ಕಲೆಹಾಕಿ ಪದ್ಯ ಬರೆಯುವುದು

ಕಲೆಹಾಕಿ ಪದ್ಯ ಬರೆಯುವುದು

ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ. ನಂತರ ಕಾಫಿ ಕುಡಿದು ಪೇಪರ್ ಓದದೇ ಸ್ನಾನ ಮಾಡಿ ಮೈ ಒರೆಸಿಕೊಂಡು ಒದ್ದೆ ಟವಲನ್ನು ಬೇಗ ಒಣಗುವಂತೆ ಬಿಡಿಸಿ ಹರವುತ್ತೇನೆ. ಕೆಲಸಕ್ಕೆ ಹೊರಡಲು ಹೊತ್ತಾಯಿತ್ತೆಂದು ಓಡುವಾಗ ಏಕತಾನದಲ್ಲಿ ಕೂಗುವ ಕೋಗಿಲೆಯೊ ಕಾಕಟೂನೊ ಮನೆಯ ಮುಂದಿನ ಮರದಲ್ಲಿ ಕೂತಿದ್ದರೆ ಕಿರಿಕಿರಿಗೊಂಡು, ಅದಕ್ಕೆ ಕಲ್ಲು ಹೊಡೆಯುವ ಹಂಬಲವನ್ನು ಹತ್ತಿಕ್ಕಿ ರೈಲ್ವೇ ಸ್ಟೇಷನ್ನಿಗೆ ಓಡುತ್ತೇನೆ. ರೈಲಿನಲ್ಲಿ ಪಕ್ಕದಲ್ಲಿ ಕೂತ ಹುಡುಗಿಯರಿಬ್ಬರು ತಮ್ಮ ಬಾಯ್-ಫ್ರೆಂಡುಗಳ ಬಗ್ಗೆ ಜೋರಾಗಿ ಚರ್ಚಿಸುವುದನ್ನು ಕೇಳದವನಂತೆ ನಟಿಸುತ್ತಾ ಅವರ ಹುಡುಗಾಟದ ಕತೆಯಲ್ಲಿ ಮೈಮರೆಯುತ್ತೇನೆ. ಕೆಲಸದಲ್ಲಿ "ಆ ಪದ್ಯ ಓದಿದ್ದೀಯ, ಈ ಪದ್ಯ ಓದಿದ್ದೀಯ" ಅಂತ ಪೀಡಿಸೊ ಸಹೋದ್ಯೋಗಿಯಿಂದ ತಲೆ ಮರೆಸಿಕೊಂಡು ಓಡಾಡುತ್ತೇನೆ. ಕೆಲಸ ಮುಗಿಸಿ ಕೆಲಸದವರ ಜತೆ ಪಬ್ಬಿನಲ್ಲಿ ಬೀರ್ ಕುಡಿಯುತ್ತಾ, ಎಲ್ಲರ ಹುಚ್ಚು ಮಾತುಗಳಲ್ಲಿ ಏನಾದರೂ ಸಿಕ್ಕತ್ತಾ ಎಂದು ಹುಡುಕುತ್ತೇನೆ. ನನ್ನ ತಲೆಯಲ್ಲಿ ಗುಂಯ್ ಗುಡುತ್ತಿರುವ ಸಾಲೊಂದನ್ನ ಇಂಗ್ಲಿಷಿಗೆ ತರ್ಜುಮೆ ಮಾಡಿ ಮಾತಿನ ಮಧ್ಯೆ ತೂರಿಸಿ ಅವರ ಮುಖದಲ್ಲಿ ಬರುವ ಅಥವಾ ಬರದೇ ಇರುವ ಪ್ರತಿಕ್ರಿಯೆಗೆ ಕಾಯುತ್ತೇನೆ. ಬೆಳಿಗ್ಗೆ ಒಣಗಿಸಿದ ಟವಲ್ಲು ಒಣಗಿಬಿಟ್ಟಿರಬಹುದೆ ಅಂತ ಮನಸ್ಸಿನಲ್ಲಿ ಹಾದು ಹೋಗತ್ತೆ. ಇನ್ನೂ ಕತ್ತಲಾಗದಿದ್ದರೂ, ತುಂಬ ಮುಖ್ಯವಾದ ಕೆಲಸ ಇದೆ ಎಂದು ಸುಳ್ಳು ಹೇಳಿ ಮನೆಯ ರೈಲು ಹತ್ತುತ್ತೇನೆ. ಆವತ್ತಿಡೀ ಪದ್ಯಕ್ಕಾಗಿ ಹೆಕ್ಕಿಟ್ಟುಕೊಂಡದ್ದನ್ನು ಸೀರೆ ಉಟ್ಟಿದ್ದರೆ ಸೆರಗಿನ ತುದಿಯಲ್ಲಿ ಗಂಟು ಹಾಕಿ ಬಿಗಿದುಕೊಂಡು, ಪ್ಯಾಂಟು ಹಾಕಿಕೊಂಡಿದ್ದರೆ ಎಡ ಹಿಪ್ ಪಾಕೆಟಲ್ಲಿ (ಬಲ ಪಾಕೆಟ್ಟಿನಲ್ಲಿ ದುಡ್ಡಿನ ವಾಲೆಟ್ಟಿರುತ್ತದೆ) ಮಳೆಗೆ ಒದ್ದೆಯಾಗದ ಹಾಗೆ ಕಾಪಾಡಿಕೊಂಡು ಮನೆಗೆ ತರುತ್ತೇನೆ. ಎಲ್ಲ ಮಲಗುವುದನ್ನೇ ಕಾದಿದ್ದು ರೂಮಿನ ಬಾಗಿಲು ಹಾಕಿ ಟೇಬಲ್ಲಿನ ಮೇಲೆ ಚೆಲ್ಲಿ ಏನಾದರೂ ವಿನ್ಯಾಸ ಕಾಣುತ್ತದಾ ಅಂತ ತುಂಬಾ ಹೊತ್ತು ಹುಡುಕುತ್ತೇನೆ. ಗೊತ್ತಾಯ್ತ? ನಾನು ಪದ್ಯ ಬರೆಯೋದರಲ್ಲಿ ಗೌರವದ ವಿಷಯ ಏನೂ ಇಲ್ಲ. ಯೋಗಿಯ ಹಾಗೇ ಕಾವ್ಯದ ಧ್ಯಾನ ಅಲ್ಲ. ರೈತನ ಹಾಗೆ ಉತ್ತು ಬಿತ್ತು, ಬೆವರು ಸುರಿಸಿ ಫಸಲು ತೆಗೆಯುವ ಹಾಗೂ ಅಲ್ಲ. ಹೆಚ್ಚೆಂದರೆ, ನಮ್ಮ ಹಕ್ಕಿಪಿಕ್ಕಿಗಳ ಹಾಗೆ ಅಥವಾ ಆಸ್ಟ್ರೆಲಿಯಾದ ಆದಿವಾಸಿಗಳ ಹಾಗೆ ನಾಚಿಕೆ ಬಿಟ್ಟು ಬೇಟೆ ಆಡೋದು, ಅಲೆದಾಡಿ ಹಣ್ಣು, ಬೇರು ನಾರು- ಹೆಕ್ಕಿ ಗುಡ್ಡೆ ಹಾಕಿಕೊಳ್ಳೋದು. ಅಷ್ಟೆ.

Rating
No votes yet