ಹುಚ್ಚ

ಹುಚ್ಚ

ನಾನೊಬ್ಬ ಹುಚ್ಚ, ಮತಿಯಿಲ್ಲ ನನಗೆ

ಬೇಕುಗಳು ಏನಿಲ್ಲ, ಬೇಡಗಳು ಬೇಕಿಲ್ಲ

ಮಿತ್ರರ ಹಂಗಿಲ್ಲ, ಶತ್ರುಗಳ ಹಗೆಯಿಲ್ಲ

ಬಂಧುಗಳ ಅರಿವಿಲ್ಲ, ಬಂಧಗಳ ಪರಿವಿಲ್ಲ

ಊರಿಂದೂರಿಗೆ ನಿಲ್ಲದ ನನ್ನಲೆವು

ಅಪ್ರಯೋಜಕ, ಲೋಕಕೆ ನನ್ನಿರವು

ಬೈದು ಒದ್ದಿರಿ, ಕಂಡೆನ್ನಲಿ ಲೋಪ

ಆದರೂ ನಗುತಿರುವೆ, ನನಗಿಲ್ಲ ಕೋಪ

ಹುಚ್ಚ ನಾನಾದರೂ, ಮಾನವ ನಾನು

ಹಸಿವಿದೆ ನನಗೆ, ಉಸಿರಾಡುವೆ ನಾನು

ತಿಳಿಯಲು ನಿಮ್ಮ ಮಾನವೀಯತೆಯನು

ದೇವನಿಳಿಸಿರುವ ಪರೀಕ್ಷೆ ನಾನು.

                 

(ಸಿಗ್ನಲ್ಲಿನಲ್ಲಿ ಟ್ರಾಫಿಕ್ಕಿನ ಮಧ್ಯೆ ನಿಂತಿದ್ದ ಬಸ್ಸಿನೊಳಗೆ ಕುಳಿತಿದ್ದವನು ಆ ಹುಚ್ಚನನ್ನೇ ನೋಡುತ್ತಿದ್ದೆ. ಪ್ರತೀ ಕಾರಿನ ಗಾಜಿಗೆ ಬಡಿದು ಭಿಕ್ಷೆ ಬೇಡುತ್ತಿದ್ದರೂ ಯಾವ ಗಾಜೂ ಕೆಳಗೆ ಸರಿಯಲಿಲ್ಲ. ಒಂದು ನಾಣ್ಯವೂ ಅವನ ಕೈಸೇರಲಿಲ್ಲ. ಆದರೂ ಅವನು ತನ್ನ ನಗುವ ಧರ್ಮವನ್ನು ಪಾಲಿಸುತ್ತಾ ಪ್ರಯತ್ನ ಮುಂದುವರೆಸಿದ್ದ. )

 

Rating
No votes yet

Comments