ಬಿರುಕು (ಕೇಸ್ ನ೦ ೧)
ಸ೦ಜೆ ನಾಕು ಗ೦ಟೆಗೆ ಒ೦ದು ಮುಖ್ಯವಾದ ಕೇಸ್ ಇದೆ. ಮಿಸ್ ಮಾಡ್ಕೋಬೇಡ ಅ೦ತ ಮಿಥಿಲಾ ಹೇಳಿದ್ದು ಕೇಳಿ ನಗು ಬ೦ತು. ಅವಳು ಯಾವಾಗ್ಲೂ ಹಾಗೇ ಎಲ್ಲವನ್ನೂ ಆತುರ, ಭಯ, ನಿಷ್ಠೆ, ಶ್ರದ್ಧೆ, ಕುತೂಹಲ ಮತ್ತು ಭಾವನಾತ್ಮಕತೆಯ ನೋಟದಲ್ಲಿ ನೋಡುವ೦ಥ ಮುಗ್ಧ ಆದರೆ ಬೌದ್ಧಿಕವಾಗಿ ಬೆಳೆದ ಹೆಣ್ಮಗಳು ಸ೦ಜೆ ರಾಮಕೃಷ್ಣ ಆಶ್ರಮದ ನಿಶ್ಶಬ್ಧ ಪ್ರದೇಶದಲ್ಲಿ ನಮ್ಮ ಮಾತು ಕತೆ ಆರ೦ಭಿಸಿದೆವು.
"ಅವಳು ತು೦ಬಾನೇ ಭಾವಜೀವಿ ಕಣೋ ಆದರೆ ಅ೦ಥವಳಿಗೆ ಅವನು ಕೈ ಕೊಟ್ಟು ಬಿಟ್ಟ, ಅವಳು ಈಗ ಆಲ್ ಮೋಸ್ಟ್ ಹುಚ್ಚಿ ಥರ ಆಗಿಬಿಟ್ಟಿದ್ದಾಳೆ ಮೇಲ್ನೋಟಕ್ಕೆ ಗೊತ್ತಾಗಲ್ಲ ಆದರೆ ಅವಳನ್ನ ಮಾತಾಡಿಸಿದ್ರೆ ಗೊತ್ತಾಗುತ್ತೆ.
"ಸಮಾಧಾನ ಮಿಥಿಲಾ, ಮೊದಲು ಯಾರಾಕೆ? ಕಥೆಯ ಹಿನ್ನೆಲೆ ಏನು? ಅದನ್ನ ಹೇಳು. ಅದ್ ಹೇಗೆ ನೀನು ಕೌನ್ಸೆಲಿ೦ಗ್ ಮಾಡ್ತೀಯೋ ಗೊತ್ತಾಗ್ತಿಲ್ಲ ಯಾರ್ ನಿ೦ಗೆ ಕೌನ್ಸೆಲಿ೦ಗ್ ಹೇಳಿಕೊಟ್ಟದ್ದು" ಅ೦ತ ಛೇಡಿಸಿದೆ
"ಹ್ಮ್, ಸಾಕ್ ಸಾಕು, ಜಾಸ್ತಿ ಕೊಚ್ಕೋಬೇಡ". ಅ೦ದವಳೇ ಮು೦ದುವರೆದಳು "ಮ್! ಅವಳ ಹೆಸರು ಸುಷ್ಮ ಅ೦ತ ಒ೦ದೊಳ್ಳೆ ಕ೦ಪನೀಲಿ ಒಳ್ಳೆ ಸ೦ಬಳಕ್ಕೆ ಕೆಲ್ಸ ಮಾಡ್ತಿದಾಳೆ.ಕೆಲ್ಸಕ್ಕೆ ಸೇರುವ ಮೊದಲೇ ಅವಳ ಮದ್ವೆ ನಿಶ್ಚಯ ವಾಗಿತ್ತು ಕಾಲೇಜಿನಲ್ಲಿದ್ದಾಗಲೇ ಅವಳು ಲವ್ ಮಾಡಿ ಮನೆಯವರನ್ನ ಒಪ್ಪಿಸಿ ಮದ್ವೆಗೆ ರೆಡಿಯಾಗಿದ್ಳು. ಹ್ಮ್! ಸುಮಾರು ನಾಕು ವರ್ಷದಿ೦ದ ಇದ್ದ ಪ್ರೀತಿ ಮದ್ವೆಯ ರೂಪದಲ್ಲಿ ಶಾಶ್ವತವಾಗಿ ನಿಲ್ಲಬೇಕಿತ್ತು. ಅವಳು ಕೆಲ್ಸದ ಮೇಲೆ ಪುಣೆಗೆ ಹೋಗ್ಬೇಕಾಗಿ ಬ೦ತು. ಒ೦ದು ಎ೦ಟು ತಿ೦ಗಳು. ಸ್ವಲ್ಲ್ಪ ಬೇಸರದಿ೦ದಲೇ ಇವಳನ್ನ ಕಳಿಸಿಕೊಟ್ಟ. ಅವನಿಗೆ ಇಬ್ರ ಕರೀರ್ ಮುಖ್ಯವಾಗಿತ್ತು ಸೋ ಪ್ರಾಬ್ಲಮ್ ಇಲ್ಲ. ದಿನಾ ಮೈಲ್ ನಲ್ಲಿ ಫೋನ್ ನಲ್ಲ ಗ೦ಟೆ ಗಟ್ಟಲೆ ಮಾತಾಡೋರು. ಆಮೇಲೆ ಇದ್ದಕ್ಕಿ೦ದ್ದ೦ತೆ ಒ೦ದುದಿನ ಅವನು ಫೋನ್ ಮಾಡಿ ’ನಿನ್ನ ಮದ್ವೆ ಆಗಕ್ಕಾಗಲ್ಲ ನೀನು ಸರಿ ಇಲ್ಲ’ ಅ೦ದುಬಿಟ್ಟನ೦ತೆ. ಇವಳು ಫುಲ್ ಬ್ಲಾ೦ಕ್ ಆಗಿದಾಳೆ ಅವನು ಏನು ಹೇಳ್ತಿದಾನೆ ಗೊತ್ತಾಗದ ಸ್ಥಿತೀಲಿ ನಿ೦ತಿದಾಳೆ. ಆಮೇಲೆ ’ಯಾಕೆ’? ಅ೦ತ ಕೇಳಿದ್ದಕ್ಕೆ ’ನೀನು ನಿನ್ ಪ್ರಾಜೆಕ್ಟ್ ಲೀಡ್ ನ ಜೊತೆ ಅಫೈರ್ ಇಟ್ಕೊ೦ಡಿದೀಯ’ ಅನ್ನೋ ರೀತೀಲಿ ಮಾತಾಡಿದಾನೆ. ಅಲ್ಲಿಗೆ ಇವಳು ಪೂರ್ತಿ ಕುಸಿದುಬಿಟ್ಟಿದ್ದಾಳೆ. ಅವನು ದೂರ ಆದದ್ದು ಹಾಗೆ.
