ಬೆಂಗಳೂರಿನ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

ಬೆಂಗಳೂರಿನ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

 
ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ 'ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ' ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ 'ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ' ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.
ಬೆಂಗಳೂರಿನ ಸ್ಥಳನಾಮಗಳ ಬಗ್ಗೆ ಈಗಾಗಲೇ ಹಲವಾರು ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ. ’ಬೆಂಗಳೂರು’ ಎಂಬ ಸ್ಥಳನಾಮದ ಬಗೆಗೆ ನಡೆದ ಅಧ್ಯಯನಗಳು ಅಸಂಖ್ಯಾತ. ಬೆಂಗಳೂರು ಪದದ ಪ್ರಾಚೀನರೂಪಗಳು ಯಾವ ಶಾಸನದಲ್ಲಾಗಲೀ, ಸಾಹಿತ್ಯಕೃತಿಯಲ್ಲಾಗಲೀ ಉಲ್ಲೇಖಗೊಂಡಿಲ್ಲ. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿಯೂ ’ಬೆಂಗಳೂರು’ ಎಂದು ಸ್ಪಷ್ಟವಾಗಿಯೇ ಇದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು... ಇತ್ಯಾದಿ ಹಲವಾರು ನಿಷ್ಪತ್ತಿಗಳಲ್ಲಿ, ಊಹೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಬಿಡಬೇಕು ಎಂಬುದೇ ಬಹುದೊಡ್ಡ ಸಮಸ್ಯೆಂಇಇಗಿದೆ.
ಸಾಮಾನ್ಯವಾದ ಐತಿಹಾಸಿಕ ಆಕರಗಳನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ನೋಡಲೆತ್ನಿಸಿದಾಗ ದೊರೆತಿದ್ದು, ಕೆನೆತ್ ಅಂಡರ್‌ಸನ್ ಉಲ್ಲೇಖಿಸಿರುವ ವಿಷಯ. ’ಇಲ್ಲಿಯ ಜನ ಹೆಚ್ಚಾಗಿ ತಿನ್ನುವ, ರುಚಿಕಟ್ಟಾದ ಹಾಗೂ ತರಾವರಿ ಕಾಳುಗಳಿಂದಲೇ ಈ ಹೆಸರು ಬಂದಿದೆಯೆಂದು ಇಲ್ಲಿನ ಜನ ನಂಬಿದ್ದಾರೆ’ ಎಂಬುದನ್ನು ಅಂಡರ್‌ಸನ್ ದಾಖಲಿಸಿದ್ದಾನೆ. ಬೇಯಿಸಿ ತಿನ್ನಬಹುದಾದ ಕಾಳುಗಳ ದೆಸೆಯಿಂದಿಲೇ ಬೆಂಗಳೂರು ಹೆಸರು ರೂಪಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು, ಅಷ್ಟೆ.
ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು, ಬದಲಾಗುವುದು, ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು. ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು, ಸಂಸ್ಕೃತೀಕರಣಗುಳ್ಳುತ್ತಿದ್ದವು. ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು. ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು. ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು.
ಕೆಲವು ಉದಾಹರಣೆಗಳ ಮೂಲಕ ಈ ಬದಲಾಗುವ ಪ್ರವೃತ್ತಿಯನ್ನು ಹೆಚ್ಚು ಮನನ ಮಾಡಿಕೊಳ್ಳಬಹುದು.
ಮೂಲ ಹೆಸರುಗಳ ನಿರಾಕರಣೆಯ ಪ್ರವೃತ್ತಿ
ಬಸವನಹಳ್ಳ>ಬಸವನಪುರ>ಬಸವಣ್ಣನಗುಡಿ>ಬಸವನಗುಡಿ>ಬುಲ್‌ಟೆಂಪಲ್
ಬಸವನಹಳ್ಳದ ಪಕ್ಕದಲ್ಲಿದ್ದ ಊರು ಬಸವನಹಳ್ಳಿ. ಬಹುಶಃ ಅಲ್ಲಿ ಬಸವಣ್ಣನ ದೇಗುಲ ಬಂದ ಮೇಲೆ ಬಸವಣ್ಣನಗುಡಿ ಆಗಿತ್ತು. ನಗರೀಕರಣಕ್ಕೆ ಒಳಗಾಗಿ ಬಸವನಪುರ ಎಂದು ಬದಲಾಯಿತು. ಈಗ ಬಸವನಗುಡಿ ಎಂದಾಗಿದೆ. ಆದರೆ ಬಸವನಗುಡಿ ರಸ್ತೆ ಎಂಬುದು ಮಾತ್ರ ’ಬುಲ್‌ಟೆಂಪಲ್ ರೋಡ್’, ’ಬುಲ್‌ಟೆಂಪಲ್ ರಸ್ತೆ’ ಎಂದು ಬದಲಾಗಿದೆ.
