ನಾ ಕಂಡ ಚಮತ್ಕಾರಿಕ ವಿಷಯ - ಮಾತು

ನಾ ಕಂಡ ಚಮತ್ಕಾರಿಕ ವಿಷಯ - ಮಾತು

ಏಪ್ರಿಲ್ ತಿಂಗಳ ಎರಡನೇ ಭಾನುವಾರ ನಡೆದ ವಾಕ್ಪಥದ ಎರಡನೇ ಹೆಜ್ಜೆಯಲ್ಲಿ ಎಲ್ಲರೂ ಎರಡೆರೆಡು ನಿಮಿಷ "ನಾ ಕಂಡ ಚಮತ್ಕಾರಿಕ ವಿಷಯ"ದ ಬಗ್ಗೆ ಮಾತಾಡಬೇಕು ಎಂದು ಹೇಳಿದಾಗ ನನ್ನೊಳಗೆ ಏನೋ ಒಂದು ರೀತಿ ಗೊಂದಲ ಶುರುವಾಯಿತು. ಏನಪ್ಪಾ ಮಾತಾಡುವುದು ಅಲ್ಲಿ ಹೋಗಿ ಎಂದು ತಳಮಳ ಶುರುವಾಯಿತು. ಸುಮ್ಮನೆ ಕುಳಿತು ಮಾತಾಡುವುದರಲ್ಲಿ ನನಗೇನೂ ಅಭ್ಯಂತರವಿಲ್ಲ. ಆದರೆ ವೇದಿಕೆಯ ಮೇಲೆ ನಿಂತು ಮಾತಾಡುವುದು ಎಂದರೆ ಏನೋ ಒಂದು ರೀತಿ ಮುಜುಗರ, ಭಯ. ಯಾವ ವಿಷಯ ಆರಿಸಿಕೊಳ್ಳುವುದು ಎಂಬ ಗೊಂದಲದಲ್ಲಿದ್ದಾಗಲೇ ನನ್ನ ಸರದಿ ಬಂದು ಬಿಟ್ಟಿತು. ಸರಿ ನೀರಲ್ಲಿ ಇಳಿದಾಗಿದೆ ಇನ್ನು ಮಳೆಯಾದರೇನು ಚಳಿಯಾದರೇನು ಎಂದು ವೇದಿಕೆ ಬಳಿ ಹೋದೆ.

ಮೊದಲು ಎಲ್ಲರಿಗೂ ನನ್ನ ಪರಿಚಯ ಮಾಡಿಕೊಟ್ಟು ವಿಷಯದ ಬಗ್ಗೆ ಮಾತಾಡಲು ಶುರು ಮಾಡಿದೆ. ನಾ ಆರಿಸಿಕೊಂಡ ವಿಷಯ ಮಾತು. ಮಾತು ಎಷ್ಟೊಂದು ಚಮತ್ಕಾರಿಕ ವಿಷಯ ಎಂದರೆ ಒಬ್ಬರೊನ್ನಬರು ಅರಿತುಕೊಳ್ಳಲು ಮಾತು ಎಷ್ಟು ಮುಖ್ಯ. ಎಷ್ಟೊಂದು ಹೊಸ ಜನರ ಪರಿಚಯ ಮಾತಿನ ಮೂಲಕ ಸಾಧ್ಯ ಎಂಬುದು ಸಂಪದದ ಮೂಲಕ ಅರಿವಾಯಿತು.(ಸಂಪದದಲ್ಲಿ ಬರಹಗಳಷ್ಟೇ ತಾನೇ ಮಾತೆಲ್ಲಿ ಬಂತು ಅಂದರೆ, ನಮ್ಮ ಮಾತುಗಳೇ ಬರಹದ ರೂಪ ಪಡೆದುಕೊಳ್ಳುವುದು ಅಲ್ಲವೇ). ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ನಾಣ್ನುಡಿ ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೇ. ನಾವಾಡುವ ಒಂದೇ ಮಾತಿನಿಂದ ಸಂಬಂಧಗಳು ಗಟ್ಟಿಯಾಗಲೂಬಹುದು ಅದೇ ರೀತಿ ಸಂಬಂಧಗಳು ಮುರಿಯಲೂ ಬಹುದಲ್ಲವೇ. ಅದಕ್ಕೆ ದೊಡ್ಡವರು ಹೇಳುವುದು ಏನೇ ಮಾತಾಡುವುದಕ್ಕೆ ಮುಂಚೆ ಯೋಚನೆ ಮಾಡಿ ಮಾತಾಡು ಎಂದು ಹೇಳುವುದು.

