ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನೀಯ
ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನೀಯ
ವೆಂಡಿಂಗ್ ಯಂತ್ರಗಳು ದಿನೇ ದಿನೇ ಜನಪ್ರಿಯವಾಗುತ್ತಿವೆ.ಇವುಗಳು ಕಡಿಮೆ ಜಾಗವನ್ನು ಬಳಸಿ,ಯಾವುದಾದರೂ ಸಾಮಗ್ರಿಯ ಮಾರಾಟಕ್ಕೆ ಆಸ್ಪದ ನೀಡುತ್ತವಲ್ಲದೆ,ಇವನ್ನು ನೋಡಿಕೊಳ್ಳಲು ಜನರೂ ಬೇಡ.ಹೀಗಾಗಿ ದುಬಾರಿ ಬಾಡಿಗೆಯಿರುವೆಡೆ,ಕಡಿಮೆ ಖರ್ಚಿನಲ್ಲಿ ವಸ್ತುಗಳ ಮಾರಾಟಕ್ಕೆ ವೆಂಡಿಂಗ್ ಯಂತ್ರಗಳು ಹೇಳಿ ಮಾಡಿಸಿದ ಹಾಗಿವೆ.ಮೊಬೈಲ್ ಮೂಲಕ ಹಣ ಪಾವತಿಯೂ ಈಗ ಸಾಧ್ಯವಾದುದ್ದರಿಂದ ನಿಧಾನವಾಗಿ,ಇವುಗಳು ನಾಣ್ಯಗಳ ಸಮಸ್ಯೆಯಿಂದಲೂ ಮುಕ್ತವಾಗಹತ್ತಿವೆ.ಈಗ ಲಭ್ಯವಾಗಿರುವ ಹೊಸ ವೆಂಡಿಂಗ್ ಯಂತ್ರಗಳು ಅಂತರ್ಜಾಲಕ್ಕೂ ಸಂಪರ್ಕ ಹೊಂದಿರುವುದರಿಂದ,ಇವುಗಳ ಮೂಲಕ ಅಂತರ್ಜಾಲದ ಸಾಮಾಜಿಕ ತಾಣಗಳ ಸ್ನೇಹಿತರಿಗೆ ವೆಂಡಿಂಗ್ ಯಂತ್ರದ ಮೂಲಕ ಮಾರಾಟವಾಗುವ ಸಾಮಗ್ರಿಯನ್ನು ಉಡುಗೊರೆಯಾಗಿ ಕಳುಹಿಸ ಬಹುದು.ನಿಮ್ಮ ಉಡುಗೊರೆಯ ಬಗ್ಗೆ ಸಂದೇಶ ಅಥವಾ ಎಸೆಮ್ಮೆಸ್ ಸಂದೇಶ ರವಾನೆಯಾಗುತ್ತದಲ್ಲದೆ,ಉಡುಗೊರೆಯನ್ನು ವಟಾಯಿಸಲು ನೀಡ ಬೇಕಾದ ಕೋಡ್ ಕೂಡಾ ರವಾನಿಸಲಾಗುತ್ತದೆ.
---------------------------------------
ಬ್ರಾಡ್‌ಬ್ಯಾಂಡ್:ಇಂಡಿಯಾ ಬ್ಯಾಡ್
ಬ್ರಾಡ್‌ಬ್ಯಾಂಡ್ ಬಳಕೆಯ ಮಟ್ಟಿಗಿರಲಿ,ಅಷ್ಟೇಕೆ ಮೊಬೈಲ್ ಸಾಧನ ಬಳಕೆಯ ಮಟ್ಟಿಗೂ ಭಾರತದ ಸ್ಥಾನ ಅಭಿವೃದ್ಧಿಶೀಲ ದೇಶಗಳ ಮಟ್ಟಿಗೆ ಕೆಳಗೇ ಇದೆ.ಇಪ್ಪತ್ತೈದು ದೇಶಗಳ ಪೈಕಿ,ಭಾರತದ ಸ್ಥಾನ ಇಪ್ಪತ್ತೊಂದನೇಯದ್ದಾಗಿದೆ.ಮಲೇಶ್ಯಾ,ಚಿಲಿ,ವಿಯೆಟ್ನಾಮ್‌ಗಳೂ ಭಾರತಕ್ಕಿಂತ ಬಹಳಷ್ಟು ಮಟ್ಟಿಗೆ ಉತ್ತಮ ಸ್ಥಾನದಲ್ಲಿವೆ.ಭಾರತದ ಸ್ಕೋರು ಒಂದಕ್ಕಿಂತ ತುಸುವೇ ಹೆಚ್ಚಿದ್ದರೆ,ಮಲೇಶ್ಯಾ ಆರು ಪಾಯಿಂಟ್ ಗಳಿಸಿದೆವೆಯೆಂದರೆ,ಭಾರತದ ಸ್ಥಾನಮಾನದ ಬಗ್ಗೆ ಹೆಚ್ಚಿನ ಕಲ್ಪನೆ ಬಂದೀತು.
