ಸ್ನೇಹ

ಸ್ನೇಹ

ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ.


 


 ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂಡ ನಿನ್ನ ತಪ್ಪುಗಳನ್ನು ಎತ್ತಿ ಆಡುವೆನೆಂದೋ? ಆದರೆ ನಾನ್ಯಾವತ್ತೂ ಬೇರೊಬ್ಬರೆದುರು ನಿನ್ನನ್ನೆಂದಿಗೂ ಅವಮಾನಿಸಲಿಲ್ಲ. ಬೇರೆ ನಿನ್ನ ಗೆಳೆಯರು ನಿನ್ನ ಹಿಂದೆ ನಿನ್ನನ್ನು ಗೇಲಿ ಮಾಡಿದರೂ ನಾನು ನಿನ್ನನ್ನು ಅನೇಕ ಸಂದರ್ಭಗಳಲ್ಲಿ ಸಮರ್ಥಿಸಿಕೊಂಡಿದ್ದೇನೆ. ನಿನ್ನನ್ನು ಅತಿಯಾದ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡಿದ್ದೇನೆ.  ನಿನ್ನೆಲ್ಲಾ ಸಮಸ್ಯೆಗಳನ್ನು ನನ್ನದೆಂದು ತಿಳಿದು ಸಹಾಯ ಮಾಡಿದ್ದೇನೆ. ಗೆಳೆಯನಾಗಿ, ಸ್ನೇಹಿತನಾಗಿ ನಾನು ಹೇಗಿರಬೇಕಿತ್ತೋ ನಿನ್ನೊಂದಿಗೆ ಹಾಗೇ ಇದ್ದೇನೆ. ನಿನಗೆ ಹಿತವಾಗಲೆಂದು ಕೆಲವೊಂದು ವಿಷಯಗಳಲ್ಲಿ ನನ್ನನ್ನು ನಾನೇ ಬದಲಾಯಿಸಿಕೊಂಡಿದ್ದೇನೆ. ಆದರೂ ಏಕೆ ಹೀಗೆ? ನಾನೆಲ್ಲಿ ತಪ್ಪಿದ್ದೇನೆ? ಹೇಳಬಾರದೇ ಗೆಳೆಯಾ?


 


ಈಗೀಗಲಂತೂ, ನನ್ನ ಮಾತುಗಳನ್ನು ಕೇಳಿದರೂ ಕೇಳಿಸದವನಂತೆ ನಟಿಸುತ್ತೀಯ. ಏನೇ ಕೇಳಿದರೂ ಸುಳ್ಳು ಉತ್ತರಗಳು. ನಾನು ತಮಾಷೆ ಮಾಡಿದರೂ ನಿನಗದುಹಿಡಿಸುವುದಿಲ್ಲ. ಯಾಕೆ ನಾನು ನಿನಗೇನು ಕೆಡುಕನ್ನು ಬಗೆದಿದ್ದೇನೆ? ಹೌದು ನಿನ್ನ ಕೆಟ್ಟ ಗುಣಗಳನ್ನು ನಾನು ಪ್ರೋತ್ಸಾಹಿಸಲಿಲ್ಲ ನಿಜ. ಆದರೆ ಜೀವನದಲ್ಲಿ ನನಗೆ ಸಿಗದ ಪ್ರೀತಿ, ಕಾಳಜಿ, ವಿಶ್ವಾಸಗಳನ್ನು ಈ ೯ ವರ್ಷಗಳಲ್ಲಿ ನಾನು ನಿನಗುಣಿಸಿದ್ದೇನೆ. ’ಅತಿಯಾದರೆ ಅಮ್ರತವೂ ವಿಷವಾಗುವುದಂತೆ’. ಬಹುಶ: ಇಲ್ಲೂ ಹಾಗೆಯೇ ಆಯಿತೇ? ಆದರೆ ನಾನು ನಿನ್ನ ಸ್ನೇಹಕ್ಕಾಗಿ ಕಾಯುತ್ತಿದ್ದೇನೆ. ಈ ೯ ವರ್ಷಗಳಲ್ಲಿ ಮೂಡದ ಸ್ನೇಹ ಇನ್ನು ಮೊಳೆಯುವುದೆಂಬ ಭರವಸೆಯೂ ನನಗಿಲ್ಲ. ಅದಕ್ಕೇ ನನಗೀಗ ಹೊಸದೊಂದು ಆಸೆಯಾಗಿದೆ. ಹೌದು! ನಾನು ಸಾಯಬೇಕು! ನಿನ್ನ ಮಗುವಾಗಿ ನಾನು ಮತ್ತೊಂದು ಜನ್ಮ ತಾಳಬೇಕು.  ಆಗಲಾದರೂ ನೀನು ನನ್ನನ್ನು ನಿನ್ನ ಎದೆಗಪ್ಪಿಕೊಳ್ಳುತ್ತೀಯ! ನನ್ನ ಹಣೆಗೊಂದು ಸಿಹಿಮುತ್ತು ನೀಡುತ್ತೀಯ! ನಿನ್ನ ಪ್ರೀತಿಯ ಮಳೆಗರೆಯುತ್ತೀಯ.


 


ದೂರದಲ್ಲೆಲ್ಲೋ ರೇಡಿಯೋದಲ್ಲಿ ಹಾಡು ಕೇಳಿಸುತ್ತಿದೆ, ’ಬಾಳುವಂತ ಹೂವೇ ಬಾಡುವಾಸೆ ಏಕೇ..ಹಾಡುವಂತ ಕೋಗಿಲೇ ಅಳುವ ಆಸೆ ಏಕೇ.......  ಈಸಬೇಕು ಇದ್ದು ಜಯಿಸಬೇಕು....’ ಆ ಹಾಡು ನನ್ನನ್ನು ಮತ್ತೆ ಯೋಚಿಸುವಂತೆ ಮಾಡಿದೆ. ನಿನ್ನೊಬ್ಬನ ಸ್ನೇಹಕ್ಕಾಗಿ ಮಿಕ್ಕೆಲ್ಲರ ಪ್ರೀತಿಯನ್ನು ನಾನೇಕೆ ಕಳೆದುಕೊಳ್ಳಬೇಕು?

Rating
No votes yet

Comments