ಚೆಲುವಿ - ಚೆಲುವ

ಚೆಲುವಿ - ಚೆಲುವ

 

ಚೆಲುವಿ ಮತು ಚೆಲುವ ನಡುವಿನ ಪ್ರೇಮ ಸಂಭಾಷಣೆಯೊಂದು ಕವನವಾಗಿ ಹೊಮ್ಮಿದೆ. ಯೌವ್ವನದಲ್ಲಿ ಆರಂಭವಾದ ಭಾವನೆ ಮಧ್ಯ ಬದುಕಿನಲ್ಲೂ ಹರಿದು ಅರವತ್ತರ ಶಾಂತಿಗೆ ಮಗದೊಮ್ಮೆ ಹಸೆಮಣೆ ಏರುವವರೆಗೂ ಸಾಗುತ್ತದೆ. ಅವರ ನಡುವಿನ ಪ್ರೀತಿ-ಪ್ರೇಮ ಯಾವ ಮಟ್ಟದ್ದು ಎಂಬುದು ಮಾತ್ರ ಎಲ್ಲವನ್ನೂ ಮೀರಿದ್ದು.

 

 

ಚೆಲ್ವಿ ಚೆಲ್ವೀ ಚೆಲ್ವಿ ಚೆಲ್ವೀ

ನನ್ನ ನಿನ್ನ ಮದ್ವೆ ಕಣೆ

ಚೆಲ್ವಿ ಚೆಲ್ವೀ

 

ಚೆಲ್ವ ಚೆಲ್ವಾ ಚೆಲ್ವ ಚೆಲ್ವಾ

ನಂಗು ನಿಂಗು ಲಗ್ನ ಕಣೋ

ಚೆಲ್ವ ಚೆಲ್ವಾ

 

ಕಪ್ಪಾದ ನಿನ್ ಉದ್ದನ್ ಜಡೆ

ಬೆಳ್ಳಗೆ ಆಗ್ದೇ ಇರೋ ಹಾಂಗೆ

ಕೂದಲಿನಾಗೆ ತುಂಬ್ಕೋತೀನ್ ಕಣೆ

ಚೆಲ್ವಿ ಚೆಲ್ವಿ

 

ಬಿಸಿಲು ಮಳೆಯಾಗೆ ದುಡಿಯೋ ನಿಂಗೆ

ಬಿಸಿಲಿಗೆ ಸುಡದಂಗೆ, ಮಳೆಯಾಗ್ ನೆನೀದಂಗೆ

ಛತ್ರಿಯಾಗಿ ಅಡ್ಡಳಾಗಿ ನಿಲ್ತೀನ್ ಕಣೋ

ಚೆಲ್ವ ಚೆಲ್ವ

 

ಗಾಳಿ, ಧೂಳಿಗೆ ಕೆಂಪಾದಾಗ

ನಿನ್ ಬಟ್ಟಲು ಕಂಗಳಿಗೆ

ಹರಳೆಣ್ಣೆ ತಂಪು ಒತ್ತುತ್ತೀನಿ ಕಣೆ

ಚೆಲ್ವಿ ಚೆಲ್ವಿ

 

ಮಧ್ಯಾನ್ನದ ಬಿಸಿಲ್ನಾಗೆ ಊಟ ಹೊತ್ಕೊಂಡ್

ಬರೋ ನನ್ನ ಕೆಂಪು ಕಣಿಗಿಲೆ ಮುಖದೋಳಿಗೆ

ನಂದಿ ಬಟ್ಟಲ ಹೂವು ಕಿತ್ಕೊಡ್ತೀನಿ ಕಣೆ

ಚೆಲ್ವಿ ಚೆಲ್ವಿ

 

ಬಿಸಿಲ್ನಾಗೆ ಬಸವಳಿದ ನಿನ್ನ ಬೆವರಿದ

ಮುಖವನ್ನ ಹಿತವಾಗಿ ಒರೆಸಿ ಊಟದ

ತುತ್ತನ್ನು ನಿನಗುಣ್ಣಿಸಿದರೆ ಅದೇ ತಂಪು ಕಣೋ

ಚೆಲ್ವ ಚೆಲ್ವ

 