ಜಯನಗರ ತಾಯಪ್ಪನಹಳ್ಳಿ ಬ್ಲಾಕ್>ಜಯನಗರ ಟಿ ಬ್ಲಾಕ್
ಪ್ರಸಿದ್ಧಿ ಪಡೆಯುತ್ತಿದ್ದ ಜಯನಗರ ಬಡಾವಣೆಗಳಿಗೆ ಆಧುನಿಕವಾಗಿ ಫರ್ಟ್ಸ್ಟ್ ಬ್ಲಾಕ್, ಸೆಂಕೆಂಡ್ ಬ್ಲಾಕ್ ಎಂದು ಹೆಸರು ಕೊಡುವುದನ್ನು ತಾಯಪ್ಪನಹಳ್ಳಿಯ ಜನ ವಿರೋಧಿಸುತ್ತಾರೆ. ಅವರನ್ನು ಸಮಾಧಾನ ಮಾಡಲೋ ಎಂಬಂತೆ, ತಾಯಪ್ಪನಹಳ್ಳಿಯ ಆರಂಭದ ಅಕ್ಷರ ’ಟಿ’ಯನ್ನು ಬಳಸಿ ಜಯನಗರ ಟಿ ಬ್ಲಾಕ್ ಎಂದು ಹೆಸರು ನೀಡಲಾಗಿದೆ.
ಭೈರಸಂದ್ರ ತಾವರೆಕೆರೆ ಮಡಿವಾಳ ಲೇಔಟ್>ಬಿ.ಟಿ.ಎಂ.ಲೇಔಟ್
ಈ ಮೂರು ಹಳ್ಳಿಗಳನ್ನು ಒಳಗೊಂಡಂತೆ ರೂಪುಗೊಂಡ ಬಡವಾಣೆ ಇಂದಿನ ಬಿ.ಟಿ.ಎಂ. ಲೇಔಟ್. ಸುಂದರವೂ ಆಕರ್ಷಕವೂ ಆದ ಮೂಲದ ಹೆಸರುಗಳನ್ನು ಮರೆಮಾಚಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ತಾರಾಮಂಡಲ್‌ಪೇಟೆ > ಕಬ್ಬನ್‌ಪೇಟೆ
ಟಿಪ್ಪುವಿನ ಕಾಲದಲ್ಲಿ ಆಯುಧ ಕಾರ್ಖಾನೆಯಿದ್ದ ಜಾಗದಲ್ಲಿ ತಲೆಯೆತ್ತಿದ್ದ ಜನವಸತಿ ಪ್ರದೇಶಕ್ಕೆ ತಾರಾಮಂಡಲ್‌ಪೇಟೆ ಎಂದು ಹೆಸರಾಗಿತ್ತು. ಕ್ಷಿಪಣಿಗಳು ಅಲ್ಲಿ ಸಿದ್ಧಗೊಂಡು ಪರಿಕ್ಷೆಗೆ ಒಳಪಡುತ್ತಿದ್ದವು ಎನ್ನಲಾಗುತ್ತಿದೆ. ಅವುಗಳನ್ನು ಪರೀಕ್ಷಿಸುವಾಗ ಆಕಾಶದಲ್ಲಿ ಉಂಟಾಗುತ್ತಿದ್ದ ಬೆಳಕಿನ ವರ್ಣವೈಭವವನ್ನು ಸೂಚಿಸುವಂತೆ ತಾರಾಮಂಡಲ್‌ಪೇಟೆ ಎಂದಾಗಿದ್ದಿರಬೇಕು. ನಂತರ ಮಾರ್ಕ್ ಕಬ್ಬನ್ ಸ್ಮರಣಾರ್ಥ ಕಬ್ಬನ್ ಪೇಟೆ ಎಂದು ಹೆಸರು ಬದಲಾಯಿಸಲಾಯಿತು. ಆದರೂ ಈಗಲೂ ಅಲ್ಲಿಯ ಮುಸಲ್ಮಾನರು ತಾರಾಮಂಡಲ್ ಪೇಟೆ ಎಂದೇ ಕರೆಯುತ್ತಾರೆ. ಅಲ್ಲಿರುವ ಮಸೀದಿಗೆ ತಾರಾಮಂಡಲ್‌ಪೇಟೆ ಮಸೀದೆ ಎಂದೇ ಹೆಸರಾಗಿದೆ.
ಶಾಸನದಲ್ಲಿ ದೇಶಿಪಟ್ಟಣಮ್, ದೊಂಬಲೂರು, ತೊಂಬಲೂರು, ತೊಮ್ಮಲೂರು ಎಂದೆಲ್ಲಾ ಕಾಣಿಸಿಕೊಂಡು ದೊಮ್ಮಲೂರು ಎಂದಾಗಿರುವ ಬಡಾವಣೆಗೆ ಹಿಂದೆ ಭಗತ್‌ಸಿಂಗ್‌ನಗರ ಎಂದು ಹೆಸರು ಇಡುವ ಪ್ರಯತ್ನ ನಡೆದು, ಕೆಲವು ಹೋರಾಟಗಾರರ ವಿರೋಧದಿಂದಾಗಿ ದೊಮ್ಮಲೂರು ಎಂದೇ ಉಳಿದದೆ. ಆದರೆ ಈ ವಿರೋಧ ದೀವಟಿಗೆ ರಾಮನಹಳ್ಳಿ ದೀಪಾಂಜಲಿನಗರವಾದಾಗ ವ್ಯಕ್ತವಾಗಿದ್ದರೆ, ದೀವಟಿಗೆ ಎಂಬ ಅಚ್ಚಗನ್ನಡದ ಪದಕ್ಕೊಂದು ಶಾಶ್ವತ ನೆಲೆ ಸಿಕ್ಕುತ್ತಿತ್ತು.
