ರಸ್ತೆಯೊಂದರ ರೊಟೀನು!
ಆ ರಸ್ತೆ ಹಲವಾರು ವೈರುಧ್ಯಗಳಿಗೆ ಸಾಕ್ಷಿಯಾಗಿತ್ತು. ಅಮೃತ ಮೆಟರ್ನಿಟಿ ನರ್ಸಿಂಗ್ ಹೋಮ್ ನಿಂದ ಶುರುವಾಗುತ್ತಿದ್ದ ಆ ರಸ್ತೆತಲುಪುತ್ತಿದ್ದುದ್ದು ಹರಿಶ್ಚಂದ್ರ ಘಾಟ್ ನ ಗೇಟಿಗೆ. ಆ ರಸ್ತೆಯ ಏಕೈಕ ಚಿತ್ರ ಮಂದಿರ ಶ್ರೀರಾಮ್ ನಲ್ಲಿ ರಾವಣನ್ ಪ್ರದರ್ಶಿತವಾಗುತ್ತಿತ್ತು. ಆ ರಸ್ತೆಯ ಮಧ್ಯಭಾಗದಲ್ಲಿ ಸ್ಥಾಪಿತವಾಗಿದ್ದ ಪುರಾತನ ವಠಾರದಲ್ಲಿ ಗೃಹಸ್ಥರೂ, ವೇಶ್ಯೆಯರೂ, ಮತ್ತು ಬ್ರಹ್ಮಚಾರಿಗಳು ಸಹಬಾಳ್ವೆ ನಡೆಸುತ್ತಿದ್ದರು. ಆಗಾಗ ಅವರ ಅನ್ವರ್ಧ ನಾಮಗಳು ಸ್ಥಾನ ಪಲ್ಲಟವಾಗುತ್ತಿತ್ತು. ಶ್ರೀ ವೈಷ್ಣವ ಸಭಾ ಮಂದಿರದ ಕಾರ್ಯಾಲಯದ ಪಕ್ಕದಲ್ಲೇ, ಬೈಬಲ್ ಮತ ಪ್ರಚಾರಕರ ಸಂಸ್ಥೆಯು ಕೊಠಡಿ ಬಾಡಿಗೆಗೆ ಹಿಡಿದಿತ್ತು. ಮತ್ತು ಮಹಾವೀರ್ ಕಾಂಪ್ಲಕ್ಸ್ನಲ್ಲಿದ್ದ "ಕ್ಲಾಸಿಕ್ ಮಟನ್ ಸ್ಟಾಲ್"ನಲ್ಲಿ ನೇತು ಹಾಕಿದ್ದ ಚರ್ಮ ರಹಿತ ಅವ್ಯಕ್ತ ಬಣ್ಣದ ಮಾಜಿ ಕುರಿಗಳು ಖಂಡವಿದೆಕೋ ಮಾಂಸವಿದೆಕೋ ಎಂದು ಭಾವನಾತ್ಮಕವಾಗಿ ಸಾರುತ್ತಿದ್ದವು.ಆ ಕಾಂಪ್ಲಕ್ಸ್ ನ ಮೇಲ್ಭಾಗದಲ್ಲಿ " ಅಹಿಂಸಾ ಪರಮೋ ಧರ್ಮ" ಎಂದು ಮಾಸಲು ಬಣ್ಣದ. ಅಕ್ಷರದಲ್ಲಿ ಬರೆಯಲಾಗಿತ್ತು.
ಆ ರಸ್ತೆಗೆ ಬೆಳಕಾಗುತ್ತಿದ್ದುದ್ದು ಕೋಳಿ ಕೂಗಿನಿಂದಲ್ಲ. ಎಂ ಎಸ್ ಸುಬ್ಬುಲಕ್ಷ್ಮಿಯ ಸುಪ್ರಭಾತದಿಂದಲ್ಲ.ಸೂರ್ಯೋದಯದಿಂದಂತೂ ಅಲ್ಲವೇ ಅಲ್ಲ.
ಚಾಯ್ ದುಕಾನಿನ ಠಣ್ ಠಣಾ ಗ್ಲಾಸುಗಳ ಶಬ್ದದಿಂದ. ಪೇಪರ್ ಹಾಕುವ ಹುಡುಗರ ಸೈಕಲ್ ಬೆಲ್ಲುಗಳಿಂದ,ರಸ್ತೆ ಕಸ ಗುಡಿಸುವವರ ಪೊರಕೆ ಸದ್ದಿನಿಂದ. ಆ ರಸ್ತೆಯ ಜನ ಕೆಂಪು ಸೂರ್ಯನನ್ನು ಕಂಡೇ ಇರಲಿಲ್ಲ. ಎಲ್ಲರೂ ಅರ್ಧ ನಿದ್ರೆಯಲ್ಲೇ ಎದ್ದು. ಅರಿವು ಮೂಡುವ ಹೊತ್ತಿಗೆ, ಬಿಸಿಲು ಜನ ಜಂಗುಳಿಯ ಮಧ್ಯೆ ಅಕ್ಷರಶಃ ಮರೀಚಿಕೆಯಾಗಿ ಚಿನ್ನಾಟವಾಡುತಿತ್ತು.
