ಇಷ್ಟುದಿನ ನೆಚ್ಚಿನಂಬಿ

ಇಷ್ಟುದಿನ ನೆಚ್ಚಿನಂಬಿ

ಕವನ


ರಚನೆ: ಹರಿಹರಪುರಶ್ರೀಧರ್

ಗಾಯಕಿ: ಶ್ರೀಮತಿ ಲಲಿತಾ ರಮೇಶ್



ಇಷ್ಟು ದಿನ ನೆಚ್ಚಿ ನಂಬಿ

ಕಷ್ಟ ಪಟ್ಟು ಪಟ್ಟು ಹಿಡಿದು

ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|

ಎಷ್ಟೋ ದಿನ ಗಟ್ಟಿಯಾಗಿ

ಕೆಟ್ಟಮಾತುಗಳನು ಆಡಿ

ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|


ಯಾರೇ ಬರಲಿ ಊರೇ ಇರಲಿ

ಹೊಗಳಿ ಹೊಗಳಿ ಅಟ್ಟಕ್ಕೇರಿ

ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|

ಇಷ್ಟು ದಿನ ಮಾಡಿದ್ದೆಲ್ಲಾ

ಇಲ್ಲೇ ಬಿಟ್ಟು ಹೋಗುವಾಗ

ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು

ಮಂದಿ ಮಾತು ಕಟ್ಟಿಕೊಂಡು

ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|

ನೊಂದು ಬೆಂದು ಮುಂದೆ ಬಂದು

ಹಿಂದಿಂದೆಲ್ಲಾ ಮರೆತು ಕೊಂಡು

ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|


ಸ್ನಾನ ಸಂಧ್ಯಾ ಜಪವ ತಪವ

ನಿತ್ಯಮಾಡಿದೆನೆಂದು ಬೀಗುತ

ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|

ಹೇಳದೆ ಕೇಳದೆ ಅಂತ್ಯವು ಬರಲು

ಕಂತೆಯನೊಗೆಯುವ ಮುಂಚೆಯಾದರೂ

ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||


ಈ ಹಾಡನ್ನು ಈ ಕೆಳಗಿನ ಕೊಂಡಿಯಲ್ಲಿ ಆಲಿಸಬಹುದು.

 

http://vedasudhe.blogspot.com/2011/04/link.html

 

Comments