ಇ-ಲೋಕ-9 (9/2/2007)

ಇ-ಲೋಕ-9 (9/2/2007)

ಬರಹ

ತಂತ್ರಾಂಶ ಸ್ವಾಮ್ಯಚೌರ್ಯ:ಶಿಕ್ಷಕನಿಗೆ ಶಿಕ್ಷೆ ಭೀತಿ
 ರಶ್ಯನ್ ಶಾಲಾ ಹೆಡ್‌ಮಾಸ್ತರರೋರ್ವರು ಸೈಬೀರಿಯಾದ ಜೈಲಿನ ಕಂಬಿ ಎಣಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲೆಕ್ಸಾಂಡರ್‍ ಹೆಸರಿನ ಈ ಶಿಕ್ಷಕ ನಮ್ಮ ಕೆಲ ಶಿಕ್ಷಕರಂತೆ ವಿದ್ಯಾರ್ಥಿನಯರಿಗೆ ಲೈಂಗಿಕ ಕಿರುಕುಳ ನೀಡಿದ ತಪ್ಪನ್ನೇನೂ ಮಾಡಿಲ್ಲ. ಆತ ಮೈಕ್ರೋಸಾಫ್ಟ್ ಕಂಪೆನಿಯ ಅನಧಿಕೃತ ತಂತ್ರಾಂಶಗಳನ್ನು ಶಾಲೆಯ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ,ಮಕ್ಕಳಿಗೆ ಬೋಧಿಸುತ್ತಿದ್ದನಂತೆ. ಮೈಕ್ರೋಸಾಫ್ಟ್ ಕಂಪೆನಿಯು ಅನಧಿಕೃತ ತಂತ್ರಾಂಶ ಬಳಕೆಯ ಕಾರಣ ಕಂಪೆನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಲೋಸುಗ ನಡೆಸುತ್ತಿರುವ ತೀವ್ರ ಕ್ರಮಗಳ ಕಾರಣ ಸಿಕ್ಕಿ ಬಿದ್ದ.ಈಗಾತನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,ಸೈಬೀರಿಯಾದ ಕಾರಾಗೃಹದಲ್ಲಿ ಶಿಕ್ಷೆಯಾಗುವುದು ಸಂಭವನೀಯ.
 ಅಲೆಕ್ಸಾಂಡರ್‌ನ ಸಹಾಯಕ್ಕೆ ನೋಬೆಲ್ ಪ್ರಶಸ್ತಿ ವಿಜೇತ,ಸೋವಿಯತ್ ಯೂನಿಯನ್‌ನ ಮಾಜಿ ಅಧ್ಯಕ್ಷ ಗೊರ್ಬಚೆವ್ ಕೂಡಾ ಮುಂದೆ ಬಂದಿದ್ದಾರೆ. ಶಿಕ್ಷಕನ ಮೇಲೆ ಕರುಣೆ ತೋರಿ, ನ್ಯಾಯಾಲಯದ ದಾವೆಯನ್ನು ಹಿಂತೆಗೆಯುವಂತೆ ಅವರೀಗ ಕಂಪೆನಿಗೆ ಮನವಿ ಮಾಡಿದ್ದಾರೆ."ತಾನು ತಪ್ಪು ಮಾಡಿರುವುದರ ಅರಿವಿಲ್ಲದೆ ಶಿಕ್ಷಕ ಈ ತಪ್ಪು ಮಾಡಿದ್ದಾನೆ.ಆತನನ್ನು ಕ್ಷಮಿಸಿ. ಕಂಪೆನಿಯ ತಂತ್ರಾಂಶ ಅಭಿವೃದ್ಧಿ ಕಾರ್ಯ ಕಠಿನವೆಂಬ ಅರಿವು ನಮಗಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳ ಬಳಕೆ ಮಾಡುತ್ತಿರುವ ರಶ್ಯನ್‌ರಿಗೆ ನಿಮ್ಮ ಕ್ಷಮೆ ಖುಷಿ ಕೊಟ್ಟು ಅದರ ಬಳಕೆ ಹೆಚ್ಚುವುದು ನಿಶ್ಚಿತ", ಎಂದು ಗೋರ್ಬಚೆವ್ ಹೇಳಿದ್ದಾರೆ.