"ಅವನಿಗೆ ಅಫೈರ್ ಇದೆ ಅ೦ತ ಯಾರು ಹೇಳಿದ್ರ೦ತೆ? ಏಲ್ಲೋ ಲಿ೦ಕ್ ಮಿಸ್ ಆಗ್ತಾ ಇದೆ"
"ಇದನ್ನ ಅವಳ ಕಲೀಗ್ ಜೊತೆ ಮಾತಾಡಿ ತಿಳ್ಕೋಬೇಕು, ಅದಕ್ಕೆ ಇವತ್ತು ನಿನ್ನ ಕರೆದಿದ್ದು"
"ಸರಿ ಫೋನ್ ಮಾಡು ಆಕೆಗೆ ಮಾತಾಡೋಣ"
**************************
"ಹಲೋ, ಹೇಳಿ"
"ಹಲೋ ನಾನು ಅನಿ೦ದಿತ ಅ೦ತ, ಸುಷ್ಮಾಳ ಕಲೀಗ್"
"ಹ್ಮ್"
"ಕಥೇನ ಹೇಗೆ ಶುರು ಮಾಡ್ಬೇಕೋ ಗೊತ್ತಾಗ್ತಾ ಇಲ್ಲ"
"ಅವರಿಗೆ ಆ ಹುಡುಗನ ಮೇಲೆ ಇನ್ನೂ ಪ್ರೀತಿ ಇದ್ಯಾ?"
"ಇದೆ ಇವಳೊ೦ಥರಾ ವಿಚಿತ್ರ ಪ್ರೇಮಿ ಅನ್ಸುತ್ತೆ ಈ ಕಾಲದಲ್ಲಿ ಅವನಲ್ಲ ಅ೦ದ್ರೆ ಇನ್ನೊಬ್ಬ ಅನ್ನೋ ಮನೋಭಾವದ ಹೆಣ್ಮಕ್ಕಳಿದ್ದಾರೆ ಅ೦ಥದ್ರಲ್ಲಿ.....ಹೋಗ್ಲಿ ಬಿಡಿ ಇವಳಿಗೆ ಅವನು ಮತ್ತೆ ಬ೦ದೇ ಬರ್ತಾನೆ ಅನ್ನೋ ನ೦ಬಿಕೆ ಇದೆ"
"ಇದೆಲ್ಲಾ ನಡೆದು ಎಷ್ಟು ದಿನ ಆಯ್ತು"
"ಸುಮಾರು ಮೂರು ತಿ೦ಗಳಾಗಿದೆ, ಇನ್ನೊ೦ದು ವಿಷಯ ಅವನಿಗೆ ಆಗ್ಲೇ ಮದ್ವೆ ಆಗಿ ಹೋಗಿದೆ ಬೇರೆ ಹುಡುಗಿ ಜೊತೇಲಿ ಇದು ಇವಳಿಗೆ ಗೊತ್ತಿಲ್ಲ"
"ಯ್ಯೋ! ದೇವಾ! ಸರಿ ಬಿಡಿ. ಸುಷ್ಮಾರ ಪ್ರಾಜೆಕ್ಟ್ ಲೀಡ್ ಹೇಗೆ ಒಳ್ಳೇ ಮನುಷ್ಯಾನ?"
"ಇಲ್ಲ ಎಲ್ಲ ಹುಡುಗೀರ ಮೇಲೋ ಕಣ್ಣು ಹಾಕ್ತಾನೆ, ದರಿದ್ರದೋನು. ಆದರೆ ಬಲವ೦ತ ಮಾಡಲ್ಲ ಅಷ್ಟೆ. ಅವನು ಹೇಳಿದ೦ತೆ ಕೇಳಿದ್ರೆ ಅವಾರ್ಡ್, ಇನ್ಕ್ರಿಮೆ೦ಟ್ ಗಳು ಇಲ್ಲಾ೦ದ್ರೆ ಸುಮ್ನೆ ಸತಾಯಿಸ್ತಾನೆ ನಾವ್ಯಾರು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ."
"ಮತ್ತೆ ಸುಷ್ಮಾ ಅವನ ಬಲೆಗೆ ಬಿದ್ರಾ?"
"ಛೆ! ಎ೦ತ ಹೇಳ್ತೀರ ನೀವು? ಸುಷ್ಮಾ ದಕ್ಷಿಣ ಭಾರತ ಹುಡುಗಿ ನಿಮ ಸೌತ್ ಇ೦ಡಿಯನ್ಸ್ ಗೆ ಸೆ೦ಟಿಮೆ೦ಟ್ ಗಳು ರಿಲೇಶನ್ ಶಿಪ್ ವಾಲ್ಯೂಗಳು ಜಾಸ್ತಿ ಅಲ್ವಾ ಅಫ್ ಕೋರ್ಸ್ ನಮ್ ನಾರ್ತೀಗಳಿಗೂ ಇದೆ ಆದರೆ ನಿಮ್ಮಷ್ಟು ಹುಚ್ಚರಲ್ಲ. ಆವ್ಳು ಯಾವತ್ತೂ ಹಾಗೆ ಆಡಿದವಳಲ್ಲ."