ಮಾರ್ಕೆಟ್ ನಿಂದ ಬಂದ ಗಾಡಿ ಫುಟ್ ಪಾತಿ ನಲ್ಲಿದ್ದ ಕಸದ ತೊಟ್ಟಿಯ ಪಕ್ಕದಲ್ಲಿ ತರಕಾರಿ ಮೂಟೆ ಚೆಲ್ಲಿ ಹೊರಟು ಹೋಯಿತು.ಕಸದ ತೊಟ್ಟಿ ಮತ್ತು ತರಕಾರಿ ಮೂಟೆಗಳಿಂದ ಒಂದೇ ತೆರನಾದ ವಾಸನೆ ಬರುತ್ತಿದ್ದುದರಿಂದ , ಅಕಸ್ಮಾತ್ತಾಗಿ ಅವುಗಳ ಹೊಡೆತಕ್ಕೆ ಸಿಕ್ಕ ಬೇರೆ ಬೇರೆ ಪಾದಾಚಾರಿಗಳು ಏಕೋಭಾವದಿಂದ ಮುಖ ಹಿಂಡುತ್ತಿದ್ದರು.
ಪ್ರೊಡಕ್ಷನ್ ಮತ್ತು ಸೇಲ್ಸ್ ಎರಡೂ ಒಂದೇ ಬುಟ್ಟಿಯಲ್ಲಿ ಮಾಡುತ್ತಿದ್ದ ಹೂ ಮಾರುವ ಹೆಂಗಸರು, ಹೂ ಕಟ್ಟುತ್ತಾ ಮಧ್ಯೆ ಮಧ್ಯೆ ವ್ಯಾಪಾರ ಮಾಡುವ ಸದ್ದಿನಿಂದಾಗಿ ಜಲಕಂಠೇಶ್ವರನ ಗುಡಿಯ ಹೊರಸಾಲು ಗಿಜಿಗುಡುತ್ತಿತ್ತು.ದೇವಸ್ಥಾನದ ಹೊರಭಾಗದ ಟೀ ಸ್ಟಾಲಿನಲ್ಲಿ ಇಬ್ಬರು ಸಜ್ಜನರು, ಭಸ್ಮಾಲಂಕೃತರಾಗಿ ಆಗ ತಾನೆ ದೇವರ ದರ್ಶನ ಮುಗಿಸಿ ಸ್ವರ್ಗಕ್ಕೋ, ಕೈವಲ್ಯಕ್ಕೋ ಪ್ರಾರ್ಧನೆ ಮಾಡಿ ದೇವಸ್ಥಾನದ ಹೊರಭಾಗದ ಟೀ ಸ್ಟಾಲಿ ಲಿನಲ್ಲಿ ಟೀ ಗೆ ಆರ್ಡರು ಮಾಡುತ್ತಿದ್ದರು. ಹಾಗೇ ಯಥಾನುಕೂಲ ಬೀಡಿ ಯಾ ಸಿಗರೇಟು ಹಚ್ಚಿ, ಒಂದೇ ವೃತ್ತ ಪತ್ರಿಕೆಗೆ ಮುಗಿಬೀಳುತ್ತಾ ದೇಶಾವರಿಯಾಗಿ ಮಾತಾಡಿಕೊಳ್ಳುತ್ತಿದ್ದರು.
ಮುದಿ ಸಜ್ಜನ --ಛೇ ಛೇ ಕಾಲ ಕೆಟ್ಟು ಹೋಯ್ತು ನೋಡಿ
ಯುವ ಸಜ್ಜನ-- ಯಾಕೆ ಯಜಮಾನ್ರೇ?
ಮುದಿ ಸಜ್ಜನ--(ಕುತ್ತಿಗೆ ಮುಟ್ಟಿಕೊಳ್ಳುತ್ತಾ) ದೇವರ ಸತ್ಯವಾಗಲೂ ಹೇಳುತ್ತಿದ್ದೀನಿ ( ಪೇಪರನ್ನು ಮುಟ್ಟುತ್ತಾ) ಕೈಲಿ
ಸರಸ್ವತಿ ಹಿಡ್ಕೊಂಡು ಸುಳ್ಳಾಡಬಾರದು ಜಲ ಕಂಠೇಸ್ವರನ ಗುಡಿ ಇರೋ ರೋಡ್ನಾಗೆ ಇಂತಾ ಕೆಲ್ಸಾನಾ ಮಾಡೋದಿವ್ರು?
ಯುವ ಸಜ್ಜನ-- ಯಾರು? ಏನ್ಮಾಡಿದ್ರು?
ಮುದಿ ಸಜ್ಜನ-- ಆ ರೋಡ್ ಮಧ್ಯದಲ್ಲಿ ಅಳ್ಳೀ ಮರದೆದುರ್ಗೆ ಹಳೇ ಮನೆ ಇದ್ಯಲ್ಲಾ?
