ಪ್ರಾಣೇಶರಾಯರ ಪದ ಪರಸಂಗ

ಪ್ರಾಣೇಶರಾಯರ ಪದ ಪರಸಂಗ

 ಪ್ರಾಣೇಶರಾಯರು ಅಂದರೆ ನಮ್ಮ ಬೀದಿಯ ಜೇಸುದಾಸ್, ಡಾ.ರಾಜ್,ಎಸ್.ಪಿ.ಬಿ ಇದ್ದಂಗೆ, ನೋಡಕ್ಕೆ 9ನೇ ತೀರ್ಥಂಕರ ತರಾ ಕಾಣ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದು ನಿವೃತ್ತಿಯಾಗಿರುವ ಇವರು ದಾಸರ ಪದಗಳು ಹಾಡುತ್ತಾ ಕುಳಿತರೆ ಮೈ ಮರೆಯುತ್ತಾರೆ. ಕಂಠ ಸೂಪರ್, ಬಾಡಿ ಮುನ್ಸಿಪಾಲ್ಟಿ. ಸಲ್ಟು ತೆಗೆದ್ರೆ ಅಂಗೇ ಮೂಳೆ ಎಣಿಸ್ಬೋದು. ಮೆಡಿಕಲ್ ಕಾಲೇಜ್ನೋರು ಈ ವಯ್ಯ ಸತ್ತರೆ ಬಾಡಿ ನಮಗೆ ಕೊಡಿ ಅಂದಿದ್ರಂತೆ. ಯಾಕೆ ಸಾ. ಅನಾಟಮಿ ಎಕ್ಸ್ ಪ್ಲೇನ್ ಮಾಡಕ್ಕೆ ಕಣ್ರಪ್ಪಾ,. ಏಥೂ. ಗಾಬರಿ ಮನುಸ್ಯ, ರೀ ಕಾಫಿ ಕುಡಿಯಕ್ಕೆ ಬನ್ನಿ ಅಂತ ಅವರ ಹೆಂಡತಿ ಪಲಗುಬಾಯಿ ಕರೆದರೆ "ಏನೇ ಕಾಫಿನಾ" ಅಂತಾರೆ. ಅಲ್ಲಾ ಫಾರಿಡಾಲ್, ಹಾ ಫಾರಿಡಾಲ, ನನ್ನನ್ನ ಸಾಯಿಸಕ್ಕ ಅಂತದೆ ಪ್ರಾಣಿ, ಏಥೂ.
ದಾಸರ ಪದ ವಾಂಚಕ್ಕೆ ಸುರು ಮಾಡಿದ್ರೆ ಮುಂದಿಟ್ಟ ಊಟ ಹಳಸೋವರೆಗೆ, ಹಾಡು ಮುಗಿದ ಮ್ಯಾಕೆ ನಾಯಿಗೆ ಹಾಕ್ತದೆ. ಆಮ್ಯಾಕೆ ಗ್ಯಾಸ್ ಮಾತ್ರೆ ನುಂಗ್ತದೆ. ಪಾಪಾ ಮುಂಡೇದಕ್ಕೆ ಮಕ್ಕಳಿಲ್ಲ, ಅದಕ್ಕೆ ಹಿಂಗೆ ಹಾಡ್ತದೆ ಅಂತವೆ, ನಮ್ಮೂರಿನ ಜಗಲಿ ಮುದುಕಿಯರ ಸಂಘದ ಸದಸ್ಯರು. ಹಂಗಾದ್ರೆ ಮೆಂಟ್ಲಾ ಅಂದ್ರೆ ಇಲ್ಲಪ್ಪಾ, ಅತೀವ ದೈವ ಭಕ್ತಿ ಅಂತಾರೆ ಅವರ ಹೆಂಡರು ಪಲಗುಬಾಯಿ. ಈ ವಯ್ಯ ಮಾರು ದೂರದಾಗೆ ಬತ್ತಾವ್ರೆ ಅಂದ್ರೆ ಕೈ ಜೋಬ್ನಾಗೆ ಹೋಯ್ತದೆ. ಕಿವಿಗೆ ಹತ್ತಿ ಮಡಗಕ್ಕೆ. ಇಲ್ಲಾಂದ್ರೆ ಹಾಡು ಕೇಳಿ ಕೇಳಿ ನಾವೆಲ್ಲಿ ಪಾಗಲ್ಲು ಆಯ್ತೀವೋ ಎನ್ನೋ ಭಯ ಜನಕ್ಕೆ, ಆದರೆ ಪ್ರಾಣೇಶರಾಯರ ಒಂದೇ ಆಸೆ ಏನಪ್ಪ ಅಂದರೆ, ಕನಕದಾಸ ಪದ ಒಗಿದಿದ್ದಕ್ಕೆ  ಉಡುಪಿ ಕೃಷ್ಣ ಹಿಂದಕ್ಕೆ ತಿರಗುಗಿದೆ. ನನ್ನ ಹಾಡನ್ನು ಕೇಳಿ ನಮ್ಮೂರಿನ ಕೃಷ್ಣ ಮಕ್ಕೊಬೇಕು ಅಲ್ಲಿಯವರೆಗೂ ನನ್ನ ಸುಮಧುರ ಕಂಠದಿಂದ ಬರುವ ಗೀತೆಗಳು ನಿಲ್ಲುವುದಿಲ್ಲ ಅಂತದೆ. ಯಾರು ನಮ್ಮ ಕಟ್ಟಿಗೆ ಒಡೀತಾನಲ್ಲಾ ಆ ಕಿಸ್ನನಾ, 90ಕೊಟ್ರೆ ಅವನೇ ಮಕ್ಕೊಂತಾನೆ ಅಂದ್ರೆ ಅಲ್ಲಪ್ಪಾ ದೇವರು ಕೃಷ್ಣ ಅಂತಾರೆ. ಇವರ ಹಾಡು ಕೇಳಿ, ಕೇಳಿ ನಮ್ಮೂರಿನ ಐಕ್ಳು, ಕನಕದಾಸ ಪಿಚ್ಚರ್ ಬಂದ್ರೆ, ಅಂಗೇ ಹಾಡು ಹೇಳ್ತವೆ. ನಮ್ಮೂರು ವಾಸನೆ ಸೀನಪ್ಪ, ನೋಡ್ಲಾ ಪ್ರಾಣೇಸನ ಅಪರಾವತಾರ ಇವು ಅಂತದೆ.


ಸರಿ ನಮ್ಮ ಊರ್ನಾಗೆ ಯಾವುದೇ ಫಂಕ್ಸನ್ ಆದ್ರೂ ಅಲ್ಲಿ ಪ್ರಾಣೇಸರಾಯರು ಹಾಜರ್, ಅವಾಗ ಹತ್ತಿಗೆ ಸಾನೇ ಡಿಮಾಂಡ್, ಮೂಗಿಗೆ ಮಡಗಕ್ಕಾ ಅಂದ್ರೆ ಅಲ್ಲಪ್ಪಾ ಈ ಮುಂಡೇಮಗ ಬಂದಿದಾನೆ ಕಿವಿಗಪ್ಪಾ ಅಂತಾರೆ ಮಹಿಳೆಯರು. ಕರೀಲಿ ಬಿಡಲಿ, ಜನ ಸಾನೇ ಸೇರಿತ್ತು ಅಂದ್ರೆ, ಪುಕ್ಕಟೆಯಾಗಿ ಒಂದು ಹತ್ತು ದಾಸರ ಪದ ಒಗೆದು ಹೋಗ್ತಾ ಇದ್ರು, ಪುರಂದರ ದಾಸರು ಏನಾದ್ರೂ ಇದ್ದಿದ್ರೆ ಇವರನ್ನೇ ಲಿರಿಕ್ಸ್ ಬರೆಯಕ್ಕೆ ಮಡಿಕ್ಕಂತಿದ್ರು ಅಂತಾನೆ ಸುಬ್ಬ. ಮೊನ್ನೆ ರಂಜಾನ್ ಕಾರ್ಯಕ್ರಮದಾಗೂ ಹೋಗಿ ಹೇಳಿ ಬಂದಿದ್ರು, ಸಹ ಬಾಳ್ವೆ,  ರಾಮ್ - ರಹೀಮ್ ಸಂಗಮ ಅಂದ್ರೆ, ಇದೇ ಅಂತ ಪತ್ರಿಕೇಲಿ ಬಂದಿತ್ತಂತೆ. ಪಾಪ ಒಳಗೆ ಅವರು ನಮಾಜ್ ಮಾಡೋ ಬೇಕಾದ್ರೆ ಇವರು ಮೈಕ್ ಖಾಲಿ ಐತೆ ಅಂತ ಹೋಗಿ ಹೇಳಿದ್ದು, ಹರಿಯೇಏಏಏಏಆಆಆಆಆಆಆ ಹಿಂಗೆ ರಾಗ ಎಳೆದಾಗ "ಅಲ್ಲಾ" ಅಂತ ಕೇಳಿರಬೇಕು ಅಂತಿದ್ದ ಸುಬ್ಬ.