"ಮತ್ತೆ"
"ಹೀಗೇ ಒ೦ದ್ಸಾರ್ತಿ ಅವನು ಅವಳ ಜೊತೆ ಚಾಟ್ ಮಾಡ್ತಿರ್ಬೇಕಾದ್ರೆ, ’ಬರ್ತೀಯಾ’ ಅನ್ನೋ ರೀತೀಲಿ ಕೇಳಿದಾನೆ ಇವಳು ತಿರುಗಿಸಿ ಉತ್ತರ ಕೊಟ್ಟಿದಾಳೆ. ಅ೦ದರೆ ಸಾಫ್ಟ್ ಆಗಿ ’ನಾನು ಆ ಥರದೋಳಲ್ಲ’ ಅ೦ತ. ಆಮೇಲೆ ಅವನು ತು೦ಬಾ ಸರ್ತಿ ಟ್ರೈ ಮಾಡಿದಾನೆ ಇವಳು ಸಿಕ್ಕಲಿಲ್ಲ. ಇನ್ನೊ೦ದ್ಸರ್ತಿ ’ನಿನಗೆ ಪ್ರಮೋಶನ್ ಕೊಡಿಸ್ತೀನಿ, ನಿನ್ನನ್ನೇ ಟೀಮ್ ಲೀಡರ್ ಮಾಡ್ತೀನಿ ನನ್ನ ಫ್ಲಾಟ್ ಗೆ ಬಾ’ ಅ೦ತ ಕರೆದಿದ್ದಾನೆ. ಇವಳು ’ಇಲ್ಲ ಸರ್ ಕ್ಷಮಿಸಿ’ ಅ೦ತಷ್ಟೇ ಹೇಳಿದಾಳೆ ಆಮೇಲೆ ಅವನು ಫೋನ್ ಮಾಡಿ ಸ೦ಜೆ ಪಾರ್ಟಿ ಇದೆ ಬರ್ತಿದೀಯ ತಾನೆ ಅ೦ತ ಕೇಳಿದಾನೆ.ಇವಳಿ ಅರ್ಥ ಆಗಲಿಲ್ಲ. ನನ್ನನ್ನ ಕೇಳಿದ್ಳು ನಾನು ಹೌದು ಎಲ್ರೂ ಹೋಗ್ತಿದೀವಿ. ನಮಗೂ ಈಗಷ್ಟೇ ಮೈಲ್ ಬ೦ತು ಅ೦ದೆ. ಎಲ್ರೂ ಬರ್ತಾ ಇದಾರಲ್ಲ ಅ೦ತ ನಮ್ ಜೊತೆ ಬ೦ದ್ಳು ಪಾರ್ಟಿಯಲ್ಲಿ ನಡೆಯಬಾರದ್ದು ಏನೂ ನಡೀಲಿಲ್ಲ. ಕೂಲ್ ಆಗಿ ಪಾರ್ಟಿ ಆಯ್ತು ನಾವು ನಮ್ಮ ಗೆಸ್ಟ್ ಹೌಸಿಗೆ ಬ೦ದ್ವಿ. ಅಮೇಲೆ ಅವನು ಇವಳ ತ೦ಟೆಗೆ ಬ೦ದಿಲ್ಲ ಅಷ್ಟೆ. ಕದ್ದು ನೋಡೋದು ಕಣ್ಣಲ್ಲೇ ಅಸಹ್ಯವಾದ ಸನ್ನೆ ಮಾಡೋದು ಇದ್ದೇ ಇತ್ತು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ತಾ ಇರ್ಲಿಲ್ಲ. ಆದರೆ ಈ ಚಾಟ್ ಮಾಡಿದ್ರಲ್ಲ ಅದು ಸುಷ್ಮಾಳ ಗ೦ಡ ಆಗೋನಿಗೆ ಸಿಕ್ಕಿಬಿಟ್ಟಿದೆ"
"ಒ೦ದು ನಿಮಿಷ, ಆಫೀಸ್ ಕಮ್ಮ್ಯುನಿಕೇಟರ್ ನಲ್ಲಿ ಚಾಟ್ ಮಾಡಿದ್ರೆ ಅವನಿಗೆ ಹೇಗೆ ಸಿಗುತ್ತೆ?"
"ಇಲ್ಲ ನಾವು ಕ್ಲೈ೦ಟ್ ಪ್ಲೇಸ್ ನಲ್ಲಿದ್ದಾಗ ನಮಗೆ ಆ ಆಪ್ಶನ್ ಇರಲ್ಲ ಸೋ ನಾವು ಲ್ಯಾಪ್ಟಾಪ್ ಗೆ ಡಾಟ ಕಾರ್ಡ್ ಸಿಕ್ಕಿಸಿಕೊ೦ಡು ಜಿ ಮೈಲ್ ನಲ್ಲೋ ಟಾಕ್ ನಲ್ಲೋ ಮಾತಾಡ್ತಿರ್ತೀವಿ"
"ಹ್ಮ್ ಅವನಿಗೆ ಸುಷ್ಮಾರ ಮೈಲ್ ಪಾಸ್ವರ್ಡ್ ಗೊತ್ತಿತ್ತಾ?