ಯುವ ಸಜ್ಜನ-- ಯಾವುದು? ಆ ಕೆಂಪು ವಠಾರವೇ?
ಮುದಿ ಸಜ್ಜನ--ಅಲ್ಲೇ ಅಲ್ಲೇ, ಹಗಲು ಸೂಳೆಯರ ಬಿಡಾರ ಆಗ್ಬುಟ್ಟಿದೆ. ಬೇಕಾದ್ರೆ ನೀವೇ ಈಗ ಹೋಗಿ
ನೋಡಿ. ಅಲ್ಲಿ ನಡೀದೀರೋ ಅನಾಚಾರ ಇಲ್ಲಾ
ಯುವ ಸಜ್ಜನ-- ಥೂ ಥೂ
ಮುದಿ ಸಜ್ಜನ- ಸುಮ್ನೇ ಮಾತಿಗಂದೇ ಅನ್ನಿ. ನಿಮ್ಮನ್ನ ನೋಡಿದ್ರೆ ಆ ಥರಾ ಅಲ್ಲಾ ಅಂತ ಗೊತ್ತಾಗತ್ತೇ
ಯುವ ಸಜ್ಜನ-- ಪೋಲಿಸ್ನೋರೇನು ಕತ್ತೆ ಕಾಯ್ತಾ ಇದಾರ?
ಮುದಿ ಸಜ್ಜನ-- ಎಲ್ಲಾ ಅವ್ರವ್ರಲ್ಲೇ ಅಂಡ್ರುಸ್ಟಾಂಡಿಂಗು. ನಾನು ಎರಡ್ಮೂರು ಸಾರಿ ಕಂಪ್ಲೇಟು ಕೊಟ್ಟೇ
ಬಂದು ನೋಡಿದ ಹಾಗೆ ಮಾಡಿ ಮಾಮೂಲಿ ಇಸ್ಕೊಂಡು ಹೊರಟೋದ್ರು.
ಯುವ ಸಜ್ಜನ-- ಹೌದೇ? ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅಂತ ನಮಗ್ಯಾಕೆ ಬಿಡಿ ಆ ಮಾತು
ಎನ್ನುತ್ತಾ ಮಾತು ಮುಗಿಸಿ, ದುಡ್ಡು ಕೊಟ್ಟು ಕವಲು ದಾರಿಯಲ್ಲಿ ಹೊರ ನಡೆದರು.
ಜಲ ಕಂಠೇಶ್ವರನಿಗೆ ಮಹಾ ಮಂಗಳಾರತಿಯಾಗಿ ಬಾಗಿಲು ಹಾಕುವ ಹೊತ್ತಿಗೆ ಇಡೀ ರಸ್ತೆಯೇ ಅವಸರಕ್ಕೆ ಬಿದ್ದು, ಗರ್ಭಪಾತವಾದ ಬಸುರಿಯಂತೆ ಹೊರಳಾಡುತ್ತಿತ್ತು.
ತಿಪ್ಪೆಯ ಪಕ್ಕದಲ್ಲಿ ಬಿದ್ದಿದ್ದ ತರಕಾರಿ ಮೂಟೆ ಬಿಚ್ಚಿದ ವ್ಯಾಪಾರಿ ಅಲ್ಲೇ ಮಾರಾಟ ಶುರುವಿಟ್ಟುಕೊಂಡ.ಬರುವವರಿಗೆಲ್ಲಾ ಒಂದು ಕೇಜಿ, ಅರ್ಧ ಕೇಜಿ ತರಕಾರಿ ಮಾರುತ್ತಾ ಅದರಲ್ಲಿ ಅರ್ಧಂಬರ್ಧ ಕೊಳೆತಿರುವ ಮಾಲನ್ನು ತಿಪ್ಪೆಗೆಸೆಯುತ್ತಾ " ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ" ಎಂದು ಆಡುಭಾಷೆಯಲ್ಲಿ ಘಂಟಾಘೋಷವಾಗಿ ಹೇಳುತ್ತಾ, ಪಕ್ಕದಲ್ಲಿದ್ದ "ಬ್ರಾಹ್ಮಣರ ಫಲಾಹಾರ ಮಂದಿರ" ದ ಮಾಲೀಕ ಅಂಕೇ ಗೌಡ್ರಿಗೆ "ಹೋಲ್ ಸೇಲ್ನಾಗೆ ತಕ್ಕೊಂಡ್ರೆ ಸಸ್ತ ಹಂಗೆ ಹಾಕ್ಕೋಡ್ತೀನಿ" ಅಂತಾ ಪುಸಲಾಯಿಸುತ್ತಿದ್ದ.ಹಣೆಯ ಮೇಲೆ ಅಯ್ಯಂಗಾರಿ ನಾಮವನ್ನೂ ಇಟ್ಟುಕೊಂಡು, ಎರಡೂ ಕಿವಿಗೆ ಭಸ್ಮ ಹಚ್ಚಿಕೊಂದು ಸರ್ವಧರ್ಮ ಸಮನ್ವಯಕಾರರಾಗಿ ಕಾಣುತ್ತಿದ್ದ ಗೌಡರು ಅವನ ಮಾತಿಗೆ ಬ್ರೇಕ್ ಹಾಕುವಂತೆ ಲಿಗಾಡಿ ನಗೆ ನಗುತ್ತಾ, ಆ ನಗುವಿನಲ್ಲೇ ಅವನ ಪ್ರಪೋಸಲ್ ನ್ನು ತಿರಸ್ಕರಿಸುತ್ತಿದ್ದರು.