ಮೈಕ್ ನೌಸಾದ್ ಸಾನೇ ಉಗೀತಾ ಇದ್ದ. ಯಾಕಪ್ಪಾ ನಮ್ದೂಗೆ ಮುಲ್ಲಾ ಪ್ರವಚನ ಹೇಳಕ್ಕೆ ಅಂತ ಮಡಗಿದ್ರೆ ಈ ವಯ್ಯ ಹಾಡ್ಗೆ ಹೇಳೈತಿ ಅಂತಿದ್ದ. ಇದೂ ಒಂದು ತರಾ ಪ್ರವಚನ ಕಲಾ ಅಂದ ಸುಬ್ಬ. ಲೇ ಇವನ ಹೆಂಡರು ಇನ್ನೂ ಬದುಕಿದಾಳೆ ಅಂದ್ರೆ ಪ್ರಪಂಚದ 8ನೇ ಅದ್ಭುತ ಅನ್ನೋನು ಸೀನ. ಕಿವಿ ಇನ್ನೂ ಗಟ್ಟಿ ಐತೇನ್ಲಾ ಆ ವಮ್ಮಂದು ಅನ್ನೋನು ಗೌಡಪ್ಗ. ಹೀಗೆ ಪ್ರಾಣೇಸರ ಯಶೋಗಾಥೆ ಹೀಗೆ ಮುಂದುವರೀತಾ ಇರೋಬೇಕಾದ್ರೆ.....
ಒಂದು ದಿನ ಗೌಡಪ್ಪನ ಅವ್ವ ತೀರಿ ಹೋಗಿದ್ರು, ಪಾಪ ಈ ವಯ್ಯನೂ ಸವ ನೋಡಕ್ಕೆ ಅಂತ ಹೋಗಿತ್ತು. ಅಲ್ಲಿ ದುಃಖದಾಗೆ ಎಲ್ಲಾ ಅಳ್ತಾವ್ರೆ, ಸುರುವಾತು ನೋಡಿ ಪದ ಪುಂಜ, ಪಾಪ ಸೀನಪ್ಪ, ಲೇ ಇವನು ಈಗ ಎದ್ದು ಹೋಗಲಿಲ್ಲ ಅಂದ್ರೆ ನಮ್ಮನೆಯಿಂದ ಎರಡು ಸವ ಮಸಾಣಕ್ಕೆ ಹೋಯ್ತದೆ ಅಂದ್ ಮ್ಯಾಕೆ. ಪಲಗುಬಾಯಿ ನಂಗೆ ಈಗಲೇ ವಿಧವೆ ಪೆನ್ಸನ್ ಬೇಡ ಅಂತ ಪ್ರಾಣೇಸಪ್ಪನ್ನ ಕರ್ಕಂಡು ಹೋತು. ಪ್ರಾಣೇಸರಾಯರು ಸಾನೇ ಬೇಜಾರಾಗಿದ್ರು, ಯಾಕ್ ಸಾ, ಅಂದ ಸುಬ್ಬ. ನೋಡೀಪ್ಪಾ, ನನ್ನ ಹಾಡನ್ನು ಕೇಳಿ ದೇವರು ಪ್ರತ್ಯಕ್ಸವಾಗಬೇಕು, ಮಕ್ಕೊಬೇಕು ಎನ್ನುವುದೇ ನನ್ನ ಆಸೆ ಅಂತು ಪ್ರಾಣೇಸು. ಅಂಗಾದ್ರೆ ಪದ ವಾಂಚೋದು ಬಿಡ್ತೀರಾ ಅಂದ ಸುಬ್ಬ. ಹೂಂ ಕಣಪ್ಪಾ ಅಲ್ಲಿಗೆ ನನ್ನ ಹಾಡನ್ನು ನಿಲ್ಲಿಸುತ್ತೇನೆ ಅಂದ್ರು. ಏನು ಮಲಯ ಮಾರುತ ವಿಸ್ಣುವರ್ಧನ್ ಅಂತಿದ್ದ ತಂತಿ ಪಕಡು ಸೀತು.