 ಆದರೆ ಕಂಪೆನಿ ಪ್ರಕಟನೆ ನೀಡಿ, ಈ ಖಟ್ಲೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಲ್ಲಿ ತನ್ನ ಪಾತ್ರವಿಲ್ಲವೆಂದು ಹೇಳಿದೆ.
 

ಅಂತರ್ಜಾಲ ಭೇದಿಸಲು ವಿಫಲ ಯತ್ನ
 ಅಂತರ್ಜಾಲವನ್ನು ಮುರಿಯಲು ಕಂಪ್ಯೂಟರ್‍ ಮುರುಕರು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಅಂತರ್ಜಾಲದ ಮಾಹಿತಿ ಹೆದ್ದಾರಿಯನ್ನು ನಿರ್ವಹಿಸುತ್ತಿರುವ ಕಂಪ್ಯೂಟರ್‍ ವ್ಯವಸ್ಥೆ ಪ್ರಭಾವಶಾಲಿಯಾಗಿದ್ದು, ಒಂದು ವ್ಯವಸ್ಥೆ ಕೆಟ್ಟರೂ ಒಡನೆಯೇ ಬೆಂಬಲಿಗ ವ್ಯವಸ್ಥೆ ಅದರ ಕಾರ್ಯವೆಸಗುವ ರೀತಿ ವಿನ್ಯಾಸಗೊಳಿಸಿರುವ ಕಾರಣ, ಅಂತರ್ಜಾಲ ಸುಸೂತ್ರವಾಗಿ ಮುಂದುವರಿದುಕೊಂಡು ಹೋಗುತ್ತದೆ. ಫೆಬ್ರವರಿ ಆರರ ಮಂಗಳವಾರ ಕ್ಯಾಲಿಫೊರ್ನಿಯಾದಲ್ಲಿರುವ ಅಲ್ಟ್ರಾಡಿಎನ್‌ಎಸ್ ಕಂಪೆನಿಯ ಮೂಲ ಸೇವಾದಾತೃಗಳು ಹ್ಯಾಕರುಗಳ ದಾಳಿಗೆ ತುತ್ತಾದುವು. ಈ ಸೇವಾದಾತೃ ಕಂಪ್ಯೂಟರುಗಳು .orgದಿಂದ ಕೊನೆಗೊಳ್ಳುವ ಜಾಲತಾಣಗಳ ವಿವರಗಳನ್ನು ಹೊಂದಿದ್ದ ಕಂಪ್ಯೂಟರುಗಳು.ದಾಳಿಯ ಮೂಲ ಕೊರಿಯಾ ದೇಶವಿರಬಹುದೆಂಬ ಅನುಮಾನವಿದೆ.  ಆದರೆ ಅಂತರ್ಜಾಲ ಬೆಂಬಲಿಗ ವ್ಯವಸ್ಥೆಗೆ ಹಿಡಿದ ಕನ್ನಡಿಯೋ ಎಂಬಂತೆ ಈ ದಾಳಿ ಅಂತರ್ಜಾಲಿಗರ ಗಮನಕ್ಕೆ ಬಾರದೆ ಹೋಯಿತು. ಇದಕ್ಕೆ ಕಾರಣ ಅಂತರ್ಜಾಲದ ವ್ಯವಸ್ಥೆ ಯಾವುದೇ ಅಡೆತಡೆ ಇಲ್ಲದೆ ಮುಂದುವರಿದುದು.(ಸಾಮಾನ್ಯವಾಗಿ ಜಾಲವನ್ನು ಕೆಡಿಸುವುದು,ಮಾಹಿತಿ ಕದಿಯುವುದುhackers ಚಾಳಿ-good hackers ಇದ್ದರೂ ಅವರು ಅಪವಾದ. ಹೀಗಾಗಿ ಮುರುಕರು ಪದವನ್ನು hackersಗೆ ಪರ್ಯಾಯವಾಗಿ ಬಳಸಿದ್ದೇನೆ. ಟೀಕೆಗಳಿಗೆ ಸ್ವಾಗತSmile).