ಮೂಲಹೆಸರುಗಳನ್ನು ಮರೆಸಿ ಹೆಚ್ಚಾಗಿ ಆಂಗ್ಲ ಪದಗಳ ವ್ಯಕ್ತಿಗಳ ಹೆಸರುಗಳನ್ನು ಮೆರೆಸುವ ಪ್ರವೃತ್ತಿ ಮೇಲಿನ ಉದಾಹರಣೆಗಳದ್ದಾದರೆ, ಕೆಲವು ಸ್ಥಳಗಳಲ್ಲಿ ಅದಕ್ಕೆ ವಿರುದ್ಧವಾದ ಪ್ರವೃತ್ತಿಯನ್ನೂ ಕಾಣಬಹುದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಖಾಸಗಿ ಶಿಕ್ಷಕರಾಗಿದ್ದು, ಮುಂದೆ ಮೈಸೂರು ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದ ಸ್ಟೂವರ್ಟ್ ಫ್ರೇಜರ್ ಸ್ಮರಣಾರ್ಥ ಫ್ರೇಜರ್‌ಟೌನ್ ಅಸ್ತಿತ್ವಕ್ಕೆ ಬಂದಿತ್ತು. ಈಗ ಅದನ್ನು ಪುಲಕೇಶಿನಗರ ಎಂದು ಮರುನಾಮಕರಣ ಮಾಡಲಾಗಿದೆ.
ರೈಲ್ವೆ ಪ್ಯಾರಲಲ್ ಕಾಲೋನಿ ಎಂಬುದು ಸಂಕ್ಷಿಪ್ತಗೊಂಡು ಆರ್.ಪಿ.ಸಿ.ಲೇಔಟ್ ಆಗಿತ್ತು. ಈಗ ಹಂಪಿನಗರವಾಗಿದೆ.
ಒಂದು ಕಾಲದಲ್ಲಿ ಸೌತ್ ಪೆರೇಡ್ ರಸ್ತೆಯಾಗಿದ್ದ ಇಂದಿನ ಎಂ.ಜಿ.ರೋಡ್ನೆಂದು ಸಂಕ್ಷಿಪ್ತವಾಘುವ ಮುನ್ನ ಮಹಾತ್ಮಗಾಂಧಿ ರಸ್ತೆ ಎಂದೇ ಕರೆಸಿಕೊಳ್ಳುತ್ತಿತ್ತು.
ಸಂಸ್ಕೃತೀಕರಣಗೊಳಿಸುವ ಪ್ರವೃತ್ತಿ
ಬಸವನಹಳ್ಳ>ವೃಷಭಾವತಿ
ನಂಜನಗೂಡು ಗರಳಪುರಿಯಾದಂತೆ, ಹುಲ್ಲಹಳ್ಳಿ ತೃಣಪುರಿಯಾದಂತೆ ಬಸವನಹಳ್ಳ ವೃಷಭಾವತಿ ಆಗಿರುವುದನ್ನು ಕಾಣಬಹುದು.
ದೀವಟಿಗೆ ರಾಮನಹಳ್ಳಿ>ದೀಪಾಂಜಲಿನಗರ
ದೀವಟಿಗೆ ಎಂಬ ಅಚ್ಚಗನ್ನಡದ ಪದವನ್ನು, ಅದರ ಮುಂದಿದ್ದ ರಾಮನಹಳ್ಳಿಯನ್ನು ನಿರಾಕರಿಸಿ ದೀಪಾಂಜಲಿನಗರ ಎಂದು ಸಂಸ್ಕೃತೀಕರಣಗೊಳಿಸಿರುವುದು ಸ್ಪಷ್ಟವಾಗಿದೆ.
ಆಂಗ್ಲೀಕರಣಗೊಳಿಸುವ ಪ್ರವೃತ್ತಿ
ಮದರಾಸಿನಿಂದ ಭೂಮಿ ಅಳತೆ ಮಾಡಲು ಬಂದಿದ್ದ ಮೋಜಿಣಿದಾರರುಗಳಿಗೆ ಬಸವನಗುಡಿಯಲ್ಲಿ ನಿವೇಶನ ನೀಡಲಾಯಿತು. ಆ ಭಾಗದ ರಸ್ತೆಗೆ ಬಾಂದುನವರ ರಸ್ತೆ ಎಂದು ಹೆಸರು ನೀಡಲಾಯಿತು. ಮುಂದೆ ಅದು ಸರ್ವೆಯರ‍್ಸ್ ಸ್ಟ್ರೀಟ್ ಎಂದಾಯಿತು. ಬಸವನಗುಡಿ ರಸ್ತೆ ಬುಲ್‌ಟೆಂಪಲ್ ರೋಡ್, ಕೆ.ಆರ್.ಮಾರುಕಟ್ಟೆ ಕೆ.ಆರ್.ಮಾರ್ಕೆಟ್ ಎಂದು ಬದಲಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹಹುದಾಗಿದೆ.
ವ್ಯಕ್ತಿಗಳ ಹೆಸರುಗಳನ್ನು ಇಡುವ ಪ್ರವೃತ್ತಿ
ಇದು ಬೆಂಗಳೂರಿನಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ನಡೆದುಕೊಂಡು ಬಂದಿರುವುದನ್ನು ನೋಡಬಹುದಾಗಿದೆ. ಅದು ಇನ್ನೂ ನಿಂತಿಲ್ಲ! ಅದರಲ್ಲಿ ಕೆಲವು ವಿಶೇಷವಾದವುಗಳನ್ನು ಇಲ್ಲಿ ಗಮನಿಸಲಾಗುವುದು.
ವ್ಯಕ್ತಿಯ ಸ್ಮರಣಾರ್ಥ ಇಟ್ಟ ಹೆಸರುಗಳು
೧೯೩೪ರಲ್ಲಿ ಬೆಂಗಳೂರಿಗೆ ಬಂದಿದ್ದ ಮಹಾತ್ಮಗಾಂಧಿಯವರು, ಬಸವನಗುಡಿಯ ಅಂಗಡಿಬೀದಿಗೆ ಬಂದು ಅಲ್ಲಿ ವಾಚನಾಲಯವೊಂದನ್ನು ಉದ್ಘಾಟಿಸಿದ್ದರು. ಅದರ ಸ್ಮರಣಾರ್ಥ ಆ ಅಂಗಡಿ ಬೀದಿಗೆ ಗಾಂಧಿಬಜಾರ್ ಎಂದೇ ಹೆಸರಾಯಿತು.
ಪ್ರಥಮ ಭಾರತೀಯ ಗೌರ‍್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರ ಸ್ಮರಣಾರ್ಥ ಬಡಾವಣೆಯೊಂದಕ್ಕೆ ಇಟ್ಟ ಹೆಸರು ರಾಜಾಜಿನಗರ.
೧೯೬೦ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ೬೫ನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆದಾಗ, ಅಧಿವೇಶನ ನಡೆದ ಸ್ಥಳಕ್ಕೆ  ಗಾಂಧೀವಾದಿ, ಸ್ವತಂತ್ರ ಹೋರಾಟಗಾರ ಕನ್ನಡಿಗ ಕಾರ್ನಾಡು ಸದಾಶಿವರಾಯರ ಹೆಸರನ್ನು ಇಡಲಾಗಿತ್ತು. ಆ ಸ್ಥಳದಲ್ಲಿ ಅಲ್ಲಿ ಬಡವಾಣೆಯಾದಾಗ, ಅವರ ಸ್ಮರಣಾರ್ಥ ಸದಾಶಿವನಗರ ಎಂದು ಹೆಸರಿಸಲಾಯಿತು.
೧೮೯೪ರಷ್ಟು ಹಿಂದೆಯೇ ರಚನೆಯಾದ ಬೆಂಗಳೂರಿನ ಪ್ರಥಮ ಬಡಾವಣೆಗೆ ೨೮.೧೨.೧೮೯೪ರಂದು ಕಲ್ಕತ್ತದಲ್ಲಿ ನಿಧನರಾದ ಚಾಮರಾಜ ಒಡೆಯರ ಸ್ಮರಣಾರ್ಥ ಚಾಮರಾಜೇಂದ್ರ ಪೇಟೆ ಎಂದು ಹೆಸರಿಡಲಾಯಿತು. ಅದೀಗ ಚಾಮರಾಜಪೇಟೆ ಎಂದಾಗಿದೆ.
ಜಯಚಾಮರಾಜೇಂದ್ರ ಒಡೆಯರವರ ಸ್ಮರಾಣರ್ಥ ಜಯನಗರ, ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿಯವರ ಸ್ಮರಣಾರ್ಥ ಗಿರಿನಗರ ಹೆಸರುಗಳು ರೂಪುಗೊಂಡಿವೆ.