ಸರಿ ಹೆಂಗಾರು ಮಾಡಿ ಇವರ ಕಾಟ ತಪ್ಪಿಸ್ಕೊಬೇಕು ಅಂತ, ಚಾ ಅಂಗಡಿ ನಿಂಗಂಗೆ , ನೀಲಿ ಪೇಂಟ್ ಬಳಿದು, ಕೈ ನಾಗೆ ಒಂದು ಕೋಲು, ತಲೆ ಮ್ಯಾಕೆ ರಟ್ಟಿನ ಕಿರೀಟ ಇಟ್ಟು, ದೇವರು ಕಿಸ್ನನ ತರಾ ಮಾಡಿದ್ವಿ. ಮಗ ಉರಿ ಅನ್ನೋನು, ನೀರು ಹುಯ್ಯಲೇ ಅಂತಿದ್ದ ಸುಬ್ಬ, ಬಯಲು ನಾಟಕದ ಬಬ್ಬೂರನ ತರಾ ಆಗಿದ್ದ. ಮಗಂದು ಚಾ ಅಂಗಡಿ ಬುದ್ದಿ ಎಲ್ಲಿ ಹೋಯ್ತದೆ, ಕೊಳಲನ್ನು ಚಾ ಹುಯ್ಯೋ ಪಾತ್ರೆ ತರಾ ಮಡಗ್ತಾ ಇದ್ದ. ಚೆಡ್ಡಿ ಕಾಣ್ತದೆ ಕೆಳಗೆ ಉಟ್ಕಳಲಾ ಪಂಚೆಯಾ ಅಂತಿದ್ದ ದೊನ್ನೆ ಸೀನ. ಸರಿ ರಾತ್ರಿ ಹತ್ತಕ್ಕೆ ಹಿಂದಿಂದ ಒಂದು ಲೈಟ್ ಬಿಟ್ಟು ಕಿಸ್ನನ ತರಾ ನಿಲ್ಸಿದ್ದು ಆತು. ಪ್ರಾಣೇಸರಾಯರನ್ನ ಕರ್ಕಂಡು ಬಂದು ತೋರಿಸುತ್ತಿದ್ದ ಹಾಗೇನೇ, ಮೊದಲು ಗಾಬರಿ, ಏ ಕೃಷ್ಣನಾ, ನಂತರ  ಭಾವಪರವಸರಾಗಿ, ವಾಂಚಿದ್ರು, ಒಂದು 20ದಾಸರ ಪದ. ನಾವೆಲ್ಲಾ ಕಿವಿಗೆ ಹತ್ತಿ ಮಡಗಿದ್ವಿ. ಆದ್ರೆ  ಕಿಸ್ನ ಮಕ್ಕೊಂಡೇ ಬಿಟ್ಟ. ನಿಜವಾಗಲೂ ನೋಡಿದ್ರೆ ನಿಂಗ ಮೂರ್ಚೆ ಹೋಗವ್ನೆ. ಮಗಂದು ಅಂಗಿತ್ತು ದಾಸರ ಪದದ ಎಫೆಕ್ಟ್.
ಹೀಗೆ ಪ್ರಾಣೇಸರಾಯರು ಹಾಡೋದು ಬಿಟ್ಟವ್ರೆ, ಆದ್ರೆ ನಿಂಗನ ಕಿವಿ ಮಾತ್ರ ಕಿವುಡು ಆಗೈತೆ. ಮಗಂಗೆ ಚಾ ಕೊಡ್ಲಾ ಅಂದ್ರೆ, ಮಜ್ಜಿಗೆ ತರ್ತಾನೆ. ಅವನ ಹೆಂಡರು ಸುಬ್ಬಂಗೆ ನಿನ್ನ ಮನೆ ಕಾಯ್ವೋಗ ಅಂತ ಸಾಪ ಹಾಕ್ತದೆ. ಪಾಪ ನಿಂಗ, ಕಿಸ್ನ ಆಗಿ ಕಿವಿ ಕಳಕಂಡ. ಈಗ ಹತ್ತಿ ಮಾರೋರು ಊರು ಬಿಟ್ಟವ್ರೆ.

Comments