ಅಗ್ಗದಲ್ಲಿ ನಿಮಗೆ ತರಬೇತುದಾರ ಬೇಕೇ?

ಅಗ್ಗದಲ್ಲಿ ನಿಮಗೆ ತರಬೇತುದಾರ ಬೇಕೇ?

ಅಗ್ಗದಲ್ಲಿ ನಿಮಗೆ ತರಬೇತುದಾರ ಬೇಕೇ?

 

ವ್ಯಾಯಾಮ ಮಾಡಿಸಲು,ತರಬೇತುದಾರರನ್ನು ಬಳಸುವುದು ದುಬಾರಿಯಾಗುತ್ತಿದೆಯೇ?ನಿಮ್ಮ ವ್ಯಾಯಾಮ ಹೇಗಿರಬೇಕು ಎಂದು ಸಲಹೆ ಪಡೆಯುವುದು ಅನಿವಾರ್ಯವಾಗಿದ್ದರೂ,ಅದನ್ನು ಅಗ್ಗದಲ್ಲಿ ಸಾಧಿಸಬೇಕೆಂದಿದ್ದರೆ,ಆನ್‌ಲೈನ್ ತರಬೇತಿ ನೀಡುವ http://www.fitorbit.comನ ಸೇವೆಯನ್ನು ಬಳಸಬಹುದು.ಈ ಅಂತರ್ಜಾಲ ತಾಣದಲ್ಲಿ,ಮೊದಲಾಗಿ ವ್ಯಾಯಾಮವನ್ನು ಮಾಡುವ ಮುಖ್ಯ ಉದ್ದೇಶವೇನು,ವ್ಯಕ್ತಿಯ ಆರೋಗ್ಯ ಹೇಗಿದೆ,ಆತನಿಗೆ ಇರುವ ಸಮಸ್ಯೆಗಳೇನು ಎನ್ನುವುದನ್ನೆಲ್ಲಾ ಮೊದಲಾಗಿ ನೋಂದಾವಣೆಯ ವೇಳೆಯೇ ತಿಳಿಯಪಡಿಸಬೇಕಾಗುತ್ತದೆ.ಇದರ ಮೇಲೆ,ವ್ಯಕ್ತಿಗೆ ತರಬೇತುದಾರನನ್ನು ನೀಡಲಾಗುತ್ತದೆ.ಮೊದಲಾಗಿ ಮೂವರನ್ನು ಸೂಚಿಸಿ,ನಿಮಗಿಷ್ಟವಾದ ತರಬೇತುದಾರರನ್ನು ಆಯ್ದುಕೊಳ್ಳುವುದು ಸಾಧ್ಯ.ತರಬೇತುದಾರನು ನಿಮ್ಮ ದೇಹ,ಅಗತ್ಯಗಳಿಗೆ ಸೂಕ್ತವಾದ ವ್ಯಾಯಾಮವನ್ನು ಸೂಚಿಸಿ,ಅದನ್ನು ಮಾಡುವ ಕ್ರಮದ ವಿಡಿಯೋಗಳನ್ನು ಆನ‌ಲೈನಿನಲ್ಲಿ ನೀಡುತ್ತಾನೆ.ಇವನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ನೋಡಿ ಅನುಸರಿಸುವುದು ಸುಲಭ.ಆಹಾರದ ಬಗ್ಗೆಯೂ ಸಲಹೆಗಳು ಸಿಗುತ್ತವೆ.ಪಾಕವಿಧಾನವನ್ನೂ ತೋರಿಸುವ ವಿಡಿಯೋ ನೀಡಲಾಗುತ್ತದೆ.ಇವೆಲ್ಲವುಗಳೂ ವಾರಕ್ಕೆ ಹತ್ತು ಡಾಲರು ಬೆಲೆಗೆ ಲಭ್ಯವಾಗುತ್ತದೆ.ನಮ್ಮಲ್ಲಿ ಇಂತಹ ಆನ್‌ಲೈನ್ ತರಬೇತಿಯ ಅಗತ್ಯ ಇನ್ನೂ ಇಲ್ಲ ಎನ್ನುವುದು ಸ್ಪಷ್ಟ-ಬಾಬಾ ರಾಮ್‌ದೇವ್‌ರಂತವರೇ ನಮ್ಮೂರಿಗೆ ಬಂದು ಪ್ರಾಣಾಯಾಮದ ಬಗ್ಗೆ ತರಬೇತಿ ನೀಡುತ್ತಿರುವಾಗ,ಅದನ್ನು ಅನುಸರಿಸುವುದೇ ಶ್ರೇಯಸ್ಕರ ಅಂತೀರಾ?
------------------------------------------------
ಇಂಟೆಲ್:ಟ್ಯಾಬ್ಲೆಟ್ ಸಾಧನಗಳಿಗೆ ಸಂಸ್ಕಾರಕ
 
ಈಗ ಕಂಪ್ಯೂಟರ್,ಲ್ಯಾಪ್‌ಟಾಪ್‌ಗಳ ಮಾರ‍ಾಟವು ತುಸು ತಗ್ಗಿ,ಅದರ ಬದಲಿಗೆ ಟ್ಯಾಬ್ಲೆಟ್ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ.ಇಂಟೆಲ್ ಕಿರು ಸಾಧನಗಳಿಗೆಂದೇ ಆಟಂ ಎನ್ನುವ ಸಂಸ್ಕಾರಕವನ್ನು ತಯಾರಿಸುತ್ತಿದೆ.ಆದರೆ ಆಪಲ್ ಮತ್ತು ಆರ್ಮ್ ಪ್ರಾಸೆಸರುಗಳನ್ನು ಕೈಯಲ್ಲಿ ಹಿಡಿದು ಬಳಸುವ ಸಾಧನಗಳಲ್ಲಿ ಬಳಸಲು ಹೆಚ್ಚಿನ ತಯಾರಕರು ಉದ್ಯುಕ್ತರಾಗುತ್ತಿರುವಂತೆ,ಇಂಟೆಲ್ ಕಂಪೆನಿಯು ಎಚ್ಚೆತ್ತು ಕೊಂಡಿದೆ.ಅದು ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಗೆ ಸೂಕ್ತವಾದ,ಕಡಿಮೆ ವಿದ್ಯುತ್ ಶಕ್ತಿ ಬಳಸುವ ಓಕ್ ಟ್ರೈಲ್ ಎಂಬ ಹೆಸರಿನ ಸಂಸ್ಕಾರಕವನ್ನು ಹೊರತಂದಿದೆ.z670 ಎನ್ನುವುದು ಇದರ ವ್ಯಾವಹಾರಿಕ ಸಂಖ್ಯೆ.ಮೈಕ್ರೋಪಾಸೆಸರುಗಳ ಮಟ್ಟಿಗೆ ಜಗತ್ತಿನ ಅತ್ಯಂತ ಜನಪ್ರಿಯ ಹೆಸರು ಇಂಟೆಲ್‌ದ್ದಾದರೂ,ಕಿರುಸಾಧನಗಳ ಮಟ್ಟಿಗೆ ಈ ಖ್ಯಾತಿ,ಕಂಪೆನಿಗಿಲ್ಲ.ಅಂತಹ ಸಾಧನಗಳು ದಿನೇ ದಿನೇ ಜನಪ್ರಿಯವಾಗುತ್ತಿರುವಾಗ,ತಕ್ಷಣ ಎಚ್ಚೆತ್ತು,ಸ್ಪರ್ಧೆಯನ್ನೆದುರಿಸಲು ಹೊಸ ಚಿಪ್‌ಗಳ ತಯಾರಿ ಮಾಡದಿದ್ದರೆ,ಆಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುವುದು ಇಂಟೆಲ್‌ಗೆ ಮನವರಿಕೆಯಾದದ್ದರ ಸೂಚನೆಯೇ ಹೊಸ ಸಂಸ್ಕಾರಕದ ಅಭಿವೃದ್ಧಿ.ಓಕ್ ಟ್ರೈಲ್ ಸಂಸ್ಕಾರಕವು ಆಂಡ್ರಾಯಿಡ್,ಮಿಟೂ,ವಿಂಡೋಸ್ ಹೀಗೆ ವಿವಿಧ ಆಪರೇಟಿಂಗ್ ವ್ಯವಸ್ಥೆಗಳಿಗೂ ಸೂಕ್ತವಾಗುವ ಹಾಗೆ ಮಾಡಿ,ವಿವಿಧ ಸಾಧನಗಳ ತಯಾರಕರನ್ನು ಬಗಲಲ್ಲಿ ಹಾಕಲೂ ಇಂಟೆಲ್ ಸಿದ್ಧವಾಗಿದೆ.ಚಿಪ್‌ನ್ನು ನಲ್ವತ್ತೈದು ನ್ಯಾನೋಮೀಟರ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ.ಇಷ್ಟೆಲ್ಲಾ ಆದರೂ,ಎಲ್ಲರನ್ನೂ ಆಕರ್ಷಿಸುವ ಇಂಟೆಲ್‌ನ ಕೆಲಸ ಸಲೀಸಾಗದು ಎನ್ನುವುದು ಸತ್ಯ.
-------------------------------------------
ಕಂಪ್ಯೂಟರ್ ನಿಯಂತ್ರಣ:ಹೊಸ ಪರಿ
ಯೋಚನೆಯ ಮೂಲಕ ಕಂಪ್ಯೂಟರ್ ಜತೆ ಸಂವಹನ ಸಾಧ್ಯವಾಗಿಸಿ,ಕಂಪ್ಯೂಟರ್-ಮನುಷ್ಯನ ನಡುವಿನ ಅಂತರವನ್ನಿಳಿಸುವುದು ಸಂಶೋಧಕರ ಕನಸು.ಕ್ಯಾಲಿಫೋರ್ನಿಯಾ ವಿವಿಯ ನರವಿಜ್ಞಾನ ಸಂಶೋಧನಾಲಯದ ಸಂಶೋಧಕರ ಆಸಕ್ತಿ ಇಂತದ್ದರ ಕಡೆಗೇ ಇದೆ.ಯೋಚನೆಯ ಮೂಲಕ ಕರೆಗಳನ್ನು ಮಾಡುವುದು,ಈ ನಿಟ್ಟಿನಲ್ಲಿ ಮೊದಲ ಕೆಲಸ.ನಂಬರುಗಳ ಪಟ್ಟಿಯ ಕಡೆ ದಿಟ್ಟಿಸಿ ಇದನ್ನು ಸಾಧಿಸುವುದು ಒಂದು ಸಾಧ್ಯತೆ.ಮಿದುಳಿನಿಂದ ಹೊರಡುವ ಸಂಕೇತಗಳನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಂ ಸಾಧನದ ಮೂಲಕ ಗ್ರಹಿಸಿ,ಇದನ್ನು ಸಾಧಿಸುವ ಆಯ್ಕೆಯೂ ಅವರ ಮುಂದಿದೆ.ಹಾಗೆಯೇ ವೈಮಾನಿಕ ಪೈಲಟ್‌ಗಳು ಸಾಕಷ್ಟು ಚುರುಕಾಗಿದ್ದಾರೆಯೇ,ಅಲ್ಲ ದಣಿದು,ಚಾಲನೆಯ ಕಡೆ ಗಮನ ಕೊಡಲು ಅಸಮರ್ಥರಾಗಿದ್ದಾರೆಯೇ ಎನ್ನುವುದನ್ನೂ ಅರಿಯುವುದು ಅವರ ಸಂಶೋಧನೆಯ ಇನ್ನೊಂದು ಗುರಿ.ದಣಿದ ಪೈಲಟ್‌ಗಳ ಕಾರಣ ವಿಮಾನ ಅಪಘಾತ ತಡೆಯೊಡ್ಡಲು ಇಂತಹ ಸಂಶೋಧನೆ ನೆರವಾದೀತು.
-------------------------------------
ವಾಮನಾಕೃತಿಯಲ್ಲಿ ಭಾರೀ ನೆನಪು
 
ಇಂಟೆಲ್ ಮತ್ತು ಮೈಕ್ರಾನ್ ಕಂಪೆನಿಗಳು ಜಂಟಿಯಾಗಿ,ಐಎಂ ಎಂಬ ಹೆಸರಿನ ಫ್ಲಾಶ್ ಚಿಪ್‌ಗಳನ್ನು ತಯಾರಿಸುತ್ತಿವೆ.ಇವು ಪೊಸ್ಟೇಜ್ ಸ್ಟಾಂಪಿನ ಗಾತ್ರದವಾದರೂ,ಎಂಟು ಜೀಬಿ ಸ್ಮರಣಶಕ್ತಿಯನ್ನು ಒದಗಿಸಲು ಶಕ್ತವಾಗಿವೆ. ಮುಂದಿನ ಪ್ರಯತ್ನ ಹದಿನಾರು ಜೀಬಿ,ಮೂವತ್ತೆರಡು ಜೀಬಿ ಹೀಗೆ ಸಾಗಲಿದೆ.ನೂರ ಇಪ್ಪತ್ತೆಂಟು ಜೀಬಿ ಸಾಮರ್ಥ್ಯದ ಫ್ಲಾಶ್ ಸ್ಮರಣಕೋಶಗಳೂ ಬರುವುದು ಹೆಚ್ಚು ತಡವಾಗದು.ಇದು ಸಾಧ್ಯವಾಗಲು ಮುಖ್ಯ ಕಾರಣ,ಇಪ್ಪತ್ತು ನ್ಯಾನೋ ಮೀಟರ್ ತಂತ್ರಜ್ಞಾನದ ಬಳಕೆಯನ್ನು ಚಿಪ್ ತಯಾರಿಕೆಗೆ ಬಳಸಿದ್ದಾಗಿದೆ.ಸುಧಾರಿತ ತಂತ್ರಜ್ಞಾನವು ಕಡಿಮೆ ಗಾತ್ರದಲ್ಲಿ ಹೆಚ್ಚಿನ ವಿದ್ಯುನ್ಮಾನ ಮಂಡಲಗಳನ್ನು ಹಿಡಿಸಲು ಶಕ್ತವಾಗುತ್ತದೆ.ಈ ಫ್ಲಾಶ್ ಸ್ಮರಣಕೋಶಗಳು ದುಬಾರಿಯಾದರೂ,ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್ ಸಾಧನಗಳ ಮಟ್ಟಿಗೆ ವರದಾನವಾಗಲಿವೆ.ಇಪ್ಪತ್ತು ನ್ಯಾನೋಮೀಟರ್ ತಂತ್ರಜ್ಞಾನವು ಇದರ ಹಿಂದಿನ ಇಪ್ಪತ್ತೈದು ನ್ಯಾನೋಮೀಟರ್ ತಂತ್ರಜ್ಞಾನಕ್ಕೆ ಹೋಲಿಸಿದರೆ,ಎರಡು ಪಟ್ಟು ಹೆಚ್ಚು ಸ್ಮರಣ ಸಾಮರ್ಥ್ಯವನ್ನು ಹಿಡಿಸಲು ಸಮರ್ಥವಾಗಿದೆ.ಅಷ್ಟು ಮಾತ್ರವಲ್ಲ,ಗಿಗಾಬೈಟಿಗೆ ಬರುವ ಖರ್ಚು ಕೂಡಾ ಇಳಿಯುತ್ತದೆ.ಸ್ಮಾರ್ಟ್‌ಪೋನುಗಳ ಗಾತ್ರ ತಗ್ಗಿಸುವಲ್ಲಿ,ಅವುಗಳನ್ನು ಅಗ್ಗವಾಗಿಸುವಲ್ಲಿ ಮತ್ತು ಅವುಗಳಲ್ಲಿ ಹೆಚ್ಚು ಅನುಕೂಲಗಳನ್ನು ಕಲ್ಪಿಸುವಲ್ಲಿ ಹೊಸ ತಂತ್ರಜ್ಞಾನವು ನೆರವಾಗಲಿದೆ.
-----------------------------------------
ಜಿಮೇಲ್ ಹೊಸತು:ನಿಮ್ಮದೇ ಥೀಮ್
ಜಿಮೇಲ್ ಬಳಕೆದಾರರು ತಮ್ಮ ಜಿಮೇಲ್ ಪುಟವನ್ನು ವಿವಿಧ ವಿನ್ಯಾಸಗಳಲ್ಲಿ ಕಾಣುವ ಅನುಕೂಲವನ್ನು ಗೂಗಲ್ ನೀಡತೊಡಗಿ ವರ್ಷಗಳೇ ಕಳೆದುವು.ಈಗ ನಿಮಗಿಷ್ಟವಾದ,ಜಿಮೇಲ್ ಪುಟದ ವಿನ್ಯಾಸವನ್ನು ಏರ್ಪಡಿಸುವುದೂ ಸಾಧ್ಯ.ನೀವು ತೆಗೆದ ಚಿತ್ರವನ್ನು ಬಳಸಿದ ವಿನ್ಯಾಸ ಮೂಡಿಸುವುದು,ಚಿಟಿಕೆ ಹೊಡೆದಷ್ಟೇ ಸುಲಭ.ಜಿಮೇಲ್ ಮಿಂಚಂಚೆಯ ಗೂಗಲ್ ಲ್ಯಾಬ್ ವಿಭಾಗದಲ್ಲಿ ತಡಕಾಡಿ,ಸೆಟ್ಟಿಂಗ್ ಬದಲಾಯಿಸಿದರೆ ಇದು ಸಾಧ್ಯ.ನಿಮ್ಮ ಚಿತ್ರವನ್ನೇ ಆರಿಸಿ,ಥೀಂ ರಚಿಸಿನೋಡಬಾರದೇಕೇ?
--------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಭಾರತದ ಅತಿ ದೊಡ್ಡ ಐಟಿ ಕಂಪೆನಿ ಯಾವುದು?
*ಲೀನಕ್ಸ್‌ನಲ್ಲಿ ಲಭ್ಯವಿರುವ ಎರಡು ಡೆಸ್ಕ್‌ಟಾಪ್ ಆಯ್ಕೆಗಳನ್ನು ಹೆಸರಿಸಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS27 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಉಬುಂಟು ಲೀನಕ್ಸ್‌ನ ಎಪ್ರಿಲ್ 2011ನ ಆವೃತ್ತಿಯ ಹೆಸರು ನ್ಯಾಟಿ ನರ್ವಾಲ್-Natty Narwhal
*ಫೊಟೋಶಾಪ್,ಜಿಂಪ್,ಇಂಕ್‌ಸ್ಕೇಪ್ ತಂತ್ರಾಂಶಗಳ ಪೈಕಿ ಲೀನಕ್ಸಿನಲ್ಲಿಲ್ಲದ ತಂತ್ರಾಂಶ ಫೊಟೋಶಾಪ್. ಬಹುಮಾನ ಗೆದ್ದವರು ರಾಕೇಶ್ ಕೆ ಕೆ,ಕುಕ್ಕುಂದೂರು,ಕಾರ್ಕಳ. ಅಭಿನಂದನೆಗಳು.
----------------
ಗೂಗಲ್,ಇನ್ಫೋಸಿಸ್:ನಿರಾಸೆ
ನಮ್ಮ ಐಟಿ ದಿಗ್ಗಜ ಕಂಪೆನಿಯ ಫಲಿತಾಂಶ ಮೇಲ್ಮನೆಯ ಗುರುಗುಂಟಿರಾಯರ ಬಳಗದವರಿಗೆ ಇಷ್ಟವಾಗಲಿಲ್ಲವಂತೆ.ಗೂಗಲ್ ಫಲಿತಾಂಶವೂ ಅಮೆರಿಕಾದ ಮಾರುಕಟ್ಟೆಯನ್ನು ನಿರಾಸೆಗೊಳಿಸಿತು.ಲಾಭದಲ್ಲಿ ಶೇಕಡಾ ಹದಿನೇಳು ಪ್ರಗತಿಯಾದರೂ ತೃಪ್ತಿಯಿಲ್ಲ.ಪ್ರತಿ ಶೇರಿಗೆ ಲಾಭ ಏಳು ಡಾಲರುಗಳು.ವಾರ್ಷಿಕ ವ್ಯವಹಾರ ಎಂಟೂವರೆ ಬಿಲಿಯನ್‌ಗೂ ಹೆಚ್ಚು.ಆಂಡ್ರಾಯಿಡ್ ಅಪ್ಲಿಕೇಶನ್‌ಗಳನ್ನು ಮೂರು ಬಿಲಿಯನ್ ಬಾರಿ ಇಳಿಸಿಕೊಳ್ಳಲಾಗಿದೆ.ದಿನಾಲೂ ಗೂಗಲ್ ಕ್ರೋಮನ್ನು ಹನ್ನೆರಡು ದಶಲಕ್ಷ ಜನರು ಬಳಸುತ್ತಿದ್ದಾರೆ.ಯುಟ್ಯೂಬ್ ಜಾಹೀರಾತು ಆದಾಯ ಬಹಳ ಹೆಚ್ಚಿದ್ದು,ಗೂಗಲ್‌ನ ಮುಖ್ಯ ಆದಾಯ ಮೂಲವಾಗಿದೆ.
 

Udayavani Unicode

Udayavani
*ಅಶೋಕ್‌ಕುಮಾರ್ ಎ