ನಿನ್ ಮುಖದ ಮುಗುಳ್ನಗೆ ಮಾಸಧಾಂಗೆ

ನಗೆ ಬೀರೋ ನಿನ್ ತುಟಿಗಳನ್ನ ಹಿಡಿದಿಡೋ

ಕೆನ್ನೆ ನಾನಾಗ್ತೀನ್ ಕಣೆ

ಚೆಲ್ವಿ ಚೆಲ್ವಿ

 

ನಿನ್ ಹಣೆ ಮ್ಯಾಗೆ ಚಿಂತೆಯ ಗೆರೆಗಳು

ಮೂಡಧಾಂಗೆ ಎರಡು ಗೆರೆ ಮಧ್ಯೆ

ಅಡ್ಡಲಾಗಿ ನಾ ನಿಲ್ತೀನ್ ಕಣೋ

ಚೆಲ್ವ ಚೆಲ್ವ

 

ಈಗ ಹೇಳಿದ್ದು ಈಗ್ಲೇ ಮರ್ತಂಗ್ ಆದಾಗ್ಲೂ

ಬೊಚ್ಚು ಬಾಯ್ನಾಗೂ ನಗಿಸ್ತೀನಿ ನಾನು

ನಗೋದನ್ನ ನೀ ಮರೀಬ್ಯಾಡ ಕಣೆ

ಚೆಲ್ವಿ ಚೆಲ್ವಿ

 

ನಂಗೆ ನೂರು ವಯಸ್ಸಾದ ಮೇಲೆ

ನಿನ್ ಕಣ್ ಕಾಣದೇ ಹೋದಲ್ಲಿ

ನಿಂಗೆ ಕಣ್ಣಾಗಿ ನಾ ಕೂರ್ತೀನಿ ಕಣೋ

ಚೆಲ್ವ ಚೆಲ್ವ

 

ದುಖ ಎಲ್ಲ ನಾ ಇಟ್ಕೊಂಡು ಸಿಹಿ ನಿನಗುಣ್ಣಿಸಿ

ಬಾಳಿನುದ್ದ ನೆರಳಿನ್ಹಾಂಗೆ

ನಿನ್ ಜೊತೆ ನೆಡೀತೀನ್ ಕಣೆ

ಚೆಲ್ವಿ ಚೆಲ್ವಿ

 

ನೆರಳಿನ್ಹಾಂಗೆ ಬೇಡ ಗೆಳೆಯ, ಕಾಲ್ ತಾವ ಇರ್ತದೆ

ನನ್ನೆದೆ ಗೂಡಿನಾಗೆ ಬೆಚ್ಚಗೆ ನಿನ್ ಇಟ್ಕೋತೀನಿ

ಸುಖ ದುಖ ಎಲ್ಲ ಒಟ್ಟಿಗೆ ಕಣೋ

ಚೆಲ್ವ ಚೆಲ್ವ

 

ಕಡಲಿನ ನೀರ್ನಾಗೆ ಉಪ್ ಇರೋ ತನಕ

ಹೃದಯಕ್ ಬಡಿತ ನೆಪ್ ಇರೋ ತನಕ

ನಿನ್ ಜೊತೆ ನಾ ಇರ್ತೀನ್ ಕಣೆ

ಚೆಲ್ವಿ ಚೆಲ್ವಿ

 

ಕಡಲಿನ ನೀರ್ನಾಗೆ ಉಪ್ಪು ಇಲ್ದೇ ಹೋಗ್ಲಿ

ನಮ್ ಹೃದಯದ್ ಬಡಿತ ನಿಂತೇ ಹೋದ್ರೂ

ನಮ್ ಪ್ರೀತಿ ಇರೋ ತನಕ, ಸೂರ್ಯ-ಚಂದ್ರ ಇರ್ಲಿ ಕಣೋ

ಚೆಲ್ವ ಚೆಲ್ವ

 

ಚೆಲ್ವಿ ಚೆಲ್ವೀ ಚೆಲ್ವಿ ಚೆಲ್ವೀ

ನಂಗು ನಿಂಗು ಮತ್ತೆ ಮದ್ವೆ ಕಣೆ

ಚೆಲ್ವಿ ಚೆಲ್ವಿ

 

ಚೆಲ್ವ ಚೆಲ್ವಾ ಚೆಲ್ವ ಚೆಲ್ವಾ

ನಂಗು ನಿಂಗು ಅರವತ್ತರ ಲಗ್ನ ಕಣೋ

 

Comments