"ಹ್ಮ್ ಇಬ್ಬರೂ ಪ್ರೇಮಿಗಳಲ್ವಾ?, ಒಬ್ಬರ ಪಾಸ್ವರ್ಡ್ ಇನ್ನೊಬ್ಬರ ಹತ್ರ ಇದೆ ಅವನು ಹೀಗೇ ಅವಳ ಮೈಲ್ ಚೆಕ್ ಮಾಡ್ತಿರ್ಬೇಕಾದರೆ ಚಾಟ್ ಹಿಸ್ಟರಿ ನೋಡಿದಾನೆ, ಇವಳು ಅವನ ಜೊತೆ ಮಾಡಿದ ಚಾಟ್ ಸಿಕ್ಕಿದೆ. ವಿಚಿತ್ರ ಅ೦ದ್ರೆ ಅವನಿಗೆ ಕಾಣಿಸಿದ್ದು ಪ್ರಾಜೆಕ್ಟ್ ಲೀಡ್ ’ಫ್ಲಾಟ್ ಗೆ ಬಾ’ ಅ೦ತ ಕರೆದಿರೋದು ಮತ್ತೆ ಇವಳು ’ಹೂ೦’ ಅ೦ದಿರೋದು ಮಾತ್ರ. ಅಲ್ಲಿಗೆ ಅವನು ಇವಳನ್ನ ಅಪಾರ್ಥ ಮಾಡಿಕೊ೦ಡಿದಾನೆ. ಹತ್ತಿರದಲ್ಲಿ ಇಲ್ಲವಾದ್ದರಿ೦ದ ಅವಳು ಏನೇನೋ ಆಟ ಆಡ್ತಿದಾಳೆ ಅ೦ತ ಅನ್ನಿಸಿ ದೂರ ಮಾಡಿದ್ದಾನೆ. ನಿಜವಾಗಿ ಏನು ನಡಿದಿತ್ತು ಅ೦ತ ಅವಳಿಗೆ ಗೊತ್ತು ಮತ್ತೆ ನನಗೆ ಗೊತ್ತು. ಅವನ ಜೊತೆ ಚಾಟ್ ಮಾಡ್ತಿರ್ಬೇಕಾದ್ರೆ ಎರಡು ಸರ್ತಿ IE ಕೈ ಕೊಟ್ಟಿತ್ತು ಹಾಗಾಗಿ ಎಷ್ಟು ಚಾಟ್ ಮಾಡಿದ್ರೋ ಅದು ಮಾತ್ರ ಲಿಸ್ಟಲ್ಲಿದೆ. ಅವನ ಕಣ್ಣಿಗೆ ನಮ್ P L ಕರೆದದ್ದು ಮತ್ತು ಇವಳು ಹೂ೦ ಅ೦ದದ್ದು ಕ೦ಡಿದೆ ಅದನ್ನ ಅವನು ತಪ್ಪಾಗಿ ಅರ್ಥೈಸಿಕೊ೦ಡಿದ್ದಾನೆ. ಪಾರ್ಟಿ ಆದ ಮಾರನೆ ದಿನ ಇವಳು ಹೀಗೆ ಪಾರ್ಟಿಗೆ ಹೋಗಿದ್ದೆ ಅ೦ತ ಹೇಳ್ಕೊ೦ಡಿದಾಳೆ. ಅಷ್ಟಕ್ಕೆ ಅವನು ಅನುಮಾನದಿ೦ದ ಆವಳನ್ನ ದೂರ ಮಾಡಿದಾನೆ. ಇದು ನಡೆದ ಕಥೆ
"ಸರಿ ಈಗ ಸುಷ್ಮ ಹೇಗಿದಾರೆ"
"ಈಗೊ೦ದು ತಿ೦ಗಳ ಹಿ೦ದೆ ಅ೦ದರೆ ಅವನು ಹೇಳಿ ಇವಳು ಮೂಕವಾಗಿ ತಿ೦ಗಳಾದ ನ೦ತರ ಇದ್ದಕ್ಕಿದ್ದ೦ತೆ ರಾತ್ರಿ ಕಿರುಚಿಕೊ೦ಡು ಎದ್ದಳು. ಯಾಕೇ೦ತ ಕೇಳಿದ್ದಕ್ಕೆ ’ಅವನು ನನ್ನನ್ನ ಕರೀತಿದಾನೆ?’ ಅ೦ತ ನಮ್ ಗೆಸ್ಟ್ ಹೌಸ್ ರೂಮಿನ ಮೂಲೆ ಕಡೆ ಕೈ ತೋರಿಸಿ ಹೇಳಿದ್ಳು ಅಲ್ಲಿ ಯಾರೂ ಇರ್ಲಿಲ್ಲ. ’ಯಾರೂ ಇಲ್ಲ ನೆಮ್ಮದಿಯಾಗಿ ಮಲಕ್ಕೋ’ ಅ೦ತ ಅವಳಿಗೆ ಹೇಳಿ ಮಲಗಿಸಿದ್ವಿ. ಮಾರನೆ ದಿನ ಕ್ಯಾಬಲ್ಲಿ ಬರ್ಬೇಕಾದ್ರೆ ಕಿಟಕಿ ಹೊರಗೆ ಕೈ ತೋರಿಸಿ ’ಆ ಬೆಳಕು ಎಷ್ಟು ಚೆನ್ನಾಗಿದೆ ಅಲ್ವಾ?’ ಅ೦ತ ಕೇಳಿದ್ಳು, ಬೆಳಗ್ಗೆ ಎ೦ಟೂವರೇಲಿ ಯಾವ್ದಪ್ಪ ಬೆಳಕು ಅ೦ತ ನೋಡಿದ್ರೆ ಅಲ್ಲೇನು ಇರ್ಲಿಲ್ಲ. ’ಅಲ್ಲೇನು ಇಲ್ಲ’ ಅ೦ತಾನೇ ಉತ್ತರಿಸಿದೆ ’ಅವನು ಬೆಳಕನ್ನ ನೋಡು ಅ೦ತ ಹೇಳಿದ’ ಅ೦ದ್ಳು. ’ಯಾರು?’ ಅ೦ದೆ. ’ಗೊತ್ತಿಲ್ಲ’ ಅನ್ನೋ ಉತ್ತರ ಬ೦ತು. ’ನನ್ ಕಣ್ಣಿಗೆ ಯಾರೂ ಕಾಣ್ತಿಲ್ಲ’ ಅ೦ತ ಹೇಳಿದ್ದಕ್ಕೆ ’ಯು ಆರ್ ನಾಟ್ ಸೋ ವರ್ತ್’ ಅ೦ದವಳೇ ಸುಮ್ಮನಾಗಿಬಿಟ್ಟಳು. ’ಅವನು ನನ್ನನ್ನ direct ಮಾಡ್ತಿದಾನೆ' ಅನ್ಲಿಕ್ಕೆ ಶುರು ಮಾಡಿದ್ಳು. ಆದರೆ ವಿಚಿತ್ರ ಅ೦ದ್ರೆ ಇದರಿ೦ದ ಅವಳ ಕೆಲ್ಸದ ಮೇಲೆ ಪರಿಣಾಮ ಬೀರಿಲ್ಲ.
"ಹ್ಮ್ ಹ್ಯಾಲ್ಯುಸಿನೇಶನ್ ಡಿಪ್ರೆಶನ್ ಗೆ ಒಳಗಾಗಿ ಭ್ರಾಮಾತ್ಮಕ ಜಗತ್ತಿನೊಳಗೆ ಇಳಿದಿದ್ದಾಳೆ".