ಬಿಸಿಲೇರುತ್ತಾ ಹೋದ ಹಾಗೆ ಜನಸಂದಣಿ ಹೆಚ್ಚುತ್ತಾ ಹೋಯಿತು.ರಸ್ತೆ ಮಧ್ಯದ ಕೆಂಪು ವಠಾರದ ಮನೆಯೊಂದರಿಂದ ಕೊನೆಯ ಗಿರಾಕಿ ಕೂಡ ಹೊರಟು ಹೋಗಿ, ಇಡೀ ರಸ್ತೆಯಲ್ಲಿ ಅದೊಂದು ವ್ಯಾಪಾರಿ ಕೇಂದ್ರ ಮಾತ್ರ ಗಿರಾಕಿಯಿಲ್ಲದೇ ಭಣ ಗುಟ್ಟತೊಡಗಿತು. ಅದೇ ವಠಾರದ ಆ ಮನೆಯ ಪಕ್ಕದಲ್ಲಿದ್ದ ಸಂಸಾರಸ್ಥರ ಮನೆಯೊಂದರ ಯಜಮಾನಿ, ತುಳಸಿ ಕಟ್ಟೆಯ ಬಳಿ ಬಂದು ಅವರ ಪಾಪಕ್ಕೆ ಹಿಡಿಶಾಪ ಹಾಕುತ್ತಿರುವಾಗಲೇ ಅವಳ ಮಗಳು ಅವರ ಪುಣ್ಯಕ್ಕೆ ಕೊರಗುತ್ತಿದ್ದಳು.
ಆದರೆ ಆ ನಿತ್ಯ ಸುಮಂಗಲಿಯರಿಗೆ ಪಾಪ ಪುಣ್ಯಗಳ ಅರಿವೇ ಇರಲಿಲ್ಲ. ಅವರು ರಸ್ತೆಯ ಇತರ ನಾಗರೀಕರಿಗಿಂತ ಭಿನ್ನವಾಗಿ ಬದುಕುತ್ತಿದ್ದರು . ಸುಖವೇ ಅವರ ಕಾಯಕವಾಗಿದ್ದರಿಂದ , ಇತರರು ಹಪಹಪಿಸುವ ಸುಖ ಇವರಿಗೆ ಕಷ್ಟವಾಗಿ, ಇತರರ ಸಂಸಾರ ತಾಪತ್ರಯದ ಕಷ್ಟ ಇವರಿಗೆ ಸುಖವೆಂದು ತೋರಿ, ಇವರ ಅಸೂಯೆಯ ಕಣ್ಣಿಗೆ ಗುರಿಯಾಗುತ್ತಿತ್ತು. ಹರಿಯುತ್ತಿದ್ದ ಕೊಚ್ಚೆಯ ಪಕ್ಕದಲ್ಲೇ ಕುಳಿತ ಅಭಿಸಾರಿಕೆಯರು ತಳ್ಳುಗಾಡಿಯವನು ತಂದು ಕೊಟ್ಟ ಟೀ ಕುಡಿಯುತ್ತಲೋ, ತಲೇ ಬಾಚಿ ಕೊಳ್ಳುತ್ತಲೋ ದಾರಿ ಹೋಕರೆಡೆಗೆ ಕೊಳಕು ದೃಷ್ಟಿ ಬೀರುತ್ತಾ ತಮ್ಮ ಉದ್ಯಮದ ಜಾಹೀರಾತು ಮತ್ತು ಪ್ರಮೋಟಿಂಗ್ ಮಾರ್ಕೆಟಿಂಗ್ ಎರಡನ್ನೂ ಒಟ್ಟಿಗೇ ನೀಡುತ್ತಿದ್ದರು.
