ಇಬ್ಬರ ನಡುವಿನ ತೀರ ಹತ್ತಿರದ ಸಂಬಂಧ ಮುಗುಳ್ನಗೆ

ಇಬ್ಬರ ನಡುವಿನ ತೀರ ಹತ್ತಿರದ ಸಂಬಂಧ ಮುಗುಳ್ನಗೆ

ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ್ಲಿ ಹಾಸ್ಯ ಇರುತ್ತದೆ,ಗಮನಿಸುವ ಮನಸ್ಸು ಬೇಕಷ್ಟೆ.
ನಾನು ದಿನನಿತ್ಯ ಪ್ರಯಾಣಿಸುವ ಬಸ್ಸಿನ ಚಾಲಕನ ಸೀಟಿನ ಹಿಂಬದಿಯಲ್ಲಿ ಒಂದು ಬರಹ-'ಏನಾದರೂ ಆಗು ಮೊದಲು ಮಾನವನಾಗು'ಎಂದು.ಯಾರೋ ಕಿಡಿಗೇಡಿಗಳು 'ಮಾನವ'ಪದದ 'ನ' ಅಕ್ಷರವನೇ ಎಗರಿಸಿದ್ದಾರೆ.ಅದು ಈಗ 'ಏನಾದರೂ ಆಗು ಮೊದಲು ಮಾವನಾಗು'ಎಂದಾಗಿದೆ.ಇನ್ನೊಂದು ಕಡೆ 'ಟಿಕೇಟು ಕೇಳಿ ಪಡೆಯಿರಿ' ಎಂದಿತು.ಅದು 'ಟಿ ಕೇಳಿ ಪಡೆಯಿರಿ' ಎಂದಾಗಿದೆ.ಹೀಗೆ ಜೀವನದ ಪ್ರತಿ ಸನ್ನಿವೇಶದಲ್ಲೂ ಹಾಸ್ಯ ಅಡಕವಾಗಿದೆ.
ಹಿರಿಯರೊಬ್ಬರ ಬಳಿ ಸುಮ್ಮನೇ ಮಾತಿಗೆ,'ನೀವು ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಹುಟ್ಟಿದಿರಲ್ಲವೆ?' ಎಂದು ಕೇಳಿದೆ.ಅದಕ್ಕೆ ಅವರು 'ಹೌದು,ಸ್ವಾತಂತ್ರ್ಯ ಸಿಗುವ ಮೊದಲೇ ಹುಟ್ಟಿದೆ.ಸ್ವಾತಂತ್ರ್ಯ ಸಿಕ್ಕಿದ ಮೇಲೆ ಮದುವೆಯಾದೆ'ಎಂದರು.ಅದಕ್ಕೆ ನಾನು 'ಛೇ ಎಂಥ ಕೆಲಸವಾಯಿತು.ಅಷ್ಟು ಕಷ್ಟಪಟ್ಟು ಸ್ವಾತಂತ್ರ್ಯ ಪಡೆದರೂ ಪ್ರಯೋಜನವಾಗಲಿಲ್ಲವಲ್ಲ'ಎಂದೆ.
ರಸ್ತೆ ಬದಿಯಲ್ಲಿ ಸಣಕಲನೊಬ್ಬ ನಿಂತಿದ್ದ.ಅವನ ಟಿಶರ್ಟನ ಮೇಲೆ ಹೀಗೆಂದು ಬರೆದಿತ್ತು;six pack.coming soon.
ಹಾಸ್ಯಕ್ಕೆ ಮಿತಿ,ಗಡಿಗಳಿಲ್ಲ.ಹಾಸ್ಯ ಸರ್ವವ್ಯಾಪಿ.ವಿಶ್ವವ್ಯಾಪಿ.ಸದಾ ಮುಖಗಂಟು ಹಾಕಿಕೊಂಡಿರುವವರನ್ನು ಕಾಣುತ್ತೇವೆ.ಅವರು ಗಂಭೀರವಾಗಿರುವುದನ್ನು ನೋಡಿ ಜನ ಹತ್ತಿರ ಸುಳಿಯಲು ಹಿಂಜರಿಯುತ್ತಾರೆ.ಇನ್ನೂ ಕೆಲವರು ತಾವು ನಗುತ್ತಾ,ಇತರರನ್ನು ನಗಿಸುತ್ತಾರೆ.ಸಿಹಿ ಇದ್ದಲ್ಲಿ ಇರುವೆಗಳಿರುವಂತೆ ಇವರ ಬಳಿ ಜನಬಳಗ ಜಾಸ್ತಿ.ಇಂಥವರ ಬಳಿ ಜನ ಹೆಚ್ಚು ಇರಲು ಇಷ್ಟಪಡುತ್ತಾರೆ.ಇದಕ್ಕೆ ಸಂಬಂದಿಸಿದಂತೆ ಒಂದು ಕಥೆ ಹೀಗಿದೆ-ಒಮ್ಮೆ ರಾಜಾ ಮತ್ತು ಮಂತ್ರಿ ಮಾರುವೇಷದಲ್ಲಿ ಪೇಟೆಯ ಬೀದಿಯಲ್ಲಿ ಸಾಗುತ್ತಿದ್ದರು.ಅಲ್ಲಿನ ಜನಗಳು ವೇಷಧಾರಿ ರಾಜನನ್ನು ನೋಡಿ ಹಾಗೇ ಹೋಗುತ್ತಿದ್ದರು.ಆದರೆ ವೇಷಧಾರಿ ಮಂತ್ರಿಯನ್ನು ನೋಡಿ ಮುಗುಳ್ನಗುತ್ತಿದ್ದರು.ರಾಜನಿಗೆ ಅಚ್ಚರಿಯಾಯಿತು.ರಾಜ, ಮಂತ್ರಿಯನ್ನು 'ಮಂತ್ರಿಗಳೇ ಪ್ರಜೆಗಳೇಕೇ ನಿಮ್ಮನ್ನು ನೋಡಿ ಮುಗುಳ್ನಗು ತ್ತಿದಾರೆ?' ಎಂದು ಕೇಳಿದನು.ಅದಕ್ಕೆ ಮಂತ್ರಿ'ಏಕೆಂದರೆ ನಾನು ಅವರನ್ನು ಕಂಡು ಮುಗುಳ್ನಗುತೇನೆ' ಎಂದನು.
ಹೀಗೆ ನಗುತ್ತಾ ನಗಿಸುತ್ತಾ ಬದುಕನ್ನು ಸುಂದರವಾಗಿಸೋಣ.ಕೊನೆಯದಾಗಿ ಇಬ್ಬರ ನಡುವಿನ ತೀರ ಹತ್ತಿರದ ಸಂಬಂಧವೆಂದರೆ ಅದು ಮುಗುಳ್ನಗೆ.