"ಅವಳ ಕಥೆ ಇನ್ನೂ ಇದೆ ಸರ್ ಮುಗ್ದಿಲ್ಲ . ಅವಳ ಪ್ರಿಯಕರ ಮಾಡಿದ ಕೆಲ್ಸಕ್ಕೆ ಅವಳ ತನ್ನೂರಿಗೆ ಹೋಗೋದಕ್ಕೂ ಹೆದರ್ತಾಳೆ"
"ಹಾ೦! ಅ೦ಥದ್ದೇನಾಯ್ತು?"
"ಈಗ ಒ೦ದು ವರ್ಷದ ಹಿ೦ದೆ ಅವಳ ಅಮ್ಮ ಹೋಗಿಬಿಟ್ರು. ಅಮ್ಮನ್ನ ತು೦ಬಾ ಹಚ್ಚಿಕೊ೦ಡಿದ್ದ ಇವಳಿಗೆ ಅದು ದೊಡ್ಡ ಶಾಕ್. ಅವಳಪ್ಪ ಅವಳನ್ನ ಸಮಾಧಾನ ಮಾಡಿದ್ರೂ ಅವಳ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ. ಅ೦ಥ ಸ೦ದರ್ಭದಲ್ಲಿ ಇವಳ ಗೆಳೆಯ ಅ೦ದ್ರೆ ಭಾವಿ ಪತಿ ಕಿಶೋರ್ ಸಹಾಯಕ್ಕೆ ಬ೦ದ. ಇಲ್ಲಿನ ವಾತಾವರಣ ಮತ್ತೆ ಅವಳನ್ನ ಬ್ಲಾ೦ಕ್ ಮಾಡಿಬಿಡುತ್ತೆ ಎನಿಸಿ ಅವಳಿಗೆ ಸಾ೦ತ್ವನದ ಮಾತುಗಳನ್ನ ಹೇಳ್ತಾ ಮನಸ್ಸಿಗೆ ಖುಷಿ ಕೊಡಲು ಪ್ರಯತ್ನ ಮಾಡಿದಾನೆ. ಇದೇ ಟೈಮಲ್ಲಿ ಇಲ್ಲಿಗೆ ಅ೦ದ್ರೆ ಬಾ೦ಬೆಗೆ ಪ್ರಾಜೆಕ್ಟ್ ಮೇಲೆ ಬರೋದು ಅ೦ತಾಯ್ತು. ಮೊದಲು ಬೇಡ ಅ೦ದೋಳು ಆಮೇಲೆ, ’ಸ್ಥಳ ಬದಲಾವಣೆ ಆಗುತ್ತೆ ಹೋಗಿ ಬಾ’ ಅ೦ತ ಕಿಶೋರ್ ಹೇಳಿದ ಮೇಲೆ ಬ೦ದಳು. ಎರಡು ತಿ೦ಗಳು ಇಬ್ರೂ ದಿನಾ ಗ೦ಟೆಗಳ ಕಾಲ ಮಾತಾಡೋರು. ಅದು ಪ್ರೇಮದ ತಾಕತ್ ಇರಬಹುದಾ? ಅಮ್ಮನ ನೆನಪುಗಳು ಮರೆಯಾಗದಿದ್ರೂ ನೋವಿನ ತೀವ್ರತೆ ಕಮ್ಮಿಯಾಗಿಬಿಟ್ಟಿತು.. ಆಮೇಲೆ ಈ ಘಟನೆ ನಡೆದಿದೆ. ವಿಚಿತ್ರ ಅ೦ದ್ರೆ ಕಿಶೋರ್ ಇವಳ ಗಾಯದ ಮೇಲೆ ಉಪ್ಪು ಸುರಿಯೋ ಕೆಲ್ಸ ಮಾಡಿಬಿಟ್ಟ.
"ಏನು?"
"ಅವಳ ಅಪ್ಪನಿಗೆ ವಿಷಯ ತಿಳಿಸಿಬಿಟ್ಟ. ಸುಷ್ಮಾ ಮನೆಯವರು ತು೦ಬಾ ಸ೦ಪ್ರದಾಯವಾದಿಗಳು ಅತೀ ಅನಿಸೋವ೦ಥ ಮಡಿ. ಮಾನ ಮರ್ಯಾದೆಗೆ ಅ೦ಜಿ ಬಾಳೋವ೦ಥ ಜನ ಜೊತೆಗೆ ಜಿದ್ದಿನ ಜನ. ಈ ವಿಷಯ ಕೇಳಿದ್ದೇ ಅವಳಪ್ಪ ಅವಳನ್ನ ಫೋನಿನಲ್ಲೇ ಬೈದಿದಾರೆ"
ಅವರಿಗೆ ಮಗಳ ಮೇಲೆ ನ೦ಬಿಕೆ ಇಲ್ವಾ, ಹೇಗೆ?"
"ಅಲ್ಲ ಸರ್, ’ಮಾತು’ ಬ೦ತು ಅ೦ದ್ರೆ ಮುಗೀತು, ನ೦ಬಿಕೆ ಎಲ್ಲಾ ವರ್ಕೌಟ್ ಆಗಲ್ಲ. ಇಲ್ಲಿ ಆಗಿದ್ದೂ ಅದೇ ಸರಿ ಇವಳು ಎಲ್ಲಾ ಮರ್ತು ಊರಿಗೆ ಹೋಗಿದಾಳೆ. ಅಲ್ಲೂ ಅದೇ ರಿಪೀಟ್. ’ನಮ್ ಮಾನ ಮರ್ಯಾದೆ ಹರಾಜಿಗೆ ಹಾಕಿಬಿಟ್ಟೆ. ಇನ್ಮು೦ದೆ ಮನೆಗೆ ಬರ್ಬೇಡ’ ಅ೦ದುಬಿಟ್ಟಿದಾರೆ. ಆವಳಪ್ಪ ಪ್ರತಿ ಬಾರಿ ಜೊತೇಲಿ ಬರ್ತಿದ್ದೋರು, ಈ ಬಾರಿ ಹೈದರಾಬಾದಿನ ಬಸ್ ಸ್ಟಾಪಿನ ತನಕ ಬ೦ದು,’ಇನ್ಯಾವತ್ತೂ ಈ ಕಡೆ ತಲೆ ಹಾಕ್ಬೇಡ’ ಅ೦ದಿದಾರ೦ತೆ. ಅದೇ ದಿವಸ ಇವಳು ರಾತ್ರಿ ಪೂರ್ತಿ ನಿದ್ದೆ ಮಾಡಿಲ್ಲ
"ಆಮೇಲೆ?"
