ಒಂದು ಬಾರಿ ನಕ್ಕರೆ ಸಾಕು ಧನ್ಯನಾದೆ ನಾನು

ಒಂದು ಬಾರಿ ನಕ್ಕರೆ ಸಾಕು ಧನ್ಯನಾದೆ ನಾನು

ಕವನ

ಕನಸೊಂದ ನಾ ಕಂಡೆ ಗೆಳತಿ ಮುಂಜಾವಿನಲಿ

ಎತ್ತ ನೋಡಿದರೂ ಶುಭ್ರ ಶ್ವೇತ ಪರಿಸರ

ನೀನಲ್ಲಿ ನಡೆದು ಬರುತಿರಲು ದೇವತೆಯಂತೆ

ನಾ ನೋಡುತ ನಿಂತಿಹೆನು ಮೂಕವಿಸ್ಮಿತನಾಗಿ

 

ನೀ ನನ್ನ ಬಳಿ ಸನಿಹವಾಗುತಿರಲು ಹೊಮ್ಮುತಿದೆ

ಘಮಘಮಿಸುವ ಮಲ್ಲಿಗೆಯ ಸುವಾಸನೆ

ಏನೆಂದು ಅರಿವಾಗುವುದರೊಳಗೆ ನೀ ಬಂದು ಕೈ ಹಿಡಿದೆ

ನಿನ್ನ ಸ್ಪರ್ಶ ಮೂಡಿಸಿತು ಸಂಚಲನವ ನನ್ನಲ್ಲಿ...

 

ಮೆಲ್ಲನೆ ನೋಡಿದೆ ನಾ ನಿನ್ನ ವದನವನು

ಆ ಅಂದವನು ವರ್ಣಿಸಲು ಪದಗಳೇ ಸಿಗುತ್ತಿಲ್ಲ ನನಗೆ

ಪೂರ್ಣಚಂದ್ರನು ಕುಪಿತಗೊಳ್ಳುವನು ಪದೇ ಪದೇ

ನಿನ್ನಂದವನು ಅವನಿಗೆ ಹೋಲಿಸಿದರೆ...

 

ನೀ ಹಂಸದಂತೆ ನಡೆಯುತ್ತಿರಲು ನಾ ನಿನ್ನ ಹಿಂಬಾಲಿಸುತಿರುವೆ

ನೀನಾಡುತಿರುವ ಮಾತುಗಳಾವ್ಯುದೂ ಕೇಳುತ್ತಿಲ್ಲೆನಗೆ

ನಿನ್ನಂದ ಸವಿಯುವುದರಲ್ಲೇ ಮಗ್ನನಾಗಿರುವೆ ನಾ

ಬೇಡವಾಗಿದೆ ಬೇರೇನೂ ಈ ಲೋಕದಲ್ಲೆನಗೆ..

 

ಕಾಮನಬಿಲ್ಲು ಬಾಗಿ ನಿನ್ನ ಹುಬ್ಬುಗಳಾದಂತಿವೆ

ಮಿನುಗುವ ನಕ್ಷತ್ರಗಳು ಹುಬ್ಬಿನ ಕೆಳಗೆ ಕಣ್ಣುಗಳಾಗಿವೆ

ಮುತ್ತುಗಳ ಜೋಡಿಸಿದಂತಿರುವ ಹಲ್ಲುಗಳ ನೀ ತೋರಿ

ಒಂದು ಬಾರಿ ನಕ್ಕರೆ ಸಾಕು ಧನ್ಯನಾದೆ ನಾನು