ಆ ಓಣಿಯ ದೃಶ್ಯಗಳು ಮಾನವೀಯತೆಯ ಪದಗಳನ್ನು ಮೀರಿದ್ದಾಗಿತ್ತು. ತಾಯಿ- ಮಗುವಿನ ಸಂಭಂಧ ಅಲ್ಲಿ ಭಾಂಧವ್ಯದ ಎಲ್ಲೆ ದಾಟಿತ್ತು. ನಾಲ್ಕು ವರ್ಷದ ಮಗುವಿಗೆ ತಾಯಿ ತನ್ನ ಕೈಯಾರೆ ಅಗ್ಗದ ವಿಸ್ಕಿ ಕುಡಿಸುತ್ತಿದ್ದಳು. ಇದರಿಂದ ಮಗು ನಿದ್ರಿಸಿದರೆ, ಅದು ಹಸಿವಿನಿಂದಾಗಿ ಹಟ ಮಾಡಿ ಅಳುವುದಿಲ್ಲವೆಂದೂ,ಮತ್ತು ತನ್ನ ರಿವಾಜಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದೂ ಆಕೆಗೆ ತಿಳಿದಿತ್ತು. ವಿಸ್ಕಿಯ ಘಾಟಿಗೆ ಮಧ್ಯೆ ಮಧ್ಯೆ ಕೆಮ್ಮುತ್ತಿದ್ದ ಮಗುವನ್ನು ತಲೆ ನೇವರಿಸುತ್ತಾ ಸಂತೈಸಿ, ಪೂರ್ತಿ ಕುಡಿದು ಮುಗಿಸಿದರೆ ಬಂಬಾಯಿ ಮಿಠಾಯಿ ಕೊದಿಸುವುದಾಗಿ ಪುಸಲಾಯಿಸುತ್ತಿದ್ದಳು. ಆದರೆ ಬೊಂಬಾಯಿ ಮಿಠಾಯಿವಾಲಾ ಬರುವ ಹೊತ್ತಿಗೆ ಇಬ್ಬರೂ ಎಚ್ಚರವಿರುವುದಿಲ್ಲವೆಂದು, ತಾಯಿಗೆ ಸ್ಪಷ್ಟವಾಗಿಯೂ, ಮಗುವಿಗೆ ಅಸ್ಪಷ್ಟವಾಗಿಯೂ ತಿಳಿದಿತ್ತು.
ಮಧ್ಯಾಹ್ನ ಅಲ್ಲಿ ಊಟದ ಸಮಯವಲ್ಲ. ಅವರಿಗೆಲ್ಲಾ ಹಸಿವಾದಾಗ ಊಟದ ಸಮಯ. ಅಂಕೇಗೌಡರ ಬ್ರಾಹ್ಮಣರ ಫಲಾಹಾರ ಮಂದಿರ ಗಿಜಿಗುಟ್ಟತೊಡಗಿತು. ಅಂಕೇಗೌಡರು ಲಗುಬಗೆಯಿಂದ ಕೊಳಗದಲ್ಲಿದ್ದ ಚಿತ್ರಾನ್ನವನ್ನು ಅಂಗೈಮೇಲಿನ ಬಾಳೆಲೆಗೆ ಸೌಟಿನಿಂದ ಹಾಕಿ, ಅದನ್ನು ಕತ್ತರಿಸಿಟ್ಟ ಹಳೇ ನ್ಯೂಸ್ ಪೇಪರ್ ಮೇಲಿಟ್ಟು, ಗಿರಾಕಿಗೆ ಕೊಡುವ ಮುನ್ನ , ಸಣ್ಣ ಸವಟಿನಿಂದ ಅದರ ಮೇಲೆ ಚಟ್ನಿಯನ್ನು ಎರಚುತ್ತಿದ್ದರು. ಅದು ಗಿರಾಕಿಯ ಮುಖ ಬಟ್ಟೆಗಳ ಮೇಲೆಲ್ಲಾ ಸಿಡಿದರೂ ಅವರು ಕ್ಯಾರೇ ಮಾಡುತ್ತಿರಲಿಲ್ಲ.ಆ ಮಧ್ಯಾಹ್ನದ ಬೆವರಿನಲ್ಲಿ ಅವರ ಹಣೆ ಮತ್ತು ಕಿವಿಯ ಮೇಲಿದ್ದ ಗಂಧ, ಬೂಧಿ ನಾಮಗಳೆಲ್ಲಾ ಬದುಕಿರುವಾಗಲೇ ನಿರನಾಮವಾಗುತ್ತಿತ್ತು. ಅವರು ತಮ್ಮ ಪಂಚೆಯೊಳಗಿನಿಂದಲೇ ಅಂಡಿಗೆ ಕೈ ಹಾಕಿತುರಿಸಿಕೊಳ್ಳುತ್ತಾ, ಎರಡನೇ ಬಾರಿ ಚಟ್ನಿಗೆ ಬಂದ ಗಿರಾಕಿಯನ್ನು ವಕ್ರ ದೃಷ್ಟಿಯಿಂದ ನೋಡುತ್ತಾ, ದೇವರು ಕೊಟ್ಟ ಕೈಗಳನ್ನು ಸಮರ್ಥವಾಗಿ ಬಳದುತ್ತಿದ್ದರು.
ಅವರ ಹೋಟೆಲಿನ ಎದುರು ರಾರಾಜಿಸುತ್ತಿದ್ದ "ಮನೆ ಶೈಲಿ ಭೋಜನ ಮತ್ತು ಉಪಹಾರ" ಎಂಬ ಫಲಕವನ್ನು ನೋಡಿ ಊರು ಬಿಟ್ಟು ಬಂದವನೊಬ್ಬ ಹಾಕಿದ ಕಣ್ಣೀರು, ಮನೆಯೇ ಇಲ್ಲದ ಬಿಕನಾಸಿಗಳ ಸಂಭ್ರಮದ ಮುಂದೆ ಇಂಗಿಹೋಯಿತು.