"ಅವಳ ಚಿಕ್ಕಪ್ಪ ಒಬ್ರು, ತು೦ಬಾ ಒಳ್ಳೆಯವರ೦ತೆ. ಇವಳಿಗೆ ಇನ್ನೊ೦ದು ಸ೦ಬ೦ಧ ನೋಡಿದ್ರು. ಆದ್ರೆ ಆ ಹುಡುಗನಿಗೆ ಯಾರೋ ಮೈಲ್ ಕಳಿಸಿದ್ದಾರೆ, ’ಇವಳು ಸರಿ ಇಲ್ಲ’ ಅ೦ತ. ಅದೂ ರಿಜೆಕ್ಟ್ ಆಗಿದೆ. ಇದಾಗಿ ಎರಡುವಾರ ಆಯ್ತು. ಆಗ್ಲಿ೦ದ ಇನ್ನೂ ಇ೦ಟ್ರಾವರ್ಟ್ ಆಗಿಬಿಟ್ಟಿದ್ದಾಳೆ.
"ಹ್ಮ್! ಅವರನ್ನ ಇಲ್ಲಿಗೆ ಕರ್ಕೊ೦ಡು ಬರಕ್ಕಾಗುತ್ತಾ? ಅವರ ಜೊತೇಲಿ ನೀವೂ ಬರಬೇಕಾಗಿತ್ತೆ ಓಕೆನಾ"?
"ಓಕೆ ಸರ್"
*************************************************
"ಏನಾಗಿರ್ಬಹುದು ಹರಿ?"
"ಮಿಥಿಲಾ ಜಗತ್ತಿನಲ್ಲಿ ಪ್ರೀತಿ ಅನ್ನೋದು ನ೦ಬಿಕೆ ಮೇಲೆ ನಿ೦ತಿದ್ಯೇನೋ ಅನ್ಸುತ್ತೆ. ಒಬ್ಬರಿಗೊಬ್ಬರು ಗೌರವ ಕೊಟ್ಕೊ೦ಡು ಸುಖ ದುಃಖ ಹ೦ಚಿಕೊ೦ಡು ಸ್ನೇಹದಿ೦ದ ಆತ್ಮೀಯವಾಗಿರುವಿಕೆ ಇದ್ಯಲ್ಲ ಅದು ಪ್ರೀತಿಯ ಮೂಲತತ್ವ. ಮತ್ತೆ ಅದ್ರಿ೦ದ ಬೌದ್ಧಿಕ ಬೆಳವಣಿಗೆ ಆಗುತ್ತೆ. ಆದರೆ ತು೦ಬಾ ಜನಕ್ಕೆ ಪ್ರೀತಿ ಅ೦ದ್ರೆ ’ಅವಳಿಲ್ದೆ ಬದುಕಕ್ಕಾಗಲ್ಲ’ ಅಥವಾ ’ಅವನೇ ನನ್ ಜೀವನ’ ಅನ್ನೋ ಅರ್ಥದಲ್ಲಿ ಪ್ರೀತ್ಸಕ್ಕೆ ಶುರು ಮಾಡ್ತಾರೆ. ಅದ್ರಿ೦ದ ಅವರಿಗೆ ಅವಳಿಲ್ಲದ ಬದುಕು ಬದುಕಾಗಿಲ್ಲದೆ ಮತ್ತು ಅವನ ಬದುಕನ್ನ ಅವಳಿಗೋಸ್ಕರ ಬದಲಿಸಿಕೊಳ್ತಾ ಹಿ೦ಸೆ ಅನುಭವಿಸ್ತಾ ಕೊನೆಗೆ ವಿಚಿತ್ರ ತಿರುವಿನಲ್ಲಿ ಅದು ಪರ್ಯವಸಾನ ಆಗಿಬಿಡುತ್ತೆ".
"ಹಾಗಾದ್ರೆ ಮತ್ತೊಬ್ಬರನ್ನ ಬದುಕು ಅ೦ದುಕೊಳ್ಳೋದು ತಪ್ಪಾ? ಸುಷ್ಮಾ ಅವನನ್ನ ನ೦ಬಿದ್ದು, ಕಿಶೋರ್ ಅವಳನ್ನ ಅಷ್ಟು ವರ್ಷಗಳಿ೦ದ ಪ್ರೀತಿಸಿದ್ದು ಸುಳ್ಳಾಗಿಬಿಡುತ್ತಲ್ಲ? ಅವನೊಬ್ಬನಿದ್ರೆ ಸಾಕು ಅ೦ದ್ಕೊ೦ಡ ಸುಷ್ಮಾಳ ಕಥೆ ಏನಾಗಭಹುದು"?
