"ಪಡೀಸ್" ಆಡೋ ಹುಡ್ಗುರು .......

"ಪಡೀಸ್" ಆಡೋ ಹುಡ್ಗುರು .......

 ಬೇಸಿಗೆ ರಜಾ ಯಾವಾಗ್ ಬರುತ್ತೆ ? ಅಂತಾ ತುದಿಗಾಲನಲ್ಲಿ ಕಾಯ್ತಾ ಇರೋ ಪ್ರೈಮರಿ ಸ್ಕೂಲ್ ಹುಡ್ಗುರು, ಕಾಲೇಜ್ ಯಾವಾಗ ಸ್ಟಾರ್ಟ್ ಆದೀತು??, ಮೆಟ್ಟಲು ಯಾವಾಗ ತುಳಿತೀವಿ ಅಂತಾ ಹಾತೊರೆಯೋ ಎಸ.ಎಸ.ಎಲ್.ಸಿ ಪಾಸ್ ಹುಡ್ಗಿರು, ಸರ್ಕಾರೀ ಕೆಲಸದಿಂದ ನಿವೃತ್ತಿ ಯಾವಾಗಾದ್ರೂ ಸಿಗುತ್ತೆ ??? ಅಂತಾ ೬೦ ನೆ ವಯಸ್ಸಿನ ಹಾದಿ ನೋಡೋ ವೃದ್ದರು ....ಇವರಿಗೆಲ್ಲ ಆ ಸಂದರ್ಭ ಹೇಳ್ಕೊಳಕೆ ಆಗದೆ ಇರೋ ಅಂತ ಒಂದು ಥ್ರಿಲ್ ಅಂತಾನೆ ಹೇಳಬಹುದು.

 

ಹೀಗೆ ನಮ್ ಹುಡ್ಗುರು ರಾಗ್ಯಾ,ಮಲ್ಲ್ಯಾ,ಪಲ್ಲ್ಯಾ,ಸೀನ್ಯಾ,ಮಡ್ದಾ .....ಒಟ್ಟು ೮-೧೦ ಕಪಿಗಳ ಸೈನ್ಯ ಇವರದು. ಆಗಷ್ಟೇ ಬೇಸಿಗೆ ರಜಾ ಸ್ಟಾರ್ಟ್ ಆದ ಖುಷಿ, ಇವರೆಲ್ಲಾ ಬೆಳಿಗ್ಗೆ ಹೊಟ್ಟೆ ತುಂಬಿಸ್ಕೊಂಡು, ಹೊರಗೆ ಆಡೋಕೆ ಅಂತ ಮನೆ ಬಿಟ್ಟರೆ, ವಾಪಾಸ್ ಬರೋದು, ಮಧ್ಯಾನ ೩ ಕ್ಕೆ, ಅದೂ ಊಟಕ್ಕೆ ,ಆಮೇಲೆ ಮತ್ತೆ ರೆಡಿ ಆಟ ಶುರು ಮಾಡೋಕ್ಕೆ.

 

ಇವರು ಪ್ರತಿ ನಿತ್ಯ ಸಾಯಂಕಾಲ ಆಡೋ ಆಟ ಅಂದ್ರೆ "ಪಡೀಸ್" ಉತ್ತರ ಕರ್ನಾಟಕದ ಪಡ್ಡೆ ಹುಡಗರ ಕುಖ್ಯಾತ ಆಟ. ವಿಧಾನ ಹೇಳ್ಬೇಕಂದ್ರೆ, ಮೊದಲು "ಗುಟ್ಕಾ" ಪ್ಯಾಕೆಟ್ ಗಳನ್ನು ಕಲೆಕ್ಟ್ ಮಾಡಿ, ಒಂದೊಂದು ಬ್ರಾಂಡ್ ನ ಪ್ಯಾಕೆಟ್ ಗೆ ಇಂತಿಷ್ಟು ಅಂತ ಅಂಕ ಗಳನ್ನು ಇಡೋದು. ಉದಾ : ಮಾಣಿಕ್ ಚಂದ್ ಅಂಕ ೩೦೦, ವಿಮಲ್ ಗೆ  ೨೦೦. ತಾರಾ ,ಮಾರುತಿ ಅತೀ ಚಿಕ್ಕ ಪ್ಯಾಕೆಟ್ ಅದರಿಂದ ಅಂಕ ೫೦ ಹೀಗೇ.....ಎಲ್ಲರೂ ಒಟ್ಟಾರೆ ತಮ್ ಕಡೆ ಇದ್ದ ಚೀಟ್ ಗಳನ್ನು, ಮೈದಾನದಲ್ಲಿ ಅಂದಾಜು  ೨ ಫೀಟ್ ವ್ಯಾಸದ  ವೃತ್ತ ಬರೆದು ಅದರೊಳಗೆ ಇಡ್ತಾರೆ. ಒಬ್ಬೊಬ್ಬ ಆಟಗಾರ, ವೃತ್ತದಿಂದ ೧೦ ಹೆಜ್ಜೆ ಹಿಂದೆ ನಿಂತು, ಚಪ್ಪಟೆ ಆಕಾರದ ಒಂದು ಕಲ್ಲು ಬಳಸಿಕೊಂಡು,ಪ್ಯಾಕೆಟ್ ಗಳನ್ನು ವೃತ್ತದಿಂದ ಹೊರಗೆ ಹೋಗೋ ತರಹ ಭಾರಿ ಗುರಿಯಿಂದ ಎಸೆಯೋದು. ಹೊರಗೆ ಬಂದ ಪ್ಯಾಕೆಟ್ ಎಲ್ಲಾ ಎಸದವನಿಗೆ ( ಆ ಕಲ್ಲಿಗೆ ಪಡೀಸ ಅಂತಾರೆ).