ಅಷ್ಟರಲ್ಲಿ ತರಕಾರಿ ವ್ಯಾಪಾರಿಯೂ ಅವರ ಹೋಟೇಲಿನಲ್ಲೇ ಮುಖ ಕೈಕಾಲು ತೊಳೆದುಕೊಂಡು, ಆಗಷ್ಟೇ ಶುದ್ದವಾಗಿದ್ದ ಕೈಗಳನ್ನು, ಹೆಗಲ ಮೇಲಿದ್ದ ಕೊಳಕು ಟವಲಿಗೆ ವರೆಸಿಕೊಳ್ಳುತ್ತಾ ಒನ್ ಪ್ಲೇಟ್ ಚಿತ್ರಾನ್ನಕ್ಕೆ ಆರ್ಡ್ರು ಮಾಡಿ ನಿಟ್ಟುಸಿರುಡುತ್ತಾ ಕುಳಿತು ಕೊಂಡ. ಟೊಮಾಟೋ ಮತ್ತು ಸೊಪ್ಪು ಕೊಳೆಯುತ್ತಿರುವುದರ ಬಗ್ಗೆ ಅವನಿಗೆ ಕಳವಳ ಕಾಡತೊಡಗಿತ್ತು. ಅದಕ್ಕಾಗಿ ಅಂಕೇಗೌಡರನ್ನು "ಎಷ್ಟು ಕೊಡ್ತೀರಾ ಹೇಳಿ?" ಎನ್ನುತ್ತಾ ಮಾತಿಗೆಳೆದ.
ಅಷ್ಟರಲ್ಲಿ ಮಧ್ಯಾಹ್ನ ನಿಧಾನವಾಗಿ ಸರಿಯುತ್ತಿತ್ತು. ಯಾವುದೋ ದೂರದ ಸಂಬಧಿಯ ಸೂತಕ ಆವರಿಸಿಕೊಂಡಾ ಹಾಗೆ ರಸ್ತೆಯಲ್ಲಿ ಜನ ಸ್ವಲ್ಪ ಕಡಿಮೆಯಾದರು.ಹೋಟೆಲಿನ ಮುಂದೆ ಇಟ್ಟಿದ್ದ ಕಸದ ಬುಟ್ಟಿ ತನ್ನ ಸಂಗ್ರಹಣಾ ಸಾಮರ್ಥ್ಯ ಮೀರಿದ್ದರಿಂದ, ಅಲ್ಲೆಲ್ಲಾ ಪ್ಲಾಸ್ಟಿಕ್ ಕವರು, ಬಾಳೆಲೆ, ಅನ್ನದ ಅವಶೇಷಗಳು, ಕಾಗದದ ಚೂರುಗಳು ಹಾರಾಡುತ್ತಿದ್ದವು. ಅದರಲ್ಲಿದ್ದ ಅನ್ನಕ್ಕಾಗಿ ಕಾಗೆಗಳು ಒಂದಗುಳ ಕಂಡರೂ ತನ್ನ ಬಳಗವನ್ನು ಕರೆಯುತ್ತಾ ಗದ್ದಲವೆಬ್ಬಿಸಿದವು. ಹೆಚ್ಚು ಕಡಿಮೆ ಅದರ ಬಳಗವೆಲ್ಲಾ ಅಲ್ಲೇ ಇತ್ತು.ರಸ್ತೆ ಬದಿಯ ಮರದ ಕೆಳಗೆ, ಎಲೆ ಅಡಿಕೆ ಹಾಕುತ್ತಲೋ, ಹರಟೆ ಕೊಚ್ಚುತ್ತಲೋನಿದ್ದೆ ಹೊಡೆಯುತ್ತಲೋ ಇದ್ದ ಕಾರ್ಪೋರೇಷನ್ ಕಸ ಗುಡಿಸುವ ಹೆಂಗಸರು, ತಮ್ಮ ಸೀರೆ ಮೇಲಕ್ಕೆಕಟ್ಟಿ ಚುರುಕಾಗಿ ತಮ್ಮ ಕೆಲಸಕ್ಕೆ ತೊಡಗಿದರು. ಕಾಗೆಗಳು ಎಂಜಲು ಬಾಳೆಲೆಗಳನ್ನು ಅತ್ತಿಲಿಂದಿತ್ತಇತ್ತಲಿಂದತ್ತ ಎಳೆದಾಡುತ್ತಿತ್ತು. ಇವರ ವಿರುದ್ದ ಕಾರ್ಯಾಚರಣೆಯಿಂದಾಗಿ ಹೋಟೆಲಿನ ಅಂಗಳಸ್ವಚ್ಚವಾಯಿತಾದರೂ, ಇಡೀ ರಸ್ತೆ ಮತ್ತಷ್ಟು ಗಲೀಜಾಗಿ, ಟೀಂ ವರ್ಕ್ ಪದಕ್ಕೆ ಹೊಸ ಭಾಷ್ಯ ಬರೆಯಿತು.