 

ಜನಶಕ್ತಿಯ ಮೂಲಕ ಅಂತರ್ಜಾಲ ಶೋಧ ಕಾರ್ಯjames
 ಅಂತರ್ಜಾಲದಲ್ಲಿ ಬೇಕಿರುವ ಮಾಹಿತಿಗೆ ಹುಡುಕಾಡುವ ಯೋಚನೆ ಬಂದಾಗ ಹೆಚ್ಚಿನವರಿಗೆ ನೆನಪಿಗೆ ಬರುವ ಜಾಲತಾಣ ಗೂಗಲ್. ಯಾವುದೇ ಪದಗುಚ್ಛ ನೀಡಿ ಶೋಧ ಕಾರ್ಯ ನಡೆಸಿದಾಗ ಬರುವ ಫಲಿತಾಂಶದಲ್ಲಿ ಮೊದಲಿನ ಸ್ಥಾನ ಯಾವುದಕ್ಕೆ ನೀಡಬೇಕು,ನಂತರದ ಸ್ಥಾನಗಳು ಯಾವ ಪುಟಕ್ಕೆ ಬರಬೇಕು ಎನ್ನುವುದನ್ನು ಗೂಗಲ್‌ನ ಕಂಪ್ಯೂಟರುಗಳಲ್ಲಿನ ತಂತ್ರಾಂಶ ನಿರ್ಧರಿಸುತ್ತದೆ. ಆದರೆ ಇದನ್ನು ನಿರ್ಧರಿಸುವವರು ಜನ ಸಮುದಾಯವೇ ಆದರೆ ಅದೆಷ್ಟು ಚೆನ್ನ. ಯಂತ್ರವೊಂದು ನಿರ್ಧರಿಸಿದುದು ಜನರ ಮನಕ್ಕೆ ಹಿಡಿಸದಿರಬಹುದು. ಆದರೆ ಜನರೇ ಮತ ನೀಡಿ ನಿರ್ಧರಿಸಿದ ರ್‍ಯಾಂಕಿಂಗ್ ಹೆಚ್ಚು ಸಮಯೋಚಿತ ಶೋಧ ಫಲಿತಾಂಶ ನೀಡದೇ? ಹೀಗೆ ಆಲೋಚಿಸಿದವರು ಇನ್ನಾರೂ ಅಲ್ಲ-"ವಿಕಿಪೀಡಿಯಾ" ಎನ್ನುವ ಆನ್‌ಲೈನ್ ವಿಶ್ವಕೋಶವನ್ನು ಸ್ಥಾಪಿಸಿ, ಜನರ ಪ್ರಯತ್ನದ ಮೂಲಕವೇ ವಿಶ್ವಕೋಶವನ್ನು ಬರೆಸಿ,ಜನರಿಗೆ ಒದಗಿಸಲು ಸಮರ್ಥನಾದ ಜಿಮ್ಮಿ ವೇಲ್ಸ್ ಎನ್ನುವ ತಂತ್ರಜ್ಷ.ವಿಕಿಪೀಡಿಯಾವೀಗ ಅಂತರ್ಜಾಲದ ಹತ್ತನೆಯ ಜನಪ್ರಿಯ ತಾಣ. ತಿಂಗಳಿಗೆ ಬಿಲಿಯನ್ ಪುಟ ವೀಕ್ಷಣೆಯ ಭಾಗ್ಯ ವಿಕಿಪೀಡಿಯಾದ್ದು. ಆದರೆ ಜನಸಮುದಾಯ ಕೇಂದ್ರಿತ ಶೋಧ ಯೋಜನೆ ಯಶಸ್ವಿಯಾಗುವುದೇ ಎನ್ನುವುದು ಚರ್ಚಾರ್ಹ ವಿಷಯವಾಗಿದೆ.ಗೂಗಲ್ ಸೇವೆ ಜನರಿಗೆ ಇಷ್ಟವಾಗಿರುವಾಗ ಇತರ ಶೋಧ ಸೇವೆಗಳನ್ನು ಜನರು ಪ್ರಯತ್ನಿಸಿ ನೋಡುವ ಅವಶ್ಯಕತೆಯೇ ಬರದು ಹೀಗಿರುವಾಗ ಅದು ಯಶಸ್ವಿಯಾಗುವುದಾದರೂ ಹೇಗೆ ಎನ್ನುವುದು ಸದ್ಯಕ್ಕೆ ಉತ್ತರ ಅರಿಯದ ಪ್ರಶ್ನೆ.