 

ಈ ಆಟ ಆಡೋಕೆ ಮುಗಿ ಬಿಳೋ ನಮ್ ಹುಡ್ಗುರು, ಆ ಗುಟ್ಕಾ ಪ್ಯಾಕೆಟ್ ಕಲೆಕ್ಟ್ ಮಾಡೋಕೆ, ಬೀದಿ ಬೀದಿ ತಿರುಗಿ, ತಿಪ್ಪೆ ಎಲ್ಲಾ ಆಯೋರು. ಚರಂಡಿನಲ್ಲಿ ಬಿದ್ದಿರೋದನ್ನು ಕೂಡ ಬೆಣ್ಣೆ ತಗದಹಾಗೆ ತಗಿತಿದ್ದ್ರು, ಅಷ್ಟು ಇಷ್ಟ ಇವರ್ಗೆ. ರಾಗ್ಯಾ  ಅಂತು ಕೇಳಬ್ಯಾಡ್ರಿ ....ಪಾನ್ ಶಾಪ್ ಮುಂದೆ ನಿಂತು ಆಗ ತಾನೇ ಗುಟ್ಕಾ ಚೀಟ್ ಹರಿಯೋ, ಹದಿ ಹರೆಯದ ಹುಡ್ಗುರನ್ನೇ ನೋಡ್ತಾ, ಯಾವಾಗ ಕೆಳಗೆ ಹಾಕ್ತನೋ ಅಂತ ಹೊಂಚ ಹಾಕಿ, ಬಿಳತಿದ್ದಂಗೆ ಗಬಕ್ಕಂಥ ಹಿಡ್ಕೊತಿದ್ದಾ. ಅಂತ ಆಸಾಮಿ ಅವನು ...ಹ್ಹಾ ..ಇವರೆಲ್ಲಾ ಊರಲ್ಲೇ ದೊಡ್ಡ ಮನೆತನದ ಹುಡ್ಗುರು, ತಂದೆಗಳೆಲ್ಲಾ ಮಿಲ್ ಮಾಲೀಕರು,ಕಾರ್ಪೊರೆಟಗಳು, ವಿಪರ್ಯಾಸ ಅಂದ್ರೆ ಡಾಕ್ಟರ್ ಗಳು ಕೂಡ...ಆದರೆ ಅದನ್ಯಾವದು ಅರಿಯದ ಬಾಲ್ಯ ಈ ಹುಡ್ಗರದು.