---------------------------------------------
ದೂರ ಚುಂಬನ
ಅಂತರ್ಜಾಲದ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಚುಂಬನಾನುಭವನ್ನೂ ಕಳುಹಿಸಬಹುದು! ಇಂತಹ ಸಾಧನ ಮತ್ತು ಸಾಧನಗಳನ್ನು ಬೆಸೆಯುವ ತಂತ್ರಾಂಶವನ್ನು ಜಪಾನೀ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಟೋಕಿಯೋದ ಕಿಜಿಮೋಟೋ ಪ್ರಯೋಗಾಲಯದ ಸಂಶೋಧಕರು ಕಿಸ್ಸಿಂಗ್ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.ಇದರಲ್ಲಿ ನಳಿಕೆಯೊಂದಿದ್ದು,ಅದನ್ನು ನಾಲಗೆಯಿಂದ ಸವರಿದರೆ,ಅದು ಕಂಪ್ಯೂಟರ್ ಮೂಲಕ ಗ್ರಹಿಸಲ್ಪಟ್ಟು,ತಂತ್ರಾಂಶದ ಮೂಲಕ,ದೂರದ ಇನ್ನೊಂದು ಕಂಪ್ಯೂಟರಿಗೆ ಸಂಕೇತಗಳು ಹೋಗುತ್ತವೆ.ಅಲ್ಲಿರುವ ಕಿಸ್ಸಿಂಗ್ ಸಾಧನವು,ಕಂಪ್ಯೂಟರಿಗೆ ಸಂಪರ್ಕವಾಗಿ,ತಂತ್ರಾಂಶವೂ ಚಾಲೂ ಆಗಿದ್ದರೆ,ಅತ್ತಲಿಂದ ಬಂದ ಸಂಕೇತಗಳನ್ನು ಸ್ವೀಕರಿಸಿ,ಅಲ್ಲಿ ನಾಲಗೆಯ ಚಲನೆಯು ಉಂಟು ಮಾಡಿದ ನಳಿಕೆಯ ಚಲನೆಯು ಯಥಾವತ್ತಾಗಿ ಮೂಡುತ್ತದೆ.ಯಾರಾದರೂ ನಳಿಕೆಯನ್ನು ಬಾಯಲ್ಲಿಟ್ಟು ಕೊಂಡರೆ,ಅವರಿಗೆ ಚುಂಬನಾನುಭವ ಸಿಗಬಹುದು.ದೂರವಿದ್ದು,ವಿರಹ ವೇದನೆ ಅನುಭವಿಸುವ ಪ್ರೇಮಿಗಳಿಗೆ ಮಾತು,ನೋಟದ ಜತೆ ಈ ಹೊಸ ಸ್ಪರ್ಶಸುಖವನ್ನೂ ಅನುಭವಿಸುವ ಯೋಗವನ್ನು ಈ ಹೊಸ ತಂತ್ರ ಒದಗಿಸಲಿದೆ.