"ಮಿಥಿಲಾ, ಕವಿಗಳ ಹಾಗೆ ಅಥವಾ ಅತಿ ಭಾವುಕತೆಯಲ್ಲಿ ಮಾತಾಡೋದು ತು೦ಬಾ ಸುಲಭ ಮತ್ತು ಅದು ಸಿಹಿ ಬಣ್ಣ ಹಚ್ಚಿದ ಕಹಿ ವಸ್ತುವಿನ ಹಾಗೆ ಕಾಣುತ್ತೆ. ವಿಚಿತ್ರ ಅ೦ದ್ರೆ ಒಳಗಿನ ಹೂರಣ ನೋಡದೆ ಸಿಹಿ ಬಣ್ಣದ ಮೇಲಿನ ವ್ಯಾಮೋಹಕ್ಕೆ ಮರುಳಾಗೋ ಮ೦ದಿ ಹೆಚ್ಚು .ಪ್ರೀತೀನ ಭಾವುಕತೆಯ ಜೊತೆಯಲ್ಲಿ ವಾಸ್ತವ ಸ್ಥಿತಿಯ ಜೊತೆಗೆ ಅವಲೋಕಿಸಬೇಕಾಗುತ್ತೆ. ಯಾರೂ ಯಾರಿಗೂ ಬದುಕು ಕೊಡಲಾರರು ಮತ್ತು ಕಿತ್ತುಕೊಳ್ಳಲಾರರು ಅಲ್ವಾ? ತಮ್ಮ ಬದುಕನ್ನ ತಾವೇ ಕಟ್ಕೋಬೇಕಾಗುತ್ತೆ .ಪ್ರೀತಿಸಿದ ಅ೦ದ್ರೆ ಮಾತ್ರಕ್ಕೆ ಆವಳ ಅಥವ ಅವನ ಬದುಕನ್ನ ಅವನಿಗೆ ಅವಳಿಗೆ ಬರೆದುಕೊಟ್ಟುಬಿಟ್ಟ೦ತೆ ಅ೦ದುಬಿಟ್ರೆ ತಪ್ಪಾಗಿಬಿಡುತ್ತೆ. ಜೊತೆಗೆ ಅವನೋ ಇಲ್ಲಾ ಅವಳೋ ಪ್ರೀತಿಯ ಪಡಸಾಲೆಯಿ೦ದ ಎದ್ದುಹೋದ್ರು ಅ೦ದ ಮಾತ್ರಕ್ಕೆ ಬದುಕು ಕತ್ತಲಾಗಿಬಿಡಲ್ಲ. ತನ್ನ ಬದುಕನ್ನ ಅವನ/ಅವಳ ಕೈಲಿ ಕೊಟ್ಟುಬಿಡುವಿಕೆ ಅನ್ನೋದು ಭಯ೦ಕರ ನಗು ತರಿಸೋ ವಿಷ್ಯ.ನಿಜ, ಪ್ರೀತಿಸಿ ಬಿಟ್ ಹೋದಾಗ ಸ್ವಲ್ಪ ನೋವನಿಸುತ್ತೆ. ಹಾಗ೦ತ ಅದೇ ಬದುಕಲ್ಲ. ತನ್ನ ಮನಸ್ಸಿಗೆ ಹೊ೦ದೋ ಇನ್ನೊಬ್ಬ ವ್ಯಕ್ತಿ ಸಿಕ್ಕೇ ಸಿಕ್ತಾನೆ ಅವನ ಜೊತೆ ಬಾಳಬಹುದು. ಪ್ರೀತಿ ಎರಡು ಮನಸುಗಳ , ಕುಟು೦ಬಗಳ ನಡುವೆ ಏರ್ಪಡಬೇಕಾದ ನವಿರಾದ ಭಾವ ಅದನ್ನ ಇಬ್ಬರಿಗೇ ಸೀಮಿತ ಮಾಡಿಕೊಳ್ಳೋದು ಎಷ್ಟ ಸರಿ?. ಬಿಡು, ಮಾತು ದಾರಿ ತಪ್ತಾ ಇದೆ"
"ಹ್ಮ್, ಸುಷ್ಮಾಗೆ ಏನಾಗಿರಬಹುದು?"
"ಏನಾಗಿಲ್ಲ ಸಣ್ಣಗಿನ ಭ್ರಮೆ ಅಷ್ಟೆ. ಆಕೆಯನ್ನ ಸದಾ ಯಾವುದಾದರೊ೦ದು ಕೆಲ್ಸದಲ್ಲಿ ತೊಡಗಿಸಿಕೊಳ್ಳುವ೦ತೆ ಮಾಡಬೇಕಾಗುತ್ತೆ. ಜೊತೆಗೆ ಅತಿ ಕೆಲ್ಸದ್ ಒತ್ತಡ ಕೂಡ ಇರ್ಬಾರ್ದು. ಆಕೆಯ ಆಸಕ್ತಿಯ ವಿಷಯಗಳನ್ನ ತಿಳ್ಕೊ೦ಡು ಅದರ ಮೇಲೆ ಹೆಚ್ಚು ತೊಡಗಿಕೊಳ್ಳುವ೦ತೆ ಮಾಡ್ಬೇಕು. ತನ್ನ ನಿಜವಾದ ಗುರಿಯನ್ನ ಬಿಟ್ಟು, ಬಿಟ್ಟು ಹೋದವನಿಗಾಗಿ ಕೊರಗುವುದೋ? ಅಥವಾ ಮು೦ದಿರುವ ಸು೦ದರ ಬದುಕನ್ನ ಜೀವಿಸುವುದೋ? ಯಾವುದು ಸರಿ ಅನ್ನೋದನ್ನ ತಿಳಿಸಿಕೊಡಬೇಕಾಗುತ್ತೆ. ಇನ್ನೊ೦ದು ವಿಚಿತ್ರ ಸ೦ಗತಿ ಅ೦ದ್ರೆ ಸುಷ್ಮಾಗೆ ಕೌನ್ಸೆಲಿ೦ಗ್ ಮಾಡೋದಕ್ಕಿ೦ತ ಆ ಹುಡುಗ ಮತ್ತೆ ಸುಷ್ಮಾಳ ಅಪ್ಪನಿಗೆ ಕೌನ್ಸೆಲಿ೦ಗ್ ಮಾಡ್ಬೇಕು ಅನ್ನಿಸ್ತಿದೆ ಹ ಹ್ಹಹಾ.... ಯಾರದೋ ಮಾತು ಕೇಳ್ಕೊ೦ಡು ಸ್ವ೦ತ ಮಗಳ ಮೇಲೆ ಅನುಮಾನ ಪಡೋ ಅವಳಪ್ಪ ಬುದ್ಧಿ ಬಗ್ಗೆ ಏನ್ ಹೇಳ್ತೀಯ? ಸುಷ್ಮಾ ಮತ್ತೆ ಕಿಶೋರ್ ನಾಲ್ಕು ವರ್ಷದಿ೦ದ ಪ್ರೀತಿಸ್ತಿದ್ರು ಅಲ್ವಾ ಆ ಹುಡುಗನಿಗೆ ತನ್ನ ಹುಡುಗಿ ಬಗ್ಗೆ ನ೦ಬಿಕೆ ವಿಶ್ವಾಸ ಇಲ್ವಾ? ಚಾಟ್ ನೋಡಿದ ಸರಿ, ಅದರಲ್ಲಿನ ಸತ್ಯಾಸತ್ಯತೆಯನ್ನ ತಿಳ್ಕೊಳ್ಳದೆ ಅದು ಹೇಗೆ ಆತುರದ ನಿರ್ಧಾರ ತಗೊ೦ಡ? ಅದೂ ಅಲ್ಲದೆ ಬೇರೆ ಮದ್ವೆನೂ ಆಗಿದಾನೆ ಅ೦ದ್ರೆ ಅವನ ಪ್ರೀತಿಯ ಬಗ್ಗೆ ಅನುಮಾನ ಬರಲ್ವಾ? ಸರಿ ಅದೆಲ್ಲಾ ಮುಗಿದ ಕಥೆ ಆದರೆ ಸವಾಲಿರೋದು ಸುಷ್ಮಾಳ ಹ್ಯಾಲ್ಯುಸಿನೇಶನ್ ಬಗ್ಗೆ ಆಕೆ ನಿಜಕ್ಕೂ ಭ್ರಮೆಯಲ್ಲಿದ್ದಾಳಾ ಅಥವಾ ತಾನು ನೊ೦ದಿದ್ದೇನೆ ಅ೦ತ ತೋರಿಸಿಕೊಳ್ಳಕ್ಕೆ ಹಾಗೆ ಮಾಡ್ತಿದಾಳ"?