ವ್ಯಕ್ತಿಯ ಹೆಸರುಗಳು ಸಂಕ್ಷಿಪ್ತಗೊಳ್ಳುವ ಪ್ರವೃತ್ತಿ
ಜಯಪ್ರಕಾಶ ನಾರಾಯಣ ನಗರ > ಜೆ.ಪಿ.ನಗರ
ಜಯಚಾಮರಾಜೇಂದ್ರನಗರ > ಜೆ.ಸಿ.ನಗರ
ಕೃಷ್ಣರಾಜೇಂದ್ರನಗರ > ಕೆ.ಆರ್.ನಗರ
ಕೃಷ್ಣರಾಜೇಂದ್ರ ರಸ್ತೆ > ಕೆ.ಆರ್.ರೋಡ್
ಸಿಲ್ವರ್ ಜ್ಯೂಬಿಲಿ ಪಾರ್ಕ್ ರೋಡ್ > ಎಸ್.ಜೆ.ಪಿ.ರೋಡ್
ಕೃಷ್ಣರಾಜೇಂದ್ರ ಮಾರುಕಟ್ಟೆ > ಕೆ.ಆರ್.ಮಾರ್ಕೆಟ್
ನರಸಿಂಹರಾಜ ಕಾಲೋನಿ > ಎನ್.ಆರ್.ಕಾಲೋನಿ
ರವೀಂದ್ರನಾಥ ಟ್ಯಾಗೋರ್ ನಗರ > ಆರ್.ಟಿ.ನಗರ
ತ್ಯಾಗರಾಜನಗರ > ಟಿ.ಆರ್.ನಗರ
ವಿಶ್ವೇಶ್ವರಪುರಂ > ವಿವಿಪುರಂ
ಮೊದಲಿದ್ದ ವ್ಯಕ್ತಿಯ ಹೆಸರುಗಳನ್ನು ನಿರಾಕರಿಸಿ ಬೇರೊಬ್ಬ ವ್ಯಕ್ತಿಯ ಹೆಸರನ್ನು ನೀಡುವ ಪ್ರವೃತ್ತಿ
ದಿಗ್ವಿಜಯ ಮುಗಿಸಿದ ಭರತ ಶಾಸನ ಕೆತ್ತಿಸಲು ಹೋದಾಗ ಪರ್ವತ ಆಗಲೇ ವಿಜಯಶಾಸನಗಳಿಂದ ತುಂಬಿಹೋಗಿರುತ್ತದೆ. ಆಗ ಭರತ ಅದರಲ್ಲಿ ಒಂದಷ್ಟನ್ನು ಅಳಿಸಿ ತನ್ನ ವಿಜಯಶಾಸನವನ್ನು ಹಾಕಿಸುತ್ತಾನಂತೆ. ಹಾಗೆ, ಆಯಾ ಕಾಲದ ವ್ಯಕ್ತಿಗಳ ಗೌರವಾರ್ಥ ಇಟ್ಟ ಹೆಸರುಗಳ ಬದಲಿಗೆ, ವರ್ತಮಾನದ ವ್ಯಕ್ತಿಯ ಹೆಸರನ್ನಿಡುವ ಪ್ರವೃತ್ತಿ ಇದಾಗಿದೆ.
ಭಾರತದ ವೈಸ್‌ರಾಯ್ ಹಾಗೂ ಗವರ್ನರ್ ಜನರಲ್ ಆಗಿದ್ದ ಚಾರ್ಲ್ಸ್ ಬ್ಯಾರನ್ ಹಾರ್ಡಿಂಜ್ ೧೯೧೩ರ ನವಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪಿಗಾಗಿ ಹಾರ್ಡಿಂಜ್ ರಸ್ತೆ ಎಂದು ಹೆಸರಿಟ್ಟಿದ್ದರು. ಮುಂದೆ ಆ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ಬಂದಮೇಲೆ, ಅದು ಪಂಪಮಹಾಕವಿ ರಸ್ತೆ ಎಂದು ಬದಲಾಗಿದೆ.
೧೭೯೧ ಮತ್ತು ೧೭೯೯ರಲ್ಲಿ ನಡೆದ ಮೈಸೂರು ಯುದ್ಧಗಳಲ್ಲಿ ಬ್ರಿಟಿಷರ್ ಪರವಾಗಿ ಹೋರಾಡಿ ಮಡಿದ ೪೨೭ ಜನ ಸೈನಿಕರಗೆ ಶ್ರದ್ಧಾಂಜಲಿ ಪೂರ್ವಕವಾಗಿ, ಯುದ್ಧನಡೆದ ಸ್ಥಳದಲ್ಲಿಯೇ ೩೫ ಅಡಿ ಎತ್ತರದ ಸ್ತಂಭವನ್ನು ನಿರ್ಮಾಣ ಮಾಡಿ, ಸುತ್ತಲೂ ಶಿಲಾಶಾಸನವನ್ನು ಹಾಕಿಸಿ ಸೆನೋಟಾಪ್ ನಿರ್ಮಿಸಲಾಗಿರುತ್ತದೆ. ಅದರ ಎದುರಿಗೆ ರಸ್ತೆಯನ್ನು ನಿರ್ಮಿಸಿ ಸೆನೋಟಾಪ್ ರಸ್ತೆ ಎಂದು ನಾಮಕರಣ ಮಾಡಲಾಗಿರುತ್ತದೆ. ೧೯೬೪ರಲ್ಲಿ ಈ ಸ್ಮಾರಕವನ್ನು ನೆಲಸಮಗೊಳಿಸಿದಾಗ ರಸ್ತೆಗೆ ನೃಪತುಂಗ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಭಾರತದ ವೈಸ್‌ರಾಯ್ ಹಾಗೂ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಇರ್ವಿನ್ ಅವರು ೧೯೨೭ರಲ್ಲಿ ಬೆಂಗಳೂರಿಗೆ ಬಂದಿದ್ದರ ಸ್ಮರಣಾರ್ಥ ಸ್ಕೌಟ್ ಕಚೇರಿಯ ಬಳಿಯ ವೃತ್ತಕ್ಕೆ ಇರ್ವಿನ್ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ಮುಂದೆ ಸ್ಕೌಟ್ ಸಂಸ್ಥೆಗೆ ವಿಶೇಷ ಸೇವೆ ಸಲ್ಲಿಸಿದ ಪ್ರೊ.ಪಿ.ಶಿವಶಂಕರ್ ಅವರ ಹೆಸರನ್ನು ಇಡಲಾಯಿತು.
