ವರುಷಕ್ಕೊಂದು ಮುಂಗಾರು ಮಳೆ .... ಹರುಷಕ್ಕೊಂದು ಮುಂಗಾರು ಮಳೆ....
ಸುರಿಯುವ ಸೋನೆಯು ಸೂಸಿದೆ ನಿನದೇ ಪರಿಮಳ .... ಇನ್ಯಾರೊ ಕನಸಲು ನೀನು ಹೋದರೆ ತಳಮಳ ...
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ...
ಜೀವಕೆ ಜೀವ ತಂದವಳೆ .. ಜೀವಕ್ಕಿಂತ ಸನಿಹ ಬಾರೆ ...
ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ ..
ಎಲ್ಲೋ ಕೇಳಿದ ಹಾಗಿದೆಯೇ ಈ ಕವನಗಳನ್ನು ? ಹೌದು, ನಿಜ. ಎಲ್ಲೋ ಅಲ್ಲ. ಎಲ್ಲೆಲ್ಲೂ. ಎಲ್ಲೆಲ್ಲೂ ಪಸರಿಸಿದೆ ಇಂದು ಮುಂಗಾರು ಮಳೆಯ ತಂಪು, ಇಂಪು, ಕಂಪು, ಸೊಂಪು, ಪೆಂಪು .... ಬಸ್ಸಿನಲ್ಲಿ, ಕಾರಿನಲ್ಲಿ, ಆಕಾಶವಾಣಿಯಲ್ಲಿ, ಟಿ.ವಿ ಯಲ್ಲಿ, ಎಫ್.ಏಂ ನಲ್ಲಿ, ಹುಡುಗ ಹುಡುಗಿಯರ ಮಾತುಗಳಲ್ಲಿ, ಜನಸಾಮಾನ್ಯರ ದಿನನಿತ್ಯದ ಹರಟೆಯಲ್ಲಿ .ಎಲ್ಲೆಲ್ಲೂ ಮುಂಗಾರು ಮಳೆಯದ್ದೇ ಸುದ್ದಿ !!! ೨೦೦೭ ರ ಮುಂಗಾರು ಮಳೆ ಜನವರಿಯಲ್ಲೆ !!!!
ನಮ್ಮ ಚಿತ್ರರಂಗದ ದು:ಸ್ಥಿತಿಯನ್ನು ಸೂಕ್ಶ್ಮವಾಗಿ ನೋಡಿದರೆ, ನಿರ್ದೇಶಕ ಯೋಗರಾಜ ಭಟ್ಟರ "ಮುಂಗಾರು ಮಳೆ" ಚಿತ್ರರಂಗದ ಬರಡು ಬಂಜರನ್ನು ಹಚ್ಚ ಹಸುರಾಗಿಸುವ ಮುಂಗಾರು ಮಳೆಯೇ ಆಗಿದೆ. ಮಚ್ಚು ಲಾಂಗು ಸಂಸ್ಕೃತಿಯನ್ನು ಸಾರುತ್ತಿರುವ ಇತ್ತೀಚಿನ ಚಿತ್ರಗಳು, ನೋಡಲು, ಕೇಳಲು ಜಿಗುಪ್ಸೆಯಾಗುವಂತಹ ಚಿತ್ರಗೀತೆಗಳು ತಾಂಡವವಾಡುತ್ತಿರುವಾಗ ಇಂತಹದ್ದೊಂದು ಮಳೆಗಾಗಿ ನಾವೆಲ್ಲ ಜಾತಕ ಪಕ್ಸ್ಷಿಗಳಂತೆ ಕಾಯುತ್ತಿರಲಿಲ್ಲವೆ?
ಈಗ ಮುಂಗಾರು ಮಳೆ ಬಂದಾಯಿತು, ನಾವೆಲ್ಲ ನೋಡಿಯೂ ಆಯಿತು. ಕಣ್ಸೆಳೆಯುವ ಮಲೆನಾಡಿನ ಆ ಚಿತ್ರೀಕರಣ, ಮನ ಕುಣಿಸುವ ಕಾಯ್ಕಿಣಿಯವರ ಕವನಗಳು, ಸದಾ ಗುನುಗುತ್ತಿರುವಂತೆ ಮಾಡಿರುವ ಮನೋ ಮೂರ್ತಿಯವರ ಸಂಗೀತ, ಹಾಗು ಮೊದಲನೆ ಹೆಜ್ಜೆಯಿಟ್ಟ ಗಣೇಶ್ ಮತ್ತು ಸಂಜನ ಜೋದಿಯ ಅಭಿನಯ; ಎಲ್ಲವೂ ಶ್ಲಾಘನೀಯ. ಜಯಂತ ಕಾಯ್ಕಿಣಿಯವರಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಗೀತೆಗಳಲ್ಲಿ ಅರ್ಥ ಹಾಗು ಭಾವನೆಗಳ ಸಮ್ಮಿಶ್ರಣ ಒದಗಿಸಿಕೊಟ್ಟಿದ್ದಕ್ಕಾಗಿ.
ಇನ್ನಾದರೂ ಮುಂಗಾರು ಮಳೆಯಿಂದ ನಮ್ಮ ಚಿತ್ರರಂಗ ನವಚೇತನ ಪಡೆಯುವುದೇ? ... ಕಾಯುವ ಬಿಡಿ !
ನಮಗೆ ಬೇಕಾಗಿರುವುದು ವರುಷಕ್ಕೊಂದು ಮುಂಗಾರು ಮಳೆ .. ಹರುಷಕ್ಕೊಂದು ಮುಂಗಾರು ಮಳ ..
ಇಂತಿ,
ಅನುಪ್ ಮಲೆನಾಡು
ಸಿಸ್ಕ್ಕೋ ಸಿಸ್ಟಮ್ಸ್, ಬೆಂಗಳೂರು