ಇಲ್ಲಿ ಕೇವಲ ಶ್ರಮಿಕರು, ಕಾರ್ಮಿಕರು, ಕೂಲಿಗಳು, ಅವಿದ್ಯಾವಂತರು ಮುಂತಾದ ತೃತೀಯ ವರ್ಗದಜನ ಮಾತ್ರವೇ ಅಲ್ಲ, ಕೆಲವೊಂದು ಸೃಜನ ಶೀಲ ಪ್ರಭೃತಿಗಳಿಗೆ ಈ ರಸ್ತೆ ಸ್ಪೂರ್ತಿಯ ತಾಣವಾಗಿತ್ತು.ಇಲ್ಲಿ ಅವರಿಗೆ ಸಕಲ ಸೌಲಭ್ಯಗಳೂ ಚೀಪಾಗಿ ದೊರೆಯುತ್ತಿದ್ದರಿಂದ, ಒಬ್ಬ ನಿರ್ದೇಶಕ ಮತ್ತು ಒಬ್ಬಚಿತ್ರಕಲಾಕಾರ ಈ ರಸ್ತೆಯ ಕೊಳಕು ಕೋಣೆಗಳಲ್ಲಿ ವಾಸಿಸುತ್ತಿದ್ದರು. ಹುಲುಸಾಗಿ ಬೆಳೆದ ಗಡ್ಡ, ಕೊಳೆಲುಂಗಿ-ಬನೀನು, ಕಣ್ಣುಗಳಲ್ಲಿ ಶತಮಾನದ ಸೋಂಬೇರಿತನ, ಸರ್ವಕಾಲವೂ, ಸರ್ವಋತುವೂಬೆರಳಲ್ಲಿ ಉರಿಯುತ್ತಿರುವ ಸಿಗರೇಟು, ಹತ್ತಿರ ಹೋದರೆ ಘಮ್ಮೆನ್ನುವ ವಿಸ್ಕಿಯ ಕಂಪು........... ಇವೇ ಮುಂತಾದ ಗುಣಲಕ್ಷಣಗಳಿಂದ ಯಾರು ಬೇಕಾದರೂ ಅವರನ್ನು ಸೃಜನಶೀಲರೆಂದು ಗುರುತಿಸಬಹುದಾಗಿತ್ತುಅವರ ಕೆಲಸವೆಂದರೆ, ಮಧ್ಯಾಹ್ನ ಎದ್ದು ನಡುರಾತ್ರಿಯವರೆಗೂ ಈ ರಸ್ತೆಯನ್ನು ಎಡೆಬಿಡದೆ ನೋಡುವುದುಆ ರಸ್ತೆಯ ದೃಶ್ಯಗಳನ್ನು ನೋಡಿ ನಿರದೇಶಕ ಅವುಗಳಿಗೆ ಸಂಭಾಷಣೆ ಹೊಸೆಯುತತಿದ್ದರೆ, ಅಂಥದೇ ಸಂಭಾಷಣೆಗಳನ್ನು ನೋಡಿ ಚಿತ್ರಕಾರ ಅವುಗಳನ್ನು ದೃಶ್ಯವಾಗಿ ಪರಿವರ್ತಿಸುತ್ತಿದ್ದ
ಹೋಟೆಲಿನ ಅಂಗಳದಿಂದ ಉಧ್ಬವವಾಗಿದ್ದ ಕೊಚ್ಚೆ ನೀರು, ಮಣ್ಣು ರಸ್ತೆಯಲ್ಲಿ ಗುಪ್ತಗಾಮಿನಿಯಾಗಿಹರಿದು, ಟಾರು ರೋಡಿನಲ್ಲಿ ಮೈತುಂಬುತ್ತಿತ್ತು. ಅಂಗಡಿಯಂಗಡಿಗೂ ಹೋಗಿ, ಯಾರಿಗೂ ಅರ್ಥವಾಗದ ತತ್ವಪದ ಹಾಡಿ ಭಿಕ್ಷೇ ಕೇಳುತ್ತಿದ್ದ ದಾಸಯ್ಯ, ಆ ಕೊಚ್ಚೆಯನ್ನು ದಾಟುವಾಗಹುಶಾರಾಗಿ ತನ್ನ ಕಾವಿ ನಿಲುವಂಗಿಯನ್ನು ಮೇಲೆತ್ತಿಕೊಂಡು. "ತಂಬೂರಿ ಮೀಟುತ್ತಾ, ಭವಾಬ್ದಿದಾಟು" ವವನಂತೆ ಕಾಣುತ್ತಿದ್ದ.