ಈ ಹೆಸರುಗಳ ಗೊಡವೆಯೇ ಬೇಡ ಎಂದು ಇದ್ದ ಹೆಸರುಗಳನ್ನು ನಿರಾಕರಿಸಿ ಕೇವಲ ಸಂಖ್ಯೆಗಳಿಗೆ ಜೋತುಬಿದ್ದಿರುವ ಪ್ರವೃತ್ತಿಯೂ ಇದೆ. ಉದಾಹರಣೆಗೆ ಚಾಮರಾಜಪೇಟೆಯ ಆಲ್ಬರ‍್ಟ್ ವಿಕ್ಟರ್ ರಸ್ತೆ, ಆಂಜನೇಯ ದೇವಸ್ಥಾನದ ರಸ್ತೆ, ರಾಮೇಶ್ವರ ಗುಡಿ ರಸ್ತೆ, ಸೆಂಟ್ರಲ್ ಬ್ಯಾಂಕ್ ರಸ್ತೆ ಮತ್ತು ಕೆ.ಪಿ.ಪುಟ್ಟಣಶೆಟ್ಟಿ ರಸ್ತೆ ಎಂಬವುಗಳು ಕ್ರಮವಾಗಿ ಚಾಮರಾಜಪೇಟೆ ಫರ್ಸ್ಟ್ ಮೈನ್, ಸೆಕೆಂಡ್ ಮೈನ್, ಥರ್ಡ್ ಮೈನ್, ಫೋರ್ಥ್ ಮೈನ್ ಮತ್ತು ಫಿಫ್ತ್ ಮೈನ್ ಎಂದು ಬಳಕೆಯಲ್ಲಿರುವುದನ್ನು ನೋಡಬಹುದಾಗಿದೆ.
ಹೊಸ ಹೆಸರು ಕೊಟ್ಟರೂ ಹಳೆಯ ಹೆಸರನ್ನು ಬಿಟ್ಟುಕೊಡದ ಪ್ರವೃತ್ತಿ
೧೮೩೦-೪೦ರ ದಶಕದಲ್ಲಿ ರೆಸಿಡೆನ್ಸಿ ಕಟ್ಟಡಕ್ಕೆ ಅಭಿಮುಖವಾಗಿದ್ದ ರಸ್ತೆಗೆ ರೆಸಿಡೆನ್ಸಿ ರಸ್ತೆ ಎಂದು ಹೆಸರೂ ಚಾಲ್ತಿಗೆ ಬಂದಿತ್ತು. ಇತ್ತೀಚಿಗೆ ಅದಕ್ಕೆ ಜನರಲ್ ಕಾರಿಯಪ್ಪ ರಸ್ತೆ ಎಂದು ಹೆಸರಿಟ್ಟಿದ್ದರೂ, ಜನಮಾನಸದಲ್ಲಿ ರೆಸಿಡೆನ್ಸಿ ರಸ್ತೆಯಾಗಿಯೇ ಉಳಿದದೆ.
ಸೌತ್ ಎಂಡ್ ಸರ್ಕಲ್‌ನಲ್ಲಿ ತೀನಂಶ್ರೀಯವರ ಪ್ರತಿಮೆಯನ್ನೂ ಸ್ಥಾಪಿಸಿ, ವೃತ್ತಕ್ಕೆ ತೀನಂಶ್ರೀ ವೃತ್ತ ಎಂದು ಹೆಸರು ನೀಡಿ ದೊಡ್ಡದಾಗಿ ಫಲಕ ಕೂಡ ಹಾಕಿಸಲಾಗಿದೆ. ಆದರೆ ಈಗಲೂ ಸೌತ್ ಎಂಡ್ ಸರ್ಕಲ್ ಎಂದೇ ಜನಜನಿತವಾಗಿದೆ.
ಸೌತ್ ಎಂಡ್ ವೃತ್ತದಿಂದ ನಾಗಸಂದ್ರ ವೃತ್ತದವರೆಗಿನ ರಸ್ತೆಗೆ, ಅದೇ ರಸ್ತೆಯಲ್ಲಿ ವಾಸವಾಗಿದ್ದ ಶತಾಯುಷಿ ದಿವಂಗತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಅವರ ಸ್ಮರಣಾರ್ಥ ನಿಟ್ಟೂರು ಶ್ರೀನಿವಾಸರಾವ್ ರಸ್ತೆ ಎಂದು ನಾಮಕರಣ ಮಾಡಿದ್ದರೂ, ಸೌತ್ ಎಂಡ್ ರೋಡ್ ಎಂದೇ ಚಾಲ್ತಿಯಲ್ಲಿದೆ.