----------------------------------------------------------
ಇಂಟೆಲ್:ಹೊಸ ಚಿಪ್ ತಂತ್ರಜ್ಞಾನ
ಹೆಚ್ಚಿನ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುವ ಸಂಸ್ಕಾರಕ ಆರ್ಮ್ ಪ್ರಾಸೆಸರ್ ಆಗಿದೆ.ಕಡಿಮೆ ಶಕ್ತಿ ಬಳಸುವ,ಕಿರು ಗಾತ್ರ ಇದಕ್ಕೆ ಕಾರಣ.ಕಂಪ್ಯೂಟರುಗಳ ಸಂಸ್ಕಾರಕಗಳ ಮಾರಾಟದಲ್ಲಿ ಮಾರುಕಟ್ಟೆ ನೇತಾರವಾಗಿರುವ ಇಂಟೆಲ್ ಕಂಪೆನಿ,ಸ್ಮಾರ್ಟ್ ಫೋನ್ ಮಟ್ಟಿಗೆ ಹಿಂದೆ ಬಿದ್ದಿದೆ.ಆದರೆ,ಈಗ ಮೊಬೈಲ್ ಸಾಧನಗಳು ಜನಪ್ರಿಯತೆಯ ತುತ್ತ ತುದಿಗೇರಿ,ಕಂಪ್ಯೂಟರ್ ಮಾರಾಟ ಇಳಿಕೆಯ ಹಾದಿ ಕಾಣುತ್ತಿರುವಾಗ,ಇವುಗಳಲ್ಲಿ ಬಳಕೆಯಾಗುವ ಸಂಸ್ಕಾರಕವನ್ನು ಮಾರಾಟ ಮಾಡಲು ಹಿಂದೆ ಬಿದ್ದರೆ,ಉಳಿಗಾಲವಿಲ್ಲ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ.ಇಂಟೆಲ್ ಎಚ್ಚೆತ್ತು ಕೊಂಡು,ಹೊಸ ತಂತ್ರಜ್ಞಾನದ ಮೂಲಕ,ಹೆಚ್ಚು ದಕ್ಷ,ಕಡಿಮೆ ಗಾತ್ರ ಮತ್ತು ಕಡಿಮೆ ಶಕ್ತಿ ಬಳಸಿ ಕೆಲಸ ಮಾಡಬಲ್ಲ ಚಿಪ್ ಅಭಿವೃದ್ಧಿ ಪಡಿಸುವತ್ತ ಗಮನ ನೀಡಿದೆ.ಹೊಸ ತಂತ್ರಜ್ಞಾನದಲ್ಲಿ ಮೂರು ಆಯಾಮದ ಟ್ರಾನ್ಸಿಸ್ಟರುಗಳನ್ನು ತಯಾರಿಸಲು ಸಾಧ್ಯವಾಗಿದೆ.ಒಂದು ಗುಂಡಿಸೂಜಿ ಮೊನೆಯಷ್ಟು ಜಾಗದಲ್ಲಿ,ನೂರು ದಶಲಕ್ಷ ಟ್ರಾನ್ಸಿಸ್ಟರುಗಳು ಹಿಡಿಸುತ್ತವೆ.ಐವಿ ಬ್ರಿಜ್ ಎಂದು ಇದಕ್ಕೆ ಹೆಸರಿಸಲಾಗಿದೆ.ಮುಂದಿನ ವರ್ಷದಲ್ಲಿ ಇಂತಹ ಚಿಪ್‌ಗಳ ತಯಾರಿಕೆ ಸಾಧ್ಯವಂತೆ.
------------------------------------------------------------
ಪೇಪರ್ ಫೋನ್
ಅರಿಜೋನಾ ವಿಶ್ವವಿದ್ಯಾಲಯ ಸಂಶೋಧಕರು ಹಗುರವಾದ,ಬಾಗುವ,ಮತ್ತು ಬಹಳ ದೃಡವಾದ ವಸ್ತುವನ್ನು ಬಳಸಿ ಸೆಲ್‌ಪೋನ್ ತಯಾರಿಸಿದ್ದಾರೆ.ಹಾಗಾಗಿ ಇದು ಸಾಮಾನ್ಯ ಫೋನುಗಳ ಆರನೇ ಒಂದು ಭಾಗದಷ್ಟು ತೂಗುತ್ತದೆ.ಕ್ರೆಡಿಟ್‌ಕಾರ್ಡಿನಷ್ಟು ಹಗುರ,ಆದರೆ ಅದಕ್ಕಿಂತಲೂ ಹೆಚ್ಚು ಬಾಗಿಸಲಾಗುವ ವಸ್ತುವಿನಿಂದ ಇದನ್ನು ತಯಾರಿಸಲಾಗಿದೆ.ಇದು ಪರಿಸರಕ್ಕೂ ಹೆಚ್ಚು ಪ್ರಿಯವಾಗಬಲ್ಲುವಂತಹ ವಸ್ತು.ಇದರ ಇನ್ನೊಂದು ಅನುಕೂಲವೆಂದರೆ,ಸ್ಪರ್ಶಸಂವೇದಿ ಆಗುವ ಜತೆಗೆ,ಬಾಗಿಸಿಯೂ,ಇದಕ್ಕೆ ಆದೇಶಗಳನ್ನು ನೀಡಲು ಸಾಧ್ಯ.ಒಂದು ಕಡೆ ಬಾಗಿಸಿದರೆ,ಅಪ್ಲಿಕೇಶನುಗಳನ್ನು ಚಾಲೂ ಮಾಡಬಹುದಾದರೆ,ಇನ್ನೊಂದೆಡೆ ಬಾಗಿಸಿ,ಬೇರೇನೋ ಆದೇಶ ನೀಡಲು ಸಾಧ್ಯವಾಗಲಿದೆ.ಇನ್ನೊಂದು ಹತ್ತು ವರ್ಷದಲ್ಲಾದರೂ,ಈ ತಂತ್ರಜ್ಞಾನ ವಾಣಿಜ್ಯ ತಯಾರಿಕೆಗೆ ಸಿದ್ಧವಾಗಬಹುದು ಎಂದು ನಿರೀಕ್ಷಿಸಿದರೆ,ಅದು ತಪ್ಪಲ್ಲ.