 

ಇವರಲ್ಲಿ ಪಲ್ಲ್ಯಾ ಮಾತ್ರ ಸಖತ್ ಬೆರಕಿ (ಬುದ್ದಿವಂತ). ಯಾಕಂದ್ರೆ ಇವನು ಅವರಥರ ಪ್ಯಾಕೆಟ್ ಆಯೋಕೆ ಬೀದಿ ಬೀದಿ ಸುತ್ತಿರ್ಲಿಲ್ಲಾ. ಎಲ್ಲರ ಕಡೆಯಿಂದ, ದಿನ ಎಷ್ಟು ಕಲೆಕ್ಟ್ ಆಯ್ತು ಅಂತ ಕೌಂಟ್ ಮಾಡಿ ತೆಗದಿಡೋದು ಅಷ್ಟೇ ಇವನ ಕೆಲಸ..ಸೈನ್ಯದ ಲೀಡರ್ ತರಾ...ಇವನಿಗೆ ಯಾರದ್ರು ಹುಡ್ಗುರು, ಎದುರು ಮಾತಾಡಿದ್ರೆ ಸಾಕು " ಪ್ಯಾಕೆಟ್ ಎಲ್ಲಾ ಸುಟ್ಟು ಹಾಕ್ಬಿಡ್ತೀನಿ " ಅಂತ ಹೆದರಿಸೋನು...!! ಈ ಮಾತು ಕಿವಿಗೆ ಬಿಳೋದೇ ತಡಾ, ರಾಗ್ಯಾ ಅವನ ಕಾಲಿಗೆ ಬಿದ್ದು "ಅಯ್ಯೋ ಬ್ಯಾಡೋ ಪ್ಲೀಸ್ ..ನಾವು ಬೀದಿ ಬೀದಿ ಅಲೆದು, ತಿಪ್ಪೆ ಆಯ್ದು ಕಲೆಕ್ಟ್ ಮಾಡಿರೋದು" ಅಂತ ಒಂದೇ ಸಮನೆ ಗೋಗರೆಯೋನು.....

 

ಇನ್ನು ಈ ಆಟ ಬಿಟ್ಟರೆ, ಇವರುಗಳ ಮನೆ ಅಕ್ಕ ಪಕ್ಕ ಎದೆ ಗಂಟಾ ಬೆಳೆದಿರೋ ಕಾಂಗ್ರೆಸ್ ಕಸದಲ್ಲಿ ಸುತ್ತಾಡ್ತಾ, ಚಿಟ್ಟೆ ಹಿಡಿದು ಬೆಂಕಿ ಪಟ್ಟಣದಲ್ಲಿ ಹಾಕಿ ಮುಚ್ಚಿ ಇಡೋದು ಇವರ ನೆಚ್ಚಿನ ಕೆಲಸ. ಹೀಗೇ ಒಂದಿನ ಸುತ್ತಾಡೋವಾಗ ಮುಳ್ಳಿನ ಪೊದೆಯಲ್ಲಿ ೨೮ ವಿಚಿತ್ರ ಮೊಟ್ಟೆ ಗಳನ್ನು ನೋಡ್ತಾನೆ ಸೀನ್ಯಾ......ಆಗಾ ನಿಧಿ ಸಿಕ್ಕೋರ ಥರಾ " ಏ ನೋಡ ಬರ್ಯೋ ಎಪ್ಪಾ, ಎಷ್ಟೋಕೊಂಡ ತತ್ತಿ ಅದಾವ್ ಇಲ್ಲೇ" ಅಂತಾನೆ. ಎಲ್ಲರೂ ಓಡಿ ಬಂದು ನೋಡ್ತಾರೆ ..ಆಗ ಮಲ್ಲ್ಯಾ ಕುತೂಹಲದಿಂದ ಒಂದನ್ನ ಎತ್ತಿ ಹಾಗೆ ಕೆಳಗೆ ಬಿಡ್ತಾನೆ, ಎಲ್ಲರಿಗೂ ಆಶ್ಚರ್ಯ ಮೊಟ್ಟೆ ಚೆಂಡಿನ ಥರ ಪುಟಿತಿದ್ದು ನೋಡಿ ...... "ಏ ಇವು ಏನ.... ಮಜಾ ಅದಾವ್ ಮಾರಾಯ" ಅಂದುಕೊಳ್ತಾರೆ. ಅವಾಗ್ ಮಡ್ದಾ ಬಂದು " ಲೇ ನನ್ ಮಕ್ಕಳಾ, ನಿಮಗ ಏನ್ ಗೋತ್ತೈತಿ, ತಲಿ? ಇವು ಹಂದಿ ತತ್ತಿ ಅದಕೆ ಪುಟಿಲಿಕತ್ತಾವು !!!!!!!!!!!!!!!!!!" ಅಂತಾನೆ...(ಅವು ನಿಜವಾಗ್ಲೂ ಹಾವಿನ ಮೊಟ್ಟೆ ಗಳು ).............

Comments