ಮೇಲಿನ ಮೂರು ಉದಾಹರಣೆಗಳು ತೀರಾ ಇತ್ತೀಚಿನವುಗಳು. ಬಹಳ ಹಿಂದೆಯೇ, ೧೮೭೦-೧೮೭೫ರ ನಡುವೆ ಮೈಸೂರು ರಾಜ್ಯದ ಚೀಫ್ ಕಮಿಷನರ್ ಆಗಿದ್ದ ಸರ್ ರಿಚರ‍್ಡ್ ಮೀಡ್ ಅವರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಮೀಡ್ಸ್ ಪಾರ್ಕ್ ಇಂದಿನ ಕಬ್ಬನ್ ಪಾರ್ಕ. ಸ್ವತಃ ಮೀಡ್ಸ್ ಅವರೇ ದೀರ್ಘಾವದಿಗೆ ಕಮಿಷನರ್ ಆಗಿ ಜನಪ್ರಿಯಗೊಂಡಿದ್ದ ಸರ್ ಮಾರ್ಕ್ ಕಬ್ಬನ್ ಸ್ಮರಣಾರ್ಥ, ೧೮೭೩ರಲ್ಲಿ ಕಬ್ಬನ್ ಪಾರ್ಕ ಎಂದು ಹೆಸರು ನೀಡುತ್ತಾರೆ. ಅದು ಜನಪ್ರಿಯವಾಗಿದ್ದಾಗಲೇ, ೧೯೨೭ರಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರಜತ ಪಟ್ಟಬಂಧಮಹೋತ್ಸವ ಸಮಾರಂಭದ ನೆನಪಿಗೋಸ್ಕರ ಕಬ್ಬನ್ ಪಾರ್ಕಿನಲ್ಲಿ, ಅವರ ತಂದೆ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ’ಚಾಮರಾಜೇಂದ್ರಪಾರ್ಕ’ ಎಂದು ಮರುನಾಮಕರಣ ಮಾಡಲಾಯಿತು. ಆದರೆ ಇಂದಿಗೂ ಕಬ್ಬನ್ ಪಾರ್ಕ ಎಂದೇ ಜನಪ್ರಿಯವಾಗಿದೆ.
ಇದ್ದ ಹೆಸರನ್ನು ಮರೆಮಾಚಿಸಿ, ತಮಗೆ ಬೇಕಾದ ಹೆಸರನ್ನು ಇಟ್ಟರೂ, ಜನಮಾನಸದಲ್ಲಿ ಬೇರೆ ಇನ್ನಾವುದೋ ಹೆಸರು ನೆಲೆಸಿಬಿಡುತ್ತದೆ. ಅಂತಹ ಉದಾಹರಣೆಯೆಂದರೆ, ಇಂದಿನ ಗೂಡ್ಸ್‌ಷೆಡ್ ರಸ್ತೆ. ಮೊದಲು ಈ ರಸ್ತೆಗೆ ಕೆಮ್ಮಣ್ಣುಗುಂಡಿ ರಸ್ತೆ ಎಂದು ಅಚ್ಚಗನ್ನಡದ ಹೆಸರಿತ್ತು. ೧೯೪೫-೪೬ರಲ್ಲಿ ಆ ರಸ್ತೆಗೆ ಕಾಂಕ್ರೀಟ್ ಹಾಕಲಾಯಿತು. ಅದಕ್ಕೆ ಕಾರಣಕರ್ತರಾಗಿದ್ದ ಡಾ.ಟಿ.ಸಿ.ಎಮ್. ರಾಯನ್ ಅವರ ಸ್ಮರಣಾರ್ಥ ಟಿಸಿಎಮ್ ರಾಯನ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಆದರೆ ಇಂದು ಜನಬಳಕೆಯಲ್ಲಿ ಅದು ಗೂಡ್ಸ್‌ಷೆಡ್ ರಸ್ತೆಯೆಂದೇ ಚಿರಪರಿಚಿತವಾಗಿದೆ. ಆಶ್ಚರ್ಯವೆಂದರೆ ರಾಯನ್ ವೃತ್ತ ಎಂಬುದು ಚಾಲ್ತಿಯಲ್ಲಿದೆ.
ಇಂದಿನ ಮೆಜೆಸ್ಟಿಕ್ ಪ್ರದೇಶಕ್ಕೆ ಯಾರೂ ಆ ಹೆಸರು ಇಟ್ಟು ಕರೆಯಲಿಲ್ಲ. ಅಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರದ ಅವತ್ತಿನ ಸಾಂಸ್ಕೃತಿಕ ಪ್ರಾಮುಖ್ಯತೆಯ ಫಲವಾಗಿ, ಚಲನಚಿತ್ರ ಪ್ರದರ್ಶನಗಳಿಲ್ಲದ ಕಾಲದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದುದರಿಂದ ಸುತ್ತಮುತ್ತಲಿನ ಜನ ’ಮೆಜೆಸ್ಟಿಕ್ಕಿಗೆ ಹೋಗೋಣ’ ಎಂದು ಹೆಚ್ಚಾಗಿ ಬಳಸುತ್ತಿದ್ದುರಿಂದ ’ಮೆಜೆಸ್ಟಿಕ್’ ಎಂಬ ಹೆಸರು ಸಹಜವಾಗಿಯೇ ನಿಂತುಬಿಟ್ಟಿತು. ಇದೇ ಸಾಲಿಗೆ ಸೇರಿಸಬಹುದಾದ ಇನ್ನೊಂದು ಸ್ಥಳನಾಮವೆಂದರೆ ದೊಡ್ಡಣ್ಣ ಹಾಲ್. 