 ಅದೇ ವೇಳೆ www.chacha.com ಎನ್ನುವ ಜಾಲತಾಣ ಶೋಧ ಕಾರ್ಯಕ್ಕೆ ಜನರ ನೆರವು ನೀಡುವ ವಿನೂತನ ಸೇವೆ ಆರಂಭಿಸಿದೆ. ಇಲ್ಲಿ ಶೋಧ ಕಾರ್ಯಕ್ಕೆ ಪದಗುಚ್ಛ ನೀಡಿದರೆ, ಸ್ವಯಂಸೇವಕನೋರ್ವ ನಿಮ್ಮ ಸಂಪರ್ಕಕ್ಕೆ ಬಂದು ಹೆಚ್ಚಿನ ವಿವರಗಳನ್ನು ಪಡೆದು, ಸಫಲ ಶೋಧ ನಡೆಸಲು ನೆರವಾಗುತ್ತಾನೆ.
 

ಎರಿಕ್ಸನ್‌ನಿಂದ ಐಫೋನ್‌ನಂತಹ ಫೋನ್
 ಆಪಲ್ ಕಂಪೆನಿಯ ಐಫೋನ್ ಸೆಲ್‌ಫೋನಿನ ಜತೆಗೆ ವಾಕ್‌ಮನ್ ಒದಗಿಸಿ ಸುದ್ದಿ ಮಾಡಿತಷ್ಟೆ? ಅದರ ಬೆನ್ನಲ್ಲೇ ಹಲವು ಕಂಪೆನಿಗಳು ಇದೇ ರೀತಿಯ ವಾಕ್‌ಮನ್ ಉಳ್ಳ ಸೆಲ್‌ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಎಲ್‌ಜಿ ಕಂಪೆನಿಯು ಇದೇ ರೀತಿಯ ಫೋನ್ ಮಾರುಕಟ್ಟೆಗೆ ಬಿಟ್ಟರೆ,ಇದೀಗ ಸೋನಿ ಎರಿಕ್ಸನ್ ಕಂಪೆನಿಯ ಸರದಿ. ಎರಡು ಮಾದರಿಯಲ್ಲಿ ಹೊಸ ಉತ್ಪನ್ನ ಲಭ್ಯ. ಇವುಗಳ ದಪ್ಪ ಒಂದು ಸೆಂಟಿಮೀಟರಿಗೂ ಕಡಿಮೆ.ಗಿಗಾಬೈಟಿನಷ್ಟು ಸ್ಮರಣಸಾಮರ್ಥ್ಯವನ್ನಿವು ಹೊಂದಿವೆ. ಕ್ಯಾಮರಾ ಇದ್ದೇ ಇದೆ.ನಿಸ್ತಂತು ಹೆಡ್‌ಸೆಟ್ ಇರುವ ಕಾರಣ ತಂತಿಯ ಹಂಗಿಲ್ಲದೆ,ವಾಕ್‌ಮನ್ ನುಡಿಸಿದುದನ್ನು ಆಲಿಸಲು ಸಾಧ್ಯ.
*ಅಶೋಕ್‌ಕುಮಾರ್‍ ಎ