ಜೀವನವೆಂದರೆ...... ಹೇಳಿದ್ದು, ಕೇಳಿದ್ದು, ಅನಿಸಿದ್ದು

ಜೀವನವೆಂದರೆ...... ಹೇಳಿದ್ದು, ಕೇಳಿದ್ದು, ಅನಿಸಿದ್ದು

ಜೀವನ ಬೇವು ಬೆಲ್ಲ
ಅರಿತಾಗ ಕಹಿಯೇ ಇಲ್ಲ
ಕಷ್ಟವೊ ಸುಖವೋ ದೇವರೆ ಬಲ್ಲ
ಈಸಬೇಕು, ಇದ್ದು ಜೈಸಬೇಕು ಎಲ್ಲ.

ಜೀವನವೊಂದು ದುಃಖದ ಸಾಗರ
ನಗುತ ತೀರವ ಸೇರೋಣ ಬಾರ
ಹಾಡಬೇಕಾದ ಗೀತೆ ಸುಮಧುರ
ಸಾಗಲೇಬೇಕಾದ ನದಿ ನಿರಂತರ.

ಜೀವನವೊಂದು ಸುಂದರ ಪಯಣ
ನಾಳಿನ ಚಿಂತೆ ಬಿಟ್ಟೋನೆ ಜಾಣ
ಹತ್ತಿರ ದೂರಾಗುವರು ಬಹಳಷ್ಟು ಜನ
ನೆನಪೊಂದೆ ಜೊತೆ ಉಳಿವುದು ಕಾಣ.

ಜೀವನವೊಂದು ಒಗಟಿನ ಮಾಲೆ
ಬಿಡಿಸಲು ಬೇಕು ಬಲು ಸಹನೆ
ಹುಟ್ಟು ಪ್ರಾರಂಭ, ಸಾವೇ ಕೊನೆ
ನಡುವೆ ಅಳು ನಗುಗಳ ಸಂಕೋಲೆ
 


ಜೀವನವೊಂದು ಆಟವಂತೆ
ಸೋಲೆ ಗೆಲುವಿನ ಮೆಟ್ಟಿಲಂತೆ
ದಿನದಿನವೂ ಹೋರಾಟವಂತೆ
ಪ್ರತಿಯೊಂದು ತಪ್ಪು ಪಾಠದಂತೆ.

ಜೀವನವೊಂದು ಪರೀಕ್ಷೆಯಂತೆ
ಫಲ ಸಿಗದೆಂದು ನಿರೀಕ್ಷೆಯಂತೆ
ಪಾಸೋ ಫೇಲೋ ಬೇಡ ಚಿಂತೆ
ಪ್ರಯತ್ನ ಮಾತ್ರ ನಮ್ಮದಂತೆ.

ಜೀವನವೊಂದು ನಂದನದಂತೆ
ಮುಳ್ಳೂ ಇರುವುದು ಹೂವಿನ ಜೊತೆ
ಜೀವನವೊಂದು ಬಂಧನವಂತೆ
ಬಿಡುಗಡೆ ಸಾವಿನ ನಂತರವಂತೆ.

ನಿಭಾಯಿಸಲೇಬೇಕಾದ ವಚನವಂತೆ
ಮೀರಲಾರದ ವಿಧಿ ನಿಯಮವಂತೆ
ನಾಲ್ಕು ದಿನಗಳ ಸಂತೆಯಂತೆ
ಸಂತೆಯಲ್ಲೂ ಇರಬೇಕಂತೆ ನಿಶ್ಚಿಂತೆ.

ಜೀವನವೊಂದು ನಾಟಕದಂತೆ
ಸೂತ್ರದಾರಿ ದೇವನಂತೆ
ಪಾತ್ರದಾರಿ ಮಾನವನಂತೆ
ಕುಣಿಸುವ ತನಕ ಕುಣಿಯಬೇಕಂತೆ.
 
ಜೀವನ ಕಡಿಮೆ ಅವಧಿಯದಂತೆ
ಸ್ವಲ್ಪವು ವ್ಯರ್ಥ ಮಾಡಬಾರದಂತೆ
ಜೀವನದ ರೂಪುರೇಷೆಗಳು ಇವೇ ಅಂತೆ
ಏನೆನ್ನುವಿರಿ ನೀವೆಲ್ಲ ಮತ್ತೆ.

Rating
No votes yet

Comments