ಬಸ್‌ನಿಲ್ದಾಣಗಳ ಸ್ಥಳನಾಮಗಳು ರೂಪುಗೊಳ್ಳುವುದು ಸಹಜವಾಗಿಯೇ. ಸಿನಿಮಾ ಥಿಯೇಟರ್‌ಗಳಿದ್ದಂತಹ ಸ್ಥಳಗಳು ಬಹುಬೇಗ ಚಾಲ್ತಿಗೆ ಬಂದುಬಿಡುತ್ತವೆ. ಶಾಂತಿ, ಉಮಾ, ನಂದ ಮುಂತಾದವು. ಈಗ ಶಾಂತಿ ಮತ್ತು ನಂದ ಚಿತ್ರ ಮಂದಿರಗಳು ಈಗ ಇಲ್ಲದಿದ್ದರೂ ಅದೇ ಹೆಸರಿನಿಂದ ಕರೆಯುವುದನ್ನು ಕಾಣಬಹುದಾಗಿದೆ. ಕಾಲೇಜು, ಆಸ್ಪತ್ರೆ, ದೇವಸ್ಥಾನಗಳಿದ್ದರೆ ಅವುಗಳ ಹೆಸರಿನಿಂದಲೇ ಕರೆಯುವುದುಂಟು. ನ್ಯಾಷನಲ್ ಕಾಲೇಜು ಸ್ಟಾಪ್, ಗಣೇಶನ ಗುಡಿ ಸ್ಟಾಪ್, ರಾಮ ಮಂದಿರ ಸ್ಟಾಪ್, ನಿಮ್ಹಾನ್ಸ್ ಸ್ಟಾಪ್, ಜಯದೇವ ಸ್ಟಾಪ್ ಇತ್ಯಾದಿ. ಇತ್ತೀಚಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬ ಎಂ.ಟಿ. ಸರ‍್ಕಲ್ ಎಂದು ಹೇಳಿದ. ನಾನು ಕತೂಹಲದಿಂದ ಅದ್ಯಾವದು ಎಂ.ಟಿ.ಸರ‍್ಕಲ್ ಎಂದು ಕೇಳಿದರೆ, ಅದು ’ಮೀಸೆ ತಿಮ್ಮಯ್ಯ ಸರ‍್ಕಲ್’ ಎಂಬುದರ ಸಂಕ್ಷಿಪ್ತ ರೂಪವಾಗಿತ್ತು. ಆದರೆ ಇವುಗಳೀಗೆ ಆಯುಷ್ಯ ಕಡಿಮೆ ಎಂದು ಹೇಳಬಹುದು. ಆದರೆ ಇದೆಲ್ಲವೂ ಸಹಜವಾಗಿ ನಡೆಯುವ ಕ್ರಿಯೆಯಾದ್ದರಿಂದ ಮಹತ್ವದ್ದಾಗುತ್ತದೆ.
ಒಂದು ಸ್ಥಳಕ್ಕೆ ಸ್ಥಳನಾಮ ರೂಪುಗೊಳ್ಳುವುದು ಸಹಜ ಪ್ರಕ್ರಿಯೆ. ಅಲ್ಲಿ ಒಳ್ಳೆಯದು ಕೆಟ್ಟದು ಎಂಬುದರ, ಹಳೆಯದು ಹೊಸದು ಎಂಬುದರ, ತನ್ನದು ಪರಕೀಯರದು ಎಂಬುದರ ವರ್ತಮಾನದ ವಿವೇಚನೆ ಆ ಪ್ರಕ್ರಿಯೆಗೆ ಇರುವುದಿಲ್ಲ. (ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು, ಊರವರಿಂದ ಬಹಿಷ್ಕೃತನಾಗಿ, ಊರಿನಿಂದ ಹೊರಗೆ ನೆಲೆನಿಂತು, ಅಲ್ಲಿಯೇ ಒಂದು ಊರು ಬೆಳೆಯಲು ಕಾರಣನಾದ ವ್ಯಕ್ತಿಯ ಹೆಸರಿನಿಂದ ಕಳ್ಳಬೋರನಕೊಪ್ಪಲು ಎಂಬ ಊರು ಇಂದೂ ಇದೆ.) ಒಂದು ಸ್ಥಳದ ಹೆಸರುನ್ನು ಬದಲಾಯಿಸುವ ಕ್ರಿಯೆ ಜನಜೀವನದ ಚಲನಶೀಲತೆಯ ಫಲವಾಗಿ ಮೂಡಿದರೆ ಅದು ಚಿರಕಾಲ ನಿಲ್ಲುತ್ತದೆ. ಇಲ್ಲದಿದ್ದರೆ, ಭರತನಂತವರು ಹುಟ್ಟಿ ಇರುವ ಶಾಸನಗಳನ್ನು ಅಳಿಸಿ ಹೊಸ ಶಾಸನ ಬರೆಸುತ್ತಲೇ ಇರುತ್ತಾರೆ. ಇರುವುದನ್ನು ಬದಲಾಯಿಸುವ ಪ್ರವೃತ್ತಿ ಸಲ್ಲದು. ಅದರಿಂದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳು ಕಳಚಿಹೋಗುತ್ತವೆ. ಅದರಿಂದ ನಷ್ಟವಾಗುವುದು ಇತಿಹಾಸದಲ್ಲಿ ಆಗಿ ಹೋದ ವ್ಯಕ್ತಿ ಅಥವಾ ಘಟನೆಗಳಿಗಲ್ಲ; ಬದಲಾಗಿ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಹಾಗೂ ನಾಡಿನ ಸಾಂಸ್ಕೃತಿಕ ಭವಿಷ್ಯಕ್ಕೆ ಹಾನಿಯಾಗುತ್ತದೆ.
 

Comments