಮ ಮನೆಯಲ್ಲೇ ಕೂರುತ್ತಾರೆ. ಮಕ್ಕಳ ಭವಿಷ್ಯ ಚಿವುಟಿ ಹೋಗಿದೆ. ಇಂತಹಾ ಅಂಗ ವೈಕಲ್ಯತೆಯಿರುವ ಮಕ್ಕಳ ಕಷ್ಟದ ಬದುಕನ್ನು ನೋಡಿ ಕೊರಗುವ ಬದಲು ಮಕ್ಕಳೇ ಬೇಡ ಎಂಬ ನಿರ್ಧಾರವನ್ನು ಈ ಅಮ್ಮಂದಿರು ಕೈಗೊಂಡಿದ್ದಾರೆ. ತನ್ನ ಗರ್ಭದಲ್ಲಿರುವ ಶಿಶುವಿಗೆ ವೈಕಲ್ಯತೆಯಿದೆ ಎಂದು ತಿಳಿದ ಕೂಡಲೇ ಅಬಾರ್ಶನ್ ಮಾಡಿಸುವ ಅಮ್ಮಂದಿರ ನೋವು ಕೇಳುವವರಾರು? ನಾಳಿನ ಭವಿಷ್ಯವೇ ಇಲ್ಲದಂತೆ ಮಾಡಿದ 'ಎಂಡೋ' ಪೀಡೆಯಿಂದ ಈ ಕುಟುಂಬಗಳಿಗೆ ಮುಕ್ತಿಯಿಲ್ಲವೇ? ಸಾವು ನೋವುಗಳಿಂದ ಕಂಗೆಟ್ಟ ಈ ಜನತೆಗೆ ಸಾಂತ್ವನ ಹೇಳುವವರು ಯಾರು? ಈ ಮೊದಲು ಗೇರು ಬೀಜದ ಮರಗಳಿದ್ದ ಪ್ರದೇಶಗಳಲ್ಲಿ ಅದನ್ನು ಕಡಿದು ರಬ್ಬರ್ ಕೃಷಿ ಆರಂಭಿಸಿದ ಪ್ಲಾಂಟೇಷನ್ ಕಾರ್ಪರೇಶನ್್ನ ಕೆಟ್ಟ ಚಿಂತನೆಗೆ ಏನೆನ್ನಬೇಕೋ ತಿಳಿಯದಾಗಿದೆ.
 


ಸಮಸ್ತ ಜನತೆ ಎಂಡೋಸಲ್ಫಾನ್ ನಿಷೇಧಿಸಿ ಎಂದು ಕೂಗುತ್ತಿದ್ದರೂ ಅದನ್ನು ಕೇಳದಂತೆ ನಟಿಸುವ ನೀವೊಬ್ಬ ಮನುಷ್ಯ ಎಂದು ಹೇಳಲೂ ಲಜ್ಜೆಯಾಗುತ್ತಿದೆ. ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಕೋಟಿ ಕೋಟಿ ಜನರನ್ನು ಮೋಸ ಮಾಡಿದ ನಿಮಗೆ ಸಾಮಾನ್ಯ ಜನರ ಕಣ್ಣೀರ ಶಾಪವಿದೆ. ದೇವರ ಸ್ವಂತ ಊರು ಎಂದು ಹೇಳುವ ಕೇರಳದಲ್ಲಿನ ಎಂಡೋ ಪೀಡಿತರ ನರಕ ಯಾತನೆ ನಿಮಗೆ ಅರ್ಥವಾಗುವುದಿಲ್ಲವೇ? ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಒದಗಿಬಂದರೆ ಏನ್ಮಾಡುತ್ತೀರಿ?


ಶರದ್ ಪವಾರ್ ಜೀ, ಪ್ಲೀಸ್...ಎಂಡೋಸಲ್ಫಾನ್ ನಿಷೇಧಿಸಿ, ಭವಿಷ್ಯದ ಮಕ್ಕಳಿಗೆ ಬದುಕಲು ಅನುಮತಿಸಿ.

 


ಇಂತೀ,


ರಶ್ಮಿ. ಕಾಸರಗೋಡು.

Rating
No votes yet