---------------------------------------------
ಐಫೋನ್ ರಿಮೋಟ್
ಟಿವಿ ರಿಮೋಟ್ ಸಾಧನವಾಗಿ,ಐಫೋನನ್ನೇ ಬಳಸಬಹುದೇ?ಸಾಧ್ಯ,ಐಫೋನ್ ಅಪ್ಲಿಕೇಶನ್‌ಗಳನ್ನು ಅನುಸ್ಥಾಪಿಸಿಕೊಳ್ಳುವುದರ ಜತೆಗೆ ಇನ್‌ಫ್ರಾರೆಡ್ ಪ್ರೇಷಕ ಸಾಧನವನ್ನು ಐಫೋನಿಗೆ ಸಿಕ್ಕಿಸಿಕೊಳ್ಳಬೇಕಾಗುತ್ತದೆ.ಈ ಪ್ರೇಷಕವನ್ನು ಪ್ರತ್ಯೇಕವಾಗಿ ಖರೀದಿಸಬೇಕು.ಸ್ಮಾರ್ಟ್‌ಫೋನನ್ನು ಸರ್ವಸಾಧನವಾಗಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಪ್ರಯತ್ನ.ಐಫೋನ್ ಬಳಸಿ,ದೇಹದ ತಾಪಮಾನ,ಬಿಪಿ,ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಮೇಲೆ ಗಮನವಿಡುವ ಅಪ್ಲಿಕೇಶನ್‌ಗಳಿವೆ.ಐಫೋನನ್ನು ಸಂಗೀತ ಸಾಧನವಾಗಿಸುವ,ದಿಕ್ಸೂಚಿಯಾಗಿಸುವ ತಂತ್ರಾಂಶಗಳೂ ಇವೆ.ಹೀಗೆ ಮೊಬೈಲ್ ಸಾಧನದ ಬಳಕೆಯ ವಿಸ್ತಾರ ಹೆಚ್ಚುತ್ತಾ ಹೋಗುತ್ತದೆ.ಎಲ್ಲಾ ಸಾಧನಗಳೂ ಇದರಲ್ಲೇ ಆಡಕವಾಗಿ ಬಿಡುತ್ತವೆ.
------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS30 ನಮೂದಿಸಿ.)
*ಕನ್ನಡ ನಿಘಂಟು ಲಭ್ಯವಿರುವ,ಅಂತರ್ಜಾಲ ತಾಣಗಳ ಎರಡು ಕೊಂಡಿಗಳನ್ನು ನೀಡಿ.
ಕಳೆದ ವಾರದ ಸರಿಯುತ್ತರ:
*ಹೊಸ ಉಬುಂಟು ಬಳಸುವುದು ಸುಲಭ,ಅದು ಮೊದಲಿಗಿಂತಲೂ ಬೇಗನೆ ಬೂಟ್ ಆಗುತ್ತದೆ.ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳನ್ನು ಆರಂಭಿಸಲು ಹೊಸ ಉಬುಂಟು ಅನುಕೂಲ ಒದಗಿಸಿದೆ.ಒಟ್ಟಿನಲ್ಲಿ ಯುನಿಟಿ,ಹೆಚ್ಚು ಬಳಕೆದಾರಸ್ನೇಹಿಯಾಗಿದೆ. ಬಹುಮಾನ ಗೆದ್ದವರು ವೆಂಕಟೇಶ್ ಜಿ ವೈದ್ಯ,ಮಾರ್ಪಳ್ಳಿ,ಉಡುಪಿ. ಅಭಿನಂದನೆಗಳು.
*ಅಶೋಕ್‌ಕುಮಾರ್ ಎ