ಸಂಜೆಯಾಗುತ್ತಿದ್ದ ಹಾಗೆ ರಸ್ತೆ ಹುಚ್ಚು ಸಡಗರದಿಂದ ತುಂಬಿ ಹೋಯಿತು. ಬೆಳಗಿನಿಂದ ವ್ಯಾಪಾರಮಾಡಿ ಬೇಸತ್ತಿದ್ದ ತರಕಾರಿಯವನು, ಮಿಕ್ಕ ತರಕಾರಿಯನ್ನು ಅಂಕೇಗೌಡ್ರಿಗೆ ಹೇಳಿದ ರೇಟಿಗೆ ಕೊಟ್ಟು, ಮಿಕ್ಕ ಅರೆ ಬರೆ ಕೊಳೆತ ಮಾಲನ್ನು ತಿಪ್ಪೆಗೆಸೆದು ಮನೆಕಡೇ ನಡೆದ.ಬೆಳಗ್ಗೆ ಟೀ ಅಂಗಡಿಯಲ್ಲಿ ಕೂತಿದ್ದ ಯುವ ಸಜ್ಜನ, ಅತ್ತಿತ್ತ ನೋಡುತ್ತಾ ಕಳ್ಳ ಮುಖ ಹೊತ್ತು ಕೆಂಪುಮನೆಯ ಒಳಗೆ ಹೊರಟಿದ್ದ. ಅದನ್ನು ದೂರದಿಂದ ಗಮನಿಸುತ್ತಿದ್ದ ಮುದಿ ಸಜ್ಜನ ಹಲ್ಕಾ ನಗೆ ನಗುತ್ತಾ ಗಿರಾಕಿ ಹಿಡಿದ ಸಂತಸದಲ್ಲಿದ್ದ.
ಅಂಕೇ ಗೌಡರ ಹೋಟೆಲಿನಲ್ಲಿ ಪಾತ್ರೆ ತೊಳೆಯುವವರು, ತಿಪ್ಪೆ ಯ ಬಳಿ ಹೋಗಿ ತರಕಾರಿಯವನುಬಿಸಾಕಿದ್ದ ಮಾಲಿನಲ್ಲಿ ಚಲೋ ಮಾಲನ್ನು ಆಯುತ್ತಿದ್ದರು.ಜಲಕಂಠೇಶ್ವರನಿಗೆ ಪ್ರದೋಶ ಪೂಜೆ ಮುಗಿದು ಹೋಗಿ ಅರ್ಚಕರು ಬಾಗಿಲು ಹಾಕುವ ಹೊತ್ತಿಗೆ,]ಘಂಟಾ ನಾದದ ಸವಂಡಿಗೆ ಹೆದರಿ ಓಡಿ ಹೋಗಿದ್ದ ಬಾವಲಿಗಳು ಮತ್ತು ಗುಡಿಯೊಳಗೆ ಬಂದು ಜ್ಹಾಂಡಾ ಊರಿದ್ದವು.
ಬಾರಿನೊಳಗೆ ಶ್ರೀ ವೈಷ್ಣವ ಸಭಾದ ಕಾರ್ಯದರ್ಶಿ ಮತ್ತು ಬೈಬಲ್ ಮತ ಪ್ರಚಾರಕರ ಸಂಘದ ಮನುಷ್ಯರಿಬ್ಬರೂ ಪರಮಾತ್ಮನ ಬುರುಡಿ
ಬಿಚ್ಚಿ, ಆಧ್ಯಾತ್ಮಿಕಅನ್ವೇಷಣೆಯಲ್ಲಿ ತೊಡಗಿದ್ದರು. ಬಾರು ಹುಡುಗ ಬಂದು ಹೊತ್ತಾಯಿತೆಂದು ಎಚ್ಚರಿಸುವ ವೇಳೆಗೆ, ಮತ ಪ್ರಚಾರಕನು
" ನಾನೇ ಸತ್ಯವೂ, ಮಾರ್ಗವೂಆಗಿದ್ದೇನೆ" ಎಂದು ಘೋಷಿಸುತ್ತಿದ್ದ. ಕಾರ್ಯದರ್ಶಿ ಹುಸಿ ಶೃದ್ದೆ ನಟಿಸುತ್ತಾ ತಾದ್ಯಾತ್ಮದಿಂದ ಕೈಲಿದ್ದ
ಲೋಟವನ್ನೇ ದೃಷ್ಟಿಸುತ್ತಿದ್ದ.ಜಲಕಂಠೇಶ್ವರನ ಗರ್ಭಗುಡಿಯನಂದಾ ದೀಪದ ಎಣ್ಣೆ ಖಾಲಿಯಾಗಿ, ಆಗಿ ಹೋಗಿ, ಗರ್ಭಗುಡಿಯಲ್ಲೆಲ್ಲಾ
ಬತ್ತಿ ಸುಟ್ಟುಹೋದ ಕಮಟುವಾಸನೆ ತುಂಬಿತ್ತು.ಬಾನಿನಲ್ಲಿದ್ದ ಚಂದಿರನನ್ನು ನೋಡಲು ಯಾರೂ ಇರಲಿಲ್ಲ, ಪಾಪ ಶ್ರಮಜೀವಿಗಳು ಆಗಲೇ ನಿದ್ರಿಸಿ ಬಿಟ್ಟಿದ್ದರು.