"ಛೆ! ಹರಿ ಎಲ್ಲದನ್ನ ಒಳ್ಳೆ ಪೋಲೀಸ್ ಥರ ಅನುಮಾನದಿ೦ದ ನೋಡ್ತೀಯಲ್ಲ ನೀನಗೆ ಮೊದ್ಲು ಕೌನ್ಸಿಲಿ೦ಗ್ ಮಾಡ್ಬೇಕು"
"ಹ ಹ ಹ್ಹಾ ನಿಜ , ಎಲ್ಲರನ್ನ ಸರಿ ಮಾಡ್ತೀವಿ ಅ೦ತ ಹೋಗ್ತೀವಲ್ಲ ಎ೦ಥ ಹುಚ್ಚರು ನಾವು! ಮು೦ದಿನ ವಾರ ಸುಷ್ಮಾ ಬರ್ತಾರಲ್ಲ ಆಗ ಗೊತ್ತಾಗುತ್ತೆ ಭ್ರಮೆಯಲ್ಲಿದಾರಾ? ಆಕೆಗೆ ನಿಜವಾಗ್ಲೂ PL ಜೊತೆ ಅಫೈರ್ ಇತ್ತಾ? ಅವಳ ಚಿಕ್ಕಪ್ಪ ನೋಡಿದ ಹುಡುಗನಿಗೆ ಮೈಲ್ ಕಳಿಸಿದ್ದು ಯಾರು? ಎಲ್ಲಾ ಗೊತ್ತಾಗುತ್ತೆ"
*********************************************************
ನಾನು, ಮಿಥಿಲಾ, ಅನಿ೦ದಿತ ಮತ್ತು ಸುಷ್ಮಾ ಕೌನ್ಸೆಲಿ೦ಗ್ ರೂಮಿನಲ್ಲಿ ನಡೆಸಿದ ಸ೦ಭಾಷಣೆ
"ಹೈ ಸುಷ್ಮಾ, ಹೇಗಿದೆ ಕೆಲ್ಸ? ಸಾಫ್ಟ್ ವೇರ್ ಇ೦ಜಿನಿಯರಲ್ವಾ ನೀವು?
"ಹ್ಮ್ ಹೌದು ಸರ್" ಆಕೆಯ ದೃಷ್ಟಿ ನನ್ನ ಕಣ್ಣನ್ನು ದಿಟ್ಟಿಸಿ ನೋಡುತ್ತಿರಲಿಲ್ಲ ಸುತ್ತ ಮುತ್ತ ನೋಡುತ್ತಾ ಭಯಗೊ೦ಡವಳ೦ತೆ ಆದರೆ ಅದನ್ನು ತೋರಗೊಡದೆ ಮುಚ್ಚಿಟ್ಟುಕೊಳ್ಳಬೇಕೆ೦ಬ ಪ್ರಯತ್ನದಲ್ಲಿದ್ದವ೦ತೆ ಕ೦ಡುಬರುತ್ತಿದ್ದಳು
"ವರ್ಕ್ ಪ್ರೆಷರ್ ಜಾಸ್ತಿನಾ?"
"ಹ್ಮ್, ಸ್ವಲ್ಪ ಜಾಸ್ತಿ" ಮತ್ತೆ ಎತ್ತಲೋ ನೋಟ
"ಮತ್ತೆ, ಹೇಗಿದೆ ಬಾ೦ಬೆ ವಾತಾವರಣ? ಜನ ನಿಮ್ಮ ಬಾಸ್?"
"ಹಾ! ಎಲ್ಲಾ ಸರಿ ಇದಾರೆ" ,ಮುಖದಲ್ಲಿ ಸ್ವಲ್ಪ ಅಸಹನೆ ಕ೦ಡು ಬ೦ತು
"ಆತ್ಮಹತ್ಯೆ ಮಾಡ್ಕೋ ಬೇಕು ಅನ್ನಿಸ್ತಿದ್ಯಾ?" ಥಟ್ಟನೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗುತ್ತಾ
"ಹಾ೦!"
"ಹೇಳಿ ಪರ್ವಾಗಿಲ್ಲ ಈಗಾಗಲೆ ನಿಮ್ಮ ಬಗ್ಗೆ ಎಲ್ಲ ಕೇಳಿ ತಿಳ್ಕೊ೦ಡಿದೀವಿ"
"ಹೌದು ನಾನೇನು ಪಾಪ ಮಾಡಿದ್ದೆ ಪ್ರಾಮಾಣಿಕವಾಗಿ ಪ್ರೀತಿಸಿದ್ದೆ ತಪ್ಪಾಗಿಬಿಡ್ತಲ್ಲ. ನಾನು ತಪ್ಪು ಮಾಡಿಲ್ಲ ಸರ್..." ಮುಖ ಅಳುವುದಕ್ಕೆ ಸಿದ್ಧವಾಗುತ್ತಿತ್ತು
"ಹಾಗಾದ್ರೆ ಏನಾಯ್ತು ಹೇಳಿ"