ಒಮ್ಮೆ ನಮ್ಮ ಊರಿನಲ್ಲಿ ದೇವಸ್ಥಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನಗೆ ವಂದನಾರ್ಪಣೆ ಮಾಡುವ ಜವಾಬ್ದಾರಿಯನ್ನು ವಹಿಸಿದ್ದರು. ನಾನು ಸಹ ಸಂತೋಷದಿಂದಲೇ ಒಪ್ಪಿಕೊಂಡಿದ್ದೆ. ಮೊದಲಿಗೆ ಎಲ್ಲ ಕಾರ್ಯಕ್ರಮಗಳು ಮುಗಿದು ನನ್ನ ಸರದಿ ಬಂತು. ಕೈಯಲ್ಲಿ ವಂದನಾರ್ಪಣೆಯ ವಿವರಗಳಿದ್ದ ಹಾಳೆಗಳಿದ್ದವು. ಅದನ್ನು ನೋಡಿ ಹಾಗೆಯೇ ಮಾತಾಡುವುದು ಅಷ್ಟೇ ನನ್ನ ಕೆಲಸವಾಗಿತ್ತು. ಅದೇನು ದೊಡ್ಡ ಕೆಲಸ ಎಂದು ವೇದಿಕೆ ಬಳಿ ಹೋಗಿ ನಿಂತು ಒಮ್ಮೆ ಎದುರಿಗೆ ಸೇರಿದ್ದ ಸಭೆಯ ಕಡೆ ನೋಡಿದೆ ಅಷ್ಟೇ ನನ್ನ ಕಾಲ ಕಿರುಬೆರಳಿನಿಂದ ತಲೆಯವರೆಗೂ ಕಂಪನ ಶುರುವಾಯಿತು ಹೇಗೋ ಸುಧಾರಿಸಿಕೊಂಡು ಓದಲು ಶುರು ಮಾಡಿದೆ. ಸುಮಾರು ಐದು ಹಾಳೆಗಳಷ್ಟು ವಿಷಯವನ್ನು ಕೇವಲ ಐದೇ ನಿಮಿಷದಲ್ಲಿ ಓದಿ ಮುಗಿಸಿಬಿಟ್ಟೆ.(ಅಂದರೆ ಚೆನ್ನಾಗಿ ಮಾತಾಡಿದೆ ಎಂದಲ್ಲ, ಭಯದಿಂದ ಯಾವಾಗ ಮುಗಿಸಿ ಅಲ್ಲಿಂದ ಹೊರದುತ್ತೇನೋ ಎಂದು ಅಷ್ಟು ಬೇಗ ಮುಗಿಸಿಬಿಟ್ಟೆ ). ಆ ನಂತರ ಅರಿವಾಯಿತು ಮಾತಿನ ಮಹತ್ವ. ಮಾತೆಂಬುದು ಒಂದು ವರದಾನ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲವೆಂದು.

ಹಾಗೇನೆ ಸಂದರ್ಭಯೋಚಿತವಾಗಿ ಮಾತಾಡುವುದು ಒಂದು ಕಲೆ.  ಅನವಶ್ಯಕವಾಗಿ ವಿಷಯಾಂತರ ಮಾಡಬಾರದು. ನಮ್ಮ ಸುತ್ತ ಇರುವ ವ್ಯಕ್ತಿಗಳ ಭಾವನೆಗಳಿಗೆ ಘಾಸಿಯಾಗದಂತೆ, ಅವರಿಗೆ ಕಿರಿಕಿರಿಯಾಗದಂತೆ ಮಾತಾಡಬೇಕು. ಅದೇ ರೀತಿ ಕೆಲವೊಮ್ಮೆ ಅತೀ ಮೌನವೂ ಅನರ್ಥಗಳಿಗೆ ಕಾರಣವಾಗುವುದು.

ಈ ಮೇಲೆ ಹೇಳಿದ ವಿಷಯಗಳೆಲ್ಲ ನಾನು ವಾಕ್ಪಥದ ಎರಡನೇ ಹೆಜ್ಜೆಯಲ್ಲಿ ಮಾತಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅಂದು ಕೂಡ ನನಗೆ ಕಂಪಿಸಲು ಶುರುವಾಗಿ ಕೊಟ್ಟ ಎರಡು ನಿಮಿಷಕ್ಕೆ ಮುಂಚೆಯೇ ವಾಪಸ್ ಬಂದು ನನ್ನ ಸ್ಥಳದಲ್ಲಿ ಕೂತು ನಿಟ್ಟುಸಿರು ಬಿಟ್ಟಿದ್ದೆ. ಅಸಲಿಗೆ ವಾಕ್ಪಥದ ಮೂಲ ಉದ್ದೇಶವೇ ನಮ್ಮೊಳಗಿರುವ ಮಾತುಗಾರನನ್ನು ಆಚೆ ತರುವುದು. ಈ ನಿಟ್ಟಿನಲ್ಲಿ ವಾಕ್ಪಥ ಯಶಸ್ವಿಯಾಗಲೆಂದು ಕೋರುತ್ತೇನೆ.

(ವಿ.ಸೂ: ಅರ್ಥವಿಲ್ಲದ ಮಾತುಗಳನ್ನಾಡಿದ್ದಾರೆ ಕ್ಷಮಿಸಿ. ನನಗೆ ಮಾತಾಡಲು ಬರುವುದಿಲ್ಲ) ಹಾಗೆಯೇ ನೀವು ಕಂಡ ಚಮತ್ಕಾರಿಕ ವಿಷಯಗಳನ್ನು ಹಂಚಿಕೊಂಡರೆ ಸಂತೋಷ.
Rating
No votes yet

Comments