ನೀರು

ನೀರು

ಹಳೇ ಮನೆಯ ಕಲ್ಲಿನ ನೆಲದ ಅಂಗಳದ ಮೇಲೆ ಬೇರೆ ಬೇರೆ ಬಣ್ಣದ ಪ್ರತಿಫಲನ ನೀಡುತ್ತಿದ್ದ ನಿಂತ ನೀರು


ಅಲ್ಲೇ ದೊಡ್ಡ ಡ್ರಮ್ಮಿನಲ್ಲಿ ತುಂಬಿ ಆಳದಲ್ಲಿ ಪಾಚಿ ಕಟ್ಟಿಕೊಂಡ ನೀರು


ಮಳೆ ಬಂದು ತೋಡಿನಲ್ಲಿ ಹರಿದು, ತನ್ನೊಳಗೆ ಕಾಗದದ ದೋಣಿ ಬಿಡಿಸಿಕೊಂಡ ನೀರು


ನೀರು ತುಂಬುವ ಹಬ್ಬದಲ್ಲಿ ಪೂಜಿಸಿದ ಹಂಡೆಯಲ್ಲಿ ಕಾಯಿಸಿದ ನೀರು


ಅದೇ ದೀಪಾವಳಿಯ ಪಟಾಕಿಯಿಂದ ಕೈ ಯದ್ವಾ ತದ್ವಾ ಸುಟ್ಟಾಗ ಕೈಗೆ ತಂಪನ್ನಿತ್ತ ನೀರು


ಕಾವೇರಿ ಗಲಾಟೆಯಲ್ಲಿ ’ಕಾವೇರಿ’ ನಲ್ಲಿಯಿಂದ ಮಾಯವಾದ ನೀರು


ಬಾವಿಯಿರುವ ಮನೆಯಿಂದ ಕಡ ಕೇಳಿ ತಂದ ಕೊಡದ ನೀರು


ಬೋರ್ ವೆಲ್ ದಂಡನ್ನು ಒತ್ತಿ ಒತ್ತಿ ತಂದ ಸ್ವಲ್ಪ ಸ್ವಲ್ಪ ನೀರು


ನೀರಿನ ಕೊರತೆಯಿಂದ ಬಳಸುತ್ತಿದ್ದ ಕೊಂಚ ಕೊಂಚ ನೀರು


ಭದ್ರಾ ಜಲಶಯದಲಿ ಕಂಡ ಅಪಾರ ನೀರು


ಮುಂಬೈ ಸಮುದ್ರದ ಗಲೀಜು ನೀರು


ಸೋಮೇಶ್ವರದ ಸಮುದ್ರದಲ್ಲಿ  ಭಯ ಹುಟ್ಟಿಸುವ ನೀರು


ಡಯೆಟ್ ಮಾಡುವವರ ವಾಟರ್ ಥೆರಪಿಯ ನೀರು


ಬುದ್ಧಿವಂತರಿಂದ ಮಳೆ ಕೊಯ್ಲು ಮಾಡಿಸಿಕೊಂಡ ನೀರು


ಎದುರುಮನೆಯವರಿಂದ ಬೀದಿ ತೊಳೆಸಿಕೊಂಡು ಪೋಲಾಗುತ್ತಿರುವ ನೀರು


ಅಮ್ಮನ ಕಣ್ಣಿಂದ ಕಾರಣವೇ ಇಲ್ಲದೇ ಹರಿದುಬರುವ ನೀರು


ಬಾಯಾರಿಕೆ ನೀಗಲು ಸಮನಾರಿಲ್ಲದ ನೀರು


ನಮ್ಮ ಪ್ರೀತಿಯ ಶೀಟ್ ಮನೆಯಲ್ಲಿ ಸೋರುತ್ತಿದ್ದ ಬಕೆಟ್ ಗಟ್ಟಲೆ ನೀರು


ಕೇಳುವವರೇ ಇಲ್ಲದೇ ಸುಮ್ಮನೆ ಹರಿದುಹೋಗುತ್ತಿರುವ ಮಳೆ ನೀರು


ಮುಂದೆ ಹೇಗೆ ಎಂದು ಆತಂಕ ಹುಟ್ಟಿಸುವ ಕಡಿಮೆಯಾಗುತ್ತಿರುವ ನೀರು


ನೀಲಿ ಹೊನ್ನಾಗಲಿರುವ ಬುದ್ಧಿವಂತ ನೀರು


